ಕೊಡಗಿನಲ್ಲಿ 'ಕೈ' ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ!

ಕೊಡಗಿನಲ್ಲಿ ಕಾಂಗ್ರೆಸ್ ನಾಯಕರು ಬರಲಿರುವ 2023 ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದರೆ, ಅತ್ತ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತಲ್ಲೀನವಾಗಿದ್ದು. ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಳ್ಳಲು ಏನೆಲ್ಲ ಬೇಕೋ ಅದೆಲ್ಲ ತಂತ್ರವನ್ನು ಆರಂಭಿಸಿದೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಸುಮಾರು 10 ರಿಂದ 20 ಮಂದಿ ಆಕಾಂಕ್ಷಿಗಳಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಹೊರಡಿಸಿರುವ ಆದೇಶದಂತೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಜಿಲ್ಲೆಯಿಂದ ಎಷ್ಟು ಮಂದಿ ಆಕಾಂಕ್ಷಿಗಳು ಡಿಪಾಸಿಟ್ ಮಾಡಿ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಾಗಿದೆ. ಇರುವ ಆಕಾಂಕ್ಷಿಗಳ ಪೈಕಿ ಯಾರಿಗೆ ಟಿಕೆಟ್ ಸಿಗುತ್ತದೆ? ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಹೀಗಾಗಿ ಗೊಂದಲಗಳು ಚುನಾವಣೆ ಹತ್ತಿರ ಬರುವ ತನಕವೂ ಮುಂದುವರೆಯಲಿದೆ.

ಸದ್ಯ ಜಿಲ್ಲಾ ನಾಯಕರಲ್ಲಿಯೇ ಒಮ್ಮತದ ಅಭ್ಯರ್ಥಿಯನ್ನು ಗೊತ್ತು ಮಾಡುವಲ್ಲಿ ಗೊಂದಲವಿದೆ. ಜತೆಗೆ ಎಲ್ಲರೂ ಆಕಾಂಕ್ಷಿಗಳಾಗಿರುವುದರಿಂದ ಗೆಲುವಿನ ಸಾಮರ್ಥ್ಯ ವುಳ್ಳವರಿಗಿಂತ ಸೂಟ್ ಕೇಸ್, ಗಾಡ್‍ ಫಾದರ್, ಶಿಫಾರಸ್ಸು ಹೀಗೆ ಕೆಲವೊಂದು ತೆರೆಮರೆಯ ಆಟಗಳು ನಡೆಯಲಿದ್ದು, ಕೊನೆಗೆ ಅಚ್ಚರಿ ಎಂಬಂತೆ ಒಬ್ಬರು ಅಭ್ಯರ್ಥಿಯಾಗಿ ಘೋಷಣೆಯಾಗಲಿದ್ದಾರೆ. ಆ ವೇಳೆಗಾಗಲೇ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು ತಾರಕಕ್ಕೇರಿ ಕೆಲವರು ತಟಸ್ಥರಾದರೆ ಮತ್ತೆ ಕೆಲವರು ನಾಮಕಾವಸ್ಥೆಗೆ ಎಂಬಂತೆ ಕೆಲಸ ಮಾಡಿ ಚುನಾವಣೆಯನ್ನು ಮುಗಿಸಲಿದ್ದಾರೆ.

ಚುನಾವಣಗೆ ಸಿದ್ಧತೆ ಆರಂಭಿಸಿದ ಬಿಜೆಪಿ

ಚುನಾವಣಗೆ ಸಿದ್ಧತೆ ಆರಂಭಿಸಿದ ಬಿಜೆಪಿ

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಜಿಲ್ಲೆಯಲ್ಲಿ ಇನ್ನೂ ಕಾಂಗ್ರೆಸ್ ನಾಯಕರು ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವತ್ತ ಆಸಕ್ತಿ ತೋರಿಲ್ಲ. ಜತೆಗೆ ರಾಜ್ಯ ನಾಯಕರು ಕೂಡ ಜಿಲ್ಲೆಯತ್ತ ವಿಶೇಷ ಗಮನಹರಿಸಿದಂತೆಯೂ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನ ದೌರ್ಬಲ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಬಿಜೆಪಿ ಈಗಿನಿಂದಲೇ ಅಖಾಡಕ್ಕೆ ಇಳಿದಿದ್ದು, ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಲು ತಂತ್ರ ರೂಪಿಸಿದೆ. ಅದರಂತೆ ಗ್ರಾಮ ಪಂಚಾಯಿತಿ ಮಟ್ಟದ ಪ್ರಭಾವಿ ನಾಯಕರು ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೆಳೆಯುವ ಅಭಿಯಾನ ಆರಂಭಿಸಿದೆ.

ಬಿಜೆಪಿಯತ್ತ ಕೈ ಕಾರ್ಯಕರ್ತರು

ಬಿಜೆಪಿಯತ್ತ ಕೈ ಕಾರ್ಯಕರ್ತರು

ಗ್ರಾಮೀಣ ಮಟ್ಟದಿಂದಲೇ ಕಾಂಗ್ರೆಸ್‌ನನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ಅಲ್ಲಿರುವ ಕಾರ್ಯಕರ್ತರು ಹಾಗೂ ಮುಖಂಡರನ್ನು ಪಕ್ಷಕ್ಕೆ ಎಳೆದು ತರುತ್ತಿದೆ. ಇದಕ್ಕೆ ಚಾಲನೆಯನ್ನು ಕೂಡ ನೀಡಿದೆ. ಈ ನಡುವೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಮಾರು 200 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯ ತತ್ವ ಸಿದ್ದಾಂತ ಮೆಚ್ಚಿ ಕಾಂಗ್ರೆಸ್‌ನ ಹೋಬಳಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಭುವನೇಂದ್ರ ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಮಲ ಹಿಡಿದಿದ್ದಾರೆ. ಇವರಿಗೆ ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಬಿಜೆಪಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌ಗೆ ಟಿಪ್ಪು ಜಯಂತಿ ಹೊಡೆತ?

ಕಾಂಗ್ರೆಸ್‌ಗೆ ಟಿಪ್ಪು ಜಯಂತಿ ಹೊಡೆತ?

ಆರಂಭದಲ್ಲಿಯೇ ಸುಮಾರು ಇನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ಬಿಜೆಪಿಯ ತಂತ್ರ ಹೇಗಿರಬಹುದು? ಎಂಬುದನ್ನು ಊಹಿಸಬಹುದಾಗಿದೆ. ಟಿಪ್ಪು ಜಯಂತಿ ನಂತರದ ಬೆಳವಣಿಗೆ ಕೊಡಗಿನಲ್ಲಿ ಕಾಂಗ್ರೆಸ್‌ಗೆ ಭಾರೀ ಹೊಡೆತ ನೀಡಿದೆ. ಈ ಹಿಂದೆ ಕಾಂಗ್ರೆಸ್ ನತ್ತ ಒಲವು ತೋರಿದ್ದ ಹಲವು ಕೊಡವ ಸಮುದಾಯದ ನಾಯಕರು, ಕಾರ್ಯಕರ್ತರು ಮೌನಕ್ಕೆ ಶರಣಾಗಿದ್ದಾರೆ. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.

ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಕೈ ಪಕ್ಷ ಸಂಘಟನೆ

ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಕೈ ಪಕ್ಷ ಸಂಘಟನೆ

ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಹೇರಳ ಹಣ ಹರಿದು ಬರಲಿದ್ದು, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಇದು ಹುಮ್ಮಸ್ಸು ತುಂಬಲಿದೆ. ಜತೆಗೆ ಮತದಾರರ ಬಾಗಿಲಿಗೂ ಎಲ್ಲ ಬೇಡಿಕೆಗಳನ್ನು ಪೂರೈಕೆ ಮಾಡುವ ಶಕ್ತಿಯೂ ಬಿಜೆಪಿಗಿದೆ. ಆದರೆ ಕಾಂಗ್ರೆಸ್ ನಾಯಕರು ಚುನಾವಣೆ ಬಳಿಕ ನಮಗೂ ಮತದಾರರಿಗೂ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿ ಬಿಡುತ್ತಾರೆ. ಕೆಲವು ನಾಯಕರು ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡು ಆರೋಪ ಮಾಡುವುದು ಬಿಟ್ಟರೆ ಪಕ್ಷ ಸಂಘಟನೆಗಾಗಿ ಕೆಲಸ ಮಾಡುವುದೇ ಇಲ್ಲ.

ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ

ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ

ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ನಾಯಕರನ್ನು ಕಡೆಗಣಿಸಿ ಹಾಸನದ ಮಂಥರ ಗೌಡ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಬಿಜೆಪಿ ಗೆಲುವು ಕಂಡಿತು. ಈ ಬಾರಿ ಮತ್ತೆ ಅದೇ ರೀತಿ ಆದರೆ ಜಿಲ್ಲೆಯ ಕಾಂಗ್ರೆಸ್ ನಾಯಕರೇ ತಿರುಗಿ ಬಿದ್ದರೆ ಅಚ್ಚರಿಪಡಬೇಕಾಗಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಡಗಿನ ಕಾಂಗ್ರೆಸ್‌ನಲ್ಲಿರುವ ಗೊಂದಲ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಬಿಜೆಪಿ ನಾಯಕರು ತಮ್ಮ ಗೆಲುವಿಗೆ ಹಾಗೂ ಕಾಂಗ್ರೆಸ್‌ನ ಸೋಲಿಗೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಈಗಿನಿಂದಲೇ ಮಾಡುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್ ನಾಯಕರು ನಿದ್ದೆಯಿಂದ ಎಚ್ಚೆತ್ತುಕೊಳ್ಳದಿದ್ದರೆ ಕೊಡಗಿನಲ್ಲಿ ಪಕ್ಷಕ್ಕೆ ಉಳಿಗಾಲವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+