ಕೊಡಗಿನ ಕುಂದಬೆಟ್ಟದಲ್ಲಿ ಬೋಡುನಮ್ಮೆ ಸಂಭ್ರಮ: ಏನಿದರ ವಿಶೇಷ?
ಮಡಿಕೇರಿ: ಕೊಡಗಿನಲ್ಲಿ ವಿಶಿಷ್ಟ ಮತ್ತು ವಿಭಿನ್ನವಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಬೋಡು ನಮ್ಮೆ (ಬೇಡುಹಬ್ಬ) ಒಂದಾಗಿದ್ದು, ಇದಕ್ಕೆ ತಲಕಾವೇರಿಯಲ್ಲಿ ನಡೆಯುವ ತೀರ್ಥೋದ್ಭವದ ಮಾರನೆಯ ದಿನ ಕುಂದಾ ಮುಗುಟಗೇರಿ ಸಮೀಪದ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಚಾಲನೆ ನೀಡಲಾಗುತ್ತದೆ. ಇಲ್ಲಿಂದ ಮುಂದೆ ಜಿಲ್ಲೆಯ ವಿವಿಧೆಡೆ ಹಬ್ಬ ನಡೆದು ಕೊನೆಗೆ ದೇವರಪುರದಲ್ಲಿ ತೆರೆಕಾಣುತ್ತದೆ.
ಬೋಡುನಮ್ಮೆಗೆ ಚಾಲನೆ ಸಿಗುವ ಕುಂದ ಬೆಟ್ಟವು ಈಶ್ವರನ ನೆಲೆಯಾಗಿದ್ದು, ಇಲ್ಲಿನ ದೇಗುಲದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯದೊಂದಿಗೆ ಆರಂಭ ಸಿಗಲಿದೆ. ಇಲ್ಲಿಂದಲೇ ಕೊಡಗಿನ ಮೊದಲ ಬೋಡ್ ನಮ್ಮೆ ಶುರುವಾಗುತ್ತಿದ್ದು ಈ ಸಂಬಂಧ ಧಾರ್ಮಿಕ ಕೈಂಕರ್ಯ ಆರಂಭವಾಗಿದ್ದು, ಕುಂದಾ ಮುಗುಟಗೇರಿ ಸಮೀಪದ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸಾಂಪ್ರದಾಯಿಕ ದೋಳ್ ತೆಗೆಯುವ ಮೂಲಕ ಚಾಲನೆ ನೀಡಲಾಗಿದೆ.

ಪ್ರತಿವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವದ ದಿನ ಹಾಗೂ ಮರುದಿನ ಹಬ್ಬ ಕುಂದಬೆಟ್ಟದಲ್ಲಿ ಬೋಡ್ ನಮ್ಮೆ ನಡೆಯಲಿದ್ದು ಇದನ್ನು ಕುದುರೆ ಹಬ್ಬ ಎಂದು ಕೂಡ ಕರೆಯಲಾಗುತ್ತದೆ. ಈ ಬಾರಿ ಅಕ್ಟೋಬರ್ 17 ಹಾಗೂ 18ರಂದು ಹಬ್ಬ ನಡೆಯಲಿದೆ. ಕೊಡಗಿನ ಕೊಡವ ಕುಟುಂಬಗಳಾದ ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಅ.17ರಂದು ರಾತ್ರಿ ಮನೆ ಕಳಿಯ ಬಳಿಕ ಅ.18ರಂದು ಕುಂದಾ ಬೆಟ್ಟದ ಮೇಲೆ ಹಬ್ಬ ನಡೆಯಲಿದೆ.
ಕುಂದದ ಈಶ್ವರನಿಗೆ ಕಾವೇರಿ ತೀರ್ಥಾರ್ಪಣೆ
ಅಂದು (ಅ.18) ಮಧ್ಯಾಹ್ನ ಸುಮಾರು 12-30 ಗಂಟೆಗೆ ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ಬಲ್ಯ ಮನೆಯಿಂದ ಕೃತಕವಾಗಿ ತಯಾರಿಸಿ ಶೃಂಗರಿಸಲಾದ ತಲಾ ಒಂದೊಂದು ಕುದುರೆಯನ್ನು ಹೊತ್ತವರು ಬೆಟ್ಟದ ತಪ್ಪಲಿನಲ್ಲಿರುವ ನಾಡ್ ದೇವಸ್ಥಾನದ ಸಮೀಪದ ಅಂಬಲದಲ್ಲಿ ವಿವಿಧ ವಿಧಿ ವಿಧಾನಗಳನ್ನು ಆಚರಿಸಿ ನಂತರ ಕಡಿದಾದ ಬೆಟ್ಟವನ್ನು ಏರುವ ಮೂಲಕ ಕುಂದಾ ಬೆಟ್ಟದ ಮೇಲಿರುವ ಈಶ್ವರ ದೇಗುಲದಲ್ಲಿ ಪೂಜಾ ವಿಧಿ ವಿಧಾನಗಳು ನಡೆದು ಬಳಿಕ ಬೋಡು ನಮ್ಮೆ (ಬೇಡುಹಬ್ಬ) ನಡೆಯಲಿದೆ.
ಇನ್ನು ಕುಂದಬೆಟ್ಟದ ಪೌರಾಣಿಕ ಇತಿಹಾಸ ಮತ್ತು ಬೋಡು ಹಬ್ಬದ ವಿಶೇಷತೆಗಳನ್ನು ನೋಡಿದ್ದೇ ಆದರೆ ಇದರ ಹಿಂದಿನ ವೈಶಿಷ್ಟ್ಯತೆಗಳ ಬಗ್ಗೆ ಅರಿವಿಗೆ ಬರುತ್ತದೆ. ಹಬ್ಬಾಚರಣೆಗೆ ಒಂದು ವಾರದ ಮುನ್ನ ಸಾಂಪ್ರದಾಯಿಕ ಕಟ್ಟು ಬೀಳುತ್ತದೆ. ತಲಕಾವೇರಿ ತೀರ್ಥೋದ್ಭವ ದಿನ ರಾತ್ರಿ ಮನೆಕಳಿ ನಡೆಯುತ್ತದೆ. ಸಣ್ಣುವಂಡ ಹಾಗೂ ಮನೆಯಪಂಡ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದ್ದು, ತಲಕಾವೇರಿಯಿಂದ ತೀರ್ಥವನ್ನು ತಂದು ಬೆಟ್ಟದ ಮೇಲಿನ ಈಶ್ವರ ದೇವರಿಗೆ ಅರ್ಪಿಸಲಾಗುತ್ತದೆ.
ಬೆಟ್ಟದಲ್ಲಿ ಕುಣಿಯುವ ಹರಕೆಯ ಕುದುರೆಗಳು
ಇದಾದ ಬಳಿಕ ಕೃತಕವಾಗಿ ಬಿದಿರಿನಿಂದ ಮಾಡಿದ ಕುದುರೆಯನ್ನು ಸಿಂಗರಿಸಿ ಅದನ್ನು ಹೊತ್ತ ವ್ರತದಾರಿಗಳು ಎತ್ತರದ ಬೆಟ್ಟವನ್ನು ಯಾವುದೇ ಆಯಾಸವಿಲ್ಲದೆ ಏರಿ ಹರಕೆ ತೀರಿಸುತ್ತಾರೆ. ಇದೇ ವೇಳೆ ವಿವಿಧ ವೇಷಧರಿಸಿದ ವೇಷಧಾರಿಗಳು ಹಬ್ಬಕ್ಕೆ ಕಳೆಕಟ್ಟುತ್ತಾರೆ. ಇಲ್ಲಿಂದ ಆರಂಭವಾಗುವ ಬೇಡು ಹಬ್ಬ ಬಳಿಕ ಜಿಲ್ಲೆಯ ವಿವಿಧೆಡೆ ನಡೆಯುತ್ತವೆ.
ಈ ಬೇಡು ಹಬ್ಬ ಕೊಡಗಿನಲ್ಲಿ ತಲತಲಾಂತರಗಳಿಂದ ನಡೆದು ಬಂದಿದ್ದು ವೇಷಧಾರಿಗಳು ಹಾಡು ಹೇಳುತ್ತಾ ಕುಣಿಯುತ್ತಾರೆ. ಈ ವೇಳೆ ಬರುವ ಹಾಡಿನ ತುಣುಕಿನಲ್ಲಿ " ಕುಂದಾತ್ ಬೊಟ್ಟ್' ಲ್ ನೇಂದಾ ಕುಂದುರೆ.. ಪಾರಣ ಮಾನಿಲ್ ಅಳ್ಂಜ ಕುದುರೆ" ಎಂದು ಬೇಡು ಹಬ್ಬದ ಆರಂಭ ಮತ್ತು ಕೊನೆಯ ಬೇಡು ಹಬ್ಬದ ಬಗ್ಗೆ ಪ್ರಸ್ತಾಪಿಸಲಾಗುತ್ತದೆ.
ಕುಂದಬೆಟ್ಟಕ್ಕಿದೆ ಪೌರಾಣಿಕ ನಂಟು
ಹಬ್ಬ ನಡೆಯುವ ಕುಂದಬೆಟ್ಟದ ಬಗ್ಗೆ ಹೇಳಬೇಕೆಂದರೆ ಈ ಬೆಟ್ಟಕ್ಕೆ ಪೌರಾಣಿಕ ನಂಟಿದ್ದು ವನವಾಸಕ್ಕೆ ತರಳಿದ ಪಾಂಡವರು ಕುಂದಬೆಟ್ಟಕ್ಕೆ ಬಂದಿದ್ದರಂತೆ. ಈ ವೇಳೆ ಒಂದೇ ರಾತ್ರಿಯಲ್ಲಿ ಭೀಮನು ಕಲ್ಲು ಹೊತ್ತು ತಂದು ದೇವಾಲಯವನ್ನು ಕಟ್ಟಿದನೆಂದೂ ಕೆಲಸ ಸಂಪೂರ್ಣ ಮುಗಿಯುವ ವೇಳೆಗೆ ಬೆಳಗಾದುದರಿಂದ ದೇವಾಲಯಕ್ಕೆ ಬಾಗಿಲು ನಿರ್ಮಿಸಲಿಕ್ಕಾಗಲಿಲ್ಲ ಎಂಬ ಕಥೆಗಳಿವೆ.
ಮತ್ತೆ ಕೆಲವರ ಅಭಿಪ್ರಾಯದ ಪ್ರಕಾರ ಈ ದೇವಾಲಯವು ಕೊಡಗು ರಾಜರ ಕಾಲದಲ್ಲಿ ನಿರ್ಮಿತವಾಗಿದೆಯೆಂದು, ಇದಕ್ಕೆ ಪೂರಕ ಎನ್ನುವಂತೆ ಶಿಲಾಸನದಲ್ಲಿ 'ಮನೆಯ ಪಂಡ ಸಂಬ್ರಾಯ' ಎಂಬ ಹೆಸರಿರುವುದು ಕಂಡು ಬರುತ್ತದೆ. ದೇವಾಲಯದ ಮುಂದೆ ಬೃಹತ್ ಶಿಲಾ ಬಂಡೆಯೊಂದು ಹರಡಿಕೊಂಡಿದ್ದು, ಈ ಬಂಡೆಯ ತುದಿಯಲ್ಲಿ ಒಂದು ಉಬ್ಬು ಕಲ್ಲಿದ್ದು ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿಯಿದೆ.
ಭೀಮ ಹೊತ್ತು ತಂದ ಬೃಹತ್ ದೇರಟೆಕಲ್ಲು
ಪುರಾಣದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ನವಿಲು ಈ ಕಲ್ಲಿನ ಮೇಲೆ ನಾಟ್ಯವಾಡಿದ್ದರಿಂದ ಈ ಕಲ್ಲನ್ನು ದೇರಟೆಕಲ್ಲು ಎಂದು ಕರೆಯುತ್ತಾರೆ. ದೇವಾಲಯದ ಹಿಂಭಾಗದಲ್ಲಿ ಬೃಹತ್ ಭೀಮನ ಕಲ್ಲಿದ್ದು, ಬೊಟ್ಲಪ್ಪ ಈಶ್ವರ ದೇವಾಲಯವನ್ನು ನಿರ್ಮಿಸುತ್ತಿದ್ದ ಸಂದರ್ಭ ಭೀಮನೇ ಆ ಬೃಹತ್ ಕಲ್ಲನ್ನು ಹೊತ್ತು ತಂದು ಅಲ್ಲಿಟ್ಟನಂತೆ. ಈ ಕಲ್ಲಿನಲ್ಲಿ ಕಾಲಿನ ಮಂಡಿಯ ಮತ್ತು ಕೈಬೆರಳುಗಳ ಗುರುತು ಕಂಡು ಬರುತ್ತದೆ. ಈ ಕಲ್ಲಿನ ಪಕ್ಕದಲ್ಲೇ ಚಿಕ್ಕ ಪೊಟರೆಯೊಂದಿದ್ದು ಹಿಂದೆ ಪಾಂಡವರು ಈ ಪೊಟರೆಯನ್ನು ಅಡುಗೆ ಸಾಮಾನುಗಳನ್ನು ಇಡಲು ಉಪಯೋಗಿಸುತ್ತಿದ್ದರು ಎಂಬ ದಂತಕಥೆಗಳಿವೆ.
ಕುಂದಬೆಟ್ಟವು ಮಡಿಕೇರಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದ್ದು, ಪೊನ್ನಂಪೇಟೆ ತಾಲೂಕಿಗೆ ಸೇರಿದೆ. ಸಮುದ್ರ ಮಟ್ಟದಿಂದ ಮೂರು ಸಾವಿರದ ಇನ್ನೂರು ಅಡಿ ಎತ್ತರವಿದೆ.. ಕೊಡವ ಭಾಷೆಯಲ್ಲಿ 'ಕುಂದ್' ಎಂಬ ಪದವು ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ. ಬೆಟ್ಟವೊಂದು ಗ್ರಾಮದ ಹೃದಯ ಭಾಗದಲ್ಲಿ ಮೈದಾಳಿ ನಿಂತಿದ್ದರಿಂದಲೋ ಏನೋ ಈ ಗ್ರಾಮವನ್ನು ಕುಂದವೆಂದೇ ಕರೆಯುತ್ತಾರೆ. ಹಬ್ಬದ ಸಮಯದಲ್ಲಿ ಜನಸಂದಣಿ ಕಂಡು ಬರುತ್ತದೆಯಾದರೂ ಉಳಿದಂತೆ ಪ್ರಶಾಂತ ವಾತಾವರಣ ಇಲ್ಲಿರುತ್ತದೆ.












Click it and Unblock the Notifications