Explained- ಅದಾನಿ ಪಾಲಾಗುತ್ತಾ ಎನ್‌ಡಿಟಿವಿ? ಏನಿದೆ ಅಂಬಾನಿ ಪಾತ್ರ?
ಖ್ಯಾತ ಪತ್ರಕರ್ತರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಮಾಲಕತ್ವದ ಎನ್‌ಡಿಟಿವಿ ವಾಹಿನಿಯ ಶೇ. 29.18ರಷ್ಟು ಷೇರುಗಳನ್ನು ಅದಾನಿ ಗ್ರೂಪ್ ಮೊನ್ನೆ (ಆಗಸ್ಟ್ 23) ಖರೀದಿ ಮಾಡಿದ ಸುದ್ದಿ ಗಮನ ಸಳೆದಿದೆ. ಅಷ್ಟೇ ಅಲ್ಲ, ಇನ್ನೂ ಶೇ. 26ರಷ್ಟು ಪಾಲನ್ನು ಖರೀದಿಸಲು ಅದಾನಿ ಗ್ರೂಪ್ ಓಪನ್ ಆಫರ್ ಆರಂಭಿಸುವುದಾಗಿ ಹೇಳಿದೆ. ಇದೇನಾದರೂ ಸಾಧ್ಯವಾದರೆ ಎನ್‌ಡಿಟಿವಿಯ ಬಹುಪಾಲು ಶೇರುಗಳು ಅದಾನಿ ಗ್ರೂಪ್‌ಗೆ ಹೋಗಿ ಮಾಲಕತ್ವ ಪಡೆಯಲು ಸಾಧ್ಯವಾಗುತ್ತದೆ.
ಇನ್ನೊಂದೆಡೆ, ಎನ್‌ಡಿಟಿವಿ ಈ ಬೆಳವಣಿಗೆ ಬಗ್ಗೆ ಇನ್ನೂ ಆಘಾತ ಸ್ಥಿತಿಯಲ್ಲಿ ಇದ್ದಂತಿದೆ. ಸಂಸ್ಥೆಯ ಸಂಸ್ಥಾಪಕರಿಗೆ ಮಾಹಿತಿ ಇಲ್ಲದೆಯೇ, ಅಥವಾ ಒಪ್ಪಿಗೆ ಇಲ್ಲದೆಯೇ ಅದಾನಿ ಗ್ರೂಪ್ ಎನ್‌ಡಿಟಿವಿಯ ಪಾಲನ್ನು ಖರೀದಿಸಿದೆ ಎಂದು ಎನ್‌ಡಿಟಿವಿ ಹೇಳಿದೆ.
ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಇಬ್ಬರೂ ಎನ್‌ಡಿಟಿವಿ ಸಂಸ್ಥಾಪಕರು. ಆದರೆ, ಸೆಕ್ಯೂರಿಟೀಸ್ ಮಾರ್ಕೆಟ್‌ಗಳಲ್ಲಿ ವ್ಯವಹರಿಸದಂತೆ 2022 ನವೆಂಬರ್ 26ರವರೆಗೂ ಎನ್‌ಡಿಟಿವಿ ಸಂಸ್ಥಾಪಕರನ್ನು ಸೆಬಿ ನಿರ್ಬಂಧಿಸಿದೆ. ಹೀಗಾಗಿ, ಎನ್‌ಡಿಟಿವಿಯನ್ನು ಖರೀದಿಸಲು ಅದಾನಿ ಗ್ರೂಪ್‌ಗೆ ಸೆಬಿಯ ಅನುಮೋದನೆ ಬೇಕಾಗುತ್ತದೆ. ಇದು ಎನ್‌ಡಿಟಿವಿ ಮುಂದಿಟ್ಟಿರುವ ವಾದ.
ಎನ್‌ಡಿಟಿವಿಯಲ್ಲಿ ಶೇ. 29.18ರಷ್ಟು ಪಾಲನ್ನು ಹೊಂದಿರುವ ವಿಸಿಪಿಎಲ್ ಸಂಸ್ಥೆಯನ್ನು ಅದಾನಿ ಗ್ರೂಪ್ ಖರೀದಿ ಮಾಡಿದೆ. ಈ ಮೂಲಕ ಎನ್‌ಡಿಟಿವಿ ಶೇರುಗಳು ಅದಾನಿ ಗ್ರೂಪ್ ಪಾಲಾಗಿವೆ. ಇದೆಲ್ಲದರ ಮಧ್ಯೆ ಮುಕೇಶ್ ಅಂಬಾನಿಯ ಹೆಸರೂ ಕಂಡುಬಂದಿದೆ.
ಭಾರತದ ನಂಬರ್ ಒನ್ ಉದ್ಯಮಿಯಾಗಿರುವ ಗೌತಮ್ ಅದಾನಿ ಯಾಕೆ ಎನ್‌ಡಿಟಿವಿ ಹಿಂದೆ ಬಿದ್ದಿದ್ದಾರೆ? ಎನ್‌ಡಿಟಿವಿಯನ್ನು ಅವರು ಖರೀದಿಸಲು ಸಾಧ್ಯವಾಗುತ್ತಾ? ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ತಮ್ಮ ಕಂಪನಿಯನ್ನು ಉಳಿಸಿಕೊಳ್ಳಲು ಸಫಲರಾಗುತ್ತಾರಾ? ಎಂಬುದು ಕುತೂಹಲ ಕೆರಳಿಸುವ ಪ್ರಶ್ನೆಗಳು.

ಎನ್‌ಡಿಟಿವಿ ಸಾಲ
ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರು ಎನ್‌ಡಿಟಿವಿಯ ಸಂಸ್ಥಾಪಕರು. ಇವರ ಮಾಲಕತ್ವದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈ ಲಿ ಸಂಸ್ಥೆ ಈ ಸುದ್ದಿವಾಹಿನಿಯ ಪ್ರೊಮೋಟರ್ ಆಗಿದೆ. ವಿವಿಧ ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲಗಳನ್ನು ತೀರಿಸಲು ಆರ್‌ಆರ್‌ಪಿಆರ್ ಸಂಸ್ಥೆ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈ ಲಿ (ವಿಸಿಪಿಎಲ್) ಇಂದ 2009 ಮತ್ತು 2010ರಲ್ಲಿ ಒಟ್ಟು 403.85 ಕೋಟಿ ರೂ ಸಾಲ ಪಡೆದಿದೆ.
ಈ ಬಡ್ಡಿ ರಹಿತ ಸಾಲಕ್ಕೆ ಪ್ರತಿಯಾಗಿ ವಿಸಿಪಿಎಲ್‌ಗೆ ಆರ್‌ಆರ್‌ಪಿಆರ್‌ನಿಂದ ಸೆಕ್ಯೂರಿಟಿ ವಾರಂಟ್‌ಗಳನ್ನು ಒದಗಿಸಲಾಗಿದೆ. ಇದರಿಂದ ಆರ್‌ಆರ್‌ಪಿಆರ್‌ನ ಶೇ. 99.9ರಷ್ಟು ಪಾಲನ್ನು ವಿಸಿಪಿಎಲ್ ಪಡೆದಿದೆ.
ಇನ್ನು, ಎನ್‌ಡಿಟಿವಿಯಲ್ಲಿ ಆರ್‌ಆರ್‌ಪಿಆರ್ ಶೇ. 29.18ರಷ್ಟು ಶೇರು ಅಥವಾ ಪಾಲನ್ನು ಹೊಂದಿದೆ. ಇದೀಗ, ಅದಾನಿ ಗ್ರೂಪ್‌ಗೆ ಸೇರಿದ ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಸಂಸ್ಥೆ ಆಗಸ್ಟ್ 23ರಂದು ವಿಸಿಪಿಎಲ್ ಅನ್ನು ಖರೀದಿ ಮಾಡಿತು. ಈ ಮೂಲಕ ಆರ್‌ಆರ್‌ಪಿಆರ್‌ನ ಪಾಲಿನ ಎನ್‌ಡಿಟಿವಿ ಶೇರುಗಳು ಎಎಂಜಿ ಮೀಡಿಯಾ ನೆಟ್ವರ್ಕ್ ಪಾಲಾದಂತಾಗುತ್ತದೆ.

ಮುಕೇಶ್ ಅಂಬಾನಿ ಪಾತ್ರ ಏನು?
ಈ ಪ್ರಕರಣದಲ್ಲಿ ರಿಲಾಯನ್ಸ್ ಸಂಸ್ಥೆ ಮಾಲೀಕ ಮುಕೇಶ್ ಅಂಬಾನಿ ಹೆಸರೂ ಕೇಳಿಬಂದಿದೆ. ಆರ್‌ಆರ್‌ಪಿಆರ್ ಸಂಸ್ಥೆಗೆ ಸಾಲ ನೀಡಲು ವಿಸಿಪಿಎಲ್ ವಿವಿಧ ಕಡೆಗಳಿಂದ ಫಂಡಿಂಗ್ ಪಡೆದಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಲಿ (ಆರ್‌ಐಎಲ್) ಸಂಸ್ಥೆಗೆ ಸೇರಿದ ರಿಲಾಯನ್ಸ್ ಸ್ಟ್ರಾಟಿಜಿಕ್ ವೆಂಚರ್ಸ್‌ನಿಂದಲೂ ವಿಸಿಪಿಎಲ್ ಫಂಡಿಂಗ್ ಪಡೆದಿದೆ.

ರಾಯ್ ದಂಪತಿ ಪಾಲು ಹೆಚ್ಚು
ಆರ್‌ಆರ್‌ಪಿಆರ್ ಹೊಂದಿದ್ದ ಶೇ. 29ರಷ್ಟು ಪಾಲನ್ನು ಬಿಟ್ಟೂ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಇಬ್ಬರೂ ಎನ್‌ಡಿಟಿವಿಯಲ್ಲಿ ಶೇ. 32ರಷ್ಟು ಶೇರುಗಳನ್ನು ಹೊಂದಿದ್ದಾರೆ. ಹೀಗಾಗಿ, ಎನ್‌ಡಿಟಿವಿಯಲ್ಲಿ ರಾಯ್ ದಂಪತಿಯ ಪಾಲೇ ಹೆಚ್ಚಿದೆ.
ಈಗ ಅದಾನಿ ಗ್ರೂಪ್ ಸಂಸ್ಥೆ ಇನ್ನಷ್ಟು ಶೇ. 26ರಷ್ಟು ಪಾಲು ಖರೀದಿಸಲು ಮುಂದಾಗಿದೆ. ಪ್ರತೀ ಶೇರಿಗೆ 294 ರೂನಂತೆ ಖರೀದಿಸುವುದಾಗಿ ಓಪನ್ ಆಫರ್ ಮುಂದಿಟ್ಟಿದೆ.
ಕುತೂಹಲ ಎಂದರೆ ಎನ್‌ಡಿಟಿವಿಯ ಶೇರು ಸದ್ಯ ಮಾರುಕಟ್ಟೆಯಲ್ಲಿ 370 ರೂ ಇದೆ. ಹಾಗಿದ್ದಾಗ 294 ರೂಗೆ ಖರೀದಿಸಲು ಮುಂದಾಗಿರುವುದು ಅಕ್ರಮ ಅಲ್ಲವಾ? ಆದರೆ, ಒಂದು ತಿಂಗಳ ಹಿಂದೆ ಎನ್‌ಡಿಟಿವಿಯ ಶೇರು 185 ರೂ ಬೆಲೆ ಹೊಂದಿತ್ತು. ಅದಾನಿ ಗ್ರೂಪ್ ಇದನ್ನು ಖರೀದಿಸಲು ಆಸಕ್ತಿ ತೋರುತ್ತಿದೆ ಎಂಬಂತಹ ಸುದ್ದಿ ಕೇಳುತ್ತಿದ್ದಂತೆಯೇ ಷೇರು ಮೌಲ್ಯ ಬಹುತೇಕ ದ್ವಿಗುಣಗೊಂಡಿದೆ. ಈಗ ಕಳೆದ 15 ದಿನಗಳ ಸರಾಸರಿ ಶೇರು ಮೌಲ್ಯ ಎಷ್ಟಿದೆ ಎಂಬುದರ ಆಧಾರದ ಮೇಲೆ ಷೇರು ಖರೀದಿಗೆ ಓಪನ್ ಆಫರ್ ಕೊಡುವ ಅವಕಾಶ ಇದೆ. ಹೀಗಾಗಿ, ಅದಾನಿ ಗ್ರೂಪ್ ಮುಂದಿಟ್ಟಿರುವ ಆಫರ್ ಅಕ್ರಮ ಎನಿಸುವುದಿಲ್ಲ.
ಸದ್ಯ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಎನ್‌ಡಿಟಿವಿಯ ಅತಿದೊಡ್ಡ ಪಾಲುದಾರರಾಗಿದ್ದಾರೆ. ಅದಾನಿ ಗ್ರೂಪ್ ಇನ್ನಷ್ಟು ಪಾಲು ಖರೀದಿಸಿದರೆ ಮಾತ್ರ ಎನ್‌ಡಿಟಿವಿಯಲ್ಲಿ ಅಧಿಕಾರ ಹೊಂದಲು ಸಾಧ್ಯವಾಗುತ್ತದೆ. ಆದರೆ ಓಪನ್ ಆಫರ್‌ನಲ್ಲಿ ಅದಾನಿ ಗ್ರೂಪ್‌ಗೆ ಷೇರುಗಳನ್ನು ಮಾರಲು ಯಾರಾದರೂ ಮುಂದಾಗುತ್ತಾರಾ ಎಂಬುದು ಪ್ರಶ್ನೆ.

ಅದಾನಿ ಗುರಿ ಈಡೇರುತ್ತಾ?
ಇಲ್ಲಿ ಎನ್‌ಡಿಟಿವಿಯಲ್ಲಿ ರಾಯ್ ದಂಪತಿ, ವಿಸಿಪಿಎಲ್ ಅಷ್ಟೇ ಅಲ್ಲದೆ ಇನ್ನೂ ಕೆಲವು ಸಂಸ್ಥೆಗಳು ಗಮನಾರ್ಹವೆನಿಸುವಷ್ಟು ಪಾಲನ್ನು ಹೊಂದಿವೆ. ಡ್ರೋಲಿಯಾ ಏಜೆನ್ಸೀಸ್, ಜಿಆರ್‌ಡಿ ಸೆಕ್ಯೂರಿಟೀಸ್, ಆದೇಶ್ ಬ್ರೋಕಿಂಗ್, ಕನ್‌ಫರ್ಮ್ ರಿಯಲ್‌ಬಿಲ್ಡ್ ಈ ನಾಲ್ಕು ಸಂಸ್ಥೆಗಳು ಎನ್‌ಡಿಟಿವಿಯಲ್ಲಿ ಒಟ್ಟಾರೆ ಶೇ. 7.11ರಷ್ಟು ಶೇರು ಹೊಂದಿವೆ. ಈ ನಾಲ್ಕು ಸಂಸ್ಥೆಗಳು ಒಂದಕ್ಕೊಂದು ನಿಕಟವಾಗಿ ಬೆಸೆದುಕೊಂಡಿವೆ. ಪರಸ್ಪರ ಮಾಲಕತ್ವದ ಸಂಬಂಧ ಇರುವ ಸಂಸ್ಥೆಗಳು ಇವಾಗಿವೆ. ಹೀಗಾಗಿ, ಅದಾನಿ ಗ್ರೂಪ್‌ಗೆ ಶೇರುಗಳನ್ನು ಮಾರಾಟ ಮಾಡಬೇಕಾ ಬೇಡವಾ ಎಂದು ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಹೆಚ್ಚಿದೆ.
ಈ ನಾಲ್ಕು ಸಂಸ್ಥೆಗಳು ಮಾತ್ರವಲ್ಲ, ಎಲ್‌ಟಿಎಸ್ ಇನ್ವೆಸ್ಟ್‌ಮೆಂಟ್ ಫಂಡ್ ಎಂಬ ಸಂಸ್ಥೆ ಎನ್‌ಡಿಟಿವಿಯಲ್ಲಿ ಶೇ. 9.75ಷ್ಟು ಪಾಲು ಹೊಂದಿದೆ. ಈ ಸಂಸ್ಥೆ ಅದಾನಿ ಗ್ರೂಪ್‌ನ ವಿವಿಧ ಕಂಪನಿಗಳಲ್ಲಿ ಶೇರುಗಳನ್ನು ಹೊಂದಿದೆ. ಹೀಗಾಗಿ, ಅದಾನಿ ಗ್ರೂಪ್‌ಗೆ ತನ್ನ ಎನ್‌ಡಿಟಿವಿ ಪಾಲನ್ನು ಮಾರಿದರೂ ಅಚ್ಚರಿ ಇಲ್ಲ.
ಈಗ ಎಲ್‌ಟಿಎಸ್ ಹಾಗೂ ಮೇಲೆ ಹೇಳಿದ ನಾಲ್ಕು ಸಂಸ್ಥೆಗಳು ಮನಸು ಮಾಡಿ ಶೇರುಗಳನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಿದಲ್ಲಿ ಎನ್‌ಡಿಟಿವಿಯಲ್ಲಿ ಅದಾನಿ ಗ್ರೂಪ್ ಪಾಲು ಶೇ. 46ಕ್ಕಿಂತ ಹೆಚ್ಚಾಗಿ ಹೋಗುತ್ತದೆ.

ಎನ್‌ಡಿಟಿವಿ ಮೇಲೆ ಅದಾನಿಗ್ಯಾಕೆ ಕಣ್ಣು?
ಬಹಳಷ್ಟು ಉದ್ಯಮಗಳಿಗೆ ಕಾಲಿಟ್ಟು ಅತಿ ಎತ್ತರಕ್ಕೆ ಬೆಳೆದಿರುವ ಗೌತಮ್ ಅದಾನಿ ಅವರು ಮಾಧ್ಯಮ ಕ್ಷೇತ್ರದಲ್ಲೂ ಅಡಿ ಇಟ್ಟಿದ್ದಾರೆ. ಅದಾನಿ ಮೀಡಿಯಾ ವೆಂಚರ್ಸ್ ಎಂಬ ಕಂಪನಿಯನ್ನು ಆರಂಭಿಸಿ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪುಗಾಲಿಯಾ ಎಂಬ ಪತ್ರಕರ್ತರನ್ನು ಸೇರಿಸಿಕೊಳ್ಳಲಾಗಿತ್ತು.
ಪುಗಾಲಿಯಾ ಅವರು ಹಿಂದೆ ಕ್ವಿಂಟ್ ಡಿಜಿಟಲ್ ಮೀಡಿಯಾದ ಅಧ್ಯಕ್ಷರಾಗಿದ್ದವರು. ಎನ್‌ಡಿಟಿವಿ ಖರೀದಿ ಹಿಂದೆ ಅವರೇ ಸೂತ್ರ ಇರಬಹುದು.
"ಎಂಎಂಎನ್‌ಎಲ್ (ಅದಾನಿ ಮೀಡಿಯಾ) ಭಾರತೀಯ ನಾಗರಿಕರು, ಗ್ರಾಹಕರಿಗೆ ಮಾಹಿತಿ ಮತ್ತು ಜ್ಞಾನದ ಪ್ರಸರಣ ಮಾಡಲು ಬಯಸುತ್ತದೆ. ನಮ್ಮ ಧ್ಯೇಯ ಸಾಕಾರವಾಗಲು ಎನ್‌ಡಿಟಿವಿ ಸರಿಯಾದ ಮಾಧ್ಯಮವಾಗಿದೆ. ಸುದ್ದಿ ತಲುಪಿಸಲು ಮುಂಚೂಣಿಯಲ್ಲಿರುವ ಎನ್‌ಡಿಟಿವಿಯನ್ನು ಇನ್ನಷ್ಟು ಬಲಪಡಿಸಲ ಎದುರುನೋಡುತ್ತಿದ್ದೇವೆ," ಎಂದು ಹೇಳಿಕೆಯೊಂದರಲ್ಲಿ ಪುಗಾಲಿಯಾ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications