Get Updates
Get notified of breaking news, exclusive insights, and must-see stories!

ಕೊಲಂಬಿಯಾದಲ್ಲಿ ಮೊದಲ ಬಾರಿಗೆ ಕಮ್ಯೂನಿಸ್ಟ್ ಆಡಳಿತ; ಗುಸ್ಟಾವೊ ಪೆಟ್ರೋ- ಪರಿಚಯ

ಬೊಗೋಟಾ, ಜೂನ್ 21: ದಕ್ಷಿಣ ಅಮೆರಿಕ ಖಂಡದ ಮತ್ತೊಂದು ದೇಶ ಈಗ ಕಮ್ಯೂನಿಸ್ಟ್ ಆಡಳಿತಕ್ಕೆ ಒಳಪಟ್ಟಿದೆ. ಕೊಲಂಬಿಯಾದಲ್ಲಿ ಇದೇ ಮೊದಲ ಬಾರಿಗೆ ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೆ ಏರಿದೆ. ವಿಶ್ವದ ಜನತಂತ್ರದ ಅನಭಿಷಿಕ್ತ ದೊರೆ ಎನಿಸಿದ ಮತ್ತು ಕಮ್ಯೂನಿಸ್ಟ್ ದೇಶಗಳ ಪರಮ ಶತ್ರು ಎನಿಸಿದ ಅಮೆರಿಕ ದೇಶದ ಬಗ್ಗುಲಲ್ಲೇ ಹಲವು ದೇಶಗಳು ಕಮ್ಯೂನಿಸ್ಟರ ಆಡಳಿತಕ್ಕೆ ಒಳಪಟ್ಟಿದೆ.

ಭಾರತದ ನಕ್ಸಲ್ ಹೋರಾಟದ ಮಾದರಿಯಲ್ಲಿ ಕೊಲಂಬಿಯಾದಲ್ಲಿ ಸಶಸ್ತ್ರ ಪ್ರಜಾ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಗುಸ್ಟಾವೊ ಪೆಟ್ರೋ (Gustavo Petro) ಈಗ ಅಧ್ಯಕ್ಷ ಪದವಿ ಅಲಂಕರಿಸಿದ್ದಾರೆ. 62 ವರ್ಷದ ಪೆಟ್ರೋ ಅಧ್ಯಕ್ಷೀಯ ಚುನಾವಣೆಯಲ್ಲಿ ರೊಡೋಲ್ಫೊ ಹರ್ನಾಂಡೆಜ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ರಿಯಲ್ ಎಸ್ಟೇಟ್ ಕುಳ ರೊಡೋಲ್ಫೋ ಹರ್ನಾಂಡೆಜ್ ಶೇ. 47.3 ಮತಗಳನ್ನು ಪಡೆದರೆ, ಗುಸ್ಟಾವೊ ಪೆಟ್ರೋ ಶೇ. 50.5ರಷ್ಟು ಮತಗಳನ್ನು ಪಡೆದು ಅಲ್ಪ ಅಂತರದಲ್ಲಿ ಅಧ್ಯಕ್ಷ ಯುದ್ಧದಲ್ಲಿ ಜಯಿಸಿದ್ದಾರೆ.

ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನವು ಕೊಲಂಬಿಯಾವನ್ನು ಬಾಧಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಇದೇ ಪ್ರಮುಖ ವಿಚಾರವಾಗಿತ್ತು. ಸಮಸ್ಯೆಗಳಿಂದ ಅಸಂತುಷ್ಟಗೊಂಡಿದ್ದ ಜನರ ಆಕ್ರೋಶವು ಗುಸ್ಟಾವೊ ಪೆಟ್ರೋರನ್ನು ಅಧಿಕಾರಕ್ಕೆ ಏರಿಸಿದೆ. ಪೆಟ್ರೋ ಹಿಂದೆ ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡಿದ್ದರು. ಈಗ ಮೂರನೇ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ.

ಗೆರಿಲ್ಲಾ ಫೈಟರ್ ಎಂಬ ಹಣೆಪಟ್ಟಿ ಹೊಂದಿರುವ ಇವರು ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಹಿಂಸಾಚಾರಗಳಿಗೆ ಕುಮ್ಮಕ್ಕು ಕೊಡಬಹುದು ಎಂಬ ಆತಂಕ ವಿಪಕ್ಷದವರಿಗೆ ಕಾಡುತ್ತಿದೆ. ಈ ಆತಂಕ ನಿವಾರಿಸುವ ಪ್ರಯತ್ನ ಮಾಡುತ್ತಿರುವ ಪೆಟ್ರೋ, ತಾನು ಎಲ್ಲಾ ರಾಜಕೀಯ ವಿರೋಧಿಗಳಿಗೂ ಅಧ್ಯಕ್ಷೀಯ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಯಾರು ಬೇಕಾದರೂ ಬಂದು ಕೊಲಂಬಿಯಾದ ಅಭಿವೃದ್ಧಿ ವಿಚಾರವನ್ನು ಚರ್ಚಿಸಬಹುದು, ಸಲಹೆ ನೀಡಬಹುದು ಎಂದು ಹೇಳಿದ್ದಾರೆ. ಈ ಮೂಲಕ ಸರ್ವರಲ್ಲಿ ವಿಶ್ವಾಸ ಮೂಡಿಸಲು ಯತ್ನಿಸಿದ್ದಾರೆ.

ಕಪ್ಪು ಮಹಿಳೆ ಮೊದಲ ಬಾರಿಗೆ ಉಪಾಧ್ಯಕ್ಷೆ

ಕಪ್ಪು ಮಹಿಳೆ ಮೊದಲ ಬಾರಿಗೆ ಉಪಾಧ್ಯಕ್ಷೆ

ಕೊಲಂಬಿಯಾದಲ್ಲಿ ಕಮ್ಯೂನಿಸ್ಟ್ ಮುಖಂಡರೊಬ್ಬರು ಮೊದಲ ಬಾರಿಗೆ ಅಧ್ಯಕ್ಷ ಪಟ್ಟಕ್ಕೆ ಏರಿ ಹೊಸ ಇತಿಹಾಸ ಸೃಷ್ಟಿಸಿರುವುದು ಒಂದೆಡೆಯಾದರೆ, ಕಪ್ಪು ಮಹಿಳೆಯೊಬ್ಬರು ಉಪಾಧ್ಯಕ್ಷೆಯಾಗಿದ್ಧಾರೆ. ಕೊಲಂಬಿಯಾದಲ್ಲಿ ಇದೇ ಮೊದಲ ಬಾರಿಗೆ ಕೃಷ್ಣ ವರ್ಣೆಯು ಉಪಾಧ್ಯಕ್ಷರಾಗಿದ್ದು. 40 ವರ್ಷದ ವಕೀಲೆ ಹಾಗು ಪರಿಸರವಾದಿ ಫ್ರಾನ್ಸಿಯಾ ಮಾರ್ಕೆಜ್ (Francia Marquez) ಕೊಲಂಬಿಯಾದ ಉಪಾಧ್ಯಕ್ಷೆಯಾಗಿದ್ದಾರೆ.

ಫ್ರಾನ್ಸಿಯಾ ಅನೇಕ ಪರಿಸರ ಸಂಬಂಧಿ ಅಭಿಯಾನಗಳನ್ನು ನಡೆಸಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದಾರೆ. ಭಾರತದಲ್ಲಿ ಗಣಿಧಣಿಗಳು ದಟ್ಟ ಪ್ರಭಾವ ಹೊಂದಿರುವಂತೆ ಕೊಲಂಬಿಯಾದಲ್ಲೂ ಗಣಿ ಮಾಫಿಯಾ ಬಹಳ ದೊಡ್ಡದು. ಫ್ರಾನ್ಷಿಯಾ ಮೇಲೆ 2019ರಲ್ಲಿ ಒಮ್ಮೆ ಗ್ರೆನೇಡ್ ಬಾಂಬ್ ದಾಳಿಯೂ ಆಗಿತ್ತು. ಪ್ರಾಣಭಯ ಲೆಕ್ಕಿಸದೇ ಫ್ರಾನ್ಸಿಯಾ ಪರಿಸರ ರಕ್ಷಣೆಗೆ ಕಾಯಕ ಮುಂದುವರಿಸಿದ್ದರು. ಈಗ ಅಧಿಕಾರಕ್ಕೆ ಏರುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಕೂತು ಗಣಿ ಮಾಫಿಯಾವನ್ನು ಮಟ್ಟಹಾಕುವ ಅವಕಾಶ ಅವರಿಗೆ ಸಿಕ್ಕಿದೆ.

ಎಂ-19 ಗೆರಿಲ್ಲಾ ಗುಂಪಿನ ಫೈಟರ್

ಎಂ-19 ಗೆರಿಲ್ಲಾ ಗುಂಪಿನ ಫೈಟರ್

ಗುಸ್ಟಾವೊ ಪೆಟ್ರೋ ಯುವಕರಾಗಿದ್ದಾಗ ಗಾಢ ಎಡ ಚಿಂತನೆಯವರಾಗಿದ್ದವರು. ನಮ್ಮ ನಕ್ಸಲ್ ಮಾದರಿ ಸಶಸ್ತ್ರ ಹೋರಾಟ ನಡೆಸುವ M-19 ಎಂಬ ಸಂಘಟನೆಯೊಂದಿಗೆ ಸಕ್ರಿಯವಾಗಿದ್ದವರು. 1985ರಲ್ಲಿ ಈ ಗುಂಪು ಕೊಲಂಬಿಯಾದ ಪ್ರಮುಖ ನ್ಯಾಯಾಧೀಶರುಗಳನ್ನು ಅಪಹರಿಸಿದ ಘಟನೆ ನಡೆದಿತ್ತು. ಆಗ ಸೇನಾ ಪಡೆ ಮತ್ತು ಎಂ-19 ನಡುವೆ ನಡೆದ ಸಂಘರ್ಷದಲ್ಲಿ ನೂರು ಜನರು ಬಲಿಯಾಗಿದ್ದರು. ಆ ಘಟನೆ ಬಳಿಕ ಪೆಟ್ರೋ ಅವರನ್ನು ಬಂಧಿಸಾಗಿತ್ತು. ಆದರೆ ಕ್ಷಮಾದಾನ ಪಡೆದು ಅವರು ಬಿಡುಗಡೆ ಪಡೆದಿದ್ದರೆನ್ನಲಾಗಿದೆ.

ಚೆಗುವಾರ ಮತ್ತು ಪೆಟ್ರೋ

ಚೆಗುವಾರ ಮತ್ತು ಪೆಟ್ರೋ

ಕ್ಯೂಬಾ ದೇಶದ ಕ್ರಾಂತಿಕಾರಿ ಚೆ ಗುವಾರ (Che Guevara) ಸಾವನ್ನಪ್ಪಿದಾಗ ಪೆಟ್ರೋ ಅವರ ತಂದೆ ಕಣ್ಣೀರಿಟ್ಟರಂತೆ. ಆಗ ತನಗೆ ರಾಜಕೀಯ ಜ್ಞಾನೋದಯ ಆಯಿತು ಎಂದು ಗುಸ್ಟಾವೊ ಒಮ್ಮೆ ಹೇಳಿಕೊಂಡಿದ್ದುಂಟು. ರಾಜಕೀಯ ಮುಖ್ಯವಾಹಿನಿಗೆ ಬಂದ ಪೆಟ್ರೋ ಕೊಲಂಬಿಯಾ ರಾಜಧಾನಿ ಬೊಗೊಟಾ ನಗರದಲ್ಲಿ ಒಮ್ಮೆ ಮೇಯರ್ ಪಟ್ಟಕ್ಕೂ ಏರಿದ್ದರು. ಬಲಪಂಥೀಯ ಅರೆಸೇನಾ ಪಡೆಗಳು ಮತ್ತು ಬಲಪಂಥೀಯ ಪಕ್ಷಗಳ ವಿರುದ್ಧ ಗುಸ್ಟಾವೊ ಪೆಟ್ರೋ ಉಗ್ರ ಭಾಷಣಗಳನ್ನು ಮಾಡುತ್ತಿದ್ದರು. ಭ್ರಷ್ಟಾಚಾರದ ಬಗ್ಗೆ ಅವರ ಭಾಷಣಗಳು ಬಹಳ ಜನಪ್ರಿಯವಾಗಿವೆ.

ಗುಸ್ಟಾವೊ ಪೆಟ್ರೋ ನೀಡಿದ ಭರವಸೆಗಳು

ಗುಸ್ಟಾವೊ ಪೆಟ್ರೋ ನೀಡಿದ ಭರವಸೆಗಳು

ಕೊಲಂಬಿಯಾ ದೇಶದ ಆರ್ಥಿಕತೆ ಕಳೆದ ಮೂರು ದಶಕದಲ್ಲಿ ಗಣನೀಯವಾಗಿ ಹೆಚ್ಚಿರುವುದು ಹೌದು. 1990ರಲ್ಲಿ 1400 ಡಾಲರ್ ಇದ್ದ ಜಿಡಿಪಿ ತಲಾದಾಯ 2018ರಲ್ಲಿ 6,700 ಡಾಲರ್‌ಗೆ ಏರಿ ಸಿರಿವಂತ ದೇಶಗಳ ಸಾಲಿನಲ್ಲಿದೆ. ಆದರೂ ಕೂಡ ಕೊಲಂಬಿಯಾದಲ್ಲಿ ಆಗಿರುವುದು ಅಸಮಾನ ಅಭಿವೃದ್ಧಿ. ಅಂದರೆ ಆರ್ಥಿಕತೆಯು ಅಸಮತೋಲನದಿಂದ ಕೂಡಿದೆ. ಅಸಮಾನತೆ, ನಿರುದ್ಯೋಗ ಮತ್ತು ಹಿಂಸಾಚಾರಗಳು ಕೊಲಂಬಿಯಾದ ಜನರಿಗೆ ಹಿಂಸೆ ನೀಡುತ್ತಿವೆ.

ಈ ಹಿನ್ನೆಲೆಯಲ್ಲಿ ಗುಸ್ಟಾವೊ ಪೆಡ್ರೋ ಕೊಲಂಬಿಯಾದ ಜನರಿಗೆ ಅನೇಕ ಭರವಸೆಗಳನ್ನು ನೀಡಿ ಆಶಾಕಿರಣವಾಗಿ ಕಾಣಿಸಿದ್ದಾರೆ. ತೈಲ ಮತ್ತು ಪೆಟ್ರೋಲಿಯಂ ರಫ್ತು ಕೊಲಂಬಿಯಾದ ಪ್ರಮುಖ ಆದಾಯ ಮೂಲವಾಗಿದ್ದರೂ ಅವರು ಪರಿಸರ ರಕ್ಷಣೆ ದೃಷ್ಟಿಯಿಂದ ತೈಲ ಶೋಧನೆಯನ್ನು ನಿಷೇಧಿಸುವುದಾಗಿ ಹೇಳಿದ್ಧಾರೆ. ಅಷ್ಟೇ ಅಲ್ಲ, ಓಪನ್ ಪಿಟ್ ಮೈನಿಂಗ್, ಫ್ರ್ಯಾಕಿಂಗ್ ಇತ್ಯಾದಿ ಗಣಿಗಾರಿಕೆಗಳನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಅವರು ಮಾಡಿರುವ ಇತರ ಭರವಸೆಗಳು ಇಂತಿವೆ:
* ವಿಶ್ವವಿದ್ಯಾಲಯದಲ್ಲಿ ಉಚಿತವಾಗಿ ಶಿಕ್ಷಣ ನೀಡುವ ಮೂಲಕ ಅಸಮಾನತೆಯನ್ನು ನಿಗ್ರಹಿಸುವುದು
* ಪಿಂಚಣಿ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು
* ದೊಡ್ಡ ಜಮೀನು ಹೊಂದಿರುವವರ ಮೇಲೆ ವೆಲ್ತ್ ಟ್ಯಾಕ್ಸ್ ಹೇರುವುದು
* ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರುವುದು
* ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ಸಂಬಂಧ ಸುಧಾರಿಸಿಕೊಳ್ಳುವುದು
* ಡ್ರಗ್ ಮಾಫಿಯಾ ವಿರುದ್ಧ ಹೋರಾಟ
* ವೆನಿಜ್ಯುಲಾ ದೇಶದ ಜೊತೆ ಮತ್ತೊಮ್ಮೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವುದು.

ದಕ್ಷಿಣ ಅಮೆರಿಕ ಕಮ್ಯೂನಿಸ್ಟ್ ಮಯ

ದಕ್ಷಿಣ ಅಮೆರಿಕ ಕಮ್ಯೂನಿಸ್ಟ್ ಮಯ

ಈಗ ದಕ್ಷಿಣ ಅಮೆರಿಕ ಅಥವಾ ಲ್ಯಾಟಿನ್ ಅಮೆರಿಕನ್ ದೇಶಗಳ ಪೈಕಿ ಕಮ್ಯೂನಿಸ್ಟ್ ಪಕ್ಷದ ಅಡಳಿತ ಇರುವ ನಾಲ್ಕನೇ ದೇಶ ಕೊಲಂಬಿಯಾ ಆಗಿದೆ. ಚಿಲಿ, ಪೆರು ಮತ್ತು ಹೊಂಡುರಾಸ್ ದೇಶಗಳಲ್ಲಿ ಕಳೆದ ವರ್ಷ, (2021) ಎಡಪಕ್ಷಗಳಿಗೆ ಸೇರಿದವರು ಅಧ್ಯಕ್ಷರಾಗಿದ್ದಾರೆ. ಕುತೂಹಲವೆಂದರೆ ಬ್ರೆಜಿಲ್ ದೇಶದಲ್ಲೂ ಕಮ್ಯೂನಿಸ್ಟ್ ಪಕ್ಷದವರು ಅಧಿಕಾರಕ್ಕೆ ಬರಲಿದ್ದಾರೆ. ಅಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಯಿಲ್ ಇನಾಷಿಯೋ ಲುಲಾ ಡಾ ಸಿಲ್ವಾ ಮುನ್ನಡೆಯಲ್ಲಿದ್ದಾರೆನ್ನಲಾಗಿದೆ. ಮಂಗಳವಾರ ಅಥವಾ ಬುಧವಾರ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ.

ವಿಶ್ವದೆಲ್ಲೆಡೆ ಇರುವ ಕಮ್ಯೂನಿಸ್ಟ್ ದೇಶಗಳು

ವಿಶ್ವದೆಲ್ಲೆಡೆ ಇರುವ ಕಮ್ಯೂನಿಸ್ಟ್ ದೇಶಗಳು

ಕಮ್ಯೂನಿಸ್ಟ್ ಪಕ್ಷವೊಂದೇ ಆಡಳಿತ ಇರುವ ದೇಶಗಳು ಕಮ್ಯೂನಿಸ್ಟ್ ರಾಷ್ಟ್ರಗಳೆನಿಸುತ್ತವೆ. ಹಿಂದೆ ಸೋವಿಯತ್ ರಷ್ಯಾ ಇತ್ತು. ಈಗ ಅಂಥ ದೇಶಗಳೆಂದರೆ ಚೀನಾ, ಕ್ಯೂಬಾ, ವಿಯೆಟ್ನಾಂ, ಉತ್ತರ ಕೊರಿಯಾ, ಲಾವೋಸ್ ಮಾತ್ರ. ಈಗ ಚಿಲಿ, ಕೊಲಂಬಿಯಾ ಮೊದಲಾದ ದೇಶಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೆ ಏರಿದರೂ ಅಲ್ಲೆಲ್ಲಾ ಬಹುಪಕ್ಷಗಳ ರಾಜಕೀಯ ವ್ಯವಸ್ಥೆ ಇದೆ. ಹೀಗಾಗಿ, ಅವರು ಪಕ್ಕಾ ಕಮ್ಯೂನಿಸ್ಟ್ ದೇಶಗಳೆನಿಸುವುದಿಲ್ಲ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+