• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mental Health Day- ಕರ್ನಾಟಕದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ, ಚಿಕಿತ್ಸಾ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಅ. 10: ಕೋವಿಡ್ ಸಾಂಕ್ರಾಮಿಕ ರೋಗ ಬಂದ ಬಳಿಕ ಬಹುತೇಕ ಪ್ರದೇಶಗಳಲ್ಲಿ ಜನಸಾಮಾನ್ಯರನ್ನು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ನಲುಗಿಸಿದೆ. ರೋಗಭಯ, ಲಾಕ್ ಡೌನ್, ಉದ್ಯೋಗನಷ್ಟ, ಒಂಟತನ, ಆಪ್ತರ ಅಗಲಿಕೆ ಇತ್ಯಾದಿಯಿಂದ ಜನರು ಚಿತ್ರಹಿಂಸೆ ಅನುಭವಿಸಿರುವುದು, ಅನುಭವಿಸುತ್ತಿರುವುದು ಸುಳ್ಳಲ್ಲ. ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಳ್ಳುವಂತೆ ಮಾಡಿತು. ಕರ್ನಾಟಕದಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ.

ಸರಕಾರದ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಜನರ ಸಂಖ್ಯೆ ಒಂದು ವರ್ಷದಲ್ಲಿ 10 ಲಕ್ಷವಂತೆ. ಇದು ಸರಕಾರದ ದಾಖಲೆಗಳು ಹೇಳುವ ಸಂಗತಿ. ವಾಸ್ತವದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರಬಹುದು.

ಖಿನ್ನತೆ ಮತ್ತು ಆತಂಕದ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಯ ಪ್ರಕರಣಗಳೇ ಶೇ. 34 ಇದೆ. ಇನ್ನು, ಸ್ಕಿಜೋಫ್ರೆನಿಯಾ (ಬುದ್ಧಿ ಭ್ರಮಣೆ) ದಂಥ ಗಂಭೀರ ಮಾನಸಿಕ ಸಮಸ್ಯೆಯ ಪ್ರಕರಣಗಳು ಶೇ. 18.4 ಇರುವುದು ಗೊತ್ತಾಗಿದೆ. ಮದ್ಯವ್ಯಸನದಿಂದ ಆಗುವ ಮಾನಸಿಕ ಸಮಸ್ಯೆಯ ಪ್ರಕರನಣಗಳು ಶೇ. 11.2 ಇದೆ ಎಂದು ಸರಕಾರಿ ಅಂಕಿ ಅಂಶ ಹೇಳುತ್ತದೆ.

ಖಿನ್ನತೆಗೆ ನಾನಾ ಕಾರಣಗಳಿವೆ. ಕೋವಿಡ್‌ನಿಂದ ಉದ್ಭವವಾದ ಒಂಟಿತನ ಒಂದು ಪ್ರಮುಖ ಕಾರಣ. ಉದ್ಯೋಗ ನಷ್ಟ, ಪ್ರೇಮ ವೈಫಲ್ಯ, ಜೀವನ ಅಭದ್ರತೆ, ಭವಿಷ್ಯದ ಬಗ್ಗೆ ಭಯ ಇತ್ಯಾದಿ ಕಾರಣಗಳಿಂದ ವ್ಯಕ್ತಿಗಳು ಖಿನ್ನತೆಗೊಳಗಾಗುತ್ತಾರೆ.

ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರಕಾರ ಮಾಡಿದ್ದ ಆಪ್ತ ಸಮಾಲೋಚನೆ ವ್ಯವಸ್ಥೆಯಲ್ಲಿ ಭಾರೀ ಸಂಖ್ಯೆಯಲ್ಲಿ ಕರೆಗಳು ದಾಖಲಾಗಿದ್ದವು. ಹಿಂದೆಲ್ಲಾ ಸಾವಿರಗಳ ಲೆಕ್ಕದಲ್ಲಿ ಕರೆಗಳು ಬರುತ್ತಿದ್ದವು. ಕೋವಿಡ್ ಸಂದರ್ಭದಲ್ಲಿ 27 ಲಕ್ಷಕ್ಕೂ ಹೆಚ್ಚು ಜನರಿಗೆ ಆಪ್ತ ಸಮಾಲೋಚನೆ ಒದಗಿಸಲಾಗಿತ್ತಂತೆ. 2020-21ರಲ್ಲಿ 9 ಲಕ್ಷ ಮಂದಿಗೆ ಆಪ್ತ ಸಮಾಲೋಚನೆ ಕೊಡಲಾಗಿತ್ತು. ಈ ವರ್ಷ 10 ತಿಂಗಳ ಅವಧಿಯಲ್ಲೇ 8.65 ಲಕ್ಷ ಜನರು ಆಪ್ತ ಸಮಾಲೋಚನೆಯಿಂದ ಚಿಕಿತ್ಸೆ ಪಡೆದಿದ್ದಾರೆ.

ಆತ್ಮಹತ್ಯೆಯಲ್ಲಿ ಕರ್ನಾಟಕ ನಂ. 5

ಆತ್ಮಹತ್ಯೆ ಮಹಾಪಾಪ, ಅಪರಾಧ ಎನ್ನುತ್ತಾರೆ. ಹಾಗೆಯೇ, ಮಾನಸಿಕ ಅನಾರೋಗ್ಯದ ಒಂದು ಕುರುಹೂ ಹೌದು. ದೇಶಾದ್ಯಂತ ಮಾನಸಿಕ ಅಸ್ವಸ್ಥತೆಯ ಪ್ರಮಾಣ ಹೆಚ್ಚಿರುವುದಕ್ಕೆ ಯುವಜನರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ದ್ಯೋತಕವಾಗಿದೆ.

2021ರಲ್ಲಿ ದೇಶಾದ್ಯಂತ 1.64 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಕಿ ಅಂಶ ಇದೆ. 18 ವರ್ಷದೊಳಗಿನ ವಯಸ್ಸಿನ 13,089 ಮಕ್ಕಳು ಅತ್ಮಹತ್ಯೆ ಮಾಡಿಕೊಂಡಿದ್ದರು. 18ರಿಂದ 30 ವರ್ಷದ ಯುವ ಸಮುದಾಯದವರಲ್ಲಿ 37 ಸಾವಿರಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದರು.

ಬೆಂಗಳೂರಿನಲ್ಲಿ ಆತ್ಮಹತ್ಯೆಗಳೆಷ್ಟು?

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳಾಗಿವೆ. ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಕರ್ನಾಟಕ ಐದನೇ ಸ್ಥಾನದಲ್ಲಿದೆ. 2021ರಲ್ಲಿ ಕರ್ನಾಟಕದಲ್ಲಿ 13 ಸಾವಿರ ಜನರು ಆತ್ಮಹ್ಯೆ ಮಾಡಿಕೊಂಡಿದ್ದಾರೆ.

ಇನ್ನು, ನಗರಗಳ ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಇಲ್ಲಿ 2292 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ 2760 ಮತ್ತು ಚೆನ್ನೈನಲ್ಲಿ 2699 ಮಂದಿ ಆತ್ಮಹ್ಯೆ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಉತ್ತಮ ಮಾನಸಿಕ ಆರೋಗ್ಯ ಚಿಕಿತ್ಸೆಯ ವ್ಯವಸ್ಥೆ

ರಾಜ್ಯದಲ್ಲಿ ಇತ್ತೀಚೆಗೆ ಉತ್ತಮ ಮಾನಸಿಕ ಆರೋಗ್ಯ ಚಿಕಿತ್ಸೆಯ ವ್ಯವಸ್ಥೆ ಏರ್ಪಡಿಸಲಾಗಿದೆ. ಇಲ್ಲಿ ಮನೋ ಚೈತನ್ಯ ಕ್ಲಿನಿಕ್, ಇ-ಮಾನಸ್ ಮೊದಲಾದ ವಿವಿಧ ರೀತಿಯ ಮಾನಸಿಕ ಚಿಕಿತ್ಸಾ ವ್ಯವಸ್ಥೆ ಇದೆ.

ತಾಲೂಕು ಮಟ್ಟದಲ್ಲಿ ಪ್ರತೀ ಮಂಗಳವಾರ ಮಾನಸಿಕ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೆಯೇ ಚಿಕಿತ್ಸಾ ವ್ಯವಸ್ಥೆಯನ್ನೂ ಮಾಡಲಾಗಿದೆ. 2021ರ ವರ್ಷದಲ್ಲಿ ಮನೋಚೈತನ್ಯ ಕಾರ್ಯಕ್ರಮದ ಅಡಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿರುವುದು ತಿಳಿದುಬಂದಿದೆ.

ರಾಜ್ಯ ಸರಕಾರದ ಮಾನಸಿಕ ಸ್ವಾಸ್ಥ್ಯ ಯೋಜನೆಯನ್ನು ಕೇಂದ್ರ ಸರಕಾರ ಕೂಡ ಪ್ರಶಂಸಿಸಿದೆ. ರಾಜ್ಯದ ಮಾನಸಿಕ ಅರೋಗ್ಯ ವ್ಯವಸ್ಥೆ ಈಗ ದೇಶಕ್ಕೆ ಮಾದರಿಯಾಗಿದ್ದು, ಇದನ್ನೇ ದೇಶಾದ್ಯಂತ ಜಾರಿ ಮಾಡಲು ಕೇಂದ್ರ ನಿರ್ಧರಿಸಿದೆ.

ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ

ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಹೆಚ್ಚುತ್ತಿದೆ. ಕಡಿಮೆ ಅಂಕಗಳು ಬಂದಿರುವುದು, ಅಥವಾ ನಪಾಸು ಆಗಿರುವುದು ಅಥವಾ ನಪಾಸಾಗುವ ಭಯವು ವಿದ್ಯಾರ್ಥಿಗಳನ್ನು ಆತ್ಮಹತ್ಯೆಗೆ ದೂಡುತ್ತಿರುವ ಅತಂಕಕಾರಿ ಸಂಗತಿ ಇದೆ. ಇದನ್ನು ತಪ್ಪಿಸಲು ಕಳೆದ ವರ್ಷದಂದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೆಲ ದಿನಗಳ ಮೊದಲು ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಲಾಗಿತ್ತು. ಸರಕಾರದ ಈ ಕ್ರಮ ಪ್ರಶಂಸೆಗೆ ಒಳಗಾಗಿತ್ತು.

(ಒನ್ಇಂಡಿಯಾ ಸುದ್ದಿ)

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
World Mental Health Day 2022- In Karnataka 10 lakh people take treatment for metal related ailments in one year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X