ನಿಮ್ಮ ಹಣ ಲಪಟಾಯಿಸಬಲ್ಲುದು ಸೋವಾ; ಹೊಸ ಟ್ರೋಜನ್ ವೈರಸ್ ಬಗ್ಗೆ ಹುಷಾರ್
ನಮ್ಮ ಅಂಗೈಯಲ್ಲಿ ಪ್ರಪಂಚ ಎಂಬಂತೆ ನಮ್ಮ ಮೊಬೈಲ್‌ನಲ್ಲಿ ನಮ್ಮೆಲ್ಲಾ ಪ್ರಪಂಚ ನಿಂತಿದೆ. ನಮ್ಮ ಅನೇಕ ಅಮೂಲ್ಯ ದತ್ತಾಂಶಗಳನ್ನು ಮೊಬೈಲ್‌ನಲ್ಲಿ ಅಡಕ ಮಾಡಿಕೊಂಡಿರುತ್ತೇವೆ. ಹೀಗಾಗಿ, ಹ್ಯಾಕರ್ಸ್‌ಗಳು ಮೊಬೈಲ್ ಹ್ಯಾಕ್ ಮಾಡಲು ನಿರಂತರ ಪ್ರಯತ್ನ ಮಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಬಹಳಷ್ಟು ವೈರಸ್‌ಗಳ ಮೂಲಕ ನಮ್ಮ ಮೊಬೈಲ್ ಆಪರೇಟಿಂಗ್ ಸಿಸ್ಟಂನ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಪ್ರಯತ್ನಿಸುತ್ತಿರುತ್ತಾರೆ.
ಲೆಕ್ಕವಿಲ್ಲದಷ್ಟು ವೈರಸ್ ಇತ್ಯಾದಿ ಬಂದು ಹೋಗಿವೆ. ಮೊಬೈಲ್ ಸಂಸ್ಥೆಗಳು ಆಗಾಗ್ಗೆ ಇಂಥ ವೈರಸ್‌ಗಳನ್ನು ಗುರುತಿಸಿ ಅದಕ್ಕೆ ಸೂಕ್ತ ರಕ್ಷಾ ಕವಚ ರೂಪಿಸುತ್ತಿರುತ್ತಾರೆ. ಆದರೂ ದುಷ್ಕರ್ಮಿಗಳು ಬೇರೆ ಬೇರೆ ರೀತಿಯ ವೈರಸ್‌ಗಳನ್ನು ತಯಾರಿಸಿ ಹರಡಿಸುವ ಕೆಲಸ ಮಾಡುತ್ತಾರೆ.
ಇಂಥ ವೈರಸ್‌ಗಳಲ್ಲಿ ಸೋವಾ (Sova Virus) ಪ್ರಮುಖವಾದುದು. ಇದು ಮೊಬೈಲ್ ಬ್ಯಾಂಕಿಂಗ್ ಟ್ರೋಜನ್ ವೈರಸ್ ಆಗಿದ್ದು, ಈ ಹಿಂದೆ ಅಮೆರಿಕ, ರಷ್ಯಾ, ಸ್ಪೇನ್ ಮೊದಲಾದ ಪ್ರಮುಖ ದೇಶಗಳಲ್ಲಿ ಹರಡಿತ್ತು. ಈಗ ಭಾರತಕ್ಕೂ ಅಡಿ ಇಟ್ಟಿರುವುದು ತಿಳಿದುಬಂದಿದೆ.
ಈ ಸೋವಾ ವೈರಸ್ ಆಂಡ್ರಾಯ್ಡ್ ಫೋನ್‌ಗಳ ಮೇಲೆ ದಾಳಿ ಮಾಡುತ್ತದೆ. ಆಂಡ್ರಾಯ್ಡ್ ತಂತ್ರಾಂಶವನ್ನು ಯಮಾರಿಸಿ ಎನ್‌ಕ್ರಿಪ್ಟ್ ಮಾಡಿ ಸೂಕ್ಷ್ಮ ದತ್ತಾಂಶಗಳನ್ನು ಲಪಟಾಯಿಸಬಲ್ಲುದು. ಈ ವೈರಸ್ ಬಂದರೆ ಅದನ್ನು ಅನ್‌ಇನ್ಸ್‌ಟಾಲ್ ಮಾಡುವುದೂ ಕಷ್ಟ.

ಸೋವಾ ಯಾವಾಗಿಂದ?
ಸೋವಾ ಎಂಬುದು ಒಂದು ವಿಧದ ಟ್ರೋಜನ್ ವೈರಸ್. ಇದು ಜುಲೈ ತಿಂಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಎರಡೇ ತಿಂಗಳಲ್ಲಿ ಈ ವೈರಸ್ ಐದು ಬಾರಿ ಅಪ್‌ಗ್ರೇಡ್ ಆಗಿದೆ. ಭಾರತದ ಸೈಬರ್ ಭದ್ರತಾ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಭಾರತೀಯ ಬ್ಯಾಂಕ್ ಗ್ರಾಹಕರನ್ನು ಗುರಿಯಾಗಿಸಿ ಹೊಸ ರೀತಿಯ ಮಾಲ್‌ವೇರ್ ತಯಾರಾಗಿದೆ. ಸೋವಾ ಆಂಡ್ರಾಯ್ಡ್ ಟ್ರೋಜನ್ ವೈರಸ್ ಬಳಸಿ ದಾಳಿ ಮಾಡಲಾಗುತ್ತಿದೆ. 2021 ಸೆಪ್ಟೆಂಬರ್‌ನಲ್ಲಿ ಈ ಮಾಲ್‌ವೇರ್ ಮೊದಲ ಬಾರಿಗೆ ಕಾಳಸಂತೆಯನ್ನು ಮಾರಾಟಕ್ಕೆ ಲಭ್ಯವಾಗಿತ್ತು. ಈ ಮಾಲ್‌ವೇರ್ ಒಮ್ಮೆ ಬ್ಯಾಂಕ್ ಗ್ರಾಹಕರ ಮೊಬೈಲ್ ಆವರಿಸಿತಾದರೆ ಅವರ ಹೆಸರು, ಪಾಸ್‌ವರ್ಡ್ ಇತ್ಯಾದಿಯನ್ನು ಕಲೆಹಾಕಬಲ್ಲುದು. ಮೊಬೈಲ್‌ನ ಕುಕಿಗಳನ್ನು ಕದಿಯಬಲ್ಲುದು ಎಂದು ಹೇಳಲಾಗಿದೆ.

ಸೋವಾ ಹೇಗೆ ಕೆಲಸ ಮಾಡುತ್ತೆ?
ಸೋವಾ ವೈರಸ್ ಕೆಲ ಆ್ಯಪ್‌ಗಳ ತದ್ರೂಪುಗಳಾಗಿ ಕಾಣಿಸಿಕೊಂಡು ಏಮಾರಿಸುತ್ತದೆ. 200ಕ್ಕೂ ಹೆಚ್ಚು ಬ್ಯಾಂಕಿಂಗ್ ಮತ್ತು ಪೇಮೆಂಟ್ ಆ್ಯಪ್‌ಗಳ ಮಾರುವೇಶದಲ್ಲಿ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರನ್ನು ವಂಚಿಸುತ್ತದೆ.
ಗೂಗಲ್ ಕ್ರೋಮ್, ಅಮೇಜಾನ್, ಎನ್‌ಎಫ್‌ಟಿ (ಕ್ರಿಪ್ಟೋಕರೆನ್ಸಿಯ ಟೋಕನ್) ಮುಂತಾದ ಖ್ಯಾತ ಅಪ್ಲಿಕೇಶನ್‌ಗಳ ರೀತಿಯಲ್ಲಿ ಕಾಣುವ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಸೋವಾ ವೈರಸ್ ಅಡಕವಾಗಿರುತ್ತದೆ. ಒಂದು ವೇಳೆ ಯಾರಾದರೂ ವ್ಯಕ್ತಿಗಳು ಈ ಆ್ಯಪ್‌ಗಳು ನಿಜವೆಂದು ನಂಬಿ ಡೌನ್‌ಲೋಡ್ ಮಾಡಿಕೊಂಡರೆ ಮುಗೀತು ಅವರ ಮೊಬೈಲ್‌ಗೆ ವೈರಸ್ ವಕ್ಕರಿಸಿದಂತೆಯೇ.
ಹಾಗೆಯೇ, ಯಾವುದಾದರೂ ಎಸ್ಸೆಮ್ಮೆಸ್ ಸಂದೇಶದ ಮೂಲಕವೂ ಸೋವಾ ವೈರಸ್ ಹರಡಬಲ್ಲುದು. ಎಸ್ಸೆಮ್ಮೆಸ್‌ಗಳಲ್ಲಿ ಸಂದೇಶಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಈ ವೈರಸ್ ಮೊಬೈಲ್‌ಗೆ ಇನ್‌ಸ್ಟಾಲ್ ಆಗುತ್ತದೆ. ಆದ್ದರಿಂದ, ನೀವು ಅಷ್ಟು ಹಣ ಗೆದ್ದಿದ್ದೀರಿ, ಪ್ರೈಜ್ ಗೆದ್ದಿದ್ದೀರಿ, ಅದನ್ನು ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಹೇಳುವ ರೀತಿಯಲ್ಲಿ ಬರುವ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ. ಇವು ಬಹುತೇಕ ಫಿಶಿಂಗ್ ತಂತ್ರವಾಗಿರುತ್ತದೆ.

ಸೋವಾ ಏನು ಹಾನಿ ಮಾಡಬಲ್ಲುದು?
ಒಂದು ವೇಳೆ ಸೋವಾ ವೈರಸ್ ನಮ್ಮ ಮೊಬೈಲ್ ಪ್ರವೇಶಿಸಿಬಿಟ್ಟರೆ ಬಹಳಷ್ಟು ಆಟ ಆಡಬಲ್ಲುದು. ವೆಬ್ ಕ್ಯಾಮ್‌ನಿಂದ ಸ್ಕ್ರೀನ್‌ಶಾಟ್ ತೆಗೆಯಬಲ್ಲುದು, ವಿಡಿಯೋ ರೆಕಾರ್ಡ್ ಮಾಡಬಲ್ಲುದು. ಆಂಡ್ರಾಯ್ಡ್ ಅಕ್ಸೆಸಿಬಿಲಿಟಿ ಸರ್ವಿಸ್ ಬಳಸಿ ಸ್ಕ್ರೀನ್ ಕ್ಲಿಕ್, ಸ್ವೈಪ್ ಇತ್ಯಾದಿ ಕೆಲಸಗಳನ್ನು ಮಾಡಬಲ್ಲುದು. ಕೀಸ್ಟ್ರೋಕ್‌ಗಳನ್ನು ಸಂಗ್ರಹಿಸುವುದು, ಕುಕಿಗಳನ್ನು ಕದಿಯುವುದು, ಎಂಎಫ್‌ಎ ಟೋಕನ್ ಭೇದಿಸುವುದು ಇತ್ಯಾದಿ ಕಾರ್ಯಗಳನ್ನೂ ಈ ವೈರಸ್ ಮಾಡಬಲ್ಲುದು. ಬ್ಯಾಂಕ್‌ನ ಯೂಸರ್ ನೇಮ್, ಪಾಸ್‌ವರ್ಡ್ ಇತ್ಯಾದಿ ಮಾಹಿತಿ ಮೂಲಕ ಬ್ಯಾಂಕ್ ಅಕೌಂಟ್‌ನಿಂದ ಹಣವನ್ನು ಲಪಟಾಯಿಸಲಾಗುತ್ತದೆ.
ಇನ್ನೊಂದು ಅಪಾಯಕಾರಿ ಅಂಶವೆಂದರೆ ಈ ನೋವಾ ವೈರಸ್‌ಗೆ ರಕ್ಷಾ ಕವಚ ಪ್ರಬಲವಾಗಿರುವಂತೆ ಕೋಡಿಂಗ್ ಮಾಡಲಾಗಿರುತ್ತದೆ. ಯಾರಾದರೂ ವ್ಯಕ್ತಿಗಳಿಗೆ ಆ್ಯಪ್ ಬಗ್ಗೆ ಸಂಶಯ ಬಂದು ಅನ್‌ಇನ್‌ಸ್ಟಾಲ್ ಮಾಡಲು ಹೋದರೆ ಅದು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನೀವು ನಕಲಿ ಆಂಡ್ರಾಯ್ಡ್ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದಾಗ, ಅದು ಆ ಮೊಬೈಲ್‌ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳ ಪಟ್ಟಿ ಮಾಡಿ C2 ಸರ್ವರ್‌ಗೆ (ಕಮಾಂಡ್ ಮತ್ತು ಕಂಟ್ರೋಲ್) ಕಳುಹಿಸುತ್ತದೆ. ಅಲ್ಲಿಂದ ಅ್ಯಪ್‌ಗಳ ದುರ್ಬಳಕೆ ಕಾರ್ಯ ನಡೆಯುತ್ತದೆ.

ವೈರಸ್‌ನಿಂದ ರಕ್ಷಣೆ ಹೇಗೆ?
ಸೈಬರ್ ದಾಳಿಗಳನ್ನು ಎದುರಿಸಲು ರಚಿಸಲಾಗಿರುವ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸರ್ಟ್-ಇನ್) ಸೋವಾದಂಥ ಮಾಲ್‌ವೇರ್‌ಗಳನ್ನು ಎದುರಿಸಲು ಕೆಲ ಸಲಹೆಗಳನ್ನು ನೀಡಿದೆ.
ಆಂಡ್ರಾಯ್ಡ್ ಮೊಬೈಲ್ ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ಅಥವಾ ತಮ್ಮ ಮೊಬೈಲ್ ತಯಾರಕರ ಆ್ಯಪ್ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕು. ಅಲ್ಲಿಯೂ ಕೂಡ ವಂಚಕ ಆ್ಯಪ್‌ಗಳಿರುವ ಸಾಧ್ಯತೆ ಇರುತ್ತದೆ. ನೀವು ಆ್ಯಪ್‌ನ ಡೌನ್‌ಲೋಡ್ ವಿವರ, ಇತರ ಜನರ ಅಭಿಪ್ರಾಯ, ವಿಮರ್ಶೆ ಇತ್ಯಾದಿ ಮಾಹಿತಿಯನ್ನು ಪರಿಶೀಲಿಸಿ, ಅದು ಅಧಿಕೃತ ಆ್ಯಪ್ ಎಂಬುದು ಖಾತ್ರಿ ಆದ ಬಳಿಕವಷ್ಟೇ ಡೌನ್‌ಲೋಡ್ ಮಾಡಬೇಕು.
ಬೇರೆ ಮೂಲಗಳಿಂದ ನೀವು ಆ್ಯ್‌ಗಳನ್ನು ಡೌನ್‌ಲೋಡ್ ಮಾಡುವ ಗೋಜಿಗೆ ಹೋಗದಿರಿ ಎಂದು ಸೆರ್ಟ್-ಇನ್ ಹೇಳಿದೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications