ನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆ
ಬೆಂಗಳೂರು, ಏ. 18: ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ನೇಮಕವಾಗಿದ್ದಾರೆ. ಮೇ 1ರಿಂದ ಅವರು ಸೇನಾ ಪಡೆ ಮುಖ್ಯಸ್ಥ (CAS- Chief of Army Staff) ರಾಗಲಿದ್ದಾರೆ. ಜನರಲ್ ಮನೋಜ್ ಮುಕುಂದ್ ನರವಣೆ ಅವರ 28 ತಿಂಗಳ ಅಧಿಕಾರಾವಧಿ ಏಪ್ರಿಲ್ 30ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಮನೋಜ್ ಪಾಂಡೆ ಅವರ ನೇಮಕ ಮಾಡಲಾಗಿದೆ.
ಮನೋಜ್ ಪಾಂಡೆ ಎಂಜಿನಿಯರ್ ಆಗಿದ್ದು, ಸೇನಾ ಪಡೆ ಮುಖ್ಯಸ್ಥರಾಗಲಿರುವ ಮೊದಲ ಎಂಜಿನಿಯರ್ ಎನಿಸಲಿದ್ದಾರೆ. ಮನೋಜ್ ಚಂದ್ರಶೇಖರ್ ಪಾಂಡೆ ಫೆಬ್ರವರಿ 1ರಿಂದಷ್ಟೇ ಉಪ ಸೇನಾ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅದೃಷ್ಟಕ್ಕೆ ಅವರಿಗಿಂತ ಹಿರಿಯ ಸೇನಾಧಿಕಾರಿಗಳು ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ. ಹೀಗಾಗಿ, ಮನೋಜ್ ಪಾಂಡೆ ಅವರೇ ಈಗ ಸೀನಿಯರ್ ಮೋಸ್ಟ್ ಸೇನಾಧಿಕಾರಿ ಆಗಿದ್ದು, ಸಹಜವಾಗಿಯೇ ಅವರು ನೂತನ ಸಿಎಎಸ್ ಆಗಿ ನೇಮಕವಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಮನೋಜ್ ಪಾಂಡೆ ಅವರು 29ನೇ ಸೇನಾ ಮುಖ್ಯಸ್ಥರಾಗಲಿದ್ದಾರೆ.
ಇದೇ ವೇಳೆ, ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಕಾಶ್ ರಾವತ್ ಅವರ ಅಕಾಲಿಕ ದುರ್ಮರಣದ ನಂತರ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS- Chief of Defence Staff) ಸ್ಥಾನ ಖಾಲಿಯಾಗಿಯೇ ಉಳಿದಿದೆ. ಈ ಬಾರಿ ಯಾರು ನೂತನ ಸಿಡಿಎಸ್ ಆಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಮುಂದಿನ ಸಿಡಿಎಸ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ವಾಯುಪಡೆ, ನೌಕಾಪಡೆ ಮತ್ತು ಭೂಸೇನಾ ಪಡೆಗಳ ಮುಖ್ಯಸ್ಥರಲ್ಲಿ ಒಬ್ಬರನ್ನ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗುತ್ತದೆ. ಸಿಡಿಎಸ್ ಆದವರು ಈ ಮೂರು ಸೇನಾ ಪಡೆಗಳ ಮಧ್ಯೆ ಹೊಂದಾಣಿಕೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.

ಇನ್ನು, ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಮನೋಜ್ ಪಾಂಡೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬಿಎಸ್‌ಸಿ ಪದವಿ ಮಾಡಿದರು. ಬಳಿಕ ಇಂಡಿಯನ್ ಮಿಲಿರಿ ಅಕಾಡೆಮಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಮಾಡಿದರು. 1982ರಲ್ಲಿ ಎಂಜಿನಿಯರ್‌ಗಳ ತುಕಡಿಗಳಿಗೆ ಪಾಂಡೆ ನಿಯೋಜಿತಗೊಂಡರು. ಅಲ್ಲಿಂದ ಸೇನೆಯಲ್ಲಿ ಅವರ ಸೇವೆ ಮೊದಲುಗೊಂಡಿದ್ದು.
ಮೊದಲಿಗೆ ಅವರು ಸೆಕೆಂಡ್ ಲೆಫ್ಟಿನೆಂಟ್ ಹುದ್ದೆ ಪಡೆದರು. ಬಳಿಕ ಲೆಫ್ಟಿನೆಂಟ್, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್ ಕರ್ನಲ್, ಕರ್ನಲ್, ಬ್ರಿಗೇಡಿಯರ್, ಮೇಜರ್ ಜನರಲ್ ಮತ್ತು ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿದ್ದಾರೆ. ಈಗ ಮೇ 1ರಿಂದ ಅವರು ಸೇನಾ ಜನರಲ್ ಆಗಲಿದ್ದಾರೆ.
ಆಪರೇಷನ್ ಪರಾಕ್ರಮದಲ್ಲಿ ಭಾಗಿ:
ಭಾರತದ ಸಂಸತ್ ಮೇಲೆ ಉಗ್ರರ ದಾಳಿ ಘಟನೆ ನಡೆದ ಬಳಿಕ ಪಾಕಿಸ್ತಾನದ ಎಲ್‌ಒಸಿ ಗಡಿಭಾಗದಲ್ಲಿ ಭಾರತ ದೊಡ್ಡ ಸಂಖ್ಯೆಯಲ್ಲಿ ಸೇನಾ ತುಕಡಿಗಳನ್ನ ಜಮಾಯಿಸಿತ್ತು. ಬಹುತೇಕ ಯುದ್ಧದ ಸ್ಥಿತಿಗೆ ಎರಡೂ ದೇಶಗಳ ಸೇನೆಗಳು ಸನ್ನದ್ದಗೊಂಡಿದ್ದವು. ಭಾರತೀಯ ಸೈನಿಕರು ಆ ಗಡಿಭಾಗದಲ್ಲಿ ಬಹಳ ಕ್ಷಿಪ್ರವಾಗಿ ಆಯಕಟ್ಟಿನ ಜಾಗಗಳನ್ನು ಆಕ್ರಮಿಸಿಕೊಂಡಿದ್ದರು.
ಅಂದಿನ ಭಾರತೀಯ ಸೇನಾ ಕಾರ್ಯಾಚರಣೆಯನ್ನ ಆಪರೇಷನ್ ಪರಾಕ್ರಮ ಎಂದು ಕರೆಯಲಾಗಿದೆ. ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಎಂಜಿನಿಯರಿಂಗ್ ತುಕಡಿಯನ್ನ ಆ ಕಾರ್ಯಾಚರಣೆಯಲ್ಲಿ ಮುನ್ನಡೆಸಿದ್ದರು. ಅವರಿಗೆ ಆಪರೇಷನ್ ಪರಾಕ್ರಮ ಪದಕ ಕೂಡ ಪ್ರಾಪ್ತವಾಗಿದೆ. ಲೆ. ಜ. ಮನೋಜ್ ಪಾಂಡೆ ಅವರಿಗೆ ಇನ್ನೂ ಹಲವು ಪದಕಗಳು ದೊರಕಿವೆ.

ಮನೋಜ್ ಪಾಂಡೆ ಅವರಿಗೆ ಸಿಕ್ಕ ಪದಕಗಳು:
- ಪರಮ ವಿಶಿಷ್ಟ ಸೇವಾ ಪದಕ
- ಅತಿ ವಿಶಿಷ್ಟ ಸೇವಾ ಪದಕ
- ವಿಶಿಷ್ಟ ಸೇವಾ ಪದಕ
- ವಿಶೇಷ ಸೇವೆ ಪದಕ
- ಆಪರೇಷನ್ ವಿಜಯ್ ಪದಕ
- ಆಪರೇಷನ್ ಪರಾಕ್ರಮ ಪದಕ
- ಸೈನ್ಯ ಸೇವಾ ಪದಕ
- ವಿದೇಶ ಸೇವಾ ಪದಕ
ಲೆ. ಜ. ಮೇಜರ್ ಪಾಂಡೆ ಅವರು ಬ್ರಿಟನ್ ದೇಶದ ಕೆಂಬರ್ಲಿಯಲ್ಲಿರುವ ಪ್ರತಿಷ್ಠಿತ ಸ್ಟ್ಯಾಫ್ ಕಾಲೇಜಿನಲ್ಲೂ ಶಿಕ್ಷಣ ಪಡೆದಿದ್ದಾರೆ. ಇಥಿಯೋಪಿಯಾ ಮತ್ತು ಎರಿಟ್ರಿಯಾ ದೇಶಗಳಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯಲ್ಲಿ ಪಾಂಡೆ ಅವರು ಚೀಫ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications