ಅಸಂಘಟಿತ ವಲಯ ಕಾರ್ಮಿಕರಿಗಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ, ವಿವರ
ಕರ್ನಾಟಕ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವು ನೀಡಲು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಜಾರಿಗೊಳಿಸಿದೆ. ಕಾರ್ಮಿಕ ಇಲಾಖೆ ಮೂಲಕ ಈ ಯೋಜನೆ ಜಾರಿಯಾಗಿದ್ದು, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.
ಈ ಯೋಜನೆಯಡಿ ಒಟ್ಟು 11 ವರ್ಗಗಳ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿಸಿ, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಹಮಾಲಿಗಳು, ಚಿಂದಿ ಆಯುವವರು, ಮನೆಗೆಲಸದವರು, ಟೈಲರ್, ಮೆಕ್ಯಾನಿಕ್, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕರು ಈ ವ್ಯಾಪ್ತಿಗೆ ಬರುತ್ತಾರೆ.

ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ, ಸಭಾ ಭವನ, ಟೆಂಟ್, ಪೆಂಡಾಲ್‍ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು, ಗಿಗ್ ವೃತ್ತಿ ನಿರ್ವಹಿಸುತ್ತಿರುವ ಡೆಲಿವರಿ ಕಾರ್ಮಿಕರು, ದಿನಪತ್ರಿಕೆ ವಿತರಿಸುವ ಕಾರ್ಮಿಕರು, ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕ ಅಲೆಮಾರಿ ಪಂಗಡ ಒಳಗೊಂಡಂತೆ ಒಟ್ಟು 23 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ.
ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಹತೆಗಳು: ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆಯಡಿ ಫಲಾನುಭವಿಗಳಾಗಲು ಕಾರ್ಮಿಕರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಮತ್ತು ಅರ್ಜಿದಾರರು 18 ರಿಂದ 60 ವರ್ಷದೊಳಗಿರಬೇಕು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಡಿ ನೋಂದಾಯಿತರಾಗಿ ಸಂಬಂಧಿಸಿದ ವೃತ್ತಿಯಲ್ಲಿ ಸಕ್ರಿಯನಾಗಿರಬೇಕು. ಆದರೆ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು.
ಯೋಜನೆಯಡಿ ನೋಂದಾಯಿತರಾದ ಕಾರ್ಮಿಕರ ಮರಣ ಪ್ರಕರಣದಲ್ಲಿ ತಲಾ ರೂ.1 ಲಕ್ಷ ರೂ.ಗಳು ಮತ್ತು ಅಪಘಾತ ಗಂಭೀರತೆ ಆಧಾರದಲ್ಲಿ (ಶೇಕಡವಾರು ದುರ್ಬಲತೆ ಆಧಾರದ ಮೇಲೆ) ರೂ. 1 ಲಕ್ಷದವರೆಗೆ, ಆಸ್ಪತ್ರೆ ವೆಚ್ಚ ಮರುಪಾವತಿ ರೂ. 50,000, ಸಹಜ ಮರಣ ಪರಿಹಾರ (ಅಂತ್ಯ ಕ್ರಿಯೆ ಧನಸಹಾಯ) ವೆಚ್ಚ ರೂ. 10,000 ಪರಿಹಾರ ನೀಡಲಾಗುತ್ತದೆ.
ಅರ್ಜಿದಾರ ಅಥವಾ ಫಲಾನುಭವಿಯು ಅಪಘಾತ ಪರಿಹಾರಕ್ಕಾಗಿ ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ಸಹಜ ಮರಣ ಪ್ರಕರಣಗಳಲ್ಲಿ ಮರಣ ದಿನಾಂಕದಿಂದ 6 ತಿಂಗಳ ಅವಧಿಯೊಳಗೆ ನಿಗದಿತ ನಮೂನೆಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿದಾರನು ತನ್ನ ನೋಂದಾಯಿತ ಗುರುತಿನ ಚೀಟಿ, ನಿಗದಿತ ನಮೂನೆಯಲ್ಲಿ ಉದ್ಯೋಗ ಪ್ರಮಾಣ ಪತ್ರ, ಪ್ರಥಮ ವರ್ತಮಾನ ವರದಿ ಪ್ರತಿ, ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ, ಆಸ್ಪತ್ರೆಯ ಮೂಲ ಬಿಲ್‍ಗಳನ್ನು ನೀಡಬೇಕು.
ಆಸ್ಪತ್ರೆ ವೆಚ್ಚ ಮರುಪಾವತಿ ಪ್ರಕರಣಗಳಲ್ಲಿ ಮೂಲ ಡಿಸ್ಚಾರ್ಜ್ ಸಾರಾಂಶ, ಸರ್ಕಾರಿ ವೈದ್ಯಕೀಯ ದುರ್ಬಲತೆ ಪ್ರಮಾಣ ಪತ್ರ, ಕಂದಾಯ ಇಲಾಖೆಯ ವಂಶ ವೃಕ್ಷ ಪ್ರಮಾಣ ಪತ್ರ, ಪಡಿತರ ಚೀಟಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ನಾಮನಿರ್ದೇಶಿತರ, ಫಲಾನುಭವಿಯ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಮತ್ತು ಇತರೆ ದಾಖಲಾಲೆಗಳನ್ನು ಸಲ್ಲಿಸಬೇಕು.
ಸಹಜ ಮರಣ ಪರಿಹಾರ ಪಡೆಯಲು ನೋಂದಾಯಿತ ಗುರುತಿನ ಚೀಟಿ, ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಫಲಾನುಭವಿ ಮತ್ತು ನಾಮನಿರ್ದೇಶಿತರ ಆಧಾರ್ ಕಾರ್ಡ್ ಪ್ರತಿ, ನಾಮನಿರ್ದೇಶಿತರ ಬ್ಯಾಂಕ್ ಪಾಸ್‍ಬುಕ್ ಪ್ರತಿ ಹಾಗೂ ಅವಶ್ಯಕವಿರುವ ಇತರೆ ದಾಖಲಾತಿಗಳನ್ನು ನೀಡಬೇಕು. ಎಲ್ಲಾ ಪರಿಹಾರ ಮೊತ್ತವನ್ನು ಫಲಾನುಭವಿ, ನಾಮನಿರ್ದೇಶಿತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಫಲಾನುಭವಿಯು ಮರಣದ ಸಮಯದಲ್ಲಿ ಅವಿವಾಹಿತನಾಗಿದ್ದಲ್ಲಿ ತಾಯಿ/ ತಂದೆ ಹಾಗೂ ವಿವಾಹಿತನಾಗಿದ್ದಲ್ಲಿ ಹೆಂಡತಿ ಮತ್ತು ಮಕ್ಕಳು ಕಾನೂನುಬದ್ಧ ವಾರಸುದಾರರು ಆಗಿರುತ್ತಾರೆ.
ಏಕೆ ಪರಿಹಾರ ತಿರಸ್ಕಾರ: ಫಲಾನುಭವಿಯು ಆತ್ಮಹತ್ಯೆ, ಅಪಘಾತದ ವೇಳೆ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿದಲ್ಲಿ, ಬುದ್ಧಿಭ್ರಮಣೆಯ ಕಾರಣ ಅಪಘಾತ ಸಂಭವಿಸಿದಲ್ಲಿ, ಫಲಾನುಭವಿಯು ಅಪರಾಧದ ಉದ್ದೇಶದ ಕಾನೂನು ಉಲ್ಲಂಘನೆಯ ಕಾರಣ ಅಪಘಾತ ಸಂಭವಿಸಿದಲ್ಲಿ, ಯುದ್ಧ, ಆಕ್ರಮಣ, ವಿದೇಶಿ ವೈರಿಯ ಕೃತಿ, ಧಂಗೆ, ಕ್ರಾಂತಿ, ಮಿಲಿಟರಿ ಅಥವಾ ಅಧಿಕಾರ ಕಿತ್ತುಕೊಳ್ಳುವುದು, ಹಿಡಿತ ಸೆರೆಹಿಡಿ, ಬಂಧನ ಕಾರಣದಿಂದಾಗಿ ಸಂಭವಿಸಿದ ಅಪಘಾತದಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಫಲಾನುಭವಿಗಳಾದ ಅಸಂಘಟಿತ ವಲಯದ ಕಾರ್ಮಿಕರು ಈ ಅಂಬೇಡ್ಕರ ಸಹಾಯ ಹಸ್ತ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಮನವಿ ಮಾಡಿದ್ದಾರೆ.












Click it and Unblock the Notifications