Prasada: ನಿಮ್ಮ ಮನೆ ಬಾಗಿಲಿಗೆ ಬರುತ್ತೆ 400 ದೇವಸ್ಥಾನಗಳ ಪ್ರಸಾದ, ಪಡೆಯುವುದು ಹೇಗೆ?
ಸಾಮಾನ್ಯವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿದ ದೇವರ ಪ್ರಸಾದವನ್ನು ಖರೀದಿಸಿ, ಬಂಧು-ಬಳಗ ಹಾಗೂ ನೆರೆಹೊರೆಯವರಿಗೆ ವಿತರಿಸುವ ಪದ್ಧತಿ ಮೊದಲಿನಿಂದಲೂ ಇದೆ. ದೂರದ ದೇವಸ್ಥಾನಗಳಿಗೆ ಹೋಗುವವರಿಗೆ ಬರ್ತಾ ಸ್ವಲ್ಪ ಪ್ರಸಾದ ನಮಗೂ ತನ್ರೀ ಎಂದು ಮನವಿ ಮಾಡುವವರೂ ಇದ್ದಾರೆ. ಆದರೆ ಇನ್ನು ಮುಂದೆ ಕರ್ನಾಟಕದ 400 ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದವು ನಿಮ್ಮ ಬಾಗಿಲಿಗೇ ಬರಲಿದೆ.
ಹೌದು, ಮುಜರಾಯಿ ಇಲಾಖೆ ಭಕ್ತರಿಗಾಗಿ ಈ ವಿಶೇಷ ಸೇವೆಯನ್ನು ಒದಗಿಸುತ್ತಿದೆ. ಭಕ್ತರಿಗಾಗಿ ಇ-ಪ್ರಸಾದ ಸೇವೆಯನ್ನು ಆರಂಭಿಸಿದ್ದು, ಇನ್ನು ಮುಂದೆ ಪ್ರಮುಖ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದವನ್ನು ಮನೆಗೆ ತರಿಸಿಕೊಳ್ಳಬಹುದಾಗಿದೆ. ಈ ಸೇವೆಯ ಮೂಲಕ ರಾಜ್ಯದಲ್ಲಿರುವ ಸುಮಾರು 400 ದೇಗುಲಗಳ ಪ್ರಸಾದ ಕೇವಲ 15 ದಿನಗಳಲ್ಲಿ ನಿಮ್ಮ ಮನೆಗೆ ಬಂದು ತಲುಪಲಿದೆ.

ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುವಂತೆ, ಪ್ರಸಾದದ ಕೌಂಟರ್ ಬಳಿಯೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಇದರಿಂದ ದೇವಸ್ಥಾನಗಳಲ್ಲಿ ಜನದಟ್ಟಣೆ ಕೂಡ ಅಧಿಕವಾಗುತ್ತಿದೆ. ಇದೇ ಕಾರಣದಿಂದ ಭಕ್ತರು ದೇವಾಲಯಗಳಿಗೆ ಬರಲು ಕೂಡ ಹಿಂದೇಟು ಹಾಕುತ್ತಿದ್ದರೆ, ಕೊನೇ ಪಕ್ಷ ದೇವಸ್ಥಾನಗಳಿಗೆ ಹೋಗುವವರಿಂದಾದರೂ ಪ್ರಸಾದ ತರಿಸಿಕೊಳ್ಳೋಣ ಎಂದುಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಮನಗಂಡು ಮುಜರಾಯಿ ಇಲಾಖೆಯು ಈ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ.
ಮನೆಯಲ್ಲಿರುವ ಹಿರಿಯರಿಗೆ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯಬೇಕು ಹಾಗೂ ಅಲ್ಲಿನ ಪ್ರಸಾದ ಸೇವನೆ ಮಾಡಬೇಕು ಎಂಬುದು ದೊಡ್ಡ ಆಸೆ. ಆದರೆ, ಹೆಚ್ಚಿನ ಜನದಟ್ಟಣೆ ಇರುವ ಕಾರಣಕ್ಕೆ ಹಾಗು ಅವರ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲೇ ಉಳಿಯುತ್ತಾರೆ. ತಮ್ಮ ಆಪ್ತ ವಲಯದಲ್ಲಿ ಯಾರಾದರೂ ದೇವಸ್ಥಾನಗಳಿಗೆ ಹೋಗುತ್ತಿದ್ದರೆ, ಅಲ್ಲಿಂದ ಪ್ರಸಾದ ತಂದು ಕೊಡುವಂತೆ ಮನವಿಯೂ ಮಾಡುತ್ತಿದ್ದಾರೆ. ಇನ್ನು ಮುಂದೆ ಮನೆಯಲ್ಲಿ ಕುಳಿತುಕೊಂಡೇ ತಮಗೆ ಇಷ್ಟವಾದ ದೇವಸ್ಥಾನದಿಂದಲೇ ಪ್ರಸಾದವನ್ನು ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮುಜರಾಯಿ ಇಲಾಖೆಯು ಈಗಾಗಲೇ ಈ ಇ ಪ್ರಸಾದ ಸೇವೆಯನ್ನು ಪ್ರಾಯೋಗಿಕವಾಗಿ ರಾಜ್ಯದ ಕೆಲವು ದೇವಾಲಯಗಳಲ್ಲಿ ಶುರು ಮಾಡಿತ್ತು. ಆ ದೇವಸ್ಥಾನಗಳಿಂದ ಆನ್‌ಲೈನ್ ಮೂಲಕ ಭಕ್ತರ ಮನೆ ಬಾಗಿಲಿಗೆ ಪ್ರಸಾದ ತಲುಪಿಸುವುದಾಗಿ ಹೇಳಿತ್ತು. ಇದಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಾವಿರಾರು ಮಂದಿ ಪ್ರಸಾದ ತರಿಸಿಕೊಂಡಿದ್ದಾರೆ. ಇದು ಯಶಸ್ವಿಯಾಗಿರುವ ಬೆನ್ನಲ್ಲೇ ಈ ಯೋಜನೆಯನ್ನು ರಾಜ್ಯದ ಪ್ರಮುಖ ದೇವಾಲಯಗಳಿಗೂ ವಿಸ್ತರಿಸಲು ಮುಜರಾಯಿ ಇಲಾಖೆ ಮುಂದಾಗಿದೆ.
ಈ ಇ-ಪ್ರಸಾದ ಯೋಜನೆಯಿಂದ ದೇವಸ್ಥಾನಗಳಲ್ಲಿ ಜನದಟ್ಟಣೆ ಕೂಡ ಕಡಿಮೆಯಾಗಲಿದೆ. ಪ್ರಸಾದದ ಕೌಂಟರ್‌ಗಳಲ್ಲಿ ಕ್ಯೂ ನಿಲ್ಲುವುದು ಕೂಡ ತಪ್ಪಲಿದೆ. ಅಂಗವಿಕಲರಿಗೂ ಈ ಸೇವೆಯಿಂದ ಬಹಳ ಅನುಕೂಲವಾಗಲಿದೆ. ಮುಖ್ಯವಾಗಿ ಮನೆಯಲ್ಲಿರುವ ವೃದ್ಧರು ತಮಗೆ ಇಷ್ಟವಾದ ದೇವಸ್ಥಾನದಿಂದಲೇ ಪ್ರಸಾದವನ್ನು ಮನೆಗೆ ತರಿಸಿಕೊಂಡು ಸೇವಿಸಬಹುದು. ಮಹಿಳೆಯರು ಸೇರಿದಂತೆ ಯಾರು ಬೇಕಾದರೂ ಈ ಸೇವೆಯ ಮೂಲಕ ಪ್ರಸಾದವನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಇನ್ನು ಕೆಲವೇ ವಾರಗಳಲ್ಲಿ ಈ ಸೇವೆಯು ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಭಕ್ತರಿಗೆ ಇದು ನಿಜಕ್ಕೂ ಸಿಹಿಸುದ್ದಿ ಎಂದು ಹೇಳಲಾಗುತ್ತಿದೆ.












Click it and Unblock the Notifications