Drought: ಚಿನ್ನದ ಉಳುಮೆಗೆ ಬರದ ಕರಿನೆರಳು! ಏನಿದು ಚಿನ್ನದ ಉಳುಮೆ?
ಮಡಿಕೇರಿ, ಏಪ್ರಿಲ್ 09: ಮೂರ್ನಾಲ್ಕು ದಶಕಗಳ ಹಿಂದೆ ಮಲೆನಾಡಿನಲ್ಲಿ ಅದರಲ್ಲೂ ಕೊಡಗಿನ ಭಾಗದಲ್ಲಿ ಯುಗಾದಿ ಹಬ್ಬ ಬಂತೆಂದರೆ ಮುಂದೆ ಮಳೆಗಾಲದ ಆರಂಭ ಎಂದೇ ಹೇಳಲಾಗುತ್ತಿತ್ತು. ಅವತ್ತು ಭತ್ತದ ಕೃಷಿಯೇ ಪ್ರಧಾನವಾಗಿದ್ದರಿಂದ ರೈತರು ಯುಗಾದಿಯ ಸಂದರ್ಭ ಉಳುಮೆ ಮಾಡುವ ಮೂಲಕ ಕೃಷಿ ಕೆಲಸಕ್ಕೆ ಮುನ್ನುಡಿ ಬರೆಯುತ್ತಿದ್ದರು. ಅದನ್ನು ರೈತರು ಚಿನ್ನದ ಉಳುಮೆ ಎಂದೇ ಕರೆಯುತ್ತಿದ್ದರು. ಆದರೆ ಈ ವರ್ಷ ಚಿನ್ನದ ಉಳುಮೆಗೆ ಬರದ ಕರಿನೆರಳು ಬಿದ್ದಿದೆ. ರೈತರ ಮೊಗದಲ್ಲಿ ನಗುವಿಲ್ಲದಾಗಿದೆ.
ನಾವು ಇವತ್ತು ಆಚರಿಸುವ ಬಹಳಷ್ಟು ಹಬ್ಬಗಳಿಗೆ ಕೃಷಿಯೇ ಮೂಲವಾಗಿದ್ದು, ಅದರ ಸುತ್ತಲೂ ಹಬ್ಬಗಳು ಗಿರಕಿ ಹೊಡೆಯುತ್ತಿವೆ. ಬಹುತೇಕ ಹಬ್ಬಗಳನ್ನು ಗ್ರಾಮೀಣರು ಅದರಲ್ಲೂ ರೈತ ಕುಟುಂಬದವರೇ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ರೈತರು ಹಬ್ಬಗಳನ್ನು ಆಚರಿಸಬೇಕಾದರೆ ಸಮೃದ್ಧ ಮಳೆಯಾಗಿ, ಜನ ಜಾನುವಾರು ಸಂತುಷ್ಟರಾಗಿರಬೇಕು. ಆಗ ಮನೆ ಮನದಲ್ಲಿ ಖುಷಿಯಿದ್ದು, ಅವರ ಮೊಗದಲ್ಲಿ ಸಂತಸವಿರುತ್ತದೆ.

ಕೊಡಗಿನ ಮಟ್ಟಿಗೆ ಹೇಳುವುದಾದರೆ ಹಿಂದಿನ ಕಾಲದಲ್ಲಿ ಈ ವೇಳೆಗೆಲ್ಲ ಮಳೆ ಸುರಿದು ಭೂಮಿ ತೇವವಾಗಿ ಬಿಡುತ್ತಿತ್ತು. ಹೀಗಾಗಿ ಯುಗಾದಿ ಹಬ್ಬದ ಮಾರನೆಯ ದಿನ ಶುಭ ದಿನವಾಗಿದ್ದು, ಅವತ್ತು ಉಳುಮೆ ಮಾಡಿದರೆ ಶುಭವಾಗಲಿದ್ದು, ಆ ನಂತರ ಮಳೆ ಆರಂಭವಾದ ಮೇಲೆ ಯಾವಾಗ ಬೇಕಾದರೂ ಉಳುಮೆ ಮಾಡಬಹುದಾಗಿತ್ತು. ಯುಗಾದಿ ಸಂದರ್ಭ ಉಳುಮೆ ಮಾಡಲಾಗದವರು ಮಳೆಗಾಲ ಆರಂಭವಾದ ಬಳಿಕ ಜ್ಯೋತಿಷ್ಯರ ಬಳಿಗೆ ತೆರಳಿ ಅವರಿಂದ ಒಂದೊಳ್ಳೆಯ ಮುಹೂರ್ತ ನಿಗದಿಪಡಿಸಿಕೊಂಡು ಅಂದು ಪೂಜೆ ಸಲ್ಲಿಸುವುದರೊಂದಿಗೆ ಭತ್ತ ಕೃಷಿಗೆ ಉಳುಮೆಯನ್ನು ಶುರು ಮಾಡುತ್ತಿದ್ದರು.
ಕೊಡಗಿನಲ್ಲಿ ಹತ್ತು ಹಲವು ಬದಲಾವಣೆ
ಕೊಡಗಿನಲ್ಲಿ ಕಳೆದ ಒಂದೆರಡು ದಶಕಗಳಲ್ಲಿ ಹತ್ತು ಹಲವು ಬದಲಾವಣೆಗಳಾಗಿವೆ. ಭತ್ತವನ್ನು ಧಾನ್ಯ ಲಕ್ಷ್ಮಿಯೆಂದು ನಂಬಿ ಕೃಷಿ ಮಾಡುತ್ತಿದ್ದವರು ಅದರಿಂದ ವಿಮುಖರಾಗಿದ್ದಾರೆ. ಕಣ್ಣು ಹಾಯಿಸಿದಲ್ಲೆಲ್ಲ ಕಂಡು ಬರುತ್ತಿದ್ದ ಗದ್ದೆ ಬಯಲುಗಳು ಮಾಯವಾಗಿ ಅಲ್ಲಿ ತೋಟಗಳು ತಲೆ ಎತ್ತಿವೆ. ಇದಕ್ಕೆ ಕಾರಣ ಭತ್ತದ ಕೃಷಿ ಕೊಡಗಿನ ಮಟ್ಟಿಗೆ ದುಬಾರಿಯಾಗಿದೆ. ಅತಿವೃಷ್ಠಿ, ಅನಾವೃಷ್ಠಿಯ ಹೊಡೆತ, ಇಳುವರಿಯ ಕೊರತೆ, ಕೂಲಿ ಕಾರ್ಮಿಕರ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳಿಂದಾಗಿ ಭತ್ತವನ್ನು ಬೆಳೆಯುವುದು ರೈತರಿಗೆ ಕಷ್ಟವಾಗಿದೆ.
ಕೆಲವರಷ್ಟೇ ಯಂತ್ರಗಳ ಮೂಲಕ ಭತ್ತದ ಕೃಷಿ ಮಾಡುತ್ತಾರೆ. ಉಳಿದಂತೆ ಎಲ್ಲರೂ ವಾಣಿಜ್ಯ ಬೆಳೆಗಳತ್ತ ವಾಲಿದ್ದಾರೆ. ಆದರೂ ಜಿಲ್ಲೆಯಲ್ಲಿ ಹಬ್ಬಾಚರಣೆಗಳು ಮಾತ್ರ ಭತ್ತದ ಕೃಷಿಗೆ ಸಂಬಂಧಿಸಿದಂತೆಯೇ ನಡೆಯುತ್ತಿದ್ದು ಇಲ್ಲಿನವರು ಉಳಿಸಿಬೆಳೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಕೊಡಗು ಚಿಕ್ಕ ಜಿಲ್ಲೆಯಾದರೂ ಇಲ್ಲಿ ನಡೆಯುವ ಕೆಲವು ಆಚರಣೆಗಳಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಿರುವುದನ್ನು ಕಾಣಬಹುದಾಗಿದೆ.
ಉತ್ತರಕ್ಕೂ ದಕ್ಷಿಣಕ್ಕೂ ಆಚರಣೆಯಲ್ಲಿ ವ್ಯತ್ಯಾಸ
ಉತ್ತರ ಕೊಡಗು ಅದರಲ್ಲೂ ಹಾಸನ, ಮೈಸೂರು ಗಡಿಭಾಗದ ಆಚರಣೆಗಳು ದಕ್ಷಿಣ ಭಾಗದಲ್ಲಿ ಕಾಣಿಸುವುದಿಲ್ಲ. ಅದರಂತೆ ಉತ್ತರ ಕೊಡಗಿನ ಬಯಲುಸೀಮೆ ಪ್ರದೇಶವಾದ ತೊರೆನೂರು ಮತ್ತು ಶಿರಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಯುಗಾದಿ ಅಂಗವಾಗಿ ನಡೆಯುವ ಚಿನ್ನದ ಉಳುಮೆ (ಹೊನ್ನಾರು) ದಕ್ಷಿಣಕೊಡಗಿನಲ್ಲಿ ಕಾಣಸಿಗುವುದಿಲ್ಲ. ಉತ್ತರ ಕೊಡಗಿನ ರೈತರು ಯುಗಾದಿ ಹಬ್ಬದ ಬಳಿಕ ಹೊಸ ಪಂಚಾಂಗದ ಪ್ರಕಾರ ಹೊನ್ನಾರು ಉತ್ಸವವನ್ನು ಆಚರಿಸಿ ಉಳುಮೆ ಮಾಡುತ್ತಾರೆ. ಇದನ್ನು ಚಿನ್ನದ ಉಳುಮೆ ಎಂದೇ ಭಾವಿಸಿದ್ದಾರೆ.

ಅಂದು ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳನ್ನು ನದಿಯ ನೀರಿನಿಂದ ತೊಳೆದು ಅವುಗಳ ಗವುಸು ಹಾಗೂ ಕೊಂಬಿಗೆ ಹಣಸು ವಸ್ತ್ರಾಂಲಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ತಾವು ಹೊಸ ಉಡುಗೆ-ತೊಡಿಗೆ ತೊಟ್ಟು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸುತ್ತಾರೆ.
ಮಳೆ ಬರಲಿ ಚಿನ್ನದ ಉಳುಮೆಗೆ ಒಳಿತಾಗಲಿ
ಈ ವೇಳೆ ಮನೆಗಳಲ್ಲಿ ಉತ್ಸವದ ಅಂಗವಾಗಿ ಹೋಳಿಗೆ, ಪಾಯಿಸ ಮತ್ತಿತರ ಭಕ್ಷ್ಯ ಭೋಜನವನ್ನು ತಯಾರಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವು ಸೇವಿಸಿ ಸಂಭ್ರಮಿಸುತ್ತಾರೆ. ಆ ನಂತರ ಹೊಸ ಪಂಚಾಂಗದಂತೆ ಗ್ರಾಮದ ಹಿರಿಯ ವ್ಯಕ್ತಿ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಮಂಗಳವಾದ್ಯಗಳೊಂದಿಗೆ ಜಾನುವಾರುಗಳನ್ನು ಮೆರವಣಿಯಲ್ಲಿ ಗ್ರಾಮದ ದೇವಸ್ಥಾನಕ್ಕೆ ತರಲಾಗುತ್ತದೆ. ಅಲ್ಲಿ ಪ್ರದಕ್ಷಿಣೆ ಹಾಕಿ ನಂತರ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಆ ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸುವುದು ಸಂಪ್ರದಾಯವಾಗಿದೆ.
ಆದರೆ ಈ ಬಾರಿ ಪರಿಸ್ಥಿತತಿ ನೆಟ್ಟಗಿಲ್ಲದಾಗಿದೆ. ಬರದಿಂದಾಗಿ ರೈತರು ಆತಂಕದಲ್ಲಿದ್ದಾರೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ಇರುವಾಗ ಕೃಷಿ ಚಟುವಟಿಕೆ ನಡೆಸುವುದಾದರೂ ಹೇಗೆ? ಈಗಾಗಲೇ ಯುವ ತಲೆಮಾರು ಕೃಷಿಯಿಂದ ದೂರ ಸರಿದಿದೆ. ಅಳಿದುಳಿದವರು ಕೃಷಿ ಮಾಡುತ್ತಿದ್ದಾರೆ. ಅವರನ್ನು ಬರ ಬೆಂಬಿಡದೆ ಕಾಡುತ್ತಿರುವುದರಿಂದ ಮುಂದೇನು ಎಂಬ ಆತಂಕ ಇಲ್ಲದಿಲ್ಲ. ವರುಣ ಕೃಪೆ ತೋರಿ ಮಳೆ ಸುರಿದರೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದ್ದು, ಉತ್ತು ಬಿತ್ತಿ ಚಿನ್ನದಂತಹ ಫಸಲು ತೆಗೆಯಲು ಸಾಧ್ಯವಾಗಲಿದೆ. ಸದ್ಯ ಎಲ್ಲರೂ ಮಳೆಗಾಗಿ ಪ್ರಾರ್ಥಿಸಬೇಕಾಗಿದೆ.












Click it and Unblock the Notifications