ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Assembly Election 2023: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಹೊಂದಿದ್ದು ಈ ಬಾರಿ ಮೂರು ಪಕ್ಷವೂ ಗೆಲುವಿಗಾಗಿ ಭರ್ಜರಿ ಪ್ರಚಾರ ಆರಂಭಿಸಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ರೇಷ್ಮೆ , ದ್ರಾಕ್ಷಿ , ಹೂವು, ತರಕಾರಿ, ಹೈನುಗಾರಿಕೆಗೆ ಹೆಸರಾಗಿರುವ ಬಯಲುಸೀಮೆ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಪಡೆದಿರುವ ಹಾಗೂ ವಿಶ್ವವಿಖ್ಯಾತ ನಂದಿಬೆಟ್ಟ, ಜಗದ್ವಿಖ್ಯಾತ ಇಂಜನಿಯರ್ ವಿಶ್ವೇಶ್ವರಯ್ಯ, ಇತಿಹಾಸ ಪ್ರಸಿದ್ದ ಭೋಗ ನಂದೀಶ್ವರ ದೇವಾಲಯ, ಪೌರಾಣಿಕ ಹಿನ್ನೆಲೆಯ ರಂಗಸ್ಥಳ, ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಕೈವಾರ, ರೇಷ್ಮೆಗೆ ಹೆಸರಾದ ಶಿಡ್ಲಘಟ್ಟ..

ಗಡಿದಂ ದೇವಾಲಯ, ಸುರಸದ್ಮಗಿರಿ ಕೋಟಿ, ಚಿತ್ರಾವತಿ ಡ್ಯಾಂ, ಆಂಧ್ರ ಪ್ರದೇಶದ ಗಡಿಯನ್ನು ಹಂಚಿಕೊಂಡ ಬಾಗೇಪಲ್ಲಿ, ಜಲಿಯನ್ ವಾಲಾಬಾಗ್ ಖ್ಯಾತಿಯ ವಿಧುರಾಶ್ವತ್ಥವನ್ನು ಹೊಂದಿರುವ ಗೌರಿಬಿದನೂರು ಸೇರಿ 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದ ಹೈವೋಲ್ಟೇಜ್‌ ನಾಯಕರನ್ನು ಹೊಂದಿರುವ ಕೆಲವೇ ಜಿಲ್ಲೆಗಳಲ್ಲಿ ಒಂದಾಗಿದೆ.

ಇಲ್ಲಿನ ರೈತರು ಹೈನುಗಾರಿಕೆ, ರೇಷ್ಮೆ, ದ್ರಾಕ್ಷಿ, ಪುಷ್ಪ ಕೃಷಿಗೆ ಖ್ಯಾತರಾದಂತೆ, ತರಕಾರಿ ಬೆಳೆಗಳಿಗೂ ಹೆಸರಾಗಿದ್ದಾರೆ. ನದಿನಾಲೆಗಳ ಆಸರೆಯಿಲ್ಲದೆ ಇಲ್ಲಿ ಶಾಶ್ವತ ನೀರಾವರಿಗಾಗಿ ಹತ್ತಾರು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ, ದುಬಾರಿ ಖರ್ಚಿನ ಅಂತರ್ಜಲವೇ ಜೀವನಾಧಾರವಾಗಿಸಿಕೊಂಡು ಸ್ವಾಭಿಮಾನದಿಂದ ಸ್ವಂತ ಉದ್ಯೋಗ ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು ಕಾಂಗ್ರೆಸ್ 3, ಜೆಡಿಎಸ್ ಹಾಗೂ ಬಿಜೆಪಿ ತಲಾ ಒಂದು ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿದೆ. ಮೊದಲಿನಿಂದಲೂ ಚಿಕ್ಕಬಳ್ಳಾಪುರ ಜಿಲ್ಲೆಯು ಕಾಂಗ್ರೆಸ್ ಭದ್ರಕೋಟೆಯನ್ನು ಹೊಂದಿದ್ದು ಅದನ್ನು ಮತ್ತಷ್ಟು ವಿಸ್ತರಿಸುವ ಅಥವಾ ಉಳಿಸಿಕೊಳ್ಳುವ ಹಂಬಲ ಇದೆ. ಮತ್ತೊಂದಡೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಹಂಬಲ ಜೆಡಿಎಸ್ ಪಕ್ಷದ ನಾಯಕರದ್ದಾಗಿದೆ. ಉಳಿದಂತೆ ಬಿಜೆಪಿ ಪಕ್ಷವು ಜಿಲ್ಲಾ ಕೇಂದ್ರದಲ್ಲಿ ಬಿಟ್ಟರೆ ಉಳಿದೆಡೆ ಪಕ್ಕಾ ಗೆಲ್ಲುವಂತಹ ಶಕ್ತಿವಂತರ ಹುಡುಕಾಟದಲ್ಲಿ ಪಕ್ಷ ತೊಡಗಿಸಿ ಕೊಂಡಿವೆ.

 ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ

ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ

ಚಿಕ್ಕಬಳ್ಳಾಪುರ ಕ್ಷೇತ್ರ 1978 ರಿಂದ 2008 ರವರೆಗೆ ಸರಿಸುಮಾರು 30 ವರ್ಷಗಳ ಕಾಲ ಮೀಸಲು ಕ್ಷೇತ್ರವಾಗಿದ್ದ ಇದು 2008 ರಿಂದೀಚೆಗೆ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದೆ. ಈವರೆಗೆ ಇಲ್ಲಿ ಒಂದು ಉಪಚುನಾವಣೆ ಸೇರಿ 15 ವಿಧಾನಸಭಾ ಚುನಾವಣೆ ಕಂಡಿದ್ದು ಈ ಪೈಕಿ 9 ಬಾರಿ ಕಾಂಗ್ರೆಸ್ ಗೆಲುವು ಕಂಡಿದೆ. ವಿಶೇಷವೆಂದರೆ ಸಚಿವ ಡಾ.ಕೆ. ಸುಧಾಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಲ್ಲದೆ 2019ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಭದ್ರನೆಲೆ ಒದಗಿಸಿದ್ದಾರೆ.

ಆದರೆ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಮತದಾರನು ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾದುವ ಸ್ಪಷ್ಟ ಸೂಚನೆ ದೊರೆತಿದ್ದು ಮತದಾರ ಯಾರ ಯಾರ ಕೊರಳಿಗೆ ವಿಜಯಮಾಲೆ ತೊಡಿಸುವನೆಂಬುದನ್ನು ಕಾದು ನೋಡಬೇಕಿದೆ.

 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹೆಚ್.ಎಸ್.ಶಿವಶಂಕರ್‌ರೆಡ್ಡಿ ಸೋಲಿಲ್ಲದ ಸರದಾರರಾಗಿ ಸತತ 5 ಬಾರಿ ಗೆಲುವು ಕಂಡಿದ್ದಾರೆ. ಇವರು ಮಂತ್ರಿಗಳಾಗಿ, ಸಚಿವರಾಗಿ ಕ್ಷೇತ್ರದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಈ ಬಾರಿ ಪಕ್ಷೇತರರು, ಸಮಾಜ ಸೇವಕರ ಅಬ್ಬರ ಹೆಚ್ಚಾಗಿದ್ದು ಹಿಂದಿನಷ್ಟು ಗೆಲುವು ಸಲಭವಾಗಿಲ್ಲ.

ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ನರಸಿಂಹಮೂರ್ತಿ ಕಳೆದ ಬಾರಿ ಕೇವಲ 6 ಸಾವಿರ ಮತಗಳಿಂದ ಪರಾಭವಗೊಂಡಿದ್ದು, ಈ ಬಾರಿ ಗೆಲ್ಲುವ ತವಕದಲ್ಲಿದ್ದಾರೆ. ಎಚ್ .ಡಿ.ಕುಮಾರಸ್ವಾಮಿ ಆಶ್ರಯವಿದ್ದರೆ ಏಟಿಗೆ ಎದಿರೇಟು ಕೊಡಬಲ್ಲರು.

ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹೊಸೂರು ಗ್ರಾಮದ ವೈದ್ಯ ಡಾ. ಶಶಿಧರ್ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಮಾನಸ ಆಸ್ಪತ್ರೆ ಸಮೂಹದ ಒಡೆಯರಾಗಿರುವ ಇವರನ್ನು ಜನತೆ ಇನ್ನಷ್ಟೇ ಕೈಹಿಡಿದು ನಡೆಸಬೇಕಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿಗಳಾದ ಉದ್ಯಮಿ ಪುಟ್ಟಸ್ವಾಮಿಗೌಡರು ಕೆ.ಹೆಚ್.ಪಿ ಪೌಂಡೇಷನ್ ಕಟ್ಟಿಕೊಂಡು ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಅಬ್ಬರಿಸುತ್ತಿದ್ದಾರೆ.

ಇದೇ ಹಾದಿಯಲ್ಲಿ ಕೆಂಪರಾಜು ಕೂಡ ಸಾಗಿದ್ದಾರೆ. ಒಟ್ಟಾರೆ ಇಲ್ಲಿ ಕಾಂಗ್ರೆಸ್ ಜೆಡಿಎಸ್ ವರ್ಸಸ್ ಪುಟ್ಟಸ್ವಾಮಿಗೌಡರ ನಡುವೆ ತ್ರಿಕೋನ ಸ್ಪರ್ಧೆ ಖಚಿತ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂಭವನೀಯ ಅಭ್ಯರ್ಥಿಗಳು
ಕಾಂಗ್ರೆಸ್ : ಹೆಚ್.ಎಸ್.ಶಿವಶಂಕರ್‌ರೆಡ್ಡಿ
ಜೆಡಿಎಸ್: ನರಸಿಂಹಮೂರ್ತಿ
ಬಿಜೆಪಿ : ಡಾ. ಶಶಿಧರ್

ಸಮಾಜ ಸೇವಕರಾಗಿರುವ ಪುಟ್ಟಸ್ವಾಮಿಗೌಡ, ಡಾ.ಕೆಂಪರಾಜು, ಜೈಪಾಲ ರೆಡ್ಡಿ ಸದ್ಯ ಕ್ಷೇತ್ರದಲ್ಲಿ ತಮ್ಮದೆ ಗುಂಪುಗಳನ್ನು ಕಟ್ಟಿಕೊಂಡು ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಹೊಸಬರ ಪ್ರವೇಶವಾದರೂ ಅಚ್ಚರಿಯಿಲ್ಲ.

ಮತದಾರರ ವಿವರ
ಪುರುಷರು-1,00,315
ಮಹಿಳೆಯರು-1,00,609
ಒಟ್ಟು ಮತದಾರರು-2,00,924

 ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಹಾಲಿ ಶಾಸಕ ಸುಬ್ಬಾರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಮೂರನೇ ಬಾರಿ ಸ್ಪರ್ಧೆಯಲ್ಲಿದ್ದಾರೆ. ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ಆಡಳಿತ ವಿರೋಧಿ ಅಲೆಯಿಂದ ಬಚಾವಾಗಿದ್ದಾರೆ. ಸಿಪಿಎಂ ಇಲ್ಲಿ ಎರಡನೇ ಸ್ಥಾನದಲ್ಲಿದ್ದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನದ ನಂತರ ಸಮರ್ಥ ಅಭ್ಯರ್ಥಿಯಿಲ್ಲದೆ ಒಗ್ಗಟ್ಟಿನ ಕೊರತೆ ಎದುರಿಸುತ್ತಿದೆ. ಪೀಪಲ್ಸ್ ಡಾಕ್ಟರ್ ಎಂದೇ ಖ್ಯಾತಿ ಗಳಿಸಿರುವ ಡಾ. ಅನಿಲ್ ಆವುಲಪ್ಪ ಸಿಪಿಐಎಂ ಅಭ್ಯರ್ಥಿಯಾಗಲಿದ್ದಾರೆ.

ಜೆಡಿಎಸ್ ಪಕ್ಷವು ಡಿ.ಜೆ. ನಾಗರಾಜರೆಡ್ಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇಲ್ಲಿ ಕೂಡ ಬಂಡಾಯದ ಕಹಳೆ ಮೊಳಗುತ್ತಿದೆ. ಬಿಜೆಪಿ ಪಕ್ಷದಲ್ಲಿ ಮುನಿರಾಜು, ರಾಮಲಿಂಗಪ್ಪ, ಕೋನಪ್ಪರೆಡ್ಡಿ ಹೆಸರು ಮುಂಚೂಣಿಯಲ್ಲಿದೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಸಚಿವ ಡಾ.ಕೆ.ಸುಧಾಕರ್ ಆಸರೆಯಾಗಿದ್ದು ಅವರ ಒಲವು ಯಾರಿಗಿದೆಯೋ ಅವರೇ ಅಭ್ಯರ್ಥಿಯಾಗಲಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿರುವ ಮಿಥುನ್‌ರೆಡ್ಡಿ ಅಬ್ಬರದಿಂದ ಆಗೊಮ್ಮೆ ಈಗೊಮ್ಮೆ ಎಂದು ಕ್ಷೇತ್ರದಲ್ಲಿ ಕಾಣಿಸಿಕೊಂಡು ಮತ್ತೆ ಸ್ವಲ್ಪದಿನ ಕಣ್ಮರೆಯಾಗುತ್ತಾರೆಂಬ ಆರೋಪದ ನಡುವೆಯೂ ಕೆಲವರ ಅಭಿಪ್ರಾಯದಂತೆ ಇವರು ಸಮಾಜ ಸೇವೆಯಲ್ಲಿ ತೊಡಗಿದ್ದು ಯುವಕರ ಕಣ್ಮಣಿಯಾಗಿದ್ದಾರೆಂಬುದು ಕೆಲವರ ವಿಶ್ವಾಸವಾಗಿದೆ.

ಬಳ್ಳಾರಿಯ ಜನಾರ್ದನ್ ರೆಡ್ಡಿ ಪಕ್ಷದಿಂದಲೂ ಸ್ಪರ್ಧೆಗೆ ಇಳಿಯಲಿದ್ದಾರೆಂಬುದು ಕೆಲವರ ಅಭಿಪ್ರಾಯ, ಆಮ್ ಆದ್ಮಿ ಪಕ್ಷದಿಂದ ಡಾ.ಮಧುಸೀತಪ್ಪ ಸ್ಪರ್ಧೆ ಖಚಿತ ಎಂದು ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಬದಲಾವಣೆಗಾಗಿ ಮತಹಾಕುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಸಂಭವನೀಯ ಅಭ್ಯರ್ಥಿಗಳು
ಕಾಂಗ್ರೆಸ್ : ಸುಬ್ಬಾರೆಡ್ಡಿ
ಜೆಡಿಎಸ್: ಡಿ.ಜೆ.ನಾಗರಾಜರೆಡ್ಡಿ
ಸಿಪಿಐಎಂ : ಡಾ.ಅನಿಲ್‌ಕುಮಾರ್ ಆವುಲಪ್ಪ
ಪಕ್ಷೇತರ : ಮಿಥುನ್ ರೆಡ್ಡಿ

ಮತದಾರರ ವಿವರ
ಪುರುಷರು-97,085
ಮಹಿಳೆಯರು-97,679
ಒಟ್ಟು ಮತದಾರರು-1,94,764

 ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಆಡಳಿತಾರೂಢ ಸರಕಾರದ ಪ್ರಭಾವಿ ಸಚಿವರಾಗಿರುವ ಡಾ.ಕೆ.ಸುಧಾಕರ್ ಶಾಸಕರಾಗಿ, ಸಚಿವರಾಗಿ, ಸಮಾಜಸೇವಕರಾಗಿ ಕಾರ್ಪೊರೇಟ್ ಶೈಲಿಯಲ್ಲಿ ಮಾಡಿರುವ ಹತ್ತುಹಲವು ಅಭಿವೃದ್ದಿ ಕಾರ್ಯಗಳು ಶ್ರೀರಕ್ಷೆಯಾಗಿದ್ದು ಕ್ಷೇತ್ರದಲ್ಲಿ ತಮ್ಮದೇ ಆದ ಹವಾ ಉಳಿಸಿಕೊಂಡಿದ್ದಾರೆ. ಅಲ್ಲದೆ ಅವಳಿ ಜಿಲ್ಲೆಗಳಲ್ಲಿಯೂ ತಮ್ಮ ಚರಿಷ್ಮಾ ಹೆಚ್ಚಿಸಿಕೊಂಡು ಮತ್ತೊಮ್ಮೆ ಕಮಲ ಅರಳಿಸಲು ಸಜ್ಜಾಗಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಭ್ರದ ನೆಲೆಯಿದ್ದರೂ ಸುಧಾಕರ್ ತಂತ್ರಗಾರಿಕೆ ಎದುರಿಸಿ ನಿಲ್ಲುವ ಸಮರ್ಥ ಅಭ್ಯರ್ಥಿ ಕಾಣುತ್ತಿಲ್ಲ. ನಾಯಕರ ಪಕ್ಷವಿರೋಧಿ ನಡೆ, ಅಂತಃಕಲಹ ಸುಧಾಕರ್‌ಗೆ ಪ್ಲಸ್ ಆಗಲಿವೆ. ಈ ಮಧ್ಯೆ ಸ್ಥಳೀಯ ನಾಯಕರಾಗಿ ರೂಪುಗೊಂಡಿರುವ ವಿನಯ್‌ ಶ್ಯಾಮ್ ಕಷ್ಟಕಾಲದಲ್ಲಿ ಪಕ್ಷದ ಬೆನ್ನಿಗೆ ನಿಂತು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗೈ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿ ಪಕ್ಷದ ಪಾಲಿಗೆ ಆಪದ್ಭಾಂದರೆನಿಸಿದ್ದಾರೆ.

ಸಮಾಜಸೇವೆ ಹೆಸರಿನಲ್ಲಿಯೂ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾ ಜನಸೇವೆಯಲ್ಲಿ ತೊಡಗಿರುವ ಯುವ ನಾಯಕ ವಿನಯ್‌ ಶ್ಯಾಮ್‌ಗೆ ಟಿಕೆಟ್ ಘೋಷಣೆ ಮಾಡಿದರೆ ಒಂದಷ್ಟು ಟಫ್ ಸ್ಪರ್ಧೆ ಕಾಣಬಹುದು ಎಂಬುದು ಕೆಲವರ ವಾದವಾಗಿದ್ದರೆ, ಕಾಂಗ್ರೆಸ್ ಟಿಕೆಟ್ ನಮಗೂ ನೀಡಿ ಎಂದು ಕೆ.ಎನ್.ರಘು, ಲಾಯರ್ ನಾರಾಯಣಸ್ವಾಮಿ, ಯಲುವಲಹಳ್ಳಿ ರಮೇಶ್ ಸೇರಿದಂತೆ ಇನ್ನಿತರರು ಪಟ್ಟು ಹಿಡಿದಿದ್ದು ಮಾಲೂರು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ರವರಿಗೆ ಟಿಕೆಟ್ ಪಕ್ಕಾ ಎಂದು ಕ್ಷೇತ್ರದ ಮತ್ತೊಂದು ಗುಂಪಿನ ವಾದವಾಗಿದೆ.

ಜೆಡಿಎಸ್ ಹೈಕಮಾಂಡ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದರೂ ಕುಮಾರಸ್ವಾಮಿ ನಾಮಬಲವೇ ಇವರ ಶಕ್ತಿಯಾಗಿದೆ. ಈ ಹಿಂದೆ ಶಾಸಕರಾಗಿ ಮಾಡಿರುವ ಕೆಲಸ, ಕಳಂಕರಹಿತ ವ್ಯಕ್ತಿತ್ವ, ಸರಳತೆ ಜನತೆಗೆ ಅಚ್ಚುಮೆಚ್ಚು. ಪಂಚರತ್ನ ರಥಯಾತ್ರೆಗೆ ಬಂದ ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಆದರೆ ಸುಧಾಕರ್ ಚಾಣಾಕ್ಷ ನಡೆಯ ಮುಂದೆ ಕಾಂಗ್ರೆಸ್ ಜೆಡಿಎಸ್ ಹೇಗೆ ಪ್ರತಿತಂತ್ರ ರೂಪಿಸುತ್ತವೆ ಎನ್ನುವುದರ ಮೇಲೆ ಚುನಾವಣೆ ಹೈವೋಲ್ಟೇಜ್ ಪಡೆದುಕೊಳ್ಳಲಿದೆ ಎಂಬುದು ತಾಲೂಕಿನ ಹಾಗೂ ಜಿಲ್ಲೆಯ ಬಹುತೇಕ ರಾಜಕೀಯ ವಿಶ್ಲೇಷಕರ ಮಾತಾಗಿದೆ.

ಸಂಭವನೀಯ ಅಭ್ಯರ್ಥಿಗಳು
ಬಿಜೆಪಿ: ಡಾ.ಕೆ.ಸುಧಾಕರ್
ಕಾಂಗ್ರೆಸ್: ವಿನಯ್ ಶ್ಯಾಮ್/ಕೆ.ಎನ್.ರಘು/ರಮೇಶ್/ನಾರಾಯಣಸ್ವಾಮಿ /ಕೊತ್ತೂರು ಮಂಜುನಾಥ್.
ಜೆಡಿಎಸ್-ಕೆ.ಪಿ.ಬಚ್ಚೇಗೌಡ

ಮತದಾರರ ವಿವರ
ಪುರುಷರು-98,056
ಮಹಿಳೆಯರು-97,752
ಒಟ್ಟು ಮತದಾರರು-1,95,808

 ಶಿಡ್ಲಘಟ್ಟ ವಿಧಾನ ಸಭಾಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಶಿಡ್ಲಘಟ್ಟ ವಿಧಾನ ಸಭಾಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಎರಡು ಬಾರಿ ಸಚಿವರಾಗಿ 4 ಬಾರಿ ಶಾಸಕರಾಗಿ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಅಪಾರ ರಾಜಕೀಯ ಅನುಭವ ಹೊಂದಿರುವ ವಿ.ಮುನಿಯಪ್ಪ ಒಟ್ಟು 6 ಬಾರಿ ಗೆಲುವು ಸಾಧಿಸಿರುವ ಹಿರಿಯ ಜಿಲ್ಲೆಯ ರಾಜಕಾರಣಿ. ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದು ತಮ್ಮ ಪುತ್ರ ಶಶಿಧರ್‌ಗೆ ಅವಕಾಶ ಮಾಡಿಕೊಡುವ ಮಾತುಗಳು ಆಗಾಗ ಕೇಳಿಬರುತ್ತಿವೆ. ಏನೇ ಆಗಲಿ ಆಡಳಿತ ವಿರೋಧಿ ಅಲೆ ಬಲವಾಗಿ ಬೀಸುತ್ತಿದ್ದು ಕಾಂಗ್ರೆಸ್ ಗೆಲುವು ಕಷ್ಟವಾಗಲಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿರುವ ಮೇಲೂರು ರವಿಕುಮಾರ್ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯವಿದ್ದು ಸೋಲಿನ ಅನುಕಂಪ, ಜನಬೆಂಬಲ, ಪಕ್ಷದ ಅಭಯದ ನೆರಳಲ್ಲಿ ಗೆಲ್ಲುವ ತವಕದಲ್ಲಿದ್ದಾರೆ. ಪಂಚರತ್ನ ರಥಯಾತ್ರೆಗೆ ಜನತೆ ತೋರಿದ ಅಭೂತಪೂರ್ವ ಜನಬೆಂಬಲವು ಆನೆ ಬಲ ತುಂಬಿದೆ.

ಜೆಡಿಎಸ್ ವರಿಷ್ಟರ ಕೊನೇ ಗಳಿಗೆಯ ತೀರ್ಮಾನದಿಂದ ನೊಂದು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್ ಪಕ್ಷದ ವಿ.ಮುನಿಯಪ್ಪ ವಿರುದ್ದ 9611, ಮತಗಳಿಂದ ಪರಾಭವಗೊಂಡಿರುವ ಇವರಿಗೆ ಅನುಕಂಪವು ಈ ಬಾರಿ ಕೈಹಿಡಿಯಲಿದೆ.

ಬಿಜೆಪಿ ಪಕ್ಷದ ಪರಿಸ್ಥಿತಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಆದರೂ ಡಾ.ಕೆ.ಸುಧಾಕರ್ ತೆಗುದುಕೊಳ್ಳುವ ನಿರ್ಣಯವು ಮಾಜಿ ಶಾಸಕ ರಾಜಣ್ಣ ನನ್ನು ಮತದಾರ ಪ್ರಭುಗಳು ಕೈ ಹಿಡಿಯುವರೆ ಕಾದು ನೋಡಬೇಕಿದೆ.

ಸಂಭವನೀಯ ಅಭ್ಯರ್ಥಿಗಳು
ಕಾಂಗ್ರೆಸ್ - ವಿ.ಮುನಿಯಪ್ಪ
ಜೆಡಿಎಸ್ - ಮೇಲೂರು ರವಿಕುಮಾರ್
ಬಿಜೆಪಿ- ರಾಜಣ್ಣ,

ಸಮಾಜ ಸೇವಕರಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತುರವ ಕೆಲವರೂ ಸಹ ಚುನಾವಣಾ ವೇಳೆಗೆಲ್ಲಾ ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳುವರೋ ಅಥವಾ ಪಕ್ಷೇತರರಾಗಿ ತೊಡೆ ತಟ್ಟುವ ಸಾಧ್ಯತೆಯಿದ್ದು ಕಾದುನೋಡಬೇಕಿದೆ.

ಮತದಾರರ ವಿವರ
ಪುರುಷರು-98,634
ಮಹಿಳೆಯರು-96,912
ಒಟ್ಟು ಮತದಾರರು-1,95,546

 ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು

ಎರಡು ಬಾರಿ ಶಾಸಕರಾಗಿ ಚಿಂತಾಮಣಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಜೆ.ಕೆ.ಕೃಷ್ಣಾರೆಡ್ಡಿ ಮೂರನೇ ಬಾರಿಗೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಸಮ್ಮಿಶ್ರ ಸರಕಾರದಲ್ಲಿ ವಿಧಾನಸಭಾ ಉಪಸಭಾಪತಿಯಾಗಿ ಕಾರ್ಯನಿರ್ವಹಣೆ, ಕ್ಷೇತ್ರದ ಜನರೊಟ್ಟಿಗೆ ನಿರಂತರ ಸಂಪರ್ಕ, ಸಮಾಜ ಸೇವೆ,ಜತೆಗೆ ಅಭಿವೃದ್ದಿ ಕಾರ್ಯಗಳೇ ಇವರ ಶಕ್ತಿ.

ಮತ್ತೊಂದೆಡೆ ನಿರೀಕ್ಷೆ ಬಯಸಿ ಹತ್ತಿರ ಬರುವ ನಾಯಕರ ಮುನಿಸು, ಆಡಳಿತ ವಿರೋಧಿ ಅಲೆ,ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕಾರ್ಯಗಳಾಗಿಲ್ಲ ಎನ್ನುವ ಮಾತುಗಳು ಜೋರಾಗಿದ್ದು ಗೆಲುವು ಕಠಿಣವಾಗಲಿದೆ.

ಕಾಂಗ್ರೆಸ್ ಪಕ್ಷದಿಂದ ಎಂ.ಸಿ.ಸುಧಾಕರ್ ಸ್ಪರ್ಧೆ ಮಾಡಲಿದ್ದು ಕಳೆದ ಬಾರಿ ಸೋತ ಅನುಕಂಪದ ಜೊತೆಗೆ ಮೂಲ ಕಾಂಗ್ರೆಸಿಗರು ಎನ್ನುವ ಬಲ ಜೊತೆಗಿದೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ 5,400 ಮತಗಳಿಂದ ಪರಾಭವಗೊಂಡಿದ್ದು ಈ ಬಾರಿ ಮತದಾರ ಕೈಹಿಡಿದೇ ಹಿಡಿಯುವರು ಎನ್ನುವ ಬಲವಾದ ನಂಬಿಕೆಯಲ್ಲಿದ್ದಾರೆ.

ಬಿಜೆಪಿ ಪಕ್ಷದ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದು ಸಮಾಜ ಸೇವಕರಾದ ವೇಣುಗೋಪಾಲ್ ಬಿಜೆಪಿ ಪಕ್ಷದ ಬಾವುಟ ಹಿಡಿದಿದ್ದು ಎಷ್ಟರ ಮಟ್ಟಿಗೆ ಮತದಾರರ ಮನಗೆಲ್ಲಬಹುದು ಕಾದು ನೋಡಬೇಕಿದೆ. ಸಚಿವ ಸುಧಾಕರ್ ಬಾಮೈದ ಗೋಪಿ ಕೂಡ ಸ್ಪರ್ಧಿಸುವರು ಎನ್ನುವ ಮಾತಿದ್ದು ಇದಕ್ಕೆ ಪುಷ್ಟಿ ನೀಡುವಂತಹ ಘಟನೆಗಳು ಸಂಭವಿಸುತ್ತಿದೆ.

ಸಂಭವನೀಯ ಅಭ್ಯರ್ಥಿಗಳು:
ಜೆಡಿಎಸ್-ಜೆ.ಕೆ.ಕೃಷ್ಣಾರೆಡ್ಡಿ
ಕಾಂಗ್ರೆಸ್- ಡಾ.ಎಂ.ಸಿ.ಸುಧಾಕರ್
ಬಿಜೆಪಿ - ವೇಣುಗೋಪಾಲ್

ಮತದಾರರ ವಿವರ
ಪುರುಷರು-1,05,482
ಮಹಿಳೆಯರು-1,05,153
ಒಟ್ಟು ಮತದಾರರು-2,10,635

English summary
Karnataka Assembly Elections 2023 : Here are the list of probables will get Chikkaballapur District constituencies ticket from BJP, Congress, JDS and Other Parties. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X