Chikkaballapur Constituency : ಕಾಂಗ್ರೆಸ್ ಭದ್ರಕೋಟೆಗೆ ಆಪರೇಷನ್ ಮಾಡಿದ್ದ ಕಮಲ, ಈ ಬಾರಿಯೂ ಅರಳುವುದೇ?
9 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿರುವ, ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಗಳು, ಒಮ್ಮೆ ಜೆಡಿಎಸ್ ಅಭ್ಯರ್ಥಿ ಜಯಗಳಿಸಿರುವ ಚಿಕ್ಕಬಲ್ಳಾಪುರದಲ್ಲಿ ಬಿಜೆಪಿಗಿಲ್ಲ ಭದ್ರ ಬುನಾದಿ.
ಚಿಕ್ಕಬಳ್ಳಾಪುರ, ಫೆಬ್ರವರಿ. 22: ಆಪರೇಷನ್ ಕಮಲದ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಮತ್ತು ಒಂಬತ್ತು ಬಾರಿ ಕ್ಷೇತ್ರದಲ್ಲಿ ಅಧಿಕಾರ ಹಿಡಿದು ಇತಿಹಾಸ ನಿರ್ಮಿಸಿರುವ ಕಾಂಗ್ರೆಸ್ ನಡುವೆ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ. ರೈತರ ಮತಗಳೇ ನಿರ್ಣಾಯಕವಾಗಿರುವ ಚಿಕ್ಕಬಳ್ಳಾಪುರದಲ್ಲಿ ತೆನೆ ಸಿಟಿಲೋಡೆಯಲಿದೆಯೇ ಎಂಬುದರ ವಿಶ್ಲೇಷಣೆ ಇಲ್ಲಿದೆ.
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2019ರಲ್ಲಿ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಜಯಗಳಿಸಿದ್ದ ಡಾ.ಕೆ.ಸುಧಾಕರ್ ಅಪರೇಷದನ್ ಕಮಲದಿಮದ ಬಿಜೆಪಿಗೆ ಸೇರ್ಪಡೆಯಾದರು. ಇದರಿಂದಾಗಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷ ಅಧಿಕಾರಕ್ಕೆ ಬಂದಿದೆ. 2019 ರಲ್ಲಿ ಭಾರತೀಯ ಜನತಾ ಪಾರ್ಟಿಯ ಡಾ. ಕೆ ಸುಧಾಕರ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಎಂ ಅಂಜನಪ್ಪ ವಿರುದ್ಧ 34,801 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

9 ಬಾರಿ ಕಾಂಗ್ರೆಸ್ ಜಯಗಳಿಸಿದ್ದು, ಇದು 'ಕೈ' ಭದ್ರಕೋಟೆ!
ಹೆಚ್ಚಿನ ಹೂವು ಮತ್ತು ಹಣ್ಣುಗಳನ್ನು ಬೆಳೆಯುವ, ರೈತರೇ ಪ್ರಮುಖ ಮತದಾರರಾಗಿರುವ ಚಿಕ್ಕಬಳ್ಳಾಪುರ 2007ರ ವರೆಗೆ ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿತ್ತು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವು 1978 ರ ವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು. 1978 ರಿಂದ 2008ರ ವರೆಗೆ 30 ವರ್ಷಗಳ ಕಾಲ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಅದು, ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಅಂದರೆ 2008ರ ಬಳಿಕ ಮತ್ತೆ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಒಂದು ಉಪ ಚುನಾವಣೆ ಸೇರಿ 15 ವಿಧಾನಸಭಾ ಚುನಾವಣೆಗಳು ನಡೆದಿವೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 9 ಬಾರಿ ಜಯಗಳಿಸಿರುವ ಕಾರಣ ಅದನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದು ಕರೆಯಬಹುದು. ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಗಳು, ಒಮ್ಮೆ ಜೆಡಿಎಸ್ ಅಭ್ಯರ್ಥಿ ಇಲ್ಲಿ ಅಧಿಕಾರ ಹಿಡಿದ್ದಿದ್ದಾರೆ.

ಪಕ್ಷಾಂತರ ಕಾರಣಕ್ಕೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಅಧಿಕಾರ!
ಚಿಕ್ಕಬಳ್ಳಾಪುರದಲ್ಲಿ ಪಕ್ಷಾಂತರದ ಕಾರಣದಿಂದಾಗಿ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿಯಿಲ್ಲ. ಮೊದಲಿನಿಂದಲೂ ಕಾಂಗ್ರೆಸ್, ಜೆಡಿಎಸ್ ತಿಕ್ಕಾಟದ ನಡುವೆ ಕಮಲ ಅರಳಿರಲಿಲ್ಲ. ಹಿಂತಿರುಗಿ ನೋಡಿದರೇ, ಬಿಜೆಪಿಯ ಗುರುತುಗಳು ಕಡಿಮೆಯೇ. ಸುಧಾಕರ್ ಬಿಜೆಪಿ ಸೇರ್ಪಡೆಯಾಗುವುದಕ್ಕಿಂತ ಮುಂಜೆ ಬಿಜೆಪಿ ಅಭ್ಯರ್ಥಿಗಳ ಮತಗಳನ್ನು ನೋಡಿದರೆ ಪಕ್ಷಕ್ಕಿದ್ದ ಜನಬೆಂಬಲ ಅರ್ಥವಾಗುತ್ತದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ವಿ.ಭೈರೇಗೌಡ ಅವರು 3,910 ಮತಗಳನ್ನು ಪಡೆದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಜಿ.ವಿ.ಮಂಜುನಾಥ್ 5,576 ಮತಗಳನ್ನು ಪಡೆದಿದ್ದರು. ಹೀಗಾಗಿ ಬಿಜೆಪಿಯ ಬುನಾದಿ ಆರಂಭವಾಗುವುದೇ ಸುಧಾಕರ್ ಬಿಜೆಪಿಗೆ ಸೇರ್ಪಡೆಯಾದ ಮೇಲೆ.

ಕ್ಷೇತ್ರದಲ್ಲಿ ಸತತ 2ನೇ ಬಾರಿಗೆ ಆಯ್ಕೆಯಾದ ಮೊದಲ ಶಾಸಕ ಸುಧಾಕರ್!
2013ರ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ ಸುಧಾಕರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು. ಮೊದಲ ಯತ್ನದಲ್ಲಿಯೇ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಕೆ.ಪಿ ಬಚ್ಚೇಗೌಡರನ್ನು ಸೋಲಿಸಿ ಶಾಸಕರಾದರು. ಸುಧಾಕರ್ 74,914 ಮತಗಳನ್ನು ಪಡೆದರೆ ಬಚ್ಚೇಗೌಡರು 59,866 ಮತಗಳನ್ನು ಪಡೆದು 15,048 ಮತಗಳ ಅಂತರದಿಂದ ಸೋತಿದ್ದರು.
2018ರ ಚುನಾಚಣೆಯಲ್ಲಿಯೂ ಕಾಂಗ್ರೆಸ್ ಹಾಲಿ ಶಾಸಕ ಸುಧಾಕರ್‌ಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿ ಕಣಕ್ಕಿಳಿದ ಸುಧಾಕರ್ 82,006 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ಕೆ.ಪಿ ಬಚ್ಚೇಗೌಡರ ಎದುರು 30,431 ಮತಗಳ ಅಂತರದಿಂದ ಗೆದ್ದರು. ಕಳೆದ ಚುನಾವಣೆಯಿಂದ ಇಲ್ಲಿಗೆ ತಮ್ಮ ಗೆಲುವಿನ ಅಂತರವನ್ನು ದುಪ್ಪಟ್ಟು ಮಾಡಿಕೊಂಡಿದ್ದರು. ಅಲ್ಲದೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಎರಡನೇ ಬಾರಿಗೆ ಆಯ್ಕೆಯಾದ ಮೊದಲ ಶಾಸಕ ಎಂಬ ದಾಖಲೆ ಅವರದ್ದಾಯಿತು. ಈ ಬಾರಿಯು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದ್ದು, ಪಕ್ಷಕ್ಕಿಂತ ಅವರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡುತ್ತಿದೆ.

ಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ ಮೂಲ, ವಲಸಿಗೆ ತಿಕ್ಕಾಟ!
2018ರಲ್ಲಿ ಸುಧಾಕರ್ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂಲ, ವಲಸಿಗ ತಿಕ್ಕಾಟಗಳು ಶುರುವಾಗಿವೆ. ಕೆಲವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರೂ, ಮತ್ತೆ ಕೆಲವರು ಒಳಗೊಳಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಸುಧಾಕರ್ ಬಿಜೆಪಿ ಸೇರುತ್ತಿದ್ದಂತೆ ಅವರ ಬೆಂಬಲಿಗರು ಕಮಲ ಪಾಳಯಕ್ಕೆ ಸೇರಿದ್ದಾರೆ. ಹೀಗಾಗಿ ಅವರ ಬೆಂಬಲಿಗರಿಗೆ ಉತ್ತಮ ಹುದ್ದೆಗಳು, ಸ್ಥಾನ ಸಿಕ್ಕಿವೆ. ಮೂಲ ಬಿಜೆಪಿಗರ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ನಾಮ ನಿರ್ದೇಶನದ ಹುದ್ದೆಗಳು, ನಿಗಮ ಮಂಡಳಿಗಳಿಗೆ ನೇಮಕ ಹೀಗೆ ಅಧಿಕಾರ ಪಡೆಯುವ ಅವಕಾಶಗಳು ಇದ್ದ ಕಡೆಗಳಲ್ಲೆಲ್ಲಾ ಸುಧಾಕರ್ ತಮ್ಮ ಬೆಂಬಲಿಗರನ್ನು ಕೂರಿಸಿದ್ದಾರೆ ಎಂಬುದು ಮೂಲ ಬಿಜೆಪಿಗರ ಆರೋಪ.
ಈ ಬಗ್ಗೆ ಅಂದಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ನೇತೃತ್ವದಲ್ಲಿ ಮುಖಂಡರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಬೇಸರವನ್ನು ವ್ಯಕ್ತಪಡಿಸಿದ್ದರು ಎಂಬುದು ವರದಿಯಾಗಿದೆ. ರಾಜ್ಯ ನಾಯಕರು ನಮ್ಮಲ್ಲಿ ಯಾವ ತಾರತಮ್ಯ ಇಲ್ಲ ಎಂದು ಹೊಗೆ ಹೇಳಿದರೂ ಕೂಡ ಕ್ಷೇತ್ರದಲ್ಲಿ ಮೂಲ, ವಲಸಿಗೆ ಎಂಬ ತಿಕ್ಕಾಟ ಬೂದಿ ಮುಚ್ಚಿದ ಕೆಂಡದಂತಿರುವುದು ಸುಳ್ಳಲ್ಲ.

ಕ್ಷೇತ್ರದಲ್ಲಿ ಮತದಾರರಿದ್ದರೂ, ಕಾಂಗ್ರೆಸ್‌ಗಿಲ್ಲ ಪ್ರಬಲ ಅಭ್ಯರ್ಥಿ
ಕ್ಷೇತ್ರದಲ್ಲಿ ಕಾಂಗ್ರೆಸ್ ಇಂದಿಗೂ ತನ್ನ ಒಂದಷ್ಟು ಮತದಾರರನ್ನು ಉಳಿಸಿಕೊಂಡಿದೆ. ಆದರೆ ಪಕ್ಷದ ಪ್ರಬಲ ಅಭ್ಯರ್ಥಿ ಇಲ್ಲದಿರುವುದು ಅದರ ದೊಡ್ಡ ಕೊರತೆಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದೆ. ಈಗಾಗಲೇ ಕೆಪಿಸಿಸಿ ಸದಸ್ಯರಾದ ವಿನಯ್ ಶ್ಯಾಮ್, ಯಲುವಹಳ್ಳಿ ಎನ್ ರಮೇಶ್, ಕೆ ಎನ್ ರಘು, ಮಾಜಿ ಜಿ.ಪಂ ಸದಸ್ಯ ಗಂಗರೇಕಾಲುವೆ ನಾರಾಯಣಸ್ವಾಮಿ ಮತ್ತು ಲಾಯರ್ ನಾರಾಯಣಸ್ವಾಮಿ ಟಿಕೆಟ್‌ಗಾಗಿ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದರ ಜೊತೆಗೆ 2019ರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಆಂಜನಪ್ಪ, ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯ ಕೂಡ ಟಿಕೆಟ್ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಮುಳಬಾಗಿಲು ಕ್ಷೇತ್ರದ ಕೊತ್ತನೂರು ಮಂಜುನಾಥ್ ಸಹ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ.
ಇತ್ತ, ಜೆಡಿಎಸ್ ಪಕ್ಷವು ಮಾಜಿ ಶಾಸಕ ಕೆ.ಪಿ ಬಚ್ಚೇಗೌಡರಿಗೆ ಟಿಕೆಟ್ ಘೋಷಿಸಿದೆ. 2008ರಲ್ಲಿ ಗೆದ್ದಿದ್ದ ಅವರು 2013 ಮತ್ತು 2018ರ ಚುನಾವಣೆಗಳಲ್ಲಿ ಸೋತಿದ್ದಾರೆ.
*ಮತದಾರರ ಮಾಹಿತಿ*
ಚಿಕ್ಕಬಳ್ಳಾಪುರ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿ ಮತದಾರರು ಸರಿಸುಮಾರು 53,807 ಆಗಿದ್ದು, ಪರಿಶಿಷ್ಟ ಪಂಗಡದ ಮತದಾರರು ಸರಿಸುಮಾರು 20,163 ಇದೆ. ಮುಸ್ಲಿಂ ಮತದಾರರು ಸರಿಸುಮಾರು 21,266, 45,000 ಒಕ್ಕಲಿಗ ಮತ್ತು ರೆಡ್ಡಿ ಸಮುದಾಯದ ಮತಗಳಿದ್ದರೆ, ಗ್ರಾಮೀಣ ಮತದಾರರು ಸರಿಸುಮಾರು 1, 50,348, ಮತ್ತು ನಗರ ಪ್ರದೇಶದ ಮತದಾರರು ಸರಿಸುಮಾರು 50,276 ಇದೆ.
ಈ ಬಾರಿಯ ಚುನಾವಣೆಯಲ್ಲಿ ಸುಧಾಕರ್ ಹ್ಯಾಟ್ರಿಕ್ ಗೆಲುವು ದಾಖಲಿಸಲು ಹಣದ ಹೊಲೆ ಹರಿಸುತ್ತಿದ್ದಾರೆ ಎಂಬ ವರದಿಗಳಿವೆ. ಪಕ್ಷದ ಹೆಸರಿಗಿಂತ ತಮ್ಮ ವೈಯಕ್ತಿಕ ವರ್ಷಸ್ಸು ಇಲ್ಲಿ ಕೆಲಸ ಮಾಡುತ್ತಿದೆ. ಹಲವು ಉತ್ಸವಗಳು, ಕೋಟ್ಯಾಂತರ ರೂಪಾಯಿ ಘೋಷಣೆಗಳನ್ನು ರಾಜ್ಯ ಸರ್ಕಾರ ಮಾಡಿದೆ. ಆದರೆ, ಚುನಾವಣೆಯಲ್ಲಿ ಭರವಸೆಗಳು ಮತಗಳಾಗಿ ಪರಿವರ್ತನೆಯಾಗಲಿವೆಯೇ, ಇಲ್ಲ ಮತದಾರ ಮತ್ತೆ 'ಕೈ' ಹಿಡಿಯಲಿದ್ದಾನೆಯೇ ಕಾದು ನೋಡಬೇಕು.
-
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ












Click it and Unblock the Notifications