Karnataka Assembly Elections 2023: ಬಾಗಲಕೋಟೆ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆಯು ಸಕ್ಕರೆ, ಸಿಮೆಂಟ್‌ ಕಾರ್ಖಾನೆಗಳಿಗೆ ಹೆಸರು ಮಾಡಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಹಾಗೂ ಕೂಡಲಸಂಗಮದಂತಹ ಪ್ರಸಿದ್ಧ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಜಿಲ್ಲೆಯಲ್ಲಿನ ನೀರಾವರಿ ಪ್ರದೇಶಗಳಲ್ಲಿ ಹೆಚ್ಚು ಕಬ್ಬು ಬೆಳೆಯುವದರಿಂದ ಸಕ್ಕರೆ ಕಾರ್ಖಾನೆಗಳು ಅಧಿಕವಾಗಿವೆ. ಈ ಕಾರ್ಖಾನೆಗಳು ಬಹುತೇಕ ರಾಜಕಾರಣಿಗಳ ಒಡೆತನದಲ್ಲಿವೆ.

ಜಿಲ್ಲೆಯು ಹಲವು ರೀತಿಯಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಇಳಕಲ್‌ ಸೀರೆ, ಅಮೀನಗಢದ ಕರದಂಟು, ಮುಧೋಳ ನಾಯಿ ಹಾಗೂ ಮಹಾಲಿಂಗಪುರದ ಬೆಲ್ಲಗಳು ನಾಡಿನಾದ್ಯಂತ ಹೆಸರು ಮಾಡಿವೆ. ಜಿಲ್ಲೆಯಲ್ಲಿ ಮೂರು ನದಿಗಳು ಹರಿಯುತ್ತವೆ.

ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಜಿಲ್ಲೆಯನ್ನು ಸಮೃದ್ಧಗೊಳಿಸಿವೆ. ಆಲಮಟ್ಟಿ ಜಲಾಯನ ಪ್ರದೇಶ ಹಾಗೂ ಕೃಷ್ಣಾ ಕಣಿವೆಯ ಸುತ್ತಲಿನ ಭೂಮಿ ಫಲವತ್ತಾಗಿದೆ. ಕಪ್ಪು(ಎರಿ) ಹಾಗೂ ಕೆಂಪು(ಮಸಾರಿ) ಮಣ್ಣನ್ನು ಇಲ್ಲಿ ಕಾಣಬಹುದು.

ಚಾಲುಕ್ಯರ ನಾಡಾದ ಬಾದಾಮಿ ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿದೆ. ಗುಹಾಂತರ ಬಸದಿಗಳು, ನಯನ ಮನೋಹರ ಶಿಲ್ಪ ಕೆತ್ತನೆಗಳು ಹಾಗೂ ಬನಶಂಕರಿ ದೇವಾಲಯ ಬಾದಾಮಿಯನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಿದೆ. ಸ್ವಾತಂತ್ರ್ಯ ಯೋಧ ವೀರ ಸಿಂಧೂರ ಲಕ್ಷ್ಮಣ ಇದೇ ಜಿಲ್ಲೆಯವರು. ವಿಶ್ವಗುರು ಬಸವಣ್ಣನವರು ಹುನಗುಂದ ತಾಲ್ಲೂಕಿನ ಕೂಡಲ ಸಂಗಮದಲ್ಲಿ ಲಿಂಗೈಕ್ಯರಾಗಿದ್ದಾರೆ ಎಂಬ ಪ್ರತೀತಿ ಇದೆ . ಕೂಡಲ ಸಂಗಮವು ಮೂರು ನದಿಗಳು ಬಂದು ಸೇರುವ ಪುಣ್ಯ ಸ್ಥಳವಾಗಿದೆ.

ಇಷ್ಟೆಲ್ಲ ಇರುವ ಜಿಲ್ಲೆಯಲ್ಲಿನ ರಾಜಕೀಯವೂ ಪ್ರತಿಷ್ಠೆಯ ಜಿದ್ದಾಜಿದ್ದೆಗೆ ಸಾಕ್ಷಿಯಾಗಿದೆ. 2018 ರ ಚುನಾವಣೆಯಲ್ಲಿ ಬಾದಾಮಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಸಾರಿಗೆ ಸಚಿವ ಶ್ರೀರಾಮುಲು ಕಡಿಮೆ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.

ಸಚಿವರಾದ ಮುರುಗೇಶ್‌ ನಿರಾಣಿ, ಗೋವಿಂದ ಕಾರಜೋಳ ಇದೇ ಜಿಲ್ಲೆಯವರು. ಮಾಜಿ ಸಚಿವರಾದ ಉಮಾಶ್ರೀ, ಎಸ್‌.ಆರ್‌.ಪಾಟೀಲ್‌ ಹಾಗೂ ಎಚ್‌.ವೈ.ಮೇಟಿ ಈ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್‌ ನಾಯಕರು.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅಖಂಡ ವಿಜಯಪುರ ಜಿಲ್ಲೆಯಿಂದ ಬೇರ್ಪಟ್ಟ ಬಾಗಲಕೋಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಇವೆರಡು ಪಕ್ಷಗಳು ಸಮಬಲವನ್ನು ಹೊಂದಿವೆ. ಲಿಂಗಾಯತರ ಮತಗಳು ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳನ್ನು ಬಾಗಲಕೋಟೆ ಹೊಂದಿದೆ.

ಇಲ್ಲಿನ ಹೆಚ್ಚು ಶಾಸಕರು ಸಹ ಲಿಂಗಾಯತರೇ ಆಗಿದ್ದಾರೆ. ಮುಧೋಳ ತಾಲ್ಲೂಕು ಮೀಸಲು ಕ್ಷೇತ್ರವಾಗಿದ್ದು, ಉಳಿದೆಲ್ಲ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ. ಕೃಷ್ಣಾ ಮೇಲ್ದಂಡೆ ಯೋಜನೆ, ಪಂಚಮಸಾಲಿ ಮೀಸಲಾತಿ ಹಾಗೂ ಅಭಿವೃದ್ಧಿ ಕಾರ್ಯಗಳು ಈ ಚುನಾವಣೆಯಲ್ಲಿ ಬಹುಚರ್ಚಿತ ವಿಷಯಗಳಾಗಿವೆ.

 ಹಲವು ರೀತಿಯಲ್ಲಿ ಪ್ರಸಿದ್ದಿಯನ್ನು ಪಡೆದಿರುವ - ಒಟ್ಟು 7 ಸ್ಥಾನಗಳು

ಹಲವು ರೀತಿಯಲ್ಲಿ ಪ್ರಸಿದ್ದಿಯನ್ನು ಪಡೆದಿರುವ - ಒಟ್ಟು 7 ಸ್ಥಾನಗಳು

ಬಿಜೆಪಿ 5 ಸ್ಥಾನಗಳು
ಕಾಂಗ್ರೆಸ್‌ 2 ಸ್ಥಾನಗಳು
ಜೆಡಿಎಸ್‌ 0 ಸ್ಥಾನಗಳು

ಈಗ ಜಿಲ್ಲೆಯಲ್ಲಿರುವ ಶಾಸಕರು
ಬಾಗಲಕೋಟೆ ವಿಧಾನ ಸಭಾ ಕ್ಷೇತ್ರ- ವೀರಣ್ಣ ಚರಂತಿಮಠ (ಬಿಜೆಪಿ)
ಬಾದಾಮಿ ವಿಧಾನ ಸಭಾ ಕ್ಷೇತ್ರ- ಸಿದ್ದರಾಮಯ್ಯ (ಕಾಂಗ್ರೆಸ್‌)
ಹುನಗುಂದ- ದೊಡ್ಡನಗೌಡ ಪಾಟೀಲ (ಬಿಜೆಪಿ)
ಬೀಳಗಿ- ಮುರುಗೇಶ ನಿರಾಣಿ (ಬಿಜೆಪಿ)
ಮುಧೋಳ- ಗೋವಿಂದ ಕಾರಜೋಳ (ಬಿಜೆಪಿ)
ಜಮಖಂಡಿ- ಆನಂದ ನ್ಯಾಮಗೌಡ (ಕಾಂಗ್ರೆಸ್‌)
ತೇರದಾಳ- ಸಿದ್ದು ಸವದಿ (ಬಿಜೆಪಿ)

 ಬಾಗಲಕೋಟೆ ವಿಧಾನಸಭಾ ಕ್ಷೇತ್ರ

ಬಾಗಲಕೋಟೆ ವಿಧಾನಸಭಾ ಕ್ಷೇತ್ರ

ಬಾಗಲಕೋಟೆ: ಮತ್ತೆ ಕಾಂಗ್ರೆಸ್‌- ಬಿಜೆಪಿ ನಡುವೆ ಪೈಪೋಟಿ

ಬಾಗಲಕೋಟೆ ವಿಧಾನಸಭಾ ಕ್ಷೇತ್ರ
ಮತಗಟ್ಟೆಗಳ ಸಂಖ್ಯೆ: 260
ಒಟ್ಟು ಮತದಾರರು : 2,27,779
ಪುರುಷ ಮತದಾರರು: 1,13,791
ಮಹಿಳಾ ಮತದಾರರು: 1,13,971

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವೀರಣ್ಣ ಚರಂತಿಮಠ ಅವರು ಆಯ್ಕೆಯಾದರು. ಅವರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸಚಿವ ಎಚ್‌.ವೈ.ಮೇಟಿ 15,934 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಮಾಜಿ ಸಚಿವರಾದ ಎಚ್‌.ವೈ.ಮೇಟಿ, ಅಜಯಕುಮಾರ ಸರನಾಯಕ, ಮಹಿಳಾ ಕಾಂಗ್ರೆಸ್‌ ಮುಖಂಡರಾದ ರಕ್ಷಿತಾ ಈಟಿ, ಡಾ.ದೇವರಾಜ ಪಾಟೀಲ, ಐಯಪ್ಪ ಮಳಗಾವಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮತ್ತೆ ವೀರಣ್ಣ ಚರಂತಿಮಠ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ.

 ಬಾದಾಮಿ: ಕಾಂಗ್ರೆಸ್‌ನಿಂದ ಹಲವು ಆಕಾಂಕ್ಷಿಗಳು

ಬಾದಾಮಿ: ಕಾಂಗ್ರೆಸ್‌ನಿಂದ ಹಲವು ಆಕಾಂಕ್ಷಿಗಳು

ಬಾದಾಮಿ ವಿಧಾನಸಭಾ ಕ್ಷೇತ್ರ
ಮತಗಟ್ಟೆಗಳ ಸಂಖ್ಯೆ: 255
ಒಟ್ಟು ಮತದಾರರು : 2,12,187
ಪುರುಷ ಮತದಾರರು: 1,07,074
ಮಹಿಳಾ ಮತದಾರರು: 1,07,074

ಐತಿಹಾಸಿಕ ಪ್ರಸಿದ್ದವಾದ ಬಾದಾಮಿಯಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಶ್ರೀರಾಮುಲು 1,696 ಪರಾಭವಗೊಂಡಿದ್ದರು. ಈ ಬಾರಿ ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸದ ಹಿನ್ನೆಲೆಯಲ್ಲಿ ಹಲವರು ಟಿಕೆಟ್‌ ಆಕಾಂಕ್ಷಗಳು ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರು ಪುತ್ರ ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡರ, ಅನಿಲ ದಡ್ಡಿ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪುರ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

 ಹುನಗುಂದ: ಕಾಶಪ್ಪನವರಿಗೆ ಒಲಿಯಲಿದೆಯಾ ಟಿಕೆಟ್‌?

ಹುನಗುಂದ: ಕಾಶಪ್ಪನವರಿಗೆ ಒಲಿಯಲಿದೆಯಾ ಟಿಕೆಟ್‌?

ಹುನಗುಂದ ವಿಧಾನಸಭಾ ಕ್ಷೇತ್ರ
ಮತಗಟ್ಟೆಗಳ ಸಂಖ್ಯೆ: 253
ಒಟ್ಟು ಮತದಾರರು : 2,14,352
ಪುರುಷ ಮತದಾರರು: 1,06,698
ಮಹಿಳಾ ಮತದಾರರು: 1,07,644

ಹುನಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ. ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಅವರು ವಿಜಯಾನಂದ ಕಾಶಪ್ಪನವರ್‌ ಅವರನ್ನು 5,227 ಮತಗಳ ಅಂತರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಸೋಲಿಸಿದ್ದರು. ಈ ಬಾರಿ ಬಿಜೆಪಿಯಿಂದ ಮತ್ತೆ ದೊಡ್ಡನಗೌಡ ಪಾಟೀಲ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದು, ಅವರಿಗೆ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್‌ನಿಂದ ವಿಜಯಾನಂದ ಕಾಶಪ್ಪನವರ್‌, ರವೀಂದ್ರ ಕಲಬುರ್ಗಿ, ಎಂ.ಎಲ್‌.ಶಾಂತಗಿರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಆರ್‌.ನವಲಿ ಹಿರೇಮಠ ಮತ್ತೆ ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

 ಈ ಬಾರಿಯೂ ಮುರುಗೇಶ್‌ ನಿರಾಣಿ ಸ್ಪರ್ಧೆ?

ಈ ಬಾರಿಯೂ ಮುರುಗೇಶ್‌ ನಿರಾಣಿ ಸ್ಪರ್ಧೆ?

ಬೀಳಗಿ ವಿಧಾನಸಭಾ ಕ್ಷೇತ್ರ
ಮತಗಟ್ಟೆಗಳ ಸಂಖ್ಯೆ: 260
ಒಟ್ಟು ಮತದಾರರು : 2,16,553
ಪುರುಷ ಮತದಾರರು: 1,08,615
ಮಹಿಳಾ ಮತದಾರರು: 1,07,910

ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಇದೆ. ಕಳೆದ ಮುರುಗೇಶ್‌ ನಿರಾಣಿ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ನಿಂತಿದ್ದ ಕಾಂಗ್ರೆಸ್‌ ಶಾಸಕ ಜೆ.ಟಿ.ಪಾಟೀಲ್ 4,811 ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಮುರುಗೇಶ್‌ ನಿರಾಣಿ ಸ್ಪರ್ಧೆ ಖಚಿತವಾಗಿದೆ.

ಒಂದು ವೇಳೆ, ಮುರುಗೇಶ್‌ ನಿರಾಣಿ ಜಮಕಂಡಿಯಿಂದ ಸ್ಪರ್ಧಿಸಿದರೆ, ಅವರ ಸಹೋದರ ಹನುಮಂತ ನಿರಾಣಿ ಬೀಳಗಿಯಿಂದ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಸ್‌.ಆರ್‌.ಪಾಟೀಲ, ಮಾಜಿ ಶಾಸಕ ಜೆ.ಟಿ.ಪಾಟೀಲ, ಬಸಪ್ರಭು ಸರನಾಡಗೌಡರ, ಹನಮಂತ ಕಾಕಂಡಕಿ, ಶಿವಾನಂದ ನಿಂಗನೂರ, ಬಸವರಾಜ ಖೋತ ಮತ್ತು ಎನ್‌.ಎಂ.ಪಾಟೀಲ ಆಕಾಂಕ್ಷಿಗಳಾಗಿದ್ದಾರೆ.

 ಮುಧೋಳ: ಕಾರಜೋಳಗೆ ತಿಮ್ಮಾಪುರ ಸವಾಲು?

ಮುಧೋಳ: ಕಾರಜೋಳಗೆ ತಿಮ್ಮಾಪುರ ಸವಾಲು?

ಮುಧೋಳ ವಿಧಾನಸಭಾ ಕ್ಷೇತ್ರ
ಮತಗಟ್ಟೆಗಳ ಸಂಖ್ಯೆ: 208
ಒಟ್ಟು ಮತದಾರರು : 1,91,735
ಪುರುಷ ಮತದಾರರು: 95,564
ಮಹಿಳಾ ಮತದಾರರು: 96,168

ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಶಾಸಕರಾಗಿದ್ದಾರೆ. ಕಳೆದ ಬಾರಿ ಅವರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ 15,482 ಮತಗಳ ಅಂತರದಿಂದ ಸೋಲುಂಡಿದ್ದರು.

ಸದ್ಯ ಈ ಕ್ಷೇತ್ರದಲ್ಲಿ ಕಾರಜೋಳ ಪ್ರಭಾವಿ ನಾಯಕರು. ಬಿಜೆಪಿಯಿಂದ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಹಾಗೂ ಸತೀಶ ಬಂಡಿವಡ್ಡರ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

 ಆನಂದ ನ್ಯಾಮಗೌಡರನ್ನು ಎದುರಿಸುವವರು ಯಾರು?

ಆನಂದ ನ್ಯಾಮಗೌಡರನ್ನು ಎದುರಿಸುವವರು ಯಾರು?

ಜಮಖಂಡಿ ವಿಧಾನಸಭಾ ಕ್ಷೇತ್ರ
ಮತಗಟ್ಟೆಗಳ ಸಂಖ್ಯೆ: 226
ಒಟ್ಟು ಮತದಾರರು : 1,97,261
ಪುರುಷ ಮತದಾರರು: 99,195
ಮಹಿಳಾ ಮತದಾರರು: 98,063

2018ರ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಆಯ್ಕೆಯಾಗಿದ್ದರು. ಅವರ ಅಕಾಲಿಕ ಮರಣದಿಂದ ಉಪ ಚುನಾವಣೆ ನಡೆಯಿತು. ಆಗ ಅವರ ಪುತ್ರ ಆನಂದ ನ್ಯಾಮಗೌಡ ಆಯ್ಕೆಯಾದರು. ಅವರು ವಿರುದ್ಧ ಸ್ಪರ್ಧಿಸಿದ್ದ ಶ್ರೀಕಾಂತ ಕುಲಕರ್ಣಿ 39,480 ಮತಗಳ ಅಂತರದಿಂದ ಸೋತಿದ್ದರು.

ಈ ಬಾರಿ ಶ್ರೀಕಾಂತ ಕುಲಕರ್ಣಿ ಹಾಗೂ ಸಕ್ಕರೆ ಉದ್ಯಮಿ ಜಗದೀಶ ಗುಡಗುಂಟಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆನಂದ ನ್ಯಾಮಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

 ಮಾಜಿ ಸಚಿವೆ ಉಮಾಶ್ರೀಗೆ ಸತ್ವಪರೀಕ್ಷೆ?

ಮಾಜಿ ಸಚಿವೆ ಉಮಾಶ್ರೀಗೆ ಸತ್ವಪರೀಕ್ಷೆ?

ತೇರದಾಳ ವಿಧಾನಸಭಾ ಕ್ಷೇತ್ರ
ಮತಗಟ್ಟೆಗಳ ಸಂಖ್ಯೆ: 226
ಒಟ್ಟು ಮತದಾರರು : 1,97,261
ಪುರುಷ ಮತದಾರರು: 99,195
ಮಹಿಳಾ ಮತದಾರರು: 98,063

ಕಳೆದ ಬಾರಿಯ ಚುಣಾವಣೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಸೋತಿದ್ದರು. 20,889 ಮತಗಳ ಅಂತರದಿಂದ ಸಿದ್ದು ಸವದಿ ಗೆಲುವು ಸಾಧಿಸಿದ್ದರು.

ಈ ಬಾರಿ ಉಮಾಶ್ರೀ, ಡಾ.ಎ.ಆರ್‌.ಬೆಳಗಲಿ, ಡಾ.ಪದ್ಮಜಿತ ನಾಡಗೌಡರ, ಪ್ರವೀಣ ನಾಡಗೌಡರ, ಎಂ.ಎಸ್‌.ದಡ್ಡೆನ್ನವರ, ಮುರಗೇಶ ಕಡ್ಲಿಮಟ್ಟಿ, ರಾಹುಲ ಕಲೂತಿ, ಶ್ರೀಶೈಲ ದಳವಾಯಿ ಸೇರಿ ಕೈ ಟಿಕೆಟ್‌ಗಾಗಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಲು ಸಿದ್ದು ಸವದಿ ಮತ್ತೊಮ್ಮೆ ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+