ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಗೆಳೆಯರ ಬಳಗದಿಂದ ಚಂಪಾ ನಿಧನಕ್ಕೆ ಶ್ರದ್ಧಾಂಜಲಿ

By ರಾ.ನಂ. ಚಂದ್ರಶೇಖರ
|
Google Oneindia Kannada News

ಅಪ್ಪಟ ಕನ್ನಡ ಅಭಿಮಾನಿ, ಪ್ರಶ್ನಾತೀತ ಕನ್ನಡ ಹೊರಾಟಗಾರ ಚಂಪಾ ಎಂದೇ ಪ್ರಸಿದ್ಧರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲರ ನಿಧನದಿಂದ ಕನ್ನಡ ಚಳವಳಿಗೆ ದೊಡ್ಡ ನಷ್ಟವಾಗಿದೆ ಎಂದು ಕನ್ನಡ ಗೆಳೆಯರ ಬಳಗ ಭಾವಿಸುತ್ತದೆ, ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತದೆ. ರಾ.ನಂ. ಚಂದ್ರಶೇಖರ ಅವರು ಬರೆದ ಬರಹ ಇಲ್ಲಿದೆ--ಸಂಪಾದಕ.

ಪ್ರಶ್ನಾತೀತ ಕನ್ನಡ ನಿಷ್ಠೆಯ ಚಂಪಾ ಕಣ್ಮರೆ
ಕನ್ನಡದ ಹಿರಿಯ ಕವಿ, ನಾಟಕಕಾರ ಪ್ರೊ. ಚಂದ್ರಶೇಖರ ಪಾಟೀಲರು, ಚಂಪಾ ಎನ್ನುವ ಹೆಸರಿನಿಂದ ಕನ್ನಡಿಗರಿಗೆ ಚಿರ ಪರಿಚಿತರಾಗಿದ್ದರು. ಅಧ್ಯಾಪಕ, ಕವಿ, ನಾಟಕಕಾರ, ಸಂಪಾದಕ, ಸಂಘಟಕ, ವಿಚಾರವಾದಿ, ವಿಡಂಬನಕಾರ- ಹೀಗೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದ ಚಂಪಾ ಮೊದಲಿಗೆ ಹೋರಾಟಗಾರ. ಹುಟ್ಟು ಹೋರಾಟಗಾರ ಅನ್ನಲು ಅಡ್ಡಿಯಿಲ್ಲ. ಇವರ ನಿಧನದಿಂದ ಒಬ್ಬ ಮಹಾನ್ ಕನ್ನಡ ಹೋರಾಟಗಾರನ್ನು ಕಳೆದುಕೊಂಡಿದ್ದೇವೆ.

ಚಂಪಾ ಮೂಲತಃ ಕನ್ನಡ ಹೋರಾಟಗಾರ. ಅವರ ಕನ್ನಡ ನಿಷ್ಠೆಗೆ ಒಂದು ನಿದರ್ಶನ ಕೋಲಾರದಲ್ಲಿ ಬಂಡಾಯ ಸಂಘಟನೆಯ ಸಭೆ ನಡೆದಿತ್ತು. ಆಗ ಕನ್ನಡ ಚಳವಳಿಗೂ ಬಂಡಾಯ ಸಂಘಟನೆಗೂ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಆಗ ಸಭೆಯಲ್ಲಿ ಬಂಡಾಯ ಅಥವಾ ಕನ್ನಡ ಹೋರಾಟ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಚಂಪಾ ಕನ್ನಡವನ್ನು ಆಯ್ಕೆ ಮಾಡಿಕೊಂಡರು.

Kannada Geleyara Balaga Condolence to Kannada Poet Chandrashekar Patil Death


ಗೋಕಾಕ್ ಗೋ ಬ್ಯಾಕ್
ಕನ್ನಡ ನಮ್ಮ ಅಸ್ಮಿತೆಯ ಸಂಕೇತ. ಕನ್ನಡದ ಮೂಲಕ ನಮ್ಮನ್ನು ಗುರುತಿಸಿಕೊಳ್ಳಬೇಕು ಇಂಗ್ಲಿಷ್ ನನ್ನ ಉಪಜೀವನ. ಕನ್ನಡ ನನ್ನ ಜೀವನ? ಅನ್ನುವ ಪಾಟೀಲರು, ಕನ್ನಡ ಚಳವಳಿ ಎಂಬುದು ನಮ್ಮ ನಾಡಿನಲ್ಲಿ ಒಂದು ನಿರಂತರ ಜಾಗೃತಿಯ ಪ್ರಕ್ರಿಯೆಯಾಗಿ ಉಳಿಯ ಬೇಕಿರುವ ಅನಿವಾರ್ಯ ಪ್ರಕ್ರಿಯೆ' ಎನ್ನುವ ನಿಲುವಿನವರು.

ಚಂಪಾ ಗೋಕಾಕ್ ಚಳವಳಿಯ ಕಾಲದಲ್ಲಿ ಟಂಕಿಸಿದ 'ಕನ್ನಡ ಕನ್ನಡ; ಬರ್ರಿ ನಮ್ಮ ಸಂಗಡ', 'ನಾವು ಹೊರಟೆವು ಜೈಲಿಗೆ ಕನ್ನಡ ತಾಯಿಯ ಸೇವೆಗೆ' ಘೋಷಣೆ ಜನಪ್ರಿಯವಾಗಿದ್ದವು. 1980ರಲ್ಲಿ ಪ್ರೊ. ವಿ.ಕೃ. ಗೋಕಾಕ್ ನೇತೃತ್ವದ ಸಮಿತಿಯು ಶಾಲೆಗಳಲ್ಲಿ ಭಾಷೆ ಕಲಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಧಾರವಾಡಕ್ಕೆ ಹೋದಾಗ, "ಗೋಕಾಕ್ ಸಮಿತಿಗೆ ಧಿಕ್ಕಾರ', 'ಗೋಕಾಕ್ ಗೋ ಬ್ಯಾಕ್', 'ಗೋಕಾಕ್ ಮಹೋದಯಾ ವಾಪಸ್ ಗಚ್ಛ' ಎಂಬ ಫಲಕಗಳನ್ನು ಹಿಡಿದು ಧರಣ ನಡೆಸಿದರು. ಈ ಪ್ರತಿಭಟನೆಯಿಂದ ಚಂಪಾ ರಾಜ್ಯದ ಎಲ್ಲ ಕನ್ನಡಾಭಿಮಾನಿಗಳ ಗಮನ ಸೆಳೆದರು.

ಕರ್ನಾಟಕ ಸರ್ಕಾರವು ಗೋಕಾಕ್ ಭಾಷಾ ಸೂತ್ರವನ್ನು ಅನುಷ್ಠಾನಗೊಳಿಸಲು ನಿರಾಸಕ್ತಿ ತೋರುತ್ತಿತ್ತು. ಅದನ್ನು ಪ್ರತಿಭಟಿಸಲು "ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ'ಯು ಶಂಬಾ ಜೋಶಿಯವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು. ಆ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ ಅದರ ಚಾಲಕ ಶಕ್ತಿಯಾಗಿದ್ದವರು ಚಂಪಾ. ಸಮಿತಿಯು 1982 ಫೆಬ್ರವರಿ 23ರಂದು ಧಾರವಾಡದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಧರಣ ನಡೆಸಿತು. ಈ ಧರಣವು ಗೋಕಾಕ್ ಚಳವಳಿ ರಾಜ್ಯಾದ್ಯಂತ ಹಬ್ಬಲು ಪ್ರಚೋದನೆಯಾಯಿತು. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಕರ್ನಾಟಕದ ಮೂಲೆ ಮೂಲೆಗಳನ್ನು ತಿರುಗಿದ ಚಂಪಾ, ಗೋಕಾಕ್ ಚಳವಳಿಯಲ್ಲಿ ವಹಿಸಿದ ಪಾತ್ರ ಸ್ಮರಣೀಯವಾದದ್ದು.

ಎಲ್ಲೆಲ್ಲೂ ಮೊಳಗಬೇಕು ಕನ್ನಡ ಕನ್ನಡ:
ಕನ್ನಡ- ಕನ್ನಡಿಗ- ಕರ್ನಾಟಕ'ಗಳ ಬಗ್ಗೆ ವ್ಯಾಮೋಹಿಗಳಾದ ಚಂಪಾ ಗಟ್ಟಿ ನಿಲುವಿನ ಕನ್ನಡ ಹೋರಾಟಗಾರ. ಅವರು ಎಂದೂ ಯಾರು ಏನೆಂದುಕೊಳ್ಳುತ್ತಾರೆ ಎಂಬುದಕ್ಕೆ ತಲೆ ಕೆಡಿಸಿಕೊಂಡವರಲ್ಲ. ತಮಗೆ ಖರೆ ಎಂದೆನಿಸಿದ್ದನ್ನು ಮಾಡಿಯೇ ತೀರುತ್ತಿದ್ದರು. ಅವರು ನಡೆಸಿದ ಹೋರಾಟ, ಕಠಿಣ ಮಾತಿನ ಪ್ರತಿಕ್ರಿಯೆ ಕೆಲವರಿಗೆ ನುಂಗಲಾರದ ತುತ್ತಾಗಿತ್ತು.

ಗೋಕಾಕ್ ಚಳವಳಿಯ ನಂತರವೂ ಧಾರವಾಡದ ಕ್ರಿಯಾ ಸಮಿತಿಯು ಅಸ್ತಿತ್ವ ಉಳಿಸಿಕೊಳ್ಳಲು ಚಂಪಾ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕನ್ನಡದ ಸಾಂಸ್ಕೃತಿಕ ರಾಜಧಾನಿ ಧಾರವಾಡದಲ್ಲಿ ಪ್ರಚಲಿತ ಕನ್ನಡ ಸಮಸ್ಯೆಗಳಿಗೆ ಸ್ಪಂದಿಸುವ ಅರ್ಥಪೂರ್ಣ ದನಿಯಾಗಿದ್ದ ಕನ್ನಡ ಕ್ರಿಯಾ ಸಮಿತಿಯ ಚಾಲಕ ಶಕ್ತಿಯಾಗಿದ್ದ ಚಂಪಾ ಅವರು ನಾಡನಾದ್ಯಂತಹ ಕನ್ನಡ ಕಾರ್ಯಕರ್ತರ ವಿಶೇಷ ಅಭಿಮಾನಕ್ಕೆ ಪಾತ್ರರಾಗಿದ್ದರು.

ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಕನ್ನಡ ಸಂಘಟನೆಗಳೊಡನೆ ಕನ್ನಡ ಚಳವಳಿಯಲ್ಲಿ ತೊಡಗಿಕೊಂಡರು. ಜೊತೆಗೆ "ಕರ್ನಾಟಕ ಸ್ವಾಭಿಮಾನಿ ವೇದಿಕೆ' ಸ್ಥಾಪಿಸಿ ಹೋರಾಟ ನಡೆಸಿದರು. ಕರ್ನಾಟಕ ರಾಜ್ಯ ರಸ್ತ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯ ಗೌರವಾಧ್ಯಕ್ಷರಾಗಿ ದೊಡ್ಡ ಕೆಲಸ ಮಾಡಿದ್ದಾರೆ.

ಚಂಪಾ ಯಾವುದೇ ಹುದ್ದೆಯಲ್ಲಿರಲಿ, ಎಲ್ಲೇ ಇರಲಿ, ಕನ್ನಡ ಹೋರಾಟವನ್ನು ಮರೆತವರಲ್ಲ. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ನೇರವಾಗಿ ಬ್ರಿಗೇಡ್ ರೋಡ್, ಎಂ.ಜಿ. ರೋಡ್ ಕನ್ನಡೇತರ ನಾಮಫಲಕಗಳನ್ನು ಕೆಳಗಿಳಿಸಿದರು. ಕನ್ನಡ ಹೋರಾಟಗಾರರೊಡನೆ ನಿರಂತರ ಸಂಪರ್ಕ ಇಟ್ಟುಕೊಂಡು ಹೋರಾಟದ ಭಾಗವಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗಲೂ ಕನ್ನಡ ಹೋರಾಟ ಮುಂದುವರೆಸಿ ಪರಿಷತ್‌ನ್ನು ಹೋರಾಟದ ವೇದಿಕೆಯನ್ನಾಗಿ ರೂಪಿಸಿದರು. ಚಂಪಾ ಅಧ್ಯಕ್ಷರಾಗಿದ್ದಾಗ ರಾಜ್ಯ ಸರ್ಕಾರವು ೧ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸುವ ನಿರ್ಧಾರ ಮಾಡಿತು. ಆಗ ಪರಿಷತ್ತಿನ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣ ನಡೆಯಿತು.

Recommended Video

South Africa ಹಾಗು India ನಡುವಿನ ಮೂರನೇ ಪಂದ್ಯಕ್ಕೆ Kohli ಸಿದ್ಧ! | Oneindia Kannada

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಚಂಪಾ ನೇತೃತ್ವದಲ್ಲಿ ನಡೆದ ಧರಣಿ ಪರಿಷತ್ತಿನ ಇತಿಹಾಸದಲ್ಲಿ ಹೊಸಪುಟ ತೆರೆಯಿತು. ಗಡಿ ವಿವಾದದ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾಜನ್ ವರದಿಯನ್ನು ಜಾರಿಗೆ ತರಲು ಒತ್ತಾಯಿಸಿ ನಡೆದ ಕರ್ನಾಟಕ ಬಂದ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು. ಚಂಪಾ ಅವಧಿಯಲ್ಲಿ ನಡೆದ ಎಲ್ಲ ಕನ್ನಡ ಹೋರಾಟಗಳಲ್ಲೂ ಪರಿಷತ್ ಪಾಲ್ಗೊಂಡಿತು.

'ನಾನು ಹೇಳಬೇಕಾದ್ದನ್ನು ಹೇಳಿಯೇ ತೀರುತ್ತೇನೆ. ಇದರಿಂದ ಯಾವುದೇ ಸ್ಥಾನ, ಪ್ರಶಸ್ತಿ ವಂಚಿತನಾಗುತ್ತೇನೆ ಎನ್ನುವ ಭಾವನೆ ನನ್ನಲ್ಲಿಲ್ಲ. ನಂಬಿಕೆಗಳು ಗಟ್ಟಿಯಾಗಿದ್ದಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಕಿಲ್ಲ' ಅನ್ನುವ ಚಂಪಾ ಹಾವೇರಿಯವರು. ಆದರೆ ಎಂದೂ ಹಾವೇರಿ ನ್ಯಾಯವನ್ನು ಪಾಲಿಸಿದವರಲ್ಲ. 'ಅಂದರೆ ಅತ್ತ ಕಡೆಯೂ ಅಲ್ಲ, ಇತ್ತ ಕಡೆಯೂ ಅಲ್ಲ ಎಂಬಂತ ನ್ಯಾಯ ಹೇಳುವುದು ಹಾವೇರಿ ನ್ಯಾಯ. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆಮಾತನಾಡುವುದು ಹಾವೇರಿ ನ್ಯಾಯ'. ಚಂಪಾ ತಮಗೆ ಸರಿ ಕಂಡದ್ದನ್ನು ಯಾವ ಮುಲಾಜಿಲ್ಲದೇ ಹೇಳಿಕೊಂಡು ಬಂದವರು. ಚಂಪಾ ಮಾತು ಅಂದರೆ ಗುಂಡು ಹೊಡೆದಂತೆ ಇರುತ್ತಿತ್ತು.

ಕನ್ನಡ ಚಳವಳಿಯ ನೇತಾರರೇ ತಮ್ಮ ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‌ಗಳಿಗೆ ಕಳುಹಿಸುತ್ತಿದ್ದಾರೆ ಎಂಬ ಮಾತುಗಳು ವ್ಯಾಪಕ ಟೀಕೆ, ಚರ್ಚೆಗೆ ಒಳಗಾಯಿತು. ಕನ್ನಡ ಹೋರಾಟಗಾರರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವುದು ವಾಸ್ತವ. ಕನ್ನಡ ಮಾಧ್ಯಮಕ್ಕೆ ಒತ್ತಾಯಿಸಿ ಉಪವಾಸ ಮಾಡಿದವರ ಮಕ್ಕಳೇ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದರು. ಆಗ ಚಂಪಾ ಅವರು 'ಇದು ದ್ವಂದ್ವ ನೀತಿ, ಹಿಪಾಕ್ರಸಿ ಅಷ್ಟೆ. ಇಂಥ ಮಹನೀಯರು ಸಾರ್ವಜನಿಕ ವೇದಿಕೆಗಳಿಂದ 'ಕನ್ನಡ'ದ ಪರ ಮಾತನಾಡುವುದು ಬಿಟ್ಟರೆ ಸಾಕು. ಅದೇ 'ಕನ್ನಡಕ್ಕೆ' ಅವರು ಮೌನವಾಗಿ ಸಲ್ಲಿಸಬಹುದಾದ ಸೇವೆಯಾದೀತು' ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿದರು. ಇಂತಹ ಸನ್ನಿವೇಶದಲ್ಲಿ ಚಂಪಾ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿದ್ದರು. ತಮ್ಮ ಮೊಮ್ಮಕ್ಕಳೂ ಕನ್ನಡ ಮಾಧ್ಯಮದಲ್ಲಿ ಓದುವಂತೆ ನೊಡಿಕೊಂಡರು.

ಗೋಕಾಕ್ ಚಳವಳಿಯ ಕಾಲದಿಂದ ಚಂಪಾ ಅವರನಿಕಟ ಸಂಪರ್ಕ ಹೊಂದಿದ್ದ ನನ್ನ ಅವರ ನಡುವೆ ನಿಕಟ ಸಂಪರ್ಕ ಇತ್ತು. ನಮ್ಮ ನಡುವೆ ವಾಗ್ವಾದಗಳು ನಡೆದಿವೆ, ವಿರೋಧಿಸಿದ್ದೂ ಇದೆ. ಕಸಾಪ ಅಧ್ಯಕ್ಷರಾಗಿದ್ದಾಗಲೂ ಅವರನ್ನು ವಿರೋಧಿಸಿದ್ದೆ. ವೈಯಕ್ತಿಕವಾಗಿ ಅವರಿಗೆ ನನ್ನ ಬಗ್ಗೆ ಕೋಪವಿದ್ದರೂ ಕನ್ನಡದ ಪ್ರಶ್ನೆ ಬಂದಾಗ ನನ್ನನ್ನು ಸಂಪರ್ಕಿಸುತ್ತಿದ್ದರು. ಚಂಪಾ ಅವರ ಬಗ್ಗೆ ಭಿನ್ನಾಭಿಪ್ರಾಯ ಇದ್ದವರೂ, ಅವರ ಕನ್ನಡ ಪ್ರೀತಿಯನ್ನು ಪ್ರಶ್ನಿಸುತ್ತಿರಲಿಲ್ಲ. ಚಂಪಾ ಅವರದು ಪ್ರಶ್ನಾತೀತ ಕನ್ನಡ ನಿಷ್ಠೆ.

English summary
Kannada Geleyara Balaga express condolence to Kannada Poet Chandrashekar Patil Death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X