• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಪಟ್ಟಕ್ಕೆ ಸಿದ್ದರಾಮಯ್ಯ ಹೆಸರು ಘೋಷಣೆ, ಕಾಂಗ್ರೆಸ್ಸಿಗೆ ಹಿನ್ನಡೆಯೆ?

By ಆರ್ ಟಿ ವಿಠ್ಠಲಮೂರ್ತಿ
|

ಚುನಾವಣೆಗೂ ಮುನ್ನವೇ ಮುಂದಿನ ಮುಖ್ಯಮಂತ್ರಿ ಯಾರು ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಹೊಸ ಸಂಪ್ರದಾಯ ಶುರು ಮಾಡಿರುವುದಷ್ಟೇ ಅಲ್ಲ, ಇನ್ನು ಕೈ ಪಾಳೆಯದಲ್ಲಿ ಲಕೋಟೆ ಸಂಸ್ಕೃತಿ ನಡೆಯುವುದಿಲ್ಲ ಎಂಬುದನ್ನು ಖಚಿತಗೊಳಿಸಿದೆ.

ಮೊನ್ನೆ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಅವರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಿಸಿರುವುದು ಸಹಜವಾಗಿ ಕಾಂಗ್ರೆಸ್ ಹೈಕಮಾಂಡ್ ನ ದೌರ್ಬಲ್ಯವನ್ನು ತೋರಿಸಿದೆಯಾದರೂ, ಇದಕ್ಕಾಗಿ ಯಾರೂ ಸಿದ್ದರಾಮಯ್ಯ ಅವರ ಕಡೆ ಬೊಟ್ಟು ಮಾಡುವ ಅಗತ್ಯವಿಲ್ಲ.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

ಯಾಕೆಂದರೆ, ಇವತ್ತಿನ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಗವನ್ನು ಸಿದ್ದರಾಮಯ್ಯ ಅವರಷ್ಟು ಪ್ರಬಲವಾಗಿ ವಿರೋಧಿಸಬಲ್ಲ ಶಕ್ತಿಯನ್ನು ಯಾರೂ ತೋರಿಸುತ್ತಿಲ್ಲ. ಈ ಮಧ್ಯೆಯೇ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಅವರೇ ಸಿಎಂ ಆಗುತ್ತಾರೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಬೆಳವಣಿಗೆ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲವೇ? ಇದು ರಾಜಕೀಯ ವಲಯಗಳಲ್ಲಿ ಈಗ ಚರ್ಚೆಗೆ ಗ್ರಾಸವಾಗಿರುವ ವಿಷಯ. ಒಂದು ನೆಲೆಯಲ್ಲಿ ನೋಡಲು ಹೋದರೆ ಇದು ಕಾಂಗ್ರೆಸ್ ಪಕ್ಷದ ಪಾಲಿಗೆ ಹಿನ್ನಡೆಯಾಗುತ್ತದೆ. ಯಾಕೆಂದರೆ, ಮುಂದಿನ ಚುನಾವಣೆಯ ನಂತರ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಾಂಗ್ರೆಸ್ ಪಕ್ಷದ ಹಲವು ನಾಯಕರಲ್ಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ಮುಖ್ಯಮಂತ್ರಿಗಳು!

ಪಕ್ಷದ ರಾಷ್ಟ್ರೀಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಭಾರೀ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವರು ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದಾರೆ. ಈಗ ಅವರ ಕನಸು ಉದುರಿ ಬಿದ್ದಿರುವುದರಿಂದ ಸಹಜವಾಗಿಯೇ ಇವರ ಪೈಕಿ ಬಹುತೇಕರು ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿ ಎಂದು ಬಯಸಬಹುದು.

ಹಲವು ಘನಾನುಘಟಿಗಳ ಕನಸಿಗೆ ಭಂಗ

ಹಲವು ಘನಾನುಘಟಿಗಳ ಕನಸಿಗೆ ಭಂಗ

ಹಾಗಾದರೆ ಮಾತ್ರ ತಾವು ಮುಖ್ಯಮಂತ್ರಿಯೋ? ಉಪಮುಖ್ಯಮಂತ್ರಿಯೋ? ಆಗಬಹುದು ಎಂದು ಬಾವಿಸಬಹುದು.

ಹಾಗಾದಾಗ ಅದು ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಯುದ್ಧ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೇಗಿದ್ದರೂ ತಾವು ಮುಖ್ಯಮಂತ್ರಿಯಾಗುವುದಿಲ್ಲ ಎಂದ ಮೇಲೆ ತಮ್ಮನ್ನು ಹೊರತುಪಡಿಸಿ ಬೇರೆಯವರನ್ನು ಗೆಲ್ಲಿಸಲು ಏಕೆ ಶ್ರಮ ಪಡಬೇಕು? ಎಂದು ಈ ನಾಯಕರು ಯೋಚಿಸಬಹುದು.

ಇಂತಹ ಅಂಶಗಳನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಇದುವರೆಗೆ ಕಾಂಗ್ರೆಸ್ ಹೈಕಮಾಂಡ್ ಚುನಾವಣೆಗೂ ಮುನ್ನ ಸಿಎಂ ಕ್ಯಾಂಡಿಡೇಟ್ ಯಾರು ಅಂತ ಘೋಷಿಸುತ್ತಿರಲಿಲ್ಲ. 1989ರ ಚುನಾವಣೆಯ ನಂತರ ವೀರೇಂದ್ರ ಪಾಟೀಲ್, 1999ರ ಚುನಾವಣೆಯ ನಂತರ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಗೊತ್ತಿದ್ದರೂ ಅದನ್ನು ಬಹಿರಂಗವಾಗಿ ಹೇಳುವ ಕೆಲಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೈಹಾಕಿರಲಿಲ್ಲ.

ಪರಮೇಶ್ವರ್ ನಾನು ಅಣ್ಣ-ತಮ್ಮ, ಈ ಬಾರಿ ಆತ ಗೆಲ್ಲಬೇಕು:ಸಿಎಂ

ಲಕೋಟೆಯಲ್ಲಿರುತ್ತಿತ್ತು ಮುಮಂ ಹೆಸರು

ಲಕೋಟೆಯಲ್ಲಿರುತ್ತಿತ್ತು ಮುಮಂ ಹೆಸರು

1972 ಮತ್ತು 1978ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಅಷ್ಟೇ. ದೇವರಾಜ ಅರಸರು ಎಷ್ಟೇ ಪ್ರಬಲ ನಾಯಕರಾಗಿದ್ದರೂ ಹೈಕಮಾಂಡ್ ಬಯಸಿದರೆ ಏನೂ ಆಗಬಹುದು ಎಂಬ ಮಾತು ಚಾಲ್ತಿಯಲ್ಲಿತ್ತು. ಅಂತಿಮವಾಗಿ ಚುನಾವಣೆ ಮುಗಿದು ಕಾಂಗ್ರೆಸ್ ಗೆದ್ದ ಮೇಲೆ ಶಾಸಕಾಂಗ ನಾಯಕನನ್ನು ಆರಿಸುವ ಪ್ರಕ್ರಿಯೆ ಆರಂಭವಾಗುತ್ತಿತ್ತು.

ಈ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನ ಪ್ರಮುಖರು ಭಾಗವಹಿಸುತ್ತಿದ್ದರು. ಈ ಸಭೆ ನಡೆಯುವ ವೇಳೆಯಲ್ಲಿ ಹೈಕಮಾಂಡ್ ಕಳಿಸುವ ಲಕೋಟೆ, ಮುಂದಿನ ಮುಖ್ಯಮಂತ್ರಿ ಯಾರು? ಎಂಬುದನ್ನು ಸೂಚಿಸುತ್ತಿತ್ತು. ಎಲ್ಲರೂ ಅದನ್ನೊಪ್ಪಿ ಗೌರವಿಸುವ ಸಂಪ್ರದಾಯ ನಡೆದುಕೊಂಡು ಬಂದಿತ್ತು.

ದೇವರಾಜ ಅರಸು ನಂತರ ನಾನೇ ಪೂರ್ಣಾವಧಿ ಮುಖ್ಯಮಂತ್ರಿ: ಸಿದ್ದರಾಮಯ್ಯ

ಲಕೋಟೆ ಸಂಪ್ರದಾಯಕ್ಕೆ ವಿಧ್ಯುಕ್ತವಾಗಿ ತೆರೆ

ಲಕೋಟೆ ಸಂಪ್ರದಾಯಕ್ಕೆ ವಿಧ್ಯುಕ್ತವಾಗಿ ತೆರೆ

ಈಗ ಲಕೋಟೆ ಸಂಪ್ರದಾಯಕ್ಕೆ ವಿಧ್ಯುಕ್ತವಾಗಿ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ. ಹಾಗಿದ್ದರೆ ಈ ಕೆಲಸ ಮಾಡುವ ಮುನ್ನ ಕಾಂಗ್ರೆಸ್ ಹೈಕಮಾಂಡ್ ಅದರ ಸಾಧಕ-ಬಾಧಕಗಳ ಅಧ್ಯಯನ ಮಾಡಲಿಲ್ಲವೇ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಾಳೆಯದೊಳಗೆ ನುಗ್ಗಿದರೆ ಹಲವು ಕುತೂಹಲಕಾರಿ ಅಂಶಗಳು ಕಣ್ಣಿಗೆ ಕಾಣುತ್ತವೆ. ಮೊದಲನೆಯದಾಗಿ, ಮುಂದಿನ ಮುಖ್ಯಮಂತ್ರಿ ಕ್ಯಾಂಡಿಡೇಟ್ ಸಿದ್ದರಾಮಯ್ಯ ಎಂದು ಘೋಷಿಸುವುದರಿಂದ ಆತಂಕವಾಗಬೇಕಾಗಿದ್ದು ಸಿದ್ದರಾಮಯ್ಯ ಅವರಿಗೇ. ಯಾಕೆಂದರೆ, ಈ ವಿಷಯ ಪ್ರಕಟವಾದ ಕೂಡಲೇ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವವರಿಂದ ಹಿಡಿದು, ಹಲವರು ತಣ್ಣಗೆ ನುಣುಚಿಕೊಳ್ಳುತ್ತಾರೆ ಎಂದು ಅವರಿಗೂ ಗೊತ್ತಿದೆ. ಆದರೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಎಐಸಿಸಿ ಅಧ್ಯಕ್ಷರು ಘೋಷಿಸಿದರೂ ಅವರು ಹಸನ್ಮುಖಿಯಾಗಿದ್ದಾರೆ ಎಂದರೆ ಏನರ್ಥ? ಅವರು ಮುಂದಿನ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದಾರೆ ಎಂದು ತಾನೇ?

ಸರ್ವೇ ಮೇಲೆ ಸರ್ವೇ ಮಾಡಿಸಿರುವ ಸಿದ್ದರಾಮಯ್ಯ

ಸರ್ವೇ ಮೇಲೆ ಸರ್ವೇ ಮಾಡಿಸಿರುವ ಸಿದ್ದರಾಮಯ್ಯ

ಇದೇ ಕಾರಣಕ್ಕಾಗಿ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯದ ನೂರಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿ ಬಂದರು. ಅಷ್ಟೇ ಅಲ್ಲ, ನಿರಂತರವಾಗಿ ಸರ್ವೇ ಕಾರ್ಯ ಮಾಡಿಸುತ್ತಾ ಬಂದರು. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಸ್ವಯಂಬಲದ ಮೇಲೆ ಗೆಲ್ಲುವುದಿಲ್ಲವಾದರೂ ಕೊಂಚ ಶ್ರಮ ವಹಿಸಿದರೆ ಇಂತಿಂತಹ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಮಾಹಿತಿ ಪಡೆದರು.

ಕಳೆದ ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳು ಕೈ ಬಿಟ್ಟು ಹೋಗಬಹುದು? ಸೋತ ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳು ಕೈ ಹಿಡಿಯಬಹುದು? ಎಂಬ ಕುರಿತು ವಿವರ ಪಡೆದರು. ಇಂತಹ ವಿವರಗಳ ಮೂಲಕ ಅವರು ನೂರಾ ಐವತ್ತು ವಿಧಾನಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದರು. ಅಂದರೆ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳನ್ನು ಗೆಲ್ಲುವ ಕಡೆ ಸಂಪೂರ್ಣ ಗಮನ ಕೊಡುವುದು ಅವರ ಲೆಕ್ಕಾಚಾರ.

ಸಿಫೋರ್ ಸಮೀಕ್ಷೆ : ಎರಡು ಬಾರಿ ಫಲಿತಾಂಶದಲ್ಲೂ 'ಕೈ' ಮೇಲುಗೈ

ಸಿದ್ದರಾಮಯ್ಯ ಟಾರ್ಗೆಟ್ 150 ಸೀಟುಗಳು

ಸಿದ್ದರಾಮಯ್ಯ ಟಾರ್ಗೆಟ್ 150 ಸೀಟುಗಳು

ಉಳಿದಂತೆ ಎಪ್ಪತ್ನಾಲ್ಕು ಸೀಟುಗಳ ವಿಷಯದಲ್ಲಿ ಅವರು ಹೇಳಿಕೊಳ್ಳುವಷ್ಟು ತಲೆ ಕೆಡಿಸಿಕೊಂಡಿಲ್ಲ. ಆ ಕ್ಷೇತ್ರಗಳಲ್ಲಿ ತಮ್ಮ ವಿರೋಧಿಗಳಾಗಲೀ, ಅವರ ಬೆಂಬಲಿಗರಾಗಲೀ ಗೆದ್ದರೂ ತೊಂದರೆಯಿಲ್ಲ ಅನ್ನುವುದು ಅವರ ಸದ್ಯದ ಲೆಕ್ಕಾಚಾರ. ಅಂದ ಹಾಗೆ ಅವರು ಟಾರ್ಗೆಟ್ ಮಾಡಿರುವ ನೂರಾ ಐವತ್ತು ಕ್ಷೇತ್ರಗಳೇನಿವೆ? ಆ ಕ್ಷೇತ್ರಗಳಿಂದ ಸ್ಪರ್ಧಿಸುವವರು ಮುಂದಿನ ವಿಧಾನಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಅವರೇ ಸಿಎಂ ಆಗಲಿ ಎಂದು ಹೇಳಲು ಸಜ್ಜಾಗಿದ್ದಾರೆ. ಅರ್ಥಾತ್, ಇಲ್ಲೆಲ್ಲ ಟಿಕೆಟ್ ಪಡೆಯುವವರು ಸಿದ್ದರಾಮಯ್ಯ ಅವರ ಬೆಂಬಲಿಗರು. ಚುನಾವಣೆಯಲ್ಲಿ ಗೆಲ್ಲಲು ಈ ಬೆಂಬಲಿಗರಿಗೆ ಯಾವ್ಯಾವ ಯುದ್ದೋಪಕರಣಗಳು ಬೇಕೋ? ಅದನ್ನು ಸಿದ್ದರಾಮಯ್ಯ ಒದಗಿಸುತ್ತಾರೆ. ಈ ರೀತಿ ಯುದ್ದೋಪಕರಣಗಳನ್ನು ಪಡೆಯುವವರು ಸೇರಿದಂತೆ ಗೆಲ್ಲುವ ಶಾಸಕರ ಪೈಕಿ ಮೂರನೇ ಎರಡರಷ್ಟು ಭಾಗದ ಶಾಸಕರು ತಮ್ಮ ಬೆಂಬಲಿಗರಾಗಿದ್ದರೆ, ಪಕ್ಷ ಅಧಿಕಾರಕ್ಕೆ ಬಂದಾಗ ಶಾಸಕಾಂಗ ಪಕ್ಷದಲ್ಲಿ ತಾವು ನಾಯಕರಾಗಿ ಆಯ್ಕೆಯಾಗುವುದು ಸುಲಭ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರದ ಭಾಗ.

ಪವರ್ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್

ಪವರ್ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್

ಒಬ್ಬ ನಾಯಕನ ಬೆನ್ನಲ್ಲಿ ಮೂರನೇ ಎರಡು ಭಾಗದಷ್ಟು ಶಾಸಕರು ನಿಲ್ಲುತ್ತಾರೆ ಎಂಬುದರ ಅರ್ಥ, ಬೇರೆ ಯಾವುದೇ ರೀತಿಯ ಆಟಗಳು ನಡೆದರೂ ತಿರುಗೇಟು ನೀಡಲು ಸದರಿ ನಾಯಕನಿಗೆ ಸಾಧ್ಯವಾಗುತ್ತದೆ ಅಂತಲೇ ಹೊರತು ಮತ್ತೇನಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ಕೂಡಾ ಇದನ್ನೇ ಮಾಡಲು ಹೊರಟಿದ್ದರಾದರೂ ಪಕ್ಷದ ಹೈಕಮಾಂಡ್ ಅದಕ್ಕೆ ಅವಕಾಶ ನೀಡಿಲ್ಲ. ಆದರೆ ಇವತ್ತಿನ ಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಗಿರುವ ಪವರ್ ಕಾಂಗ್ರೆಸ್ ಹೈಕಮಾಂಡ್ ಗಿಲ್ಲ. ಬಿಜೆಪಿ ಹೈಕಮಾಂಡ್ ಈಗ ದಿಲ್ಲಿ ಗದ್ದುಗೆಯಲ್ಲಿ ಕೂತಿದೆ. ಹಾಗೆಯೇ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಸ್ಥಿತಿ ಹಾಗಿಲ್ಲವಲ್ಲ?

ಸ್ವಯಂಬಲದ ಮೇಲೆ ಗೆಲ್ಲುವುದು ಅನಿವಾರ್ಯ

ಸ್ವಯಂಬಲದ ಮೇಲೆ ಗೆಲ್ಲುವುದು ಅನಿವಾರ್ಯ

ಎಲ್ಲಕ್ಕಿಂತ ಮುಖ್ಯವಾಗಿ ಈ ವರ್ಷದ ಅಂತ್ಯದ ವೇಳೆಗೆ ನಡೆಯುವ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಘಡ ವಿಧಾನಸಭಾ ಚುನಾವಣೆಯ ವೇಳೆಗೆ ಕೈ ಕಸುವು ಹೆಚ್ಚಾಗಬೇಕೆಂದರೆ ಕರ್ನಾಟಕದಲ್ಲಿ ಪಕ್ಷ ಸ್ವಯಂಬಲದ ಮೇಲೆ ಗೆಲ್ಲುವುದು ಅನಿವಾರ್ಯ ಎಂಬುದು ಕಾಂಗ್ರೆಸ್ ಹೈಕಮಾಂಡ್ ಗೆ ಗೊತ್ತಿದೆ. ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳು ತನ್ನ ಪಾಲಿಗೆ ಯುದ್ಧ ನೆಲೆಯಾಗಿ ಪರಿವರ್ತನೆಯಾಗಬೇಕು. ಇಲ್ಲದಿದ್ದರೆ ಮೋದಿ ಅವರನ್ನು ಎದುರಿಸುವುದು ಕಷ್ಟ ಅನ್ನುವುದು ಕಾಂಗ್ರೆಸ್ ಹೈಕಮಾಂಡ್ ಗೆ ಅರ್ಥವಾಗಿದೆ.

ಸಿದ್ದರಾಮಯ್ಯ ಚಾಮುಂಡೇಶ್ವರಿ ಸ್ಪರ್ಧೆಗೆ ಹೈಕಮಾಂಡ್ ವಿರೋಧ

ರಾಹುಲ್ ಕೈಕಸುವು ಕಡಿಮೆಯಾಗಿದ್ದರ ಸಂಕೇತವೆ?

ರಾಹುಲ್ ಕೈಕಸುವು ಕಡಿಮೆಯಾಗಿದ್ದರ ಸಂಕೇತವೆ?

ಇದು ಗೊತ್ತಿರುವುದರಿಂದಲೇ ಕರ್ನಾಟಕದ ಇತ್ತೀಚಿನ ಇತಿಹಾಸದಲ್ಲಿ ಮೊದಲ ಬಾರಿ ಅದು ಸಿಎಂ ಕ್ಯಾಂಡಿಡೇಟ್ ಯಾರು ಅಂತ ಘೋಷಿಸಿದೆ. ಆ ಮೂಲಕ ತಾನೇ ಪೋಷಿಸಿಕೊಂಡು ಬಂದಿದ್ದ ಲಕೋಟೆ ಸಂಸ್ಕೃತಿಯನ್ನು ಬದಿಗೊತ್ತಿ, ಆನ್ ಲೈನ್ ಸಂಸ್ಕೃತಿಗೆ ಕಾಲಿಟ್ಟಿದೆ.

ಇದರ ಲಾಭವನ್ನು ಸಿದ್ದರಾಮಯ್ಯ ನಿರಾಯಾಸವಾಗಿ ಗಳಿಸಿದ್ದಾರೆ. ತಮ್ಮನ್ನು ಚುನಾವಣೆಯ ಕಣದಲ್ಲಿ ಯಾರಾದರೂ ವಿರೋಧಿಸಿದರೆ ಅವರಿಗೆ ಪಾಠ ಕಲಿಸುವ ಶಕ್ತಿ ತಮಗಿದೆ ಎಂದು ಪರೋಕ್ಷವಾಗಿ ಸಿಗ್ನಲ್ ರವಾನಿಸಿದ್ದಾರೆ. ಅದು ಹೈಕಮಾಂಡ್ ಗೂ ಮನದಟ್ಟಾಗುವಂತೆ ಮಾಡಿದ್ದಾರೆ.

ಹೀಗಾಗಿ ಮುಂದಿನ ಸಿಎಂ ಕ್ಯಾಂಡಿಡೇಟ್ ಸಿದ್ದರಾಮಯ್ಯ ಎಂದು ಘೋಷಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ನಡೆ ಕೈ ಕಸುವು ಕಡಿಮೆಯಾಗಿದೆ ಎಂಬುದರ ಸಂಕೇತವಾಗಿರುವಂತೆ ಕಂಡರೂ, ತನ್ನ ಸಂಸ್ಕೃತಿಯನ್ನು ಬದಲಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂಬುದು ಅದಕ್ಕೆ ಅರಿವಾಗಿದೆ ಎಂಬುದರ ಸಂಕೇತವೂ ಹೌದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is announcement of Siddu's name for CM post set back for Congress? Many political pandits are saying, Congress by breaking the tradition of announcing chief minister's name through cover, the party has weakened itself. But, Siddaramaiah has his own strategies to retain his seat. Political analysis by Vittal Murthy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more