ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಿಗಳ ಶುಶ್ರೂಷೆಯಲ್ಲಿರುವ ದಾದಿಯರಿಗೊಂದು ಸಲ್ಯೂಟ್

By ಬಿ.ಎಂ.ಲವಕುಮಾರ್
|
Google Oneindia Kannada News

ಪ್ರತಿ ವರ್ಷವೂ ಮೇ 12 ಅನ್ನು ವಿಶ್ವ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಾ ಬರಲಾಗುತ್ತಿದೆ. ಇದುವರೆಗಿನ ಆಚರಣೆಗಳಿಗೆ ಹೋಲಿಸಿದರೆ ಈ ಬಾರಿಯ ಆಚರಣೆಗೆ ಹೆಚ್ಚಿನ ಪ್ರಾಮುಖ್ಯ ಸಿಕ್ಕಿದೆ ಮತ್ತು ದಾದಿಯರ ಸೇವೆ ಏನೆಂಬುದು ಜನ ಸಾಮಾನ್ಯರಿಗೆ ಅರ್ಥವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Recommended Video

ಇಂದಿನಿಂದ ರೈಲ್ವೇ ಸಂಚಾರ ಪ್ರಾರಂಭ , ಹಾಗಂತ ಎಲ್ಲಾ ರೈಲುಗಳು ಓಡಾಡೋದಿಲ್ಲ | Railways | Oneindia Kannada

ನಾವೆಲ್ಲರೂ ಆಸ್ಪತ್ರೆಗೆ ಹೋಗುತ್ತೇವೆ. ಅಲ್ಲಿ ವೈದ್ಯರನ್ನು ಭೇಟಿ ಮಾಡುತ್ತೇವೆ. ವೈದ್ಯರು ಒಂದಷ್ಟು ಸಲಹೆಗಳನ್ನು ದಾದಿಯರಿಗೆ ಹೇಳುತ್ತಾರೆ. ಅವರು ಅದರಂತೆ ಮಾಡುತ್ತಿರುತ್ತಾರೆ. ವಾರ್ಡ್ ‌ಗಳಲ್ಲಿ ಮಲಗಿರುವ ರೋಗಿಗಳಿಗೆ ಸಮಯಕ್ಕೆ ತಕ್ಕಂತೆ ಔಷಧಿ ನೀಡುತ್ತಾ ಅವರ ಶುಶ್ರೂಷೆಯಲ್ಲಿ ತೊಡಗಿಸಿಕೊಳ್ಳುವ ದಾದಿಯರು ಕೇವಲ ದಾದಿಯರಾಗಿಯಷ್ಟೆ ಕಾಣುತ್ತಾರೆ. ಆದರೆ ಅವರ ಹಿಂದಿನ ಶ್ರಮಗಳು ನಮಗೆ ಅರ್ಥವೇ ಆಗುವುದಿಲ್ಲ. ಅವರಿಗೂ ಒಂದು ಸಂಸಾರವಿದೆ. ಅವರ ಬದುಕು ಮತ್ತು ಕೆಲಸದ ಕುರಿತಂತೆ ಸಾಹಿತಿ ಜಯಂತ ಕಾಯ್ಕಿಣಿ ಅವರು ತಮ್ಮ ಬರಹದಲ್ಲಿ ಎಷ್ಟು ಸೊಗಸಾಗಿ ವರ್ಣಿಸಿದ್ದಾರೆ ಗೊತ್ತಾ?

ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ? ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?

 ದಾದಿಯರ ಕುರಿತಂತೆ ಜಯಂತ ಕಾಯ್ಕಿಣಿ ಹೇಳಿದ್ದು...

ದಾದಿಯರ ಕುರಿತಂತೆ ಜಯಂತ ಕಾಯ್ಕಿಣಿ ಹೇಳಿದ್ದು...

ಡಾಕ್ಟರ್ ಬಂದಾಗ ಆಕೆ ಹಿಂದೆ ಆಜ್ಞಾಧಾರಕಳಂತೆ, ಆಪರೇಷನ್ ಥೇಟರುಗಳಲ್ಲಿ ಸಮಯ ಪ್ರಜ್ಞೆಯ ಚುರುಕು ಸಹಾಯಕಿಯಂತೆ, ಹಟಮಾರಿ ರೋಗಿಗಳ ಎದುರು ಕಟು ಶಿಕ್ಷಕಿಯಂತೆ, ಬೈಪಾಸ್ ಸರ್ಜರಿ ಆದವರನ್ನು ಅಮೃತಶಿಲೆಯ ವಾರ್ಡುಗಳಲ್ಲಿ ಪ್ರಶಾಂತವಾಗಿ ನಡೆಸುತ್ತಿರುತ್ತಾಳೆ. ಕೆಮೋಥೆರಪಿಯಲ್ಲಿ ಜೀವದ ಬೆಳಕನ್ನೇ ಕಳೆದುಕೊಳ್ಳುತ್ತಿರುವ ಕ್ಯಾನ್ಸರ್ ವಾರ್ಡಿನ ಮಕ್ಕಳ ಜತೆ ಆಡುತ್ತಿರುತ್ತಾಳೆ. ನಂತರ ತನ್ನ ಡ್ಯೂಟಿ ಮುಗಿದಿದ್ದೇ ತನ್ನ ಗರಿಗರಿ ಬೆಳ್ಳನೆ ಉಡುಪು ಬದಲಿಸಿ ಸೀರೆ, ಸಲ್ವಾರಿನಲ್ಲಿ ಓಡೋಡುತ್ತಾ ಇದೇ ಸಂತೆಯಲ್ಲಿ ಸೇರಿಕೊಂಡು ತನ್ನ ಬಸ್ ಹಿಡಿಯುತ್ತಾಳೆ. ಅವಳಿಗೂ ಅವಳದೇ ಸಂಸಾರವಿದೆ. ಕಾಯುವ ಮಕ್ಕಳಿದ್ದಾರೆ. ಎಂಥ ಕಾಯಿಲೆಗೂ ಪುಕ್ಕಟೆ ಸಲಹೆಗಾಗಿ ಅರಸಿಕೊಂಡು ಬರುವ ಸಂಬಂಧಿಕರಿದ್ದಾರೆ.

ದಾದಿಯ ಬಗ್ಗೆ ಸಣ್ಣಗಿನ ಅನುಕಂಪ ಮೂಡೋದಕ್ಕೆ ಇದಿಷ್ಟು ಓದಿ ಬಿಟ್ಟರೆ ಸಾಕು. ಅದೆಷ್ಟೋ ಬಾರಿ ಆಸ್ಪತ್ರೆಯಲ್ಲಿ ಗದರಿದ ದಾದಿ ನಮಗೆ ಕೋಪ ತರಿಸಿರುತ್ತಾಳೆ. ಆದರೂ ಆಕೆಯ ಸೇವೆ ಕೃತಜ್ಞತಾ ಭಾವ ಕಣ್ಣೀರು ತರಿಸಿರುತ್ತದೆ. ದಾದಿಯರ ಕರ್ತವ್ಯ ಒಂದೇ ಆಗಿದ್ದರೂ ಅದರ ಹಿಂದಿನ ವ್ಯಕ್ತಿತ್ವದಲ್ಲಿ ಒಂದಿಷ್ಟು ಬದಲಾವಣೆಗಳು ಇದ್ದೇ ಇರುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಇಡೀ ದೇಶ ಕೊರೊನಾದ ಭಯದಲ್ಲಿ ನರಳುತ್ತಿದ್ದರೆ, ಅತ್ತ ತಮ್ಮ ಮಕ್ಕಳು, ಗಂಡ, ಸಂಸಾರ ಮಾತ್ರವಲ್ಲ ಜೀವದ ಹಂಗನ್ನೇ ತೊರೆದು ರೋಗಿಗಳ ಸೇವೆಯಲ್ಲಿ ತೊಡಗಿರುವ ದಾದಿಯರನ್ನು ನೋಡಿದ ಮೇಲೆ ಅವರಿಗೊಂದು ಕೃತಜ್ಞತೆ ಸಲ್ಲಿಸಬೇಕೆನಿಸಿದ್ದು ನಿಜ.

 ದಾದಿಯರ ಸೇವೆಗೊಂದು ಗೌರವ ಸಲ್ಲಿಕೆ

ದಾದಿಯರ ಸೇವೆಗೊಂದು ಗೌರವ ಸಲ್ಲಿಕೆ

ಮನೆಯವರೇ ಸೇವೆ ಮಾಡಲು ಹಿಂಜರಿಯುವ ಸಮಯದಲ್ಲಿ ರೋಗಿಗಳ ಸೇವೆ ಮಾಡುತ್ತಾ ಅದರಲ್ಲೇ ಬದುಕನ್ನು ಕಟ್ಟಿಕೊಂಡಿರುವ ದಾದಿಯರಿಗೊಂದು ದಿನವನ್ನು ಮೀಸಲಿಡುವ ಮೂಲಕ ಇವತ್ತು ವಿಶ್ವದಾದ್ಯಂತ ಅವರ ಕಾರ್ಯ, ಸೇವೆಗೆ ಗೌರವ ಸಲ್ಲಿಸಲಾಗುತ್ತಿದೆ. ಇನ್ನು ದಾದಿಯರ ದಿನಾಚರಣೆ ಕುರಿತಂತೆ ಒಂದಷ್ಟು ಮಾಹಿತಿ ಕಲೆ ಹಾಕುತ್ತಾ ಹೋದರೆ, 1965ರಲ್ಲಿ ಮೊದಲ ಬಾರಿಗೆ ದಾದಿಯರ ದಿನವನ್ನು ಆಚರಿಸಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಮೇ 12ರಂದು ಆಚರಣೆ ಮಾಡುತ್ತಾ ಬರಲಾಗುತ್ತಿದೆ.

ದಾದಿಯರ ಬಗ್ಗೆ ಮಾತನಾಡುವಾಗಲೆಲ್ಲ ನಮಗೆ ಮೊದಲಿಗೆ ನೆನಪಾಗುವುದೇ ಫ್ಲಾರೆನ್ಸ್ ನೈಟಿಂಗೇಲ್. ರಾತ್ರಿ ವೇಳೆ ಯುದ್ಧ ಭೂಮಿಯಲ್ಲಿ ಕತ್ತಲಿನ ಮಧ್ಯೆ ಕಂದೀಲು ಹಿಡಿದು ಗಾಯಗೊಂಡ ಸೈನಿಕರ ಸೇವೆ ಮಾಡಿದ ಮಹಾಮಹಿಳೆ. (ಇವರನ್ನು ಲೇಡಿ ವಿತ್ ಲ್ಯಾಂಪ್ ಎಂದೇ ಕರೆಯಲಾಗುತ್ತಿದೆ) ಅಲ್ಲಿ ತನಕ ದಾದಿಯರೆಂದರೆ ಸೇವಕರು ಎಂಬಂತೆ ನೋಡುತ್ತಿದ್ದ ಜನಕ್ಕೆ ದಾದಿಯರು ಎಂದರೇನು ಎಂಬುದನ್ನು ನೈಟಿಂಗೇಲ್ ತೋರಿಸಿಕೊಟ್ಟರು. ನುರಿತ ದಾದಿಯರ ತಂಡದ ಮುಂದಾಳತ್ವ ವಹಿಸುವ ಮೂಲಕ ನಿಸ್ವಾರ್ಥ ಸೇವೆ ಮಾಡಿ ಇಡೀ ವಿಕ್ಟೋರಿಯಾ ಸಂಸ್ಥಾನದಲ್ಲಿ ದಾದಿಯರಿಗೆ ವಿಶೇಷ ಸ್ಥಾನಮಾನ ತಂದುಕೊಟ್ಟರು.

ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?

 ದಾದಿಯರಿಗೆ ಘನತೆ ತಂದ ನೈಟಿಂಗೇಲ್

ದಾದಿಯರಿಗೆ ಘನತೆ ತಂದ ನೈಟಿಂಗೇಲ್

ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ್ದು 1820ರ ಮೇ 12ರಂದು. ಈಗಿನ ಇಟಲಿಯ ಫ್ಲಾರೆನ್ಸ್ ನಗರದಲ್ಲಿ. ಇವರದು ಶ್ರೀಮಂತ ಕುಟುಂಬವಾಗಿದ್ದರೂ ನೈಂಟಿಗೇಲ್ ಅವರಿಗೆ ಸಮಾಜಸೇವೆಯಲ್ಲಿ, ರೋಗಿಗಳ ಶುಶ್ರೂಷೆ ಮಾಡುವುದರಲ್ಲಿ ಆಸಕ್ತಿ. ನೈಟಿಂಗೇಲ್ ಹುಟ್ಟಿದ ಮಾರನೇ ವರ್ಷವೇ ಅವರ ಕುಟುಂಬ ಇಂಗ್ಲೆಂಡ್‌ಗೆ ಬಂದು ನೆಲೆಸಿತು. ಶ್ರೀಮಂತ ಕುಟುಂಬವಾಗಿದ್ದರಿಂದ ನೈಟಿಂಗೇಲ್ ಯಾವುದೇ ಕೆಲಸ ಮಾಡುವ ಅಗತ್ಯವಿರಲಿಲ್ಲ. ಆದರೆ ಸೇವೆಯತ್ತಲೇ ತುಡಿಯುತ್ತಿದ್ದ ನೈಟಿಂಗೇಲ್ ಸುಮ್ಮನಿರಲಿಲ್ಲ. ಕುಟುಂಬ ವಿರೋಧಿಸಿದರೂ ಅವರು ಅದಕ್ಕೆ ಸೊಪ್ಪು ಹಾಕದೆ 1844ರಲ್ಲಿ ನರ್ಸಿಂಗ್ ಕಲಿಯಲು ಆರಂಭಿಸಿದರು. ಆ ನಂತರ ಕ್ರಿಮಿನ್ ಯುದ್ಧದ ಸಮಯದಲ್ಲಿ ನುರಿತ ದಾದಿಯರ ತಂಡದ ನಾಯಕತ್ವ ವಹಿಸಿಕೊಂಡು ಯೋಧರ ಸೇವೆಗೆ ಮುಂದಾಗಿ ಅವರ ಕಣ್ಣೀರು ಒರೆಸುವ ಕೆಲಸಕ್ಕೆ ಟೊಂಕ ಕಟ್ಟಿ ನಿಂತು ಬಿಟ್ಟರು. ಸದಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿಸಿಕೊಂಡಿದ್ದ ಅವರು 1910 ಆಗಸ್ಟ್ 13ರಂದು ದೈವಾಧೀನರಾದರು.

 ರೋಗಿಯ ಸೇವೆಯಲ್ಲಿರುವ ದಾದಿಯರ ಗೌರವಿಸೋಣ

ರೋಗಿಯ ಸೇವೆಯಲ್ಲಿರುವ ದಾದಿಯರ ಗೌರವಿಸೋಣ

ಲಂಡನ್‌ನ ಸೆಂಟ್ ಥಾಮಸ್ ಆಸ್ಪತ್ರೆಯಲ್ಲಿ ನೈಟಿಂಗೇಲ್ ಅವರ ಹೆಸರಿನಲ್ಲಿ 1860ರಲ್ಲಿ ನರ್ಸಿಂಗ್ ಶಾಲೆಯನ್ನು ಆರಂಭಿಸಲಾಯಿತು. 1912ರಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಫ್ಲಾರೆನ್ಸ್ ನೈಟಿಂಗೇಲ್ ಪದಕವನ್ನು ವಿಶಿಷ್ಟ ಸೇವೆ ಸಲ್ಲಿಸುವ ದಾದಿಯರಿಗೆ ನೀಡಲು ಆರಂಭಿಸಿದೆ. ಭಾರತದಲ್ಲಿ 1973ರಿಂದ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪದಕ ಎಂಬುದಾಗಿ ರಾಷ್ಟ್ರಪತಿಗಳ ಪದಕಗಳನ್ನು ನೀಡಲಾಗುತ್ತಿದೆ.


ಇವತ್ತಿಗೂ ಯಾವುದೇ ಫಲಾಪೇಕ್ಷೆಗಳನ್ನು ಬಯಸದೆ ದುಡಿಯುವ ಅಸಂಖ್ಯ ದಾದಿಯರಿದ್ದಾರೆ. ತಮ್ಮ ಸೇವೆ ಏನೆಂಬುದನ್ನು ದಿಟ್ಟತನದಿಂದ ಕೊರೊನಾ ರೋಗಿಗಳ ಶುಶ್ರೂಷೆ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗದ್ದು ಆದರೂ ನಾವು ಅವರ ಸೇವೆಗೆ ಸಲ್ಲಿಸಬಹುದಾದ ಒಂದೇ ಒಂದು ಕೃತಜ್ಞತೆ ಎಂದರೆ ಅದು ಸೆಲ್ಯೂಟ್....

English summary
This time international nurse day is more meaningful as whole world came to know the service and sacrifice of nurses in this corona virus crisis time,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X