ದೇಶದ ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಜ್ ಬಗ್ಗೆ ಇಂಟ್ರಸ್ಟಿಂಗ್ ವಿಚಾರಗಳು
ಮಂಗಳೂರು, ಮಾರ್ಚ್ 17: ಕಾಲಬುಡಕ್ಕೆ ಕೋಟ್ಯಾಂತರ ರೂಪಾಯಿ ಹರಿದು ಬರುವ ವಿಪುಲ ಅವಕಾಶ ಇದ್ದರೂ ಆತ್ಮತೃಪ್ತಿಗೆ ಮಾಡಿದ ಕೆಲಸಕ್ಕೆ ದ್ರೋಹ ಬಗೆಯದೇ ನಿಸ್ವಾರ್ಥವಾಗಿ ಸೇವೆ ಮಾಡಿದ ದೇಶದ ತೂಗು ಸೇತುವೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ಸುಳ್ಯದ ಗಿರೀಶ್ ಭಾರದ್ವಾಜ್ ಅವರು ಯುವ ಜನರಿಗೆ ಆದರ್ಶ ಪ್ರಾಯರಾಗಿದ್ದಾರೆ.
2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ ಬಳಿಕವೂ ಯಾವುದೇ ಹಮ್ಮು ಬಿಮ್ಮಿಲ್ಲದೇ,'ಡೌನ್ ಟು ಅರ್ಥ್' ಎಂಬುವುದಕ್ಕೆ ಸಮಾನಾರ್ಥಕ ಪದ ಎಂಬತೇ ಇರುವ ಗಿರೀಶ್ ಭಾರಧ್ವಜ್ ಇಂದಿಗೂ ತೂಗುಸೇತುವೆಗಳ ಸರದಾರ ಎನಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರು ಸಮೀಪದ ಇಡ್ಯಡ್ಕ ಭಾರದ್ವಾಜಾಶ್ರಮ ನಿವಾಸಿಯಾಗಿರುವ ಬಲೆಕ್ಕಳ ಗಿರೀಶ್ ಭಾರದ್ವಾಜ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. 1975ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಸುಳ್ಯದಲ್ಲಿ ಆಯಶ್ಶಿಲ್ಪ ಎಂಬ ಎಂಜಿನಿಯರಿಂಗ್ ವರ್ಕ್ ಶಾಪ್ ತೆರೆದು ಕಾರ್ಯನಿರ್ವಹಿಸುತ್ತಿದ್ದ ಅವರು ಹಂತ ಹಂತವಾಗಿ ಸಾಧನೆ ಮಾಡಿ ಕ್ರಮೇಣ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಪ್ರಸಿದ್ಧಿಗೆ ಬಂದಿದ್ದರು.
ದೇಶದ ತೂಗು ಸೇತುವೆ ಸರದಾರ ಗಿರೀಶ್ ಭಾರಧ್ವಜ್
1989ರಲ್ಲಿ ಸುಳ್ಯದ ಅರಂಬೂರು ಸಮೀಪದಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಊರವರ ಸಹಕಾರದಿಂದ ಮೊದಲ ತೂಗು ಸೇತುವೆ ನಿರ್ಮಿಸಿದ ಅವರು ಮುಂದೆ ತೂಗು ಸೇತುವೆ ನಿರ್ಮಾಣವನ್ನೇ ತನ್ನ ಪ್ರಧಾನ ವೃತ್ತಿಯನ್ನಾಗಿಸಿ ದೇಶಾದ್ಯಂತ 142 ಯೋಜನೆಗಳನ್ನು ಕಾರ್ಯಗತಗೊಳಿಸಿ ಎರಡು ಊರುಗಳನ್ನು ಬೆಸೆಯುವ ಕೆಲಸ ಮಾಡಿ ತೂಗು ಸೇತುವೆಗಳ ಸರದಾರ ಎಂದೇ ಖ್ಯಾತಿ ಪಡೆದಿದ್ದಾರೆ.
ಸಂಪರ್ಕ ಇಲ್ಲದ ಊರಿನಲ್ಲಿ ಎರಡು ಊರುಗಳನ್ನು ಒಂದಾಗಿಸಿದ ಭಾರದ್ವಾಜ್ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಯತ್ನದಲ್ಲಿ ಅರಂಬೂರಿನಲ್ಲಿ ತೂಗು ಸೇತುವೆ ನಿರ್ಮಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದ ಅವರು ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಆಂಧ್ರಪ್ರದೇಶ,ಒಡಿಶಾ ಕೇರಳ, ಕರ್ನಾಟಕ ಸೇರಿದಂತೆ ಹಲವೆಡೆ ತೂಗುಸೇತುವೆಗಳನ್ನು ಗಿರೀಶ್ ಭಾರಧ್ವಜ್ ನಿರ್ಮಿಸಿದ್ದಾರೆ.

ಸದ್ಯ ವಿಶ್ರಾಂತ ಜೀವನ ನಡೆಸುತ್ತಿರುವ ಗಿರೀಶ್ ಭಾರಧ್ವಜ್ ಅವರು ಸುಳ್ಯದ ಮನೆಯಲ್ಲಿ ಹೈನುಗಾರಿಕೆ ಸೇರಿದಂತೆ ಕೃಷಿ ಕೆಲಸ ದಲ್ಲಿ ಮಗ್ನರಾಗಿದ್ದಾರೆ. ತನ್ನ ಮನೆಯ ಗೋವುಗಳಿಗೆ ಆದಿತ್ಯ, ಶಾರದೆ, ಪುಟ್ಟಲಕ್ಷ್ಮೀ, ಸೌಭಾಗ್ಯ, ಸೂರ್ಯ, ಶಂಭು, ಸಮೃದ್ಧಿ, ನಂದೀಶ, ಚಂಡಿಕೆ, ದೇವಿ, ಹನುಮಂತ, ಲಕ್ಷ್ಮೀ, ಪದ್ಮಶ್ರೀ ಎಂದು ಗಿರೀಶ್ ಭಾರಧ್ವಜ್ ಹೆಸರಿಟ್ಟಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದ ದಿನ ಪದ್ಮಶ್ರೀ ಹಸುವಿನ ಜನನವಾಗಿದ್ದು ಗಿರೀಶ್ ಭಾರಧ್ವಜ್ ಇಂದಿಗೂ ಆ ಹಸುವಿನ ಜೊತೆ ತುಂಬಾ ಒಡನಾಟವನ್ನು ಹೊಂದಿದ್ದಾರೆ.
1989ರಲ್ಲಿ ತೂಗು ಸೇತುವೆಯ ನಿರ್ಮಾಣದ ಅನುಭವವೇ ಇಲ್ಲದೇ ಮೊದಲ ಬಾರಿಗೆ ಪಯಸ್ವಿನಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಮಾಡಿದ್ದರು..ಸುಮಾರು ಮೂರುವರೆ ಸಾವಿರ ಜನರಿಗೆ ಆ ತೂಗು ಸೇತುವೆ ಸಂಪರ್ಕ ಕೊಂಡಿಯಾಗಿತ್ತು. 1989ರಲ್ಲಿ ಸೇತುವೆ ನಿರ್ಮಾಣ ಆದರೂ ಇಂದಿಗೂ ಆ ಸೇತುವೆ ಅದೇ ಸಾಮರ್ಥ್ಯ ಹಾಗೂ ಗಟ್ಟಿತನವನ್ನು ಹೊಂದಿದೆ.
25 ಕೋಟಿ ರೂಪಾಯಿ ಹಣ ನಿರಾಕರಿಸಿದ್ದ ಗಿರೀಶ್ ಭಾರಧ್ವಜ್
ಗ್ರಾಮಸ್ಥರೇ ಸೇರಿ ಆ ತೂಗು ಸೇತುವೆ ನಿರ್ಮಾಣ ಮಾಡಿದ್ದು, ಗಿರೀಶ್ ಭಾರಧ್ವಜ್ ಒಂದು ರೂಪಾಯಿಯನ್ನೂ ಗ್ರಾಮಸ್ಥರಿಂದ ಪಡೆಯದೇ ತೂಗು ಸೇತುವೆ ನಿರ್ಮಾಣದ ಹಿಂದಿನ ಶಕ್ತಿಯಾಗಿದ್ದು. ಆ ಕಾಲದಲ್ಲಿ ಸುಮಾರು ಒಂದೂವರೆ ಲಕ್ಷ ಮೆಟಲ್ ಚಾರ್ಜ್ ಆಗಿತ್ತು. ತೂಗು ಸೇತುವೆ ನಿರ್ಮಾಣವಾಗುವ ಮೊದಲು ಒಂದು ದೋಣಿಯನ್ನು ನದಿ ದಾಟಲು ಜನ ಬಳಸುತ್ತಿದ್ದರು. ಆದರೆ ಆ ದೋಣಿ ತೂತಾಗಿದ್ದರಿಂದ ಒಬ್ಬರು ದೋಣಿ ಒಳಗಿನ ನೀರು ಹೊರಗೆ ತೆಗೆಯಬೇಕಾಗಿತ್ತು. ಸಾಹಸಿ ಹುಡುಗರು ಮಳೆಗಾಲದ ಅಬ್ಬರದ ಪಯಸ್ವಿನಿ ನದಿಯಲ್ಲಿ ಜೀವ ಪಣಕ್ಕಿಟ್ಟು ಸೇತುವೆ ನಿರ್ಮಾಣಕ್ಕೆ ಹೆಗಲಾದರು ಎಂದು ಗಿರೀಶ್ ಭಾರಧ್ವಜ್ ಮೊದಲ ತೂಗುಸೇತುವೆಯ ನೆನಪನ್ನು ಹಂಚಿಕೊಂಡಿದ್ದಾರೆ.

ಗಿರೀಶ್ ಭಾರಧ್ವಜ್ ನಿರ್ಮಿಸಿದ ಯಾವ ಸೇತುವೆಯಲ್ಲೂ ಗುಣಮಟ್ಟದಲ್ಲಿ ಲೋಪ ಕಂಡುಬಂದಿಲ್ಲ ಅನ್ನೋದು ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂದಿನ ಭ್ರಷ್ಟ ಅಧಿಕಾರಿಗಳ ನಡುವೆ ಗಿರೀಶ್ ಅಂದು ಸರ್ಕಾರದಿಂದ ತಮಗೆ ನ್ಯಾಯಯುತವಾಗಿ ಸೇರಬಹುದಾಗಿದ್ದ 25 ಕೋಟಿ ರೂಪಾಯಿ ಹಣವನ್ನು ಸ್ವೀಕರಿಸದಿರುವುದು ಗಿರೀಶ್ ಭಾರಧ್ವಜ್ ಅವರ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿಯಾಗಿದೆ.












Click it and Unblock the Notifications