• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀವು ಸದ್ಗುಣಿಯಾದರೆ ಬದುಕು ಬಲು ಸುಂದರ..!

|

ಒಬ್ಬ ವ್ಯಕ್ತಿ ಸಿರಿತನ, ಅಧಿಕಾರ ಎಲ್ಲದರ ಜತೆಗೆ ಯಶಸ್ವಿ ಬದುಕನ್ನು ನಡೆಸುತ್ತಿದ್ದರೂ, ವೈಯಕ್ತಿಕವಾಗಿ ಅವನ ಗುಣದ ಬಗ್ಗೆ ಜನ ಮಾತನಾಡಿಯೇ ಮಾತನಾಡುತ್ತಾರೆ. ಅವನನ್ನು ಅವನ ಗುಣದಿಂದ ಅಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಸದ್ಗುಣಿಗಳಾಗಿರುವುದಿಲ್ಲ. ಅಧಿಕಾರ, ಹಣ ಬಹಳಷ್ಟು ಮಂದಿಯ ಗುಣವನ್ನೇ ನಾಶ ಮಾಡಿಬಿಡುತ್ತದೆ. ಆದರೂ ಸದ್ಗುಣ ಹೊಂದಿದ ವ್ಯಕ್ತಿಗಳು ಬೇಕಾದಷ್ಟು ಮಂದಿ ಸಿಗುತ್ತಾರೆ. ಮತ್ತು ಅವರ ಬಗ್ಗೆ ಜನ ಕೂಡ ಮಾತನಾಡುತ್ತಾರೆ.

ಹಾಗೆ ನೋಡಿದರೆ ಪ್ರತಿಯೊಬ್ಬ ವ್ಯಕ್ತಿಗೂ ಆತನದ್ದೇ ಆದಂತಹ ಒಂದು ಗುಣವಂತಿಕೆ ಇದ್ದೇ ಇರುತ್ತದೆ. ಅದು ಕೆಲವೊಮ್ಮೆ ಪಕ್ಕನೆ ಗೊತ್ತಾಗುವುದಿಲ್ಲವಾದರೂ, ಒಡನಾಟದಲ್ಲಿದ್ದವರಿಗೆ ಮಾತ್ರ ತಿಳಿಯುತ್ತದೆ. ಈ ಗುಣಗಳನ್ನು ಕೆಟ್ಟದು ಮತ್ತು ಒಳ್ಳೆಯದು ಎಂದು ಸುಲಭವಾಗಿ ವಿಂಗಡಿಸಿ ಹೇಳಬಹುದಾಗಿದೆ.

ಬದುಕು ಮೂರಾಬಟ್ಟೆ ಆಗೋದಕ್ಕೆ ಒಂದೇ ಒಂದು ಪೆಗ್ ಸಾಕು!

ನಮ್ಮಲ್ಲಿ ಎರಡು ಬಗೆಯ ಗುಣಗಳಿವೆ

ನಮ್ಮಲ್ಲಿ ಎರಡು ಬಗೆಯ ಗುಣಗಳಿವೆ

ಹೆಚ್ಚಿನ ಸಂದರ್ಭಗಳಲ್ಲಿ ನಾವು ಒಬ್ಬರನ್ನು ಮತ್ತೊಬ್ಬರಿಗೆ ಪರಿಚಯಿಸುವಾಗ ಅವರು ಮಾಡುವ ಕೆಲಸ, ಕುಟುಂಬದ ಹಿನ್ನಲೆ ಎಲ್ಲವನ್ನೂ ಹೇಳಿದ ಬಳಿಕ ಕೊನೆಯಲ್ಲಿ ಗುಣದ ಬಗ್ಗೆಯೂ ಹೇಳಲು ಮರೆಯುವುದಿಲ್ಲ. ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಒಳ್ಳೆಯ ಗುಣ ಇಲ್ಲದೆ ಹೋದರೆ, ಆ ಸ್ಥಾನಕ್ಕೆ ಘನತೆ ತಂದುಕೊಡಲು ಸಾಧ್ಯವಿಲ್ಲ. ಹೀಗಾಗಿಯೇ ತಮ್ಮೊಡನೆ ಬಂದ ಕೆಟ್ಟಗುಣಗಳನ್ನು ಕಟ್ಟಿಕೊಂಡು ಮುನ್ನಡೆಯುವ ಕೆಲವು ವ್ಯಕ್ತಿಗಳು ಘನತೆ ಗೌರವದ ಸ್ಥಾನಕ್ಕೇರಿದರೂ ಕೆಲವೊಮ್ಮೆ ಕುಂದು ತಂದುಕೊಂಡು ಬಿಡುತ್ತಾರೆ. ಇದಕ್ಕೆ ಪೂರಕವಾಗಿ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ.

ಹುಟ್ಟುಗುಣಗಳು ಸುಲಭವಾಗಿ ಹೋಗುವುದಿಲ್ಲ

ಹುಟ್ಟುಗುಣಗಳು ಸುಲಭವಾಗಿ ಹೋಗುವುದಿಲ್ಲ

ಗುಣದ ವಿಚಾರಕ್ಕೆ ಬಂದಾಗಲೆಲ್ಲಾ ನಾಯಿ ಬಾಲ ಡೊಂಕು, ತಿಪ್ಪೆಯಲ್ಲಿದ್ದ ನೊಣವನ್ನು ಉಪ್ಪರಿಕೆಯಲ್ಲಿ ಕೂರಿಸಿದರೂ ಪ್ರಯೋಜನವಿಲ್ಲ. ಅದು ತಿಪ್ಪೆ ಕಂಡಲ್ಲಿ ಹಾರುತ್ತೆ ಎಂಬಂತಹ ಮಾತುಗಳನ್ನು ಕೇಳಿರುತ್ತೇವೆ. ಇಂತಹ ಮಾತುಗಳೇಕೆ ನಮ್ಮ ನಡುವೆ ಇದೆ ಎಂದರೆ ಹುಟ್ಟುವಾಗ ಬಂದಂತಹ ಕೆಲವು ಗುಣಗಳೇ ಹಾಗೆ ಅವು ನಮ್ಮನ್ನು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಆದರೆ ನಮ್ಮೊಳಗೆ ಒಂದು ಒಳ್ಳೆಗುಣ ಇಲ್ಲದೆ ಹೋದರೆ ಬದುಕು ಕಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಘನತೆ ಗೌರವದಿಂದ ನಡೆದುಕೊಳ್ಳಬೇಕು

ಘನತೆ ಗೌರವದಿಂದ ನಡೆದುಕೊಳ್ಳಬೇಕು

ಸುಭಾಷಿತವೊಂದರಲ್ಲಿ ಹೀಗೆಯೇ ಹೇಳಲಾಗಿದೆ. ಮನುಷ್ಯನು ಗುಣಗಳಿಂದಲೇ ಉನ್ನತಿಯನ್ನು ಹೊಂದುತ್ತಾನೆ ಹೊರತು, ಉನ್ನತ ಸ್ಥಾನದಿಂದಲ್ಲ. ಕಾಗೆ ಭವ್ಯಭವನದ ಶಿಖರದ ತುದಿಯಲ್ಲಿ ಕುಳಿತ ಮಾತ್ರಕ್ಕೆ ಅದು ಗರುಡನಾಗುವುದಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲವರು ತಮಗೆ ಯೋಗ್ಯತೆಯಿಲ್ಲದ ಸ್ಥಾನಗಳನ್ನು ವಾಮಮಾರ್ಗದಲ್ಲಿ ಪಡೆದು, ನಂತರ ಆ ಸ್ಥಾನದ ಘನತೆ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳದೆ ಚ್ಯುತಿ ತಂದುಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಿಂದ ಆ ಸ್ಥಾನಕ್ಕೂ ಅಪಚಾರವಾಗಿ ಬಿಡುತ್ತದೆ.

ಆದಷ್ಟು ಸಜ್ಜನರ ಸಂಗ ಮಾಡಿ

ಆದಷ್ಟು ಸಜ್ಜನರ ಸಂಗ ಮಾಡಿ

ನಾವು ಪ್ರತಿಯೊಬ್ಬರಲ್ಲೂ ಸದ್ಗುಣಗಳನ್ನು ಹುಡುಕುತ್ತೇವೆ. ಅಂಥವರ ಸಂಘವನ್ನು ಮಾಡುತ್ತೇವೆ. ನಮಗೆ ನಮ್ಮ ಒಡನಾಟದಲ್ಲಿರುವಾತನ ದುರ್ಗುಣ ತಿಳಿದ ತಕ್ಷಣ ದೂರ ಸರಿದು ಬಿಡುತ್ತೇವೆ. ಇದಕ್ಕಾಗಿಯೇ ಸಜ್ಜನರ ಸಂಗ ಜೇನು ಸವಿದಂತೆ. ದುರ್ಜನರ ಸಂಘ ಜೇನು ಕಡಿದಂತೆ ಎಂದು ಹೇಳಲಾಗಿದೆ. ದುರ್ಜನರಿಂದ ದೂರವಿದ್ದಷ್ಟು ಒಳಿತು ಎಂಬುದನ್ನು ನಾವು ಮನಗಾಣಬೇಕಾಗಿದೆ. ಈ ಭೂಮಿ ಮೇಲೆ ಹುಟ್ಟಿ ಬದುಕಿ ಕಾಲವಾದ ಹಲವು ಗಣ್ಯರನ್ನು ಸ್ಮರಿಸುತ್ತೇವೆ. ಅಂತಹ ಸಂದರ್ಭದಲ್ಲಿ ಅವರು ಮಾಡಿದ ಕಾರ್ಯಗಳೊಂದಿಗೆ ಅವರ ಗುಣಗಾನ ಮಾಡುತ್ತೇವೆ. ಅವರಲ್ಲೊಂದು ಒಳ್ಳೆಗುಣ ಇಲ್ಲದೆ ಹೋಗಿದ್ದರೆ ನಾವ್ಯಾರು ಅವರನ್ನು ಸ್ಮರಿಸುತ್ತಲೇ ಇರಲಿಲ್ಲ. ಮನುಷ್ಯನಿಗೆ ಭೂಷಣವಾಗುವುದು ಅವರಲ್ಲಿದ್ದ ಒಳ್ಳೆಯಗುಣಗಳು ಎಂಬುದಂತು ಸತ್ಯ.

ಸದ್ಗುಣಿ ಸದಾ ಫಲಬಿಟ್ಟ ಗಿಡ ಬಳ್ಳಿಯಂತೆ!

ಸದ್ಗುಣಿ ಸದಾ ಫಲಬಿಟ್ಟ ಗಿಡ ಬಳ್ಳಿಯಂತೆ!

ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಗುಣವಿರುವುದರಿಂದಲೇ ಅವರನ್ನು ಮತ್ತು ಅವರ ವ್ಯಕ್ತಿತ್ವವನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ. ಸದ್ಗುಣವಂತನನ್ನು ಫಲಬಿಟ್ಟ ಗಿಡ, ಬಳ್ಳಿಗೆ ಹೋಲಿಸಲಾಗಿದೆ. ಏಕೆಂದರೆ ಫಲಬಿಟ್ಟ ಗಿಡ, ಬಳ್ಳಿ ಭೂಮಿಯತ್ತ ಬಾಗುತ್ತಲೇ ಹೋಗುತ್ತದೆ. ಹಾಗೆಯೇ ಸದ್ಗುಣಿಯು ಕೂಡ ತನ್ನಲ್ಲಿರುವ ಅಹಂ ತ್ಯಜಿಸಿ ತಲೆಬಾಗುತ್ತಲೇ ಹೋಗುತ್ತಾನೆ. ನಮ್ಮೆಲ್ಲ ಸದ್ಗುಣಗಳೊಂದಿಗೆ ಪರೋಪಕಾರದ ಗುಣವೂ ಸೇರಿದರೆ ಆತ ತುಂಬಿದ ಕೊಡವಾಗುತ್ತಾನಂತೆ. ಅದು ಏನೇ ಇರಲಿ ನಮ್ಮಲ್ಲಿರುವ ಗುಣ ಒಂದೊಳ್ಳೆಯ ಗುಣವಾಗಿದ್ದರೆ ಸಾಕು. ಅದಕ್ಕಿಂತ ಮಿಗಿಲಾದದ್ದು ಬೇರೇನು ಇಲ್ಲ.

English summary
Although a person lives a successful life, people talk about him personally. He is measured by his quality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X