Sunday Holiday: ಭಾರತದಲ್ಲಿ ಭಾನುವಾರ ರಜೆ ಬಂದಿದ್ದು ಹೇಗೆ? ಯಾವಾಗ? ಯಾರಿಂದ?
ಹೀಗೆ ಒಂದು ಬಾರಿ ಯೋಚಿಸಿ. ನಮಗೆಲ್ಲಾ ವಾರದಲ್ಲಿ ಒಂದು ದಿನ ರಜೆ ಇಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು? ವಾರದ ಏಳೂ ದಿನವೂ ದುಡ್ಡಿಯುತ್ತಿದ್ದರೆ ನಾವೆಲ್ಲಾ ಏನಾಗ್ತಿದ್ವಿ? ನಮ್ಮ ಆರೋಗ್ಯ? ನಮ್ಮ ಮಾನಸಿಕ ಸ್ಥಿತಿ? ನಮ್ಮ ಕುಟುಂಬ? ಇದೆಲ್ಲಾ ಏನಾಗುತ್ತಿತ್ತು ಅನ್ನೋದನ್ನು ಊಹಿಸಿಕೊಳ್ಳಿ. ಪ್ರಸ್ತುತ ಇದನ್ನ ನಾವು ಕಲ್ಪನೆ ಮಾಡಿಕೊಳ್ಳುವುದು ಕೂಡ ಕಷ್ಟ. ವಾರವಿಡೀ ಕೆಲಸ ಮಾಡಿ ಒಂದು ದಿನ ವಿಶ್ರಾಂತಿ ಇಲ್ಲದೆ ಇದ್ದರೆ ಕೆಲಸದಲ್ಲಿ ಆಸಕ್ತಿ ಮಾತ್ರವಲ್ಲ ಆರೋಗ್ಯ ಕೂಡ ಹಾಳಾಗಿ ಹೋಗುತ್ತದೆ. ಹಾಗಾದರೆ ವಾರದಲ್ಲಿ ಒಂದು ದಿನ ರಜೆ ಬೇಕು ಅಂತ ಮೊದಲು ಯೋಚನೆಮಾಡಿದ್ದು ಯಾರು? ಭಾರತದಲ್ಲಿ ವಾರದಲ್ಲಿ ಒಂದು ದಿನ ರಜೆ ಬಂದಿದ್ದು ಹೇಗೆ?
ಭಾರತದಲ್ಲಿ ತುಂಬಾ ಜನರಿಗೆ ಭಾನುವಾರ ರಜೆ ಇರುತ್ತದೆ. ಸರ್ಕಾರಿ ನೌಕರರಿಗೆ, ಖಾಸಗಿ ಕಂಪನಿಗಳಿಗೆ, ಉದ್ಯಮಿಗಳಿಗೆ, ಶಾಲಾ-ಕಾಲೇಜುಗಳಿಗೆ ಎಲ್ಲದಕ್ಕೂ ರಜೆ ಇರುತ್ತದೆ. ಬಹುತೇಕ ಜನ ಭಾನುವಾರದಂದು ಕೆಲಸದಿಂದ ಬಿಡುವು ಪಡೆದು ವಿಶ್ರಾಂತಿ ಪಡೆಯುತ್ತಾರೆ. ಕೆಲವರು ಕುಟುಂಬಸ್ಥರೊಂದಿಗೆ ಕಾಲ ಕಳೆದು ಕೆಲ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಹೀಗೆ ಭಾನುವಾರ ಪ್ರತಿಯೊಬ್ಬರಿಗೂ ರಜೆ ಪಡೆಯಲು ಸಾಧ್ಯವಾಗಿದ್ದು ಹೇಗೆ? ಭಾನುವಾರವೇ ರಜೆ ಯಾಕೆ ಬಂತು? ಭಾನುವಾರ ರಜೆ ಹೇಗೆ ಬಂತು? ಭಾನುವಾರ ರಜೆ ಕೊಡಿಸಿದವರು ಯಾರು?

ಭಾರತದಲ್ಲಿ ಭಾನುವಾರ ರಜೆ ಬಗ್ಗೆ ಚಿಂತನೆ
ಭಾರತಕ್ಕೆ ಭಾನುವಾರ ರಜೆ ಬಂದಿದ್ದರ ಹಿಂದೆ ಒಂದು ಕಥೆ ಇದೆ. ಭಾರತದಲ್ಲಿ ಮೊದಲ ಬಾರಿಗೆ ಭಾನುವಾರ ರಜೆ ಬಗ್ಗೆ ಚಿಂತನೆ ಮಾಡಿದವರು ಹಾಗೂ ಅದನ್ನು ಭಾರತೀಯ ಉದ್ಯೋಗಿಗಳಿಗೆ ಕೊಡಿಸಿದವರು ನಾರಾಯಣ ಮೇಘಾಜಿ ಲೋಖಂಡೆ (Narayan Meghaji Lokhande) ಅವರು. ಹಿಂದೆ ಬ್ರಿಟಿಷರ್ ಆಳ್ವಿಕೆ ಇದ್ದಾಗ ಸಾಕಷ್ಟು ಮಿಲ್‌ಗಳನ್ನು ತೆಗೆಯಲಾಗಿತ್ತು. ಬ್ರಿಟಿಷರ್ ಈ ಮಿಲ್‌ಗಳಲ್ಲಿ ಭಾರತೀಯರನ್ನು ಕೆಲಸಕ್ಕೆ ಇಟ್ಟುಕೊಂಡು ಕತ್ತೆಗಳ ಹಾಗೆ ವಾರದ ಏಳೂ ದಿನ ದುಡಿಸಿಕೊಳ್ಳುತ್ತಿದ್ದರು.
ಇದನ್ನು ಗಮನಿಸಿದ ನಾರಾಯಣ ಮೇಘಾಜಿ ಲೋಖಂಡೆ ಅವರು ಭಾರತೀಯರನ್ನು ವಾರದ ಏಳೂ ದಿನ ದುಡಿಸಿಕೊಳ್ಳುವುದನ್ನು ಸಹಿಸಿಕೊಳ್ಳಲಿಲ್ಲ. ವಾರದಲ್ಲಿ ಒಂದು ದಿನ ಆದ್ರೂ ರಜೆ ಬೇಕು ನಮ್ಮವರಿಗೆ ಎನ್ನುವ ಧ್ವನಿ ಎತ್ತಿದರು. ಇದಕ್ಕಾಗಿ ಹೋರಾಟವನ್ನು ಶುರು ಮಾಡಿದರು. ಇದಕ್ಕಾಗಿ ಸಾಕಷ್ಟು ಬಾರಿ ಅರ್ಜಿಗಳನ್ನು ಸಲ್ಲಿಸಿದರು. ಆದರೆ ಬ್ರಿಟಿಷ್ ಸರ್ಕಾರ ಈ ಅರ್ಜಿಯನ್ನು ರಿಜೆಕ್ಟ್ ಮಾಡಿತು. ಬ್ರಿಟಿಷರು ನಾರಾಯಣ ಮೇಘಾಜಿ ಲೋಖಂಡೆ ಅವರ ಕೂಗಿದೆ ಕಿವಿಗೊಡಲಿಲ್ಲ.

ನಾರಾಯಣ ಮೇಘಾಜಿ ಲೋಖಂಡೆ ಹೋರಾಟ ಫಲ
ಆದರೂ ನಾರಾಯಣ ಮೇಘಾಜಿ ಲೋಖಂಡೆ ಅವರು ತಮ್ಮ ಹೋರಾಟವನ್ನು ಬಿಡಲಿಲ್ಲ. ಹೋರಾಟದಿಂದ ಹಿಂಜರಿಯಲಿಲ್ಲ. ಸತತ ಏಳು ವರ್ಷ ಹೀಗೆ ಪ್ರಯತ್ನ ಮಾಡುತ್ತಲೇ ಬಂದರು. ವಾರದ ಆರು ದಿನ ಕೆಲಸ ಮಾಡಿಸಿಕೊಂಡು ಒಂದು ದಿನ ಸಾಮಾಜಕ್ಕಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ನಾರಾಯಣ ಮೇಘಾಜಿ ಲೋಖಂಡೆ ಅವರು ಪದೇ ಪದೇ ಬ್ರಿಟಷ್ ಸರ್ಕಾರದ ಮುಂದೆ ಮನವಿ ಮಾಡಿದರು.
ಕೊನೆಗೆ ಬ್ರಿಟಿಷ್ ಸರ್ಕಾರಕ್ಕೆ ಭಾರತೀಯರು ಕೂಡ ಮನಷ್ಯರು ಅವರಿಗೂ ರಜೆ ಬೇಕಾಗುತ್ತದೆ ಎಂದು ಅನಿಸಿತು. ಹೀಗಾಗಿ 10 ಜೂನ್ 1890ರಂದು ಬ್ರಿಟಿಷರು ಭಾರತೀಯರಿಗೆ ಭಾನುವಾರ ರಜೆ ಘೋಷಣೆ ಮಾಡಿದರು. ಆ ಕ್ಷಣದಿಂದ ಈವರೆಗೂ ಭಾರತದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳು ಹಾಗೂ ಬಹುತೇಕ ಖಾಸಗಿ ಕಂಪನಿಗಳಿಗೆ ರಜೆ ಭಾನುವಾರ ರಜೆ ನೀಡಲಾಗುತ್ತಿದೆ.
ಪ್ರಸ್ತುತ ನಾವೆಲ್ಲಾ ರಜೆಯ ಮಜವನ್ನು ಸವಿತಾಯಿದ್ದೇವೆ. ಆದರೆ ಇದರ ಹಿಂದೆ ಯಾರ ಶ್ರಮ ಇದೆ ಅನ್ನೋದು ಮಾತ್ರ ತುಂಬಾ ಜನರಿಗೆ ಗೊತ್ತೇ ಇಲ್ಲ.
ನಾರಾಯಣ ಮೇಘಾಜಿ ಲೋಖಂಡೆ ಅವರ ಸತತ ಏಳು ವರ್ಷದ ಪರಿಶ್ರಮದಿಂದಾಗಿ ಇಂದು ನಮಗೆಲ್ಲಾ ವಾರದಲ್ಲಿ ಒಂದು ದಿನ ರಜೆ ಸಿಕ್ಕಿದೆ. ಭಾನುವಾರ ನಮಗೆಲ್ಲಾ ರಜೆ ಸಿಗುವಂತೆ ಮಾಡುವಲ್ಲಿ ನಾರಾಯಣ ಮೇಘಾಜಿ ಲೋಖಂಡೆ ಅವರು ಶ್ರಮ ಸಾಕಷ್ಟಿದೆ. ಇದನ್ನು ನಾವೆಂದೂ ಕೂಡ ಮರೆಯಬಾರದು ಅಲ್ವಾ?












Click it and Unblock the Notifications