ವಾಹನ ಸವಾರರು ಶೇ 50ರ ರಿಯಾಯಿತಿಯಲ್ಲಿ ದಂಡ ಕಟ್ಟುವುದು ಹೇಗೆ?
ವಾಹನ ಸವಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ದಂಡದ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲು ಸರಕಾರ ಆದೇಶ ಹೊರಡಿಸಿದೆ.
ಬೆಂಗಳೂರು, ಫೆಬ್ರವರಿ 03; ವಾಹನ ಸವಾರರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ಸಂಚಾರ ನಿಮಯ ಉಲ್ಲಂಘನೆ ಪ್ರಕರಣದಲ್ಲಿ ದಾಖಲಾಗಿರುವ ದಂಡವನ್ನು ಶೇ 50ರಷ್ಟು ರಿಯಾಯಿತಿ ದರದಲ್ಲಿ ಪಾವತಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ.
ಫೆಬ್ರವರಿ 11ರ ತನಕ ವಾಹನ ಸವಾರರು ಸರ್ಕಾರ ಘೋಷಣೆ ಮಾಡಿರುವ ಶೇ 50ರಷ್ಟು ರಿಯಾಯಿತಿಯ ಅನ್ವಯ ದಂಡಮೊತ್ತವನ್ನು ಪಾವತಿ ಮಾಡಬಹುದಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ದಂಡ ಪಾವತಿ ಮಾಡುವುದು ಹೇಗೆ? ಎಂದು ವಾಹನ ಸವಾರರಿಗೆ ಮಾಹಿತಿ ನೀಡಿದ್ದಾರೆ.
11/2/2023ರಂದು ನಡೆಯಲಿರುವ ಲೋಕ್ ಅದಾಲತ್ ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಕಾರ್ಯಾಧ್ಯಕ್ಷರ ಮನವಿಯಂತೆ ವಾಹನದ ಮಾಲೀಕರು ಬಾಕಿ ಉಳಿಸಿಕೊಂಡಿರುವ ಸಂಚಾರ ನಿಯಮ ಉಲ್ಲಂಘನೆಗಳ ದಂಡ ಮೊತ್ತಗಳಿಗೆ ಕರ್ನಾಟಕ ಸರ್ಕಾರವು ಶೇ 50 ರಿಯಾಯಿತಿ ನೀಡಿ ಆದೇಶಿಸಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಿನಾಂಕ 11/02/2023ರೊಳಗಾಗಿ ಇತ್ಯರ್ಥಪಡಿಸಿಕೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಮಾತ್ರ ಶೇ 50ರಷ್ಟು ರಿಯಾಯಿತಿಯನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ವಾಹನ ಸವಾರರು ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನದ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
* ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
* ಪೇಟಿಎಂ ಅಪ್ಲಿಕೇಶನ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
* ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದು. ದಂಡವನ್ನು ಮೊತ್ತವನ್ನು ಪಾವತಿಸಿ ರಶೀದಿ ಪಡೆಯಬಹುದು.
* ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ದಂಡ ಪಾವತಿಸಬಹುದಾಗಿದೆ.

ಈ ಆದೇಶವು 11/2/2023ರವರೆಗೆ ಜಾರಿಯಲ್ಲಿರುತ್ತದೆ. ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆಯ ದಂಡವು. ಬಾಕಿ ಇದ್ದಲ್ಲಿ ಕೂಡಲೇ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ಸಾರ್ವಜನಿಕರು ಈ ಅವಕಾಶದ ಸದುಪಯೋಗವನ್ನು ಪಡಿಸಿಕೊಳ್ಳಲು ಪೊಲೀಸರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22942883 ಅಥವಾ 080-22943381
ಹೆಚ್ಚು ಆದಾಯ ಸಂಗ್ರಹ ನಿರೀಕ್ಷೆ; ಫೆಬ್ರವರಿ 11ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈ ಆದೇಶವನ್ನು ಮಾಡಿದೆ. ಜನರು ದಂಡ ಕಟ್ಟಿದ್ದರೆ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಬಂಡವಾಳ ಹರಿದು ಬರಲಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿತ್ತು.
ನಂತರ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ನೀಡಲು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ವಾಹನ ಸವಾರರು ದಂಡದ ಮೊತ್ತ ಬಾಕಿ ಉಳಿಸಿಕೊಂಡಿದ್ದರೆ ರಿಯಾಯಿತಿ ದರದಲ್ಲಿ ಪಾವತಿ ಮಾಡಬಹುದಾಗಿದೆ. ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಈ ರಿಯಾಯಿತಿ ನೀಡಲಾಗಿದೆ.
ಇದು ದೇಶದಲ್ಲೇ ಮೊದಲ ಪ್ರಯತ್ನವಲ್ಲ ಕೆಲವು ವರ್ಷಗಳ ಹಿಂದೆ ತೆಲಂಗಣಾ ರಾಜ್ಯದಲ್ಲಿ ಇದೇ ರೀತಿ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ್ದ ದಂಡದ ಮೊತ್ತಕ್ಕೆ ವಿನಾಯಿತಿ ನೀಡಲಾಗಿತ್ತು. ಆಗ ಜನರು ಸರದಿ ಸಾಲಿನಲ್ಲಿ ನಿಂತು ದಂಡ ಕಟ್ಟಿದ್ದರು.












Click it and Unblock the Notifications