India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರೋಶಿಮಾ ದಿನ- ಜಪಾನ್ ಮೇಲೆ ಅಣು ಬಾಂಬ್ ಯಾಕೆ ಬಿತ್ತು? ರಣರೌದ್ರವಾಗಿದೆ ಇತಿಹಾಸ

|
Google Oneindia Kannada News

ಮನುಷ್ಯನ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಹಾಗು ಅತಿ ಅಪಾಯಕಾರಿ ವಸ್ತು ಯಾವುದು ಎಂದರೆ ಅದು ಅಣು ಬಾಂಬ್. ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ಅಣು ಬಾಂಬ್ ದಾಳಿ ಮಾಡಿದ ಘಟನೆ ಮಾನವನ ಇತಿಹಾಸದ ಕಳಂಕಿತ ಅಧ್ಯಾಯ ಎನಿಸಿದೆ.

ಆಗಸ್ಟ್ 6, 1945ರಲ್ಲಿ ಅಮೆರಿಕ ಜಪಾನ್‌ನ ಹಿರೋಶಿಮಾ ಮೇಲೆ ಅಣು ಬಾಂಬ್ ಹಾಕಿತು. ಅಷ್ಟಕ್ಕೆ ಸುಮ್ಮನಾಗದೆ ಮೂರು ದಿನಗಳ ಬಳಿಕ ನಾಗಸಾಕಿ ನಗರದ ಮೇಲೂ ಒಂದು ಅಣು ಬಾಂಬ್ ದಾಳಿ ಮಾಡಿತು. ಇವೆರಡು ಘಟನೆಗಳಲ್ಲಿ ಎರಡು ಲಕ್ಷದಷ್ಟು ಜನರು ಸಾವನ್ನಪ್ಪಿದರು.

ಅಣು ಬಾಂಬ್ ಆಗಿನ್ನೂ ಪ್ರಾಯೋಗಿಕವಾಗಿ ಬಳಕೆಯಾಗದೇ ಉಳಿದ ಅಸ್ತ್ರ. ಅಮೆರಿಕ ಬಿಟ್ಟರೆ ಯಾವ ದೇಶದ ಬಳಿಯೂ ಅದು ಇರಲಿಲ್ಲ. ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಹಾಕಲಾದ ಅಣು ಬಾಂಬ್‌ಗಳು ಮಾಡಿದ ಅನಾಹುತ ಕಂಡು ಇಡೀ ಮನುಷ್ಯ ಕುಲವೇ ನಡುಗಿ ಹೋಗಿತ್ತು.

ಜಪಾನ್ ದೇಶ ಅಕ್ಷರಶಃ ಗರಬಡಿದುಹೋಗಿತ್ತು. ಮೀನ ಮೇಷ ಎಣಿಸಿದೇ ಶರಣಾಗತಿ ಆಗುವುದಷ್ಟೇ ಅದಕ್ಕೆ ಉಳಿದಿದ್ದ ಮಾರ್ಗ. ಇಷ್ಟಾದರೂ ವಿಶ್ವದ ಹಲವು ದೇಶಗಳು ಪರಮಾಣು ಬಾಂಬ್ ತಯಾರಿಕೆಯ ಪೈಪೋಟಿಗೆ ಬಿದ್ದಿವೆ. ಪಾಕಿಸ್ತಾನದಂಥ ದೇಶದ ಕೈಯಲ್ಲಿ ಅಣ್ವಸ್ತ್ರ ಇದ್ದರೆ ಭೂಮಿಯನ್ನು ಯಾವ ದೇವರು ತಾನೇ ಕಾಪಾಡಲು ಸಾಧ್ಯ. ಅಷ್ಟಕ್ಕೂ ಜಪಾನ್ ದೇಶದ ಮೇಲೆ ಅಮೆರಿಕ ಅಣು ಬಾಂಬ್ ದಾಳಿ ಮಾಡಲು ಕಾರಣವಾದರೂ ಏನಿತ್ತು?

ಜಪಾನ್ ಮೇಲೆ ಯಾಕೆ ಬಿತ್ತು ಬಾಂಬ್?

ಜಪಾನ್ ಮೇಲೆ ಯಾಕೆ ಬಿತ್ತು ಬಾಂಬ್?

ಜಪಾನ್ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಉಚ್ಛ್ರಾಯ ಎಂದರೆ ಯುದ್ಧದ ಹಪಾಹಪಿ ಅತಿರೇಕ ಇದ್ದ ಕಾಲ ಘಟ್ಟ. ಜಪಾನ್, ಇಟಲಿ ಮತ್ತು ಜಪಾನ್ ದೇಶಗಳ ಡೆಡ್ಲಿ ಕಾಂಬಿನೇಶನ್. ಒಂದು ಕಡೆ ಅಮೆರಿಕ ಮತ್ತದರ ಮಿತ್ರ ಪಡೆ, ಮತ್ತೊಂದು ಕಡೆ ರಷ್ಯಾ ಹಾಗೂ ಮಿತ್ರ ಪಡೆ, ಮಗದೊಂದು ಕಡೆ ಜರ್ಮನಿ, ಜಪಾನ್ ಮತ್ತಿತರ ದೇಶಗಳು, ಹೀಗೆ ಎರಡನೇ ವಿಶ್ವ ಮಹಾಯುದ್ಧ ಜರುಗಿತ್ತು.

ರಾಜನ ಆಡಳಿತದ ಇರುವ ಜಪಾನ್ ದೇಶ ಆಗ ತನ್ನ ಸಾಮ್ರಾಜ್ಯ ವಿಸ್ತರಣೆಯ ಹುಚ್ಚು ಮನಸ್ಥಿತಿಯಲ್ಲಿತ್ತು. ಮೊದಲ ವಿಶ್ವ ಮಹಾಯುದ್ಧದಲ್ಲಿ ಚೀನಾವನ್ನು ವಶಪಡಿಸಿಕೊಂಡಿತ್ತು. ಮಂಗೋಲಿಯಾ, ಮಂಚೂರಿಯಾ ಮೊದಲಾದ ಪ್ರದೇಶಗಳನ್ನು ಆಕ್ರಮಿಸಿತು. ಜರ್ಮನಿ ಮತ್ತು ಇಟಲಿ ಜೊತೆ 1940ರಲ್ಲಿ ಮೈತ್ರಿ ಮಾಡಿಕೊಂಡಿತು.

ಜಪಾನ್‌ಗೆ ಎಲ್ಲವೂ ಸರಿಯಾಗಿಯೇ ಸಾಗುತ್ತಿತ್ತು. ಆದರೆ, 1941, ಡಿಸೆಂಬರ್ 7ಕ್ಕೆ ಪರ್ಲ್ ಹಾರ್ಬರ್ ಮೇಲೆ ದಾಳಿ ಮಾಡಿದ್ದು ಮಹಾಯುದ್ಧಕ್ಕೆ ಪ್ರಮುಖ ತಿರುವು ಸಿಕ್ಕಿತು. ಅಮೆರಿಕದ ನಿಯಂತ್ರಣದಲ್ಲಿದ್ದ ಫಿಲಿಪ್ಪೈನ್ಸ್, ಗುವಾಮ್ ಮತ್ತು ವೇಕ್ ಐಲೆಂಡ್ ಪ್ರದೇಶಗಳ ಮೇಲೆ ಜಪಾನೀಯರು ಆಕ್ರಮಣ ಮಾಡಿದರು. ಡಚ್ಚರು ಮತ್ತು ಬ್ರಟಿಷರ ನಿಯಂತ್ರಣದಲ್ಲಿದ್ದ ಥಾಯ್ಲೆಂಡ್, ಮಲಯ, ಹಾಂಕಾಂಗ್ ಮೇಲೆ ಜಪಾನೀಯರು ದಾಳಿ ಮಾಡಿದರು. ಇವೆಲ್ಲವೂ ಒಂದೇ ದಿನ ಏಕಕಾಲದಲ್ಲಿ ನಡೆದಿತ್ತು. ಅಮೆರಿಕದ ನೌಕಾಪಡೆಯನ್ನು ದುರ್ಬಲಗೊಳಿಸಲು, ತೈಲ ನಿಕ್ಷೇಪಗಳ ಮೇಲೆ ಸ್ವಾಮ್ಯ ಪಡೆಯಲು, ಹಾಗು ಚೀನಾ, ಪೂರ್ವ ಏಷ್ಯಾ ಹಾಗು ಕೊರಿಯಾದಲ್ಲಿ ಇದ್ದ ತನ್ನ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳುವುದು, ಮತ್ತು ಜಪಾನ್ ಸಾಮ್ರಾಜ್ಯ ವಿಸ್ತರಣೆ ಬಳಿಕ ಅದರ ಭದ್ರತೆಗೆ ಅಗತ್ಯ ಇರುವ ಪ್ರದೇಶಗಳನ್ನು ಹಿಡಿತಕ್ಕೆ ತಂದುಕೊಳ್ಳುವುದು ಜಪಾನ್ ಚಕ್ರವರ್ತಿಯ ಇರಾದೆಯಾಗಿತ್ತು.

ಪರ್ಲ್ ಹಾರ್ಬರ್ ಘಟನೆ

ಪರ್ಲ್ ಹಾರ್ಬರ್ ಘಟನೆ

ಇದೆಲ್ಲದಕ್ಕೂ ಕಲ್ಲು ಬಿದ್ದದ್ದು ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿದಾಗ. ಜಪಾನ್ ವಿರುದ್ಧ ಎಂಟು ವರ್ಷಗಳಿಂದ ಯುದ್ಧ ಮಾಡುತ್ತಿದ್ದ ಚೀನಾಗೆ ರಷ್ಯಾ ಮತ್ತು ಅಮೆರಿಕ ಎರಡೂ ದೇಶಗಳು ಸಹಾಯ ಮಾಡುತ್ತಿದ್ದವು. ಯಾವಾಗ ಪರ್ಲ್ ಹಾರ್ಬರ್‌ನಲ್ಲಿರುವ ಅಮೆರಿಕ ನೌಕಾ ನೆಲೆಯ ಮೇಲೆ ಜಪಾನ್ ಆಕ್ರಮಣ ಮಾಡಿತೋ ಅಮೆರಿಕ ನೇರವಾಗಿ ಅಖಾಡಕ್ಕೆ ಇಳಿದುಬಿಟ್ಟಿತು.

ಚೀನಾ ವಿರುದ್ದದ ಯುದ್ಧದಿಂದ ಜಪಾನ್ ಆರ್ಥಿಕವಾಗಿ ಕೃಶವಾಗಿ ಹೋಗಿತ್ತು. ಅಮೆರಿಕ ಜೊತೆ ನೇರ ಯುದ್ಧ ಮಾಡುವ ಶಕ್ತಿ ಇರಲಿಲ್ಲ. ಆದರೂ ಕೂಡ ಜಪಾನ್ ಅದು ಯಾಕೆ ಅಮೆರಿಕ ಮೇಲೆ ಏರಿ ಹೋಯಿತೋ ಎಂದು ಈಗಲೂ ಅಚ್ಚರಿ ಪಡುವವರು ಇದ್ದಾರೆ.

ಜರ್ಮನಿ, ಇಟಲಿ ಮತ್ತು ಜಪಾನ್ ಎಂಬ ತ್ರಿಶಕ್ತಿಗಳ ವಿರುದ್ಧ ಬಹುತೇಕ ಶಕ್ತಿಗಳು ಒಂದಾಗಿಬಿಟ್ಟಿದ್ದವು. 1945 ಮೇ 8ರಂದು ಜರ್ಮನಿ ಸೋಲೊಪ್ಪಿಕೊಂಡಿತು. ಅದಾದ ಬಳಿಕ ಅಮೆರಿಕ ಮತ್ತು ರಷ್ಯಾ ಮೊದಲಾದ ದೇಶಗಳಿದ್ದ ಮೈತ್ರಿಪಡೆಗಳೆಲ್ಲವೂ ಸೇರಿ ಜಪಾನ್ ಮೇಲೆ ಆಕ್ರಮಣ ಮಾಡಿದವು. 64 ಜಪಾನೀ ನಗರಗಳು ಧ್ವಂಸವಾದವು.

ಅಮೆರಿಕವಂತೂ ತನ್ನಲ್ಲಿ ಹೊಸದಾಗಿ ರೂಪಿಸಿದ್ದ ಅಣ್ವಸ್ತ್ರವನ್ನು ಪ್ರಯೋಗಿಸುವ ಹುಚ್ಚು ಸಾಹಸಕ್ಕೆ ನಿಂತುಬಿಟ್ಟಿತು. ಅದಕ್ಕಾಗಿ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ ಎಂಬೆರಡು ಅಣು ಬಾಂಬ್ ಸಿದ್ಧವಾದವು. 1945, ಆಗಸ್ಟ್ 6ರಂದು ಹಿರೋಶಿಮಾ ಮೇಲೆ ಲಿಟಲ್ ಬಾಯ್ ಅಣು ಬಾಂಬ್ ಬಿತ್ತು. ಆಗಸ್ಟ್ 9ರಂದು ನಾಗಸಾಕಿ ಮೇಲೆ ಫ್ಯಾಟ್ ಮ್ಯಾನ್ ಬಾಂಬ್ ಹಾಕಲಾಯಿತು.

ಅದಾಗಿ ಸ್ವಲ್ಪ ದಿನಕ್ಕೆ ಜಪಾನ್ ಶರಣಾಯಿತು. ತಾನು ಆಕ್ರಮಿಸಿಕೊಂಡಿದ್ದ ಪ್ರದೇಶವೆಲ್ಲವನ್ನೂ ಬಿಟ್ಟುಕೊಟ್ಟಿತು. ಯುದ್ಧದಲ್ಲಿ ಸೋಲುವುದರ ಜೊತೆಗೆ ತನ್ನ ದೇಶ ಸರ್ವನಾಶವಾಗಿರುವುದನ್ನು ಕಣ್ಣಾರೆ ಕಂಡು ಪರಿತಪಿಸುವಂತಾಗಿತ್ತು.

ಸ್ಪೆಷಲ್ ಮಿಷನ್

ಸ್ಪೆಷಲ್ ಮಿಷನ್

ಜಪಾನ್ ಮೇಲೆ ಅಣು ಬಾಂಬ್ ಹಾಕಲು ಕೆಲ ತಿಂಗಳ ಮೊದಲೇ ನಿರ್ಧರಿಸಲಾಗಿತ್ತು. ಅಂದರೆ ಅಣುಬಾಂಬ್ ಬಿದ್ದದ್ದು 1945 ಆಗಸ್ಟ್ 6ರಂದು. ಅದಕ್ಕೆ ಮುಂಚೆ ಏಪ್ರಿಲ್ ತಿಂಗಳಲ್ಲಿ ಜಪಾನ್‌ನ ಯಾವ ಜಾಗದಲ್ಲಿ ಬಾಂಬ್ ಹಾಕಬಹುದು ಎಂದು ಯೋಜಿಸಲು ಅಮೆರಿಕ ಮುಂದಾಯಿತು.

ಐದು ಸ್ಥಳಗಳನ್ನು ಆಯ್ಕೆ ಮಾಡಲಾಯಿತು. ಕೋಕುರಾ, ಹಿರೋಶಿಮಾ, ಯೋಕೊಹಾಮ, ನಿಗಾಟ ಮತ್ತು ಕ್ಯೋಟೋ ನಗರಗಳನ್ನು ಅಂತಿಮ ಪಟ್ಟಿ ಸೇರಿದವು. ಈ ಐದು ನಗರಗಳನ್ನು ಆರಿಸಲು ಕಾರಣ ಇದೆ. ಆವರೆಗೂ ನಡೆದ ಯುದ್ಧದಲ್ಲಿ ಈ ನಗರಗಳ ಮೇಲೆ ಹೆಚ್ಚಾಗಿ ವೈಮಾನಿಕ ದಾಳಿ ಆಗಿರಲಿಲ್ಲ ಎಂಬುದು ಪ್ರಮುಖ ಕಾರಣ. ಹಾಗೆಯೇ ಇಲ್ಲಿ ಜಪಾನೀ ಮಿಲಿಟರಿ ನೆಲೆಗಳು ಇದ್ದುದು ಇನ್ನೊಂದು ಕಾರಣ.

ಜಪಾನ್ ಅನ್ನು ಮಕಾಡೆ ಮಲಗಿಸುವ ಉದ್ದೇಶ ಒಂದೆಡೆಯಾದರೆ, ಹೊಸದಾಗಿ ಆವಿಷ್ಕರಿಸಿದ ಅಣು ಬಾಂಬ್ ಪರಿಣಾಮ ಹೇಗಿರುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನೋಡುವ ಹಂಬಲವೂ ಇತ್ತು. ಹೀಗಾಗಿ, ಯಾವುದೇ ಹಾನಿಯಾಗದ ನಗರದ ಮೇಲೆ ಅಣು ಬಾಂಬ್ ಪ್ರಯೋಗ ಮಾಡಬೇಕಿತ್ತು. ಹೀಗಾಗಿ, ಈ ಐದು ನಗರಗಳ ಪಟ್ಟಿ ಮಾಡಿಕೊಳ್ಳಲಾಯಿತು. ಅದರಲ್ಲೂ ಹಿರೋಶಿಮಾಗೆ ಮೊದಲ ಆದ್ಯತೆ ಸಿಕ್ಕಿತು. ನಂತರ ಕೋಕುರಾ ಮತ್ತು ನಾಗಸಾಕಿಯಲ್ಲಿ ಯಾವುದಾದರೂ ಒಂದರ ಮೇಲೆ ಬಾಂಬ್ ಹಾಕುವುದು ಎಂದು ನಿರ್ಧರಿಸಲಾಯಿತು.

ಹಿರೋಶಿಮಾ ಮೇಲೆ ಅಣು ಬಂಬ್ ಹಾಕಲು ಅಮೆರಿಕದ ಸ್ಪೆಷಲ್ ಮಿಷನ್ 13 ಸಿದ್ಧವಾಯಿತು. 64 ಕಿಲೋ ಯುರೇನಿಯಂ ಹೊಂದಿದ್ದ ಲಿಟಲ್ ಬಾಯ್ ಹೆಸರಿನ ಅಣುಬಾಂಬ್ ಅನ್ನು ಯುದ್ಧವಿಮಾನ ಹೊತ್ತು ಹಾರಿತ್ತು. ಜಪಾನ್‌ನ ರಾಡಾರ್ ಕಣ್ತಪ್ಪಿಸಿ ವಿಮಾನ ಮುನ್ನುಗ್ಗಿತು. ಬೆಳಗ್ಗೆ 8:15ಕ್ಕೆ ಬಾಂಬ್ ಬಿದ್ದಿತು.

ಅಣು ಬಾಂಬ್ ಬಿದ್ದಾಗ ಹೇಗಿತ್ತು?

ಅಣು ಬಾಂಬ್ ಬಿದ್ದಾಗ ಹೇಗಿತ್ತು?

ಅಣು ಬಾಂಬ್ ಹಾಕುವ ಸ್ಪೆಷನ್ ಮಿಷನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಸೈನಿಕರಿಗೂ ಇದು ಹೊಸ ಅನುಭವ. ಅಣುಬಾಂಬ್ ಬಿದ್ದಾಗ ಉಂಟಾದ ಭೀಕರ ಪರಿಸ್ಥಿತಿ ಕಂಡು ಹಲವು ಕ್ಷಣ ಇವರು ದಿಗ್ಮೂಢರಾಗಿ ಹೋಗಿದ್ದರು.

ಬಾಂಬ್ ಸ್ಫೋಟಗೊಂಡು ದೊಡ್ಡ ಕಾರ್ಮೋಡವೇ ಕವಿಯಿತು. ಸುತ್ತಲಿನ ಹಲವು ಕಿಲೋಮೀಟರ್‌ವರೆಗೂ ಕಂಪನವಾಗಿತ್ತು. ಬೆಂಕಿಯ ಅಲೆಯೇ ಎದ್ದಿತು. ಸ್ಥಳದಲ್ಲೇ 70-80 ಸಾವಿರ ಜನರು ಮೃತಪಟ್ಟರು. ಆಗ ಇದು ಹಿರೋಶಿಮಾ ಜನಸಂಖ್ಯೆಯ ಶೇ. 30 ಭಾಗವಾಗಿತ್ತು. ಹಿರೋಶಿಮಾ ನಗರದ ಶೇ. 69ರಷ್ಟು ಕಟ್ಟಡಗಳು ಹಾನಿಗೊಂಡಿದ್ದವು. 12 ಚದರ ಕಿಮೀ ಪ್ರದೇಶ ಸರ್ವನಾಶವಾಗಿ ಹೋಗಿತ್ತು.

ಗಾಯಾಳುಗಳ ಸಂಖ್ಯೆ 70 ಸಾವಿರ ದಾಟಿತ್ತು. ಗಾಯಾಳುಗಳ ಚಿಕಿತ್ಸೆಗೆ ವೈದ್ಯರೂ ಇಲ್ಲದಂತಾಗಿತ್ತು. ಶೇ. 90ಕ್ಕಿಂತ ಹೆಚ್ಚು ವೈದ್ಯರು ಮತ್ತು ದಾದಿಯರು ಅಣು ಬಾಂಬ್‌ಗೆ ಬಲಿಯಾಗಿ ಹೋಗಿದ್ದರು. ಅಣು ಬಾಂಬ್‌ನಿಂದ ಜಪಾನ್ ಅನುಭವಿಸಿದ ಪಾಡು ಅಷ್ಟಿಷ್ಟಲ್ಲ. ಈಗಲೂ ಕೂಡ ಕೆಲ ಪ್ರದೇಶಗಳಲ್ಲಿ ವಿಕಿರಣಗಳಿಂದಾಗಿ ಮಕ್ಕಳು ಅಂಗಾಂಗ ನ್ಯೂನತೆಗಳೊಂದಿಗೆ ಬದುಕುವಂತಾಗಿದೆ.

(ಒನ್ಇಂಡಿಯಾ ಸುದ್ದಿ)

English summary
America dropped atom bomb on Hiroshima on 1945 August 4th during second world war. This was the first instance and only the second instance of atom bomb explosion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X