ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಿರುವ 'ಹಿಜಾಬ್' ವಿವಾದ - ಕಪಿಚೇಷ್ಠೆ
ಬಿಜೆಪಿ ಸರ್ಕಾರದ ಆಡಳಿತಾತ್ಮಕ ಯೋಗ್ಯತೆ ಎಷ್ಟು ಎಂಬುದಕ್ಕೆ ಅವರ ಈ ಮೂರೂವರೆ ವರ್ಷದ ದುರಾಡಳಿತವು ಜೀವಂತ ಸಾಕ್ಷಿಯಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ಬಂದಾಗ ಅದನ್ನು ಇವರು ನಿರ್ವಹಿಸಲಾರದೇ ಶರಣಾದ ರೀತಿ, ರೋಗದ ಹೆಸರಲ್ಲಿ ಡಬಲ್ ಇಂಜಿನ್ ಸರ್ಕಾರ ಆಚರಿಸಿದ ಮೌಢ್ಯತೆ, ಕೋವಿಡ್ ಮತ್ತು ಲಾಕ್ ಡೌನ್ ನಂತರದಲ್ಲೂ ಉಂಟಾದ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಉದ್ಯೋಗ ಮತ್ತು ಬದುಕಿನ ಮೇಲೆ ಉಂಟಾದ ಪರಿಣಾಮವನ್ನು ಎಲ್ಲರೂ ಕಣ್ಣಾರೆ ಕಾಣುತ್ತಿದ್ದೇವೆ.
ಇದೆಲ್ಲಕ್ಕಿಂತಲೂ ಮುಖ್ಯವಾಗಿ ಲಾಕ್ ಡೌನ್ ನಂತರದಲ್ಲಿ ದೇಶದ ಭವಿಷ್ಯದ ರೂಪಕವಾಗಿರುವ ಮಕ್ಕಳ ಶಿಕ್ಷಣವು ಪಾತಾಳಮುಖಿಯಾಗಿ ಸಾಗಿದ್ದು ಶಿಕ್ಷಣಕ್ಕೆ ಸಂಬಂಧಿಸಿದಂತಹ ಸರ್ಕಾರದ ಗೊಂದಲಮಯ ನಿರ್ಧಾರಗಳು ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನೇ ದೂರ ಮಾಡಿವೆ.
ಇನ್ನು ದೈನಂದಿನ ತರಗತಿಗಳು ಇಲ್ಲದೇ ಇರುವ ಕಾರಣದಿಂದ ಮಕ್ಕಳ ಪ್ರಾಯೋಗಿಕ ಬೌದ್ಧಿಕ ಮಟ್ಟವು ಗಣನೀಯವಾಗಿ ಕುಸಿದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರ ಮಟ್ಟದಲ್ಲಿ ಬಹಳಷ್ಟು ಮಂದಿ ವಿಶ್ಲೇಷಕರು ಅಭಿಪ್ರಾಯ ಪಟ್ಟಿರುವಂತೆ 2020ರ ಆರಂಭದಿಂದಲೂ ಅಂದರೆ ಕೋವಿಡ್ 19 ರೋಗದ ಆರಂಭದಿಂದಲೂ ದೇಶದ ಎಲ್ಲ ಕಡೆ ನಿರುದ್ಯೋಗದ ಸಮಸ್ಯೆ ವಿಪರೀತ ಹೆಚ್ಚಾಗಿದೆ.
ಖಾಸಗೀ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವ ಕೆಳ ಮಧ್ಯಮ ವರ್ಗದ ಮತ್ತು ಕಾರ್ಮಿಕ ವರ್ಗದ ಪೋಷಕರು ಮಕ್ಕಳ ಶಾಲೆಗಿಂತಲೂ ಮೊದಲು ಬದುಕು ನಡೆಸುವುದು ಮುಖ್ಯವೆಂಬ ನಿರ್ಧಾರಕ್ಕೆ ಅನಿವಾರ್ಯವಾಗಿ ಬಂದಿದ್ದಾರೆ. ಕರೋನಾಗೆ ಮುಂಚೆಯೂ ಸಹ ಕೆಳ ವರ್ಗದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಹೊಂದುವ ಸವಾಲುಗಳು ಹಲವಾರು ಇದ್ದರೂ ಕೂಡಾ ಕರೋನಾ ನಂತರದಲ್ಲಿ ಅದೊಂದು ಮರೀಚಿಕೆಯಾಗಿ ಬದಲಾಗಿದೆ.

ಶೈಕ್ಷಣಿಕ ಬೆಂಬಲ ದೊರೆಯದೇ ಹೋದರೆ ಶಾಲೆಯನ್ನು ಬಿಡುವ ಅಭಿಪ್ರಾಯ
ಡಿಜಿಟಲ್ ತಂತ್ರಾಂಶದ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಪ್ರಯತ್ನ ಮಾಡಲಾಗುತ್ತಿದ್ದರೂ ಸಹ ಅದು ಗುಣ ಮಟ್ಟದ ಶಿಕ್ಷಣ ಹೊಂದುವಂತಹ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಬದಲು ಕುಗ್ಗಿಸಿದೆ. ಭಾರತೀಯ ಮಕ್ಕಳ ನಿಧಿ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡಾ 64% ಮಕ್ಕಳು ಹೆಚ್ಚುವರಿ ಶೈಕ್ಷಣಿಕ ಬೆಂಬಲ ದೊರೆಯದೇ ಹೋದರೆ ಶಾಲೆಯನ್ನು ಬಿಡುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಾಲೆ ಬಿಟ್ಟವರ ಸಂಖ್ಯೆ
ಸರ್ಕಾರಿ ವರದಿಯೊಂದರ ಪ್ರಕಾರ ಭಾರತದಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಾಲೆ ಬಿಟ್ಟವರ ಸಂಖ್ಯೆಯು 17% ನಷ್ಟಿದ್ದರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1.8% ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1.5% ನಷ್ಟು ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ. ಇನ್ನು ನಿರ್ದಿಷ್ಟವಾಗಿ ತ್ರಿಪುರಾ, ಸಿಕ್ಕಿಂ, ನಾಗಾಲ್ಯಾಂಡ್, ಮೇಘಾಲಯ, ಮಧ್ಯ ಪ್ರದೇಶ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಶಾಲೆ ಬಿಟ್ಟವರ ಸಂಖ್ಯೆ 25% ನಷ್ಟಿದೆ ಎಂದು ವರದಿ ಹೇಳಿದರೂ ಈ ಪೈಕಿ ನಾಲ್ಕು ರಾಜ್ಯಗಳು ಶಾಲೆ ಬಿಟ್ಟವರ ಶೇಕಡಾವಾರು 30% ಎಂದು ಹೇಳಿವೆ.

ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಅತ್ಯಂತ ಮುಖ್ಯವಾಗಿ ಚುನಾವಣೆಗೆ ಇನ್ನೊಂದು ವರ್ಷ ಇರುವಾಗ ಕರ್ನಾಟಕದಲ್ಲಿ ರಾಜಕೀಯ ಧೃವೀಕರಣಕ್ಕಾಗಿ ಎಂದೂ ಇಲ್ಲದೇ ದಿಢೀರ್ ಎಂದು ಹುಟ್ಟಿಕೊಂಡಿರುವ ಹಿಜಾಬ್ ನಂತಹ ಘಟನೆಗಳೂ ಕೂಡಾ ಇಲ್ಲಿನ ಶಿಕ್ಷಣದ ಪರಿಸ್ಥಿತಿ ಏನಾಗಿದೆ ಎಂದು ತಿಳಿಯುವಂತೆ ಮಾಡಿದೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೈಗೊಂಡ ಸಮೀಕ್ಷೆಯ ಪ್ರಕಾರ ಗ್ರಾಮೀಣ ಭಾಗದಲ್ಲಿ 1.59 ಲಕ್ಷ ವಿದ್ಯಾರ್ಥಿಗಳು ಕೋವಿಡ್ ನಂತರದಲ್ಲಿ ಶಾಲೆಗೆ ಹೋಗದೇ ಉಳಿದಿದ್ದು ಇವರಲ್ಲಿ ಬಹುತೇಕರು ಕೂಲಿ ಕಾರ್ಮಿಕ ಮಕ್ಕಳಾಗಿದ್ದು ಬದುಕು ನಡೆಸುವ ಅನಿವಾರ್ಯತೆಗೆ ಸಿಲುಕಿ ಕೂಲಿ ಹಾಗೂ ಇನ್ನಿತರೆ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿದ್ದಾರೆ.

ಶಿಕ್ಷಣ ಎಂಬುದು ಒಂದು ಮೂಲಭೂತ ಹಕ್ಕು
ಶಿಕ್ಷಣ ಎಂಬುದು ಒಂದು ಮೂಲಭೂತ ಹಕ್ಕಾಗಿರುವ ಈ ಸಂದರ್ಭದಲ್ಲಿ, ಸರ್ಕಾರವೊಂದರ ರೋಗ ನಿರ್ವಹಣಾ ವೈಫಲ್ಯದಲ್ಲಿ ಸಾವಿರಾರು ಮಕ್ಕಳ ಭವಿಷ್ಯವು ಕತ್ತಲಿಗೆ ಸರಿಯುತ್ತಿರುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೋವಿಡ್ ನಂತರದಲ್ಲಿ ಗ್ರಾಮೀಣ ಮಕ್ಕಳು ಮತ್ತು ನಗರ ಪ್ರದೇಶದ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಲು ಹತ್ತಾರು ಸವಾಲುಗಳನ್ನು ಹೊಂದಿದ್ದಾಗಲೂ ಸಹ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದ ಸರ್ಕಾರವು ಧರ್ಮದ ಹೆಸರಲ್ಲಿ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುವಂತೆ ವರ್ತಿಸುತ್ತಿರುವುದು ಅತ್ಯಂತ ನೋವಿನ ಸಂಗತಿ.

ಭಾರತದ ಕನಸಿಗೆ ಬಿಜೆಪಿಯ ಕೋಮುವಾದಿ ಮನಸ್ಥಿತಿಗಳು
ಚುನಾವಣೆ ಇನ್ನೊಂದು ವರ್ಷ ಬಾಕಿ ಇರುವುದರಿಂದ ಕವಡೆ ಕಾಸಿನ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿಗರು ಈಗ ಅನಿವಾರ್ಯವಾಗಿ ಕೋವು ದ್ವೇಷವನ್ನು ಹಬ್ಬಿಸಿ ಜನರಲ್ಲಿ ಗೊಂದಲ ಉಂಟು ಮಾಡಡುವ ಹಾದಿಯನ್ನು ಹಿಡಿದಿದ್ದು ತಮ್ಮ ಈ ರಾಜಕೀಯ ಲಾಭಕ್ಕೆ ಮಕ್ಕಳ ಶಿಕ್ಷಣ ವಲಯವನ್ನು ಭ್ರಷ್ಟಗೊಳಿಸುವಂತಹ ಪರಮ ಪಾಪದ ಕೆಲಸವನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಹಿಜಾಬ್ ಎನ್ನುವುದು "ಕಳ್ಳನಿಗೊಂದು ಪಿಳ್ಳೆ ನೆವ ಸಿಕ್ಕಂತಾಗಿದೆ" ಎಂಬುದು ನನ್ನ ಭಾವನೆ. ಬಾಬಾ ಸಾಹೇಬರು ಕನಸು ಕಂಡ, ಹೆಣ್ಣು ಮಕ್ಕಳ ಏಳಿಗೆ ಮತ್ತು ಎಲ್ಲರಿಗೂ ಶಿಕ್ಷಣ ದೊರಕುವ ಮೂಲಕ ರೂಪುಗೊಳ್ಳುವ ಸಮೃದ್ಧ ಭಾರತದ ಕನಸಿಗೆ ಬಿಜೆಪಿಯ ಕೋಮುವಾದಿ ಮನಸ್ಥಿತಿಗಳು ಅಡ್ಡಗಾಲಾಗಿದ್ದರೆ, ಇವರ ಎಲ್ಲ ಕಪಿ ಚೇಷ್ಟೆಗಳಿಗೆ ಆರ್ ಎಸ್ ಎಸ್ ಸೂತ್ರಧಾರಿಕೆಯನ್ನು ವಹಿಸಿದೆ.

ಮಕ್ಕಳು ಶಾಲೆಯಲ್ಲಿ ಪಡೆಯುವ ಶಿಕ್ಷಣಕ್ಕೂ ಅವರು ಧರಿಸುವ ಬಟ್ಟೆಗೂ ಸಂಬಂಧವೇನು
ಇದೇ ಸಮಯವನ್ನು ಬಳಸಿಕೊಂಡು ಎಲ್ಲ ಜಿಲ್ಲೆಗಳಲ್ಲೂ ಇಂತಹ ಗಲಭೆಯನ್ನು ಸಂಘಟಿಸಲು ಪ್ರಯತ್ನ ಆರಂಭಿಸಿದ್ದು ಇದಕ್ಕೆ ಪೂರಕವಾಗಿ ಬೆಳಗಾವಿ ಮತ್ತು ಹೊನ್ನಾಳಿಯ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ವಿವಾದಗಳು ತಲೆ ಎತ್ತಿವೆ. ಇನ್ನಷ್ಟು ಗಂಭೀರವಾಗಿ ಗಮನಿಸುವುದಾದರೆ, ಮಕ್ಕಳು ಶಾಲೆಯಲ್ಲಿ ಪಡೆಯುವ ಶಿಕ್ಷಣಕ್ಕೂ ಅವರು ಧರಿಸುವ ಬಟ್ಟೆಗೂ ಸಂಬಂಧವೇನು? ಶಿಕ್ಷಣದ ಮಧ್ಯೆ ಬಟ್ಟೆಯನ್ನು ಏಕೆ ಎಳೆಯಲಾಗುತ್ತಿದೆ?

ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಿರುವ “ಹಿಜಾಬ್” ವಿವಾದ, ಡಾ.ಮಹದೇವಪ್ಪ ಲೇಖನ
ಕೋವಿಡ್ ನಂತರದಲ್ಲಿ ಶಾಲೆಗೆ ಬರದೇ ಕೂಲಿಗೆ ಹೊರಟಿರುವ ಮಕ್ಕಳ ಭವಿಷ್ಯದ ಬದುಕು ಮತ್ತು ಆರೋಗ್ಯದ ಗತಿಯೇನು? ಎಂಬ ಪ್ರಶ್ನೆಗಳು ನಮಗೆ ಮುಖ್ಯವಾಗದೇ ಹೋದರೆ ಈ ಶತದಡ್ಡ ಮತ್ತು ಅಷ್ಟೇ ಅಪಾಯಕಾರಿಯಾದ ಕೋಮುವಾದಿಗಳು ಸೃಷ್ಟಿಸುವ ವಿನಾಶದ ದಿನಗಳಿಗೆ ನಾವೇ ಸಾಕ್ಷಿಯಾಗಬೇಕಾಗುತ್ತದೆ. ಉತ್ತಮ ಶಿಕ್ಷಣ ನಮ್ಮ ಆದ್ಯತೆಯಾಗಲಿ, ಮಕ್ಕಳ ಭವಿಷ್ಯಕ್ಕೆ ತೊಡಕಾಗುವ ಕಪಿಚೇಷ್ಟೆಗಳಲ್ಲ!












Click it and Unblock the Notifications