ಇವತ್ತಿಗೂ ಕಾಡುವ ಹರಳು ಕಲ್ಲಿನ ಕರಾಳ ದಂಧೆ: ಓದಲೇ ಬೇಕಾದ ಇಂಟ್ರಸ್ಟಿಂಗ್‌ ಸ್ಟೋರಿ

ಮಡಿಕೇರಿ, ಅಕ್ಟೋಬರ್‌ 24: ಪಶ್ಚಿಮ ಘಟ್ಟದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯವಲಯದ ಕೂಜಿಮಲೆ, ಸುಟ್ಟತ್‌ ಮಲೆಯಲ್ಲಿ ಹರಳು ಕಲ್ಲಿಗಾಗಿ ಬೆಟ್ಟವನ್ನು ಕೊರೆದಿದ್ದೇ ಬೆಟ್ಟ ಗುಡ್ಡಕುಸಿತಕ್ಕೆ ಕಾರಣವಾಯಿತಾ? ಹೀಗೊಂದು ಪ್ರಶ್ನೆಗಳು ಇವತ್ತಿಗೂ ಜನರನ್ನು ಕಾಡುತ್ತಲೇ ಇದೆ. ಅವತ್ತಿನ ದಿನಗಳಲ್ಲಿ ಹರಳು ಕಲ್ಲಿಗಾಗಿ ಬೆಟ್ಟಗುಡ್ಡವನ್ನೇ ಅಗೆದು, ಸುರಂಗ ತೆಗೆದು ಪ್ರಕೃತಿ ಮೇಲೆ ಮಾಡಿದ ಅತ್ಯಾಚಾರ ಕ್ಷಮಿಸಲಾರದ್ದಾಗಿದೆ. ಹೀಗಾಗಿಯೇ ಇವತ್ತು ಬೆಟ್ಟಗುಡ್ಡಗಳ ತಪ್ಪಲಲ್ಲಿ ಬದುಕುವ ಜನ ಭಯದಲ್ಲಿಯೇ ಬದುಕುವಂತಾಗಿದೆ.

ಇವತ್ತಿಗೂ ಹರಳುಕಲ್ಲು ದಂಧೆ ಸಂಪೂರ್ಣ ನಿಂತಿದೆ ಎನ್ನುವುದು ಕಷ್ಟವೇ... ಆಗೊಮ್ಮೆ ಈಗೊಮ್ಮೆ ಕಲ್ಲು ಸಾಗಾಟ ಮಾಡುವಾಗಿ ಸಿಕ್ಕಿ ಬಿದ್ದರೆ ಮಾತ್ರ ಮುನ್ನಲೆಗೆ ಬರುತ್ತದೆ. ಉಳಿದಂತೆ ಯಾವುದೂ ಗೊತ್ತೇ ಆಗುವುದಿಲ್ಲ. ಆದರೆ ಮೂರು ದಶಕಗಳ ಹಿಂದೆ ನಡೆದಷ್ಟು ವ್ಯಾಪಕತೆ ಇಲ್ಲ ಎನ್ನುವುದಷ್ಟೇ ಸಮಾಧಾನಕರ ಸಂಗತಿಯಾಗಿದೆ. ಅವತ್ತು ಈ ಹರಳು ಕಲ್ಲಿಗಾಗಿ ಹೊಡೆದಾಟ, ಬಡಿದಾಟ ಸೇರಿದಂತೆ ಹಲವು ಮಂದಿಯ ಪ್ರಾಣಕ್ಕೆ ಕುತ್ತು ತಂದಿತ್ತು.

Here Is The Interesting Story Of Darkness Of Crystal Stone Mining

ಆ ದಿನಗಳನ್ನು ನೆನಪಿಸುವುದಾದರೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್‌ಮಲೆ ಎಂಬ ಬೆಟ್ಟಗಳಲ್ಲಿ ಕೆಂಪು ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಅವತ್ತು ಕೆಜಿಯೊಂದಕ್ಕೆ ಐನೂರು ರೂ.ನಿಂದ ಆರಂಭವಾಗಿ ಸಾವಿರಾರು ರೂ. ಬೆಲೆ ದೊರೆಯುತ್ತಿತ್ತು. ಹೀಗಾಗಿ ಬೆಟ್ಟದಲ್ಲಿ ಸುರಂಗ ಕೊರೆದು ಕಲ್ಲು ತೆಗೆಯುವ ದಂಧೆ ರಾತ್ರೋರಾತ್ರಿ ಸದ್ದಿಲ್ಲದೆ ನಡೆಯುತ್ತಿತ್ತು. ಈ ಹರಳು ಕಲ್ಲು ತೆಗೆಯಲೆಂದೇ ಕೊಡಗಿನಿಂದ ತಂಡಗಳು ಹೋದರೆ ಅತ್ತ ದಕ್ಷಿಣ ಕನ್ನಡ ಜಿಲ್ಲೆ ಕಡೆಯಿಂದಲೂ ಜನ ಬರತೊಡಗಿದ್ದರು.

1990ರಲ್ಲಿ ಕಾಣಿಸಿಕೊಂಡ ಹರಳು

ಇವರ ನಡುವೆ ಭಿನ್ನಾಭಿಪ್ರಾಯ ಜಗಳಗಳು ಆರಂಭವಾಗಿದ್ದವಲ್ಲದೆ ಹೆಣಗಳು ಬಿದ್ದಿದ್ದವು. ಇನ್ನು ಸುರಂಗ ಕೊರೆದು ಹರಳುಕಲ್ಲು ತೆಗೆಯುವ ವೇಳೆ ಸುರಂಗ ಕುಸಿದು ಅಲ್ಲಿಯೇ ಸಮಾಧಿಯಾದ ಘಟನೆಗಳು ಕೂಡ ನಡೆದಿದ್ದವು. ಹರಳು ಕಲ್ಲಿಗಾಗಿ ಜಗಳಗಳು ಆರಂಭವಾಗಿ ಯಾರ ಹೆಣ ಯಾವಾಗ ಬೀಳುತ್ತೋ ಎಂಬ ಭಯ ಕಾಡತೊಡಗಿತ್ತು. ಒಂದು ತಂಡ ಮಾಡಿಕೊಂಡು ರಾತ್ರಿ ವೇಳೆ ಹೋಗುತ್ತಿದ್ದ ಜನ ಟಾರ್ಚ್ ಬೆಳಕಿನಲ್ಲಿಯೇ ಗುಡ್ಡ ಅಗೆದು ಕಲ್ಲನ್ನು ಈಚೆಗೆ ತೆಗೆದು ಅದನ್ನು ಹೊತ್ತು ತಂದು ನದಿ ತೀರದಲ್ಲಿ ತೊಳೆದು ಕಲ್ಲನ್ನು ಆಯ್ದು ಶೇಖರಿಸಿಟ್ಟುಕೊಂಡು ಬಳಿಕ ಅದನ್ನು ಮಾರಾಟ ಮಾಡುತ್ತಿದ್ದರು.

Here Is The Interesting Story Of Darkness Of Crystal Stone Mining

ಆಗಿನ ದಿನಗಳಲ್ಲಿ ಈ ಕಲ್ಲನ್ನು ಖರೀದಿಸಲೆಂದೇ ರಾಜಸ್ತಾನ್, ಕೇರಳ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ವ್ಯಾಪಾರಿಗಳು ಬರತೊಡಗಿದ್ದರು. ಮೊಟ್ಟ ಮೊದಲ ಬಾರಿಗೆ 1990ರಲ್ಲಿ ಕೂಜಿಮಲೆಯಲ್ಲಿ ಈ ಹರಳು ಕಾಣಿಸಿಕೊಂಡಿತ್ತು. ಆದರೆ ಇಲ್ಲಿನ ಜನಕ್ಕೆ ಇದು ಸಾವಿರಾರು ರೂ. ಬೆಲೆಬಾಳುವ ವಸ್ತು ಎಂಬುದು ಮಾತ್ರ ಗೊತ್ತೇ ಆಗಿರಲಿಲ್ಲ. ಸುಬ್ರಹ್ಮಣ್ಯ ಮತ್ತು ಕೊಡಗು ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಕಡಮಕಲ್ ರಬ್ಬರ್ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೊಬ್ಬನಿಗೆ ಹರಳು ಕಲ್ಲಿನ ಮರ್ಮ ಗೊತ್ತಾಗಿತ್ತು.

ಹರಳು ಕಲ್ಲಿಗಾಗಿ ಬೆಟ್ಟಕ್ಕೆ ಲಗ್ಗೆ

ಆತ ಅದನ್ನು ತಂದು ಹೊರಗಡೆ ಮಾರತೊಡಗಿದ್ದನು. ಇದರಿಂದ ಆತ ದಿನ ಕಳೆದಂತೆ ಶ್ರೀಮಂತನಾಗತೊಡಗಿದ್ದನು. ಆತ ದಿಢೀರ್ ಶ್ರೀಮಂತನಾದ ಬಗ್ಗೆ ಕುತೂಹಲ ಇಲ್ಲಿನ ಗ್ರಾಮಸ್ಥರನ್ನು ಕಾಡಿತ್ತಲ್ಲದೆ, ಆತನ ಬೆನ್ನತ್ತಿ ಹೋದವರಿಗೆ ಹರಳು ಕಲ್ಲಿನ ದಂಧೆಯ ಕರಾಳ ಮುಖ ಗೋಚರಿಸಿತ್ತು. ಗುಡ್ಡದಲ್ಲಿರುವ ಹರಳು ಕಲ್ಲು ಸಾವಿರಾರು ರೂ. ಬೆಲೆ ಬಾಳುತ್ತದೆ ಎಂಬುದು ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಬೆಟ್ಟಕ್ಕೆ ಲಗ್ಗೆಯಿಡ ತೊಡಗಿದರು. ಬೆಟ್ಟವನ್ನು ಕೊರೆದು ಹರಳು ಕಲ್ಲನ್ನು ಹುಡುಕ ತೊಡಗಿದರು. ಅತ್ತ ದಕ್ಷಿಣ ಕನ್ನಡದವರು, ಇತ್ತ ಕೊಡಗಿನವರು ಬೆಟ್ಟದತ್ತ ತಂಡ ಕಟ್ಟಿಕೊಂಡು ತೆರಳತೊಡಗಿದರು.

Here Is The Interesting Story Of Darkness Of Crystal Stone Mining

ಅರಣ್ಯ ಇಲಾಖೆಗೆ ತಿಳಿಯುವ ಹೊತ್ತಿಗೆ ಗುಡ್ಡಗಳು ಕರಗಿ ಅರಣ್ಯ ನಾಶವಾಗಿತ್ತು. ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿಯನ್ನಿಟ್ಟುಕೊಂಡು ದಂಧೆಕೋರರನ್ನು ತಡೆಯುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿರಲಿಲ್ಲ. ಜೊತೆಗೆ ಹರಳು ಕಲ್ಲು ತೆಗೆಯಲು ಹೋಗುತ್ತಿದ್ದವರು ಕೋವಿ ಕತ್ತಿ, ಗುದ್ದಲಿ ಸೇರಿದಂತೆ ಮಾರಕಾಯುಧದೊಂದಿಗೆ ಹೋಗುತ್ತಿದ್ದರಿಂದ ಸಿಬ್ಬಂದಿ ಬೆಟ್ಟದ ತುದಿಯೇರಿ ಬಂದು ದಾಳಿ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಅತ್ತ ಕಡೆ ಸುಳಿಯುವ ಧೈರ್ಯವೂ ಇರಲಿಲ್ಲ.

ಕೊರೆಂಡಂ ಎಂಬ ಹೆಸರಿನ ಹರಳು ಕಲ್ಲು

ಹಗಲು ಹೊತ್ತಿನಲ್ಲೇ ಅರಣ್ಯ ಅಧಿಕಾರಿಗಳು ದಾಳಿ ಮಾಡುವ ರೂಪಿಸಿದ್ದರೂ ಹರಳು ಕಲ್ಲು ತೆಗೆಯುವ ತಂಡದ ಸದಸ್ಯರು ಆಯಕಟ್ಟಿನಲ್ಲಿ ಕುಳಿತು ಅರಣ್ಯ ಸಿಬ್ಬಂದಿ ಬರುತ್ತಿದ್ದಾರಾ ಎಂದು ಕಾವಲು ಕಾಯುತ್ತಿದ್ದರು. ಅರಣ್ಯ ಇಲಾಖೆ ಅಥವಾ ಪೊಲೀಸರು ಬರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಪಟಾಕಿ ಸಿಡಿಸುತ್ತಿದ್ದರು. ಪಟಾಕಿ ಶಬ್ದವು ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದತ್ತ ಬರುತ್ತಿದ್ದಾರೆ ಎಂಬುದರ ಸಂಕೇತವಾಗಿತ್ತು. ಈ ವೇಳೆ ಹರಳು ಕಲ್ಲು ತೆಗೆಯುತ್ತಿದ್ದವರು ಅಲ್ಲಿಂದ ಪರಾರಿಯಾಗಿ ಬಿಡುತ್ತಿದ್ದರು. ಹೀಗಾಗಿ ಹರಳು ಕಲ್ಲು ತೆಗೆಯುವವರನ್ನು ಹಿಡಿದು ಬಂಧಿಸುವುದು ಅರಣ್ಯ ಇಲಾಖೆಗೆ ಕಷ್ಟ ಸಾಧ್ಯವಾಗಿತ್ತು.

ಇಷ್ಟಕ್ಕೂ ಕೂಜಿಮಲೆ ಮತ್ತು ಸುಟ್ಟತ್ ಮಲೆಯಲ್ಲಿ ಸಿಗುವ ಹರಳು ಕೊರೆಂಡಂ ಎಂಬ ಹೆಸರಿನದ್ದಾಗಿದ್ದು ಇದಕ್ಕೆ ಹೆಚ್ಚಿನ ಬೆಲೆ ಇಲ್ಲದಾದರೂ ಬೇಡಿಕೆಯಂತು ಇದ್ದೇ ಇದೆ. ಹೀಗಾಗಿ ಜನ ಕೈತುಂಬಾ ಹಣ ಸಿಗುತ್ತದೆ ಎಂಬ ಕಾರಣಕ್ಕೆ ರಿಸ್ಕ್ ತೆಗೆದುಕೊಂಡು ಗುಡ್ಡದಲ್ಲಿ ಸುರಂಗ ತೆಗೆದು ಹರಳು ಹುಡುಕುತ್ತಿದ್ದರು. ಈಗಲೂ ಇದು ಸಂಪೂರ್ಣ ನಿಂತಿದೆ ಎಂದರೆ ತಪ್ಪಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+