Parkinson's disease: ಪಾರ್ಕಿನ್ಸನ್ಸ್ ರೋಗಿಗಳ ಆಹಾರ ಕ್ರಮ ಹೇಗಿರಬೇಕು ಗೊತ್ತಾ?
ಮನುಷ್ಯ ಹಲವು ರೋಗಗಳ ಗೂಡಾಗಿದ್ದಾನೆ. ಬಹಳಷ್ಟು ರೋಗಗಳ ಬಗ್ಗೆ ಅರಿವೇ ಇರುವುದಿಲ್ಲ. ಅದು ಅಡರಿಕೊಂಡ ಮೇಲಷ್ಟೇ ಗೊತ್ತಾಗುವುದು. ಹೀಗಾಗಿ ಅದರ ಜತೆಗೆ ಹೋರಾಡುತ್ತಾ ಬದುಕುವುದು ಅನಿವಾರ್ಯವಾಗಿದ್ದು, ವೈದ್ಯರು ನೀಡುವ ಚಿಕಿತ್ಸೆಯೊಂದಿಗೆ ಆಹಾರ ಕ್ರಮಗಳಲ್ಲಿ ನಿಗಾವಹಿಸಿ, ವೈದ್ಯರು ಹೇಳಿದಂತೆ ನಡೆದರೆ ಒಂದಷ್ಟು ಬದುಕಿ ಬಾಳಲು ಸಾಧ್ಯವಾಗುತ್ತದೆ. ಹೀಗಾಗಿ ಆಹಾರದಲ್ಲಿ ಶಿಸ್ತು ಅಳವಡಿಸಿಕೊಂಡು ಮುನ್ನಡೆದರೆ ಕೆಲವೊಂದು ರೋಗಗಳೊಂದಿಗೆ ಹೋರಾಡಿ ಬದುಕಲು ಸಾಧ್ಯವಾಗುತ್ತದೆ.
ಪಾರ್ಕಿನ್ಸನ್ಸ್ ರೋಗದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲವೇನೋ? ಆದರೆ ಇದು ನಮ್ಮನ್ನು ಕಾಡುವ ರೋಗಗಳಲ್ಲಿ ಒಂದಾಗಿದ್ದು, ಇದನ್ನು ಸಂಕ್ಷಿಪ್ತವಾಗಿ ಪಿಡಿ ಎನ್ನುತ್ತಾರೆ. ಈ ರೋಗವು ತಗುಲಿದರೆ ಮೊದಲಿಗೆ ಅದು ಮೆದುಳಿನ ನರಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಮೇಲ್ಮೋಟಕ್ಕೆ ವ್ಯಕ್ತಿ ಆರೋಗ್ಯವಂತನಂತೆ ಕಂಡು ಬಂದರೂ ಆತನ ಮುಖ್ಯ ಅಂಗವಾದ ನರಗಳ ಮೇಲೆಯೇ ದಾಳಿ ಮಾಡುವುದರಿಂದ ತನ್ನ ಶಕ್ತಿಯನ್ನೇ ಕಳೆದುಕೊಂಡು ಬಿಡುತ್ತಾನೆ. ಮೆದುಳಿನ ನರಗಳು ತನ್ನ ಕಾರ್ಯದಲ್ಲಿ ವೈಫಲತೆ ಕಾಣುವುದರಿಂದ ದೇಹದ ಚಟುವಟಿಕೆ ಕುಗ್ಗಿ ಕ್ರಮೇಣ ಸಾವಿಗೆ ಶರಣಾಗುತ್ತಾನೆ.

ಪಾರ್ಕಿನ್ಸನ್ಸ್ ಮೊದಲು ಸಬ್ ಸ್ಟೆನ್ಷಿಯಾ ನಿಗ್ರಾ ಎಂದು ಕರೆಯಲಾಗುವ ಮೆದುಳಿನಲ್ಲಿರುವ ನರಗಳನ್ನು ಬಾಧಿಸುತ್ತದೆ. ಇವುಗಳಲ್ಲಿ ಮರಣಿಸುತ್ತಿರುವ ಕೆಲವು ನರಗಳು ಚಲನೆ ಮತ್ತು ಸಂಯೋಜನೆಯನ್ನು ನಿಯಂತ್ರಿಸುವ ಮೆದುಳಿನ ಭಾಗಕ್ಕೆ ಸಂದೇಶವನ್ನು ಕಳುಹಿಸುವ ಡೋಪಮಿನ್ ಎನ್ನುವ ರಾಸಾಯನಿಕವನ್ನು ಉತ್ಪಾದಿಸುತ್ತವೆ. ಪಾರ್ಕಿನ್ಸನ್ಸ್ ರೋಗ ಉಲ್ಭಣವಾದಂತೆಲ್ಲ ಮೆದುಳಿನಲ್ಲಿ ಉತ್ಪಾದನೆಯಾಗುವ ಈ ರಾಸಾಯನಿಕದ ಪ್ರಮಾಣ ಶೇ 80ರಷ್ಟು ಕ್ಷೀಣಿಸುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿಯೂ ವ್ಯಕ್ತಿ ಕುಗ್ಗುವುದಲ್ಲದೆ ತನ್ನ ಸಾಧಾರಣ ಚಲನೆಯನ್ನೇ ಕಳೆದುಕೊಳ್ಳುತ್ತಾನೆ.
ಆರಂಭದಲ್ಲಿಯೇ ಚಿಕಿತ್ಸೆ ನೀಡಬೇಕು
ಪಾರ್ಕಿನ್ಸನ್ಸ್ ರೋಗ ಆರಂಭದಲ್ಲೇ ಪತ್ತೆಯಾದರೆ ವೈದ್ಯರು ಚಿಕಿತ್ಸೆ ನೀಡುವ ಮೂಲಕ ನಿಯಂತ್ರಿಸಲು ಸಾಧ್ಯವಾಗುತ್ತದೆ. ಉಲ್ಭಣದ ಹಂತಕ್ಕೆ ಬಂದ ಬಳಿಕ ಚಿಕಿತ್ಸೆ ನೀಡಿದರೆ ಒಂದಷ್ಟು ಆಯುಷ್ಯವನ್ನು ಮುಂದಕ್ಕೆ ಹಾಕಬಹುದು ಬಿಟ್ಟರೆ ವ್ಯಕ್ತಿ ಮೊದಲಿನಂತೆ ಆರೋಗ್ಯವಾಗಿ ಬದುಕುವುದು ಕಷ್ಟಸಾಧ್ಯವಾಗುತ್ತದೆ. ಆದರೂ ಇದನ್ನು ಚಿಕಿತ್ಸೆ ಮತ್ತು ಕೆಲವೊಂದು ಆಹಾರ ಕ್ರಮಗಳ ಮೂಲಕ ಒಂದಷ್ಟು ನಿಯಂತ್ರಿಸಿ ಒಂದಷ್ಟು ದಿನ ಬದುಕಿ ಬಾಳಲು ಸಾಧ್ಯವಾಗುತ್ತದೆ.
ಈ ರೋಗವನ್ನು ನಿಯಂತ್ರಣ ಮಾಡಬೇಕಾದರೆ ಒಂದಷ್ಟು ಆಹಾರ ಪದಾರ್ಥಗಳನ್ನು ತ್ಯಜಿಸುವುದು ಒಳ್ಳೆಯದು. ಏಕೆಂದರೆ ಈ ಆಹಾರಗಳು ರೋಗ ಉಲ್ಭಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ ಅವುಗಳನ್ನು ದೂರವಿಡಿ ಎನ್ನುತ್ತಾರೆ ವೈದ್ಯರು. ಹಾಗಾದರೆ ಯಾವ ಆಹಾರವನ್ನು ಸೇವಿಸಬಾರದು ಎನ್ನುವುದನ್ನು ನೋಡುತ್ತಾ ಹೋದರೆ, ರೋಗಿಗಳು ಮೊಟ್ಟೆಯನ್ನು ತಿನ್ನಬಾರದು ಏಕೆಂದರೆ ಇದರಲ್ಲಿ ಪ್ರೊಟೀನ್ ಜಾಸ್ತಿಯಿದ್ದು, ಕಾಯಿಲೆಗೆ ನೀಡುವ ಲೆವೊಡೊಪಾ ಚಿಕಿತ್ಸೆಗೆ ಅಪಾಯಕಾರಿಯಾಗಿದೆಯಂತೆ. ಲೆವೊಡೊಪಾ ಮತ್ತು ಪ್ರೊಟೀನ್‌ಗಳು ಕರಳು ಮತ್ತು ಮೆದುಳಿನಲ್ಲಿ ಹೀರಲು ಸ್ಪರ್ಧಿಸುತ್ತವೆ. ಹೀಗಾಗಿ ಲೆವೊಡೊಪಾ ಚಿಕಿತ್ಸೆ ತೊಡಕಾಗುತ್ತದೆಯಂತೆ.

ಯಾವ ಆಹಾರವನ್ನು ತ್ಯಜಿಸಬೇಕು?
ಕೆಂಪು ಮಾಂಸದಲ್ಲಿ ಕಬ್ಬಿಣದ ಅಂಶ ಜಾಸ್ತಿಯಿರುತ್ತದೆ. ಈ ಕಬ್ಬಿಣದ ಅಂಶವು ಮೆದುಳಿನಲ್ಲಿ ಹೆಚ್ಚಾದಷ್ಟು ಆಕ್ಸಿಡೇಟಿವ್ ಅಪಾಯಗಳನ್ನುಂಟು ಮಾಡುತ್ತದೆ. ಹೀಗಾಗಿ ಮಾಂಸ ಸೇವನೆ ತ್ಯಜಿಸುವುದು ಒಳ್ಳೆಯದು. ಕೆಂಪು ಮಾಂಸದಂತೆ ಯಕೃತ್ ಕೂಡ ಅಪಾಯಕಾರಿ ಇದರಲ್ಲಿ ಕೊಲೆಸ್ಟ್ರಾಲ್, ಕಬ್ಬಿಣ, ಸತು, ತಾಮ್ರ ಎಲ್ಲವೂ ಇರುವುದರಿಂದ ಸೇವನೆಯನ್ನು ಬಿಟ್ಟು ಬಿಡಬೇಕು.
ಇನ್ನು ಹಾಲು, ಬೆಣ್ಣೆ, ಚೀಸ್ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಇದರ ಜೊತೆಗೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಕುಕೀಸ್ ಹೊಂದಿರುವುದರಿಂದ ಅದರ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಪಾರ್ಕಿನ್ಸನ್ಸ್ ರೋಗಕ್ಕೆ ಪೋಷಕವಾಗಿ ಕೆಲವು ತರಕಾರಿ ಕಾಳುಗಳು ಕಾರ್ಯ ನಿರ್ವಹಿಸುವುದರಿಂದ ಅಂತಹವುಗಳನ್ನು ದೂರಯಿಡಬೇಕಾಗುತ್ತದೆ. ಅದ್ಯಾವುದೆಂದರೆ ಎಲೆಕೋಸು ಮತ್ತು ಹಸಿರೆಲೆ ತರಕಾರಿಗಳು. ಈ ತರಕಾರಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲುಟೇನ್ ಎನ್ನುವ ಸ್ವಾಭಾವಿಕ ವರ್ಣದ್ರವ್ಯವಿದ್ದು, ಪಾರ್ಕಿನ್ಸನ್ಸ್ ರೋಗ ಹೆಚ್ಚಾಗಲು ಸಹಕಾರಿಯಾಗಿದೆ.
ನಾವು ದಿನನಿತ್ಯ ಉಪಯೋಗಿಸುವ ಗೋಧಿ ಕೂಡ ಪಾರ್ಕಿನ್ಸನ್ಸ್ ರೋಗ ಹೆಚ್ಚಿನ ಪ್ರಮಾಣದಲ್ಲಿ ಉಲ್ಭಣವಾಗಲು ಸಹಾಯ ಮಾಡುವುದರಿಂದ ಅದನ್ನು ದೂರವಿಡುವುದು ಉತ್ತಮ. ಗೋಧಿಯಲ್ಲಿ ಪ್ರೊಟೀನ್ ಮತ್ತು ಕಬ್ಬಿಣ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಮೆದುಳಿನ ಕೋಶಗಳಿಗೆ ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಿದ್ದು, ರೋಗದ ಚಿಕಿತ್ಸೆಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುವುದರಿಂದ ತ್ಯಜಿಸುವ ಅಗತ್ಯವಿದೆ.
ಶೆಲ್‌ಫಿಶ್, ಚಪ್ಪರದ ಅವರೆ, ಸಿಹಿತಿನಿಸುಗಳು, ಚಾಕೋಲೆಟ್‌ಗಳು ಮೊದಲಾದವುಗಳೆಲ್ಲವೂ ಅಪಾಯಕಾರಿಯಾಗಿರುವುದರಿಂದ ಅವುಗಳನ್ನು ಹಿತಮಿತವಾಗಿ ಬಳಸುವುದು ಉತ್ತಮ. ಮೇಲಿನ ಆಹಾರ ಪದಾರ್ಥಗಳು ಪಾರ್ಕಿನ್ಸನ್ಸ್ ರೋಗಕ್ಕೆ ಅಪಾಯಕಾರಿಯಾಗಿರುವುದರಿಂದ ಅವುಗಳನ್ನು ತ್ಯಜಿಸುವುದು ಅನಿವಾರ್ಯ. ಆದರೆ ಯಾವ ಆಹಾರವನ್ನು ಸೇವಿಸಿದರೆ ಉತ್ತಮ ಎಂಬುವುದನ್ನು ಕೂಡ ನಾವು ತಿಳಿದುಕೊಳ್ಳಬೇಕಾಗುತ್ತದೆ.
ಈ ಆಹಾರವನ್ನು ಸೇವಿಸುವುದು ಒಳ್ಳೆಯದು
ಕಾಫಿ ಸೇವನೆ ಒಳ್ಳೆಯದಂತೆ ಇದರಲ್ಲಿರುವ ಕೆಫೀನ್ ಅಂಶ ಮಾನಸಿಕ ಜಾಗೃತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆಯಂತೆ, ವಿಟಮಿನ್ ಇ ಅಧಿಕವಾಗಿ ಹೊಂದಿರುವ ಪ್ಲಮ್‌ಗಳು ಆಕ್ಸಿಡೇಟಿವ್ ಹಾನಿಯಿಂದಾಗಿ ನಾಶವಾಗುವ ನರಕೋಶಗಳನ್ನು ರಕ್ಷಿಸುತ್ತವೆ. ಕಿತ್ತಳೆ ಹಣ್ಣು ಮತ್ತು ದಪ್ಪ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಪ್ರಯೋಜನಕಾರಿಯಾಗಿದೆ. ಒಮೆಗಾ ೩ನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಸಾಲ್ಮನ್ ಮೀನು ಕೂಡ ಪೋಷಕ ಆಹಾರವಾಗಿದೆ.
ಇದು ಕೆಲವು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಪಾರ್ಕಿನ್ಸನ್ಸ್‌ನಲ್ಲಿ ನರಗಳ ಉರಿಯೂತ ಕಂಡುಬರುವುದರಿಂದ ಅದರ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ನಾರಿನ ಅಂಶ ಹೊಂದಿರುವ ಆರ್ಟಿಚೋಕ್ ತರಕಾರಿಗಳ ಸೇವನೆ ಆರೋಗ್ಯಕಾರಿ ಇವು ಜೀರ್ಣಕ್ರಿಯೆಗೆ ನೆರವಾಗಿ ಮಲಬದ್ಧತೆಯನ್ನು ತಡೆಯುತ್ತವೆ. ಜೊತೆಗೆ ಪಾರ್ಕಿನ್ಸನ್ಸ್ ರೋಗ ತಡೆಗೂ ಸಹಕಾರಿಯಾಗಿದೆ. ಬ್ಲೂಬೆರಿ, ಸ್ಟ್ರಾಬೆರಿ ಹಣ್ಣುಗಳು, ಒಣಹಣ್ಣುಗಳಾದ ವಾಲ್ನಟ್, ಬಾದಾಮಿ, ಗೋಡಂಬಿ, ಕಡಲೆಕಾಯಿ ಮೊದಲಾದವುಗಳು ಮೆದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಡೋಪಮಿನ್ ಉತ್ಪಾದಿಸಲು ಪ್ರಚೋದಿಸುವುದರಿಂದ ರೋಗವನ್ನು ನಿಯಂತ್ರಿಸಲು ಸಾಧ್ಯವಾಗಿದೆ.












Click it and Unblock the Notifications