ಆರೋಗ್ಯಕರ ಜೀವನಕ್ಕೆ ಆಹಾರ ಕ್ರಮ ಹೇಗಿದ್ದರೆ ಒಳ್ಳೆಯದು?
ಊಟ ಬಲ್ಲವನಿಗೆ ರೋಗವಿಲ್ಲ... ಎಂಬ ಗಾದೆಯನ್ನು ನಮ್ಮ ಪೂರ್ವಜರು ಸುಮ್ಮನೆ ಮಾಡಿಲ್ಲ. ಊಟ ಅರ್ಥಾತ್ ಆಹಾರ ಸೇವನೆಯ ಮಹತ್ವವನ್ನು ಅರಿತೇ ಮಾಡಿದ್ದಾರೆ. ಹೀಗಾಗಿಯೇ ಹೊತ್ತಿಗೆ ಸರಿಯಾಗಿ ಆಹಾರ ಸೇವನೆ ಮಾಡುವುದು ಮತ್ತು ಆ ಆಹಾರ ಸೇವನೆಯಲ್ಲಿಯೂ ತಮ್ಮದೇ ಆದ ಶಿಸ್ತುಗಳನ್ನು ಅಳವಡಿಸಿಕೊಳ್ಳುವುದು, ಬಾಯಿ ರುಚಿಗಿಂತ, ಆರೋಗ್ಯಕ್ಕೆ ಪೂರಕವಾದ ಆಹಾರಕ್ಕೆ ಆದ್ಯತೆ ನೀಡುವುದು, ಹೀಗೆ ಕೆಲವೊಂದು ಕ್ರಮಗಳನ್ನು ನಿತ್ಯದ ಬದುಕಿನಲ್ಲಿ ರೂಢಿಸಿಕೊಂಡರೆ ನಾವೆಲ್ಲರೂ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ.
ಒಂದೊಳ್ಳೆಯ ಆಹಾರಕ್ರಮಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾವೆಲ್ಲರೂ ಕಷ್ಟಪಡುವುದು ಹೊಟ್ಟೆಗಾಗಿ ಎನ್ನುವುದು ಗೊತ್ತಿರುವ ವಿಚಾರವೇ.. ಹೀಗಿದ್ದೂ ಹೊತ್ತಿಗೆ ಸರಿಯಾಗಿ ಆಹಾರ ಸೇವಿಸದೆ, ಯಾವುದೋ ಹೊತ್ತಿನಲ್ಲಿ ಆಹಾರ ಸೇವಿಸಿ ಹಸಿವು ತಣಿಸಿಕೊಳ್ಳುವುದು ಆಹಾರಸೇವನೆಯ ಕ್ರಮವಲ್ಲ.

ಇಷ್ಟಕ್ಕೂ ನಾವು ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರದ ಕ್ರಮಗಳು ಹೇಗಿರಬೇಕು? ಯಾವ ವಯಸ್ಸಿಗೆ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು? ಈ ವಿಚಾರದಲ್ಲಿ ವೈದ್ಯರು ನೀಡುವ ಸಲಹೆಗಳೇನು? ಮುಂತಾದ ವಿಚಾರಗಳನ್ನು ನೋಡುತ್ತಾ ಹೋದರೆ ಆಹಾರ ಸೇವನೆಯಲ್ಲಿ ನಾವು ಮಾಡುತ್ತಿರುವ ಆವಾಂತರಗಳೇ ನಮ್ಮ ಆರೋಗ್ಯ ಹದಗೆಡಲು, ವಿವಿಧ ರೋಗಗಳನ್ನು ಎಳೆದುಕೊಳ್ಳಲು ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು.
ಇಲ್ಲಿ ನಾವೆಲ್ಲರೂ ಆರೋಗ್ಯಯುತ ಜೀವನವೇ ಬೇಕೆಂದು ಬಯಸುತ್ತೇವೆ. ಆದರೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವಹಿಸುವ ಆಹಾರ ಸೇವನೆಯ ಬಗ್ಗೆಯೇ ನಿರ್ಲಕ್ಷ್ಯ ವಹಿಸುತ್ತೇವೆ. ಪರಿಣಾಮ ಆರೋಗ್ಯ ಹದಗೆಟ್ಟು ಯಾವುದೋ ಕಾಯಿಲೆ ಅಡರಿಕೊಂಡಾಗಷ್ಟೇ ನಮಗೆ ಆರೋಗ್ಯದ ಬಗ್ಗೆ ನೆನಪಾಗುತ್ತದೆ. ಬದುಕಿನಲ್ಲಿ ಆರೋಗ್ಯ ಮುಖ್ಯ ಎಂಬುದನ್ನು ಮರೆತಿರುವ ನಾವು ಹಣ ಸಂಪಾದನೆಗೆ ಒತ್ತು ನೀಡುತ್ತಾ ಆಮೂಲ್ಯ ಬದುಕನ್ನು ಕಳೆದುಕೊಳ್ಳುತ್ತಿದ್ದೇವೆ.

ನಾವೇ ಆಹಾರದ ಕ್ರಮ ಆಯ್ಕೆ ಮಾಡಿಕೊಳ್ಳಬೇಕು
ಎಲ್ಲವನ್ನು ಹಣ ನೀಡಿ ಪಡೆದು ಅಭ್ಯಾಸವಾಗಿರುವ ನಮಗೆ ಹಣ ಕೊಟ್ಟರೂ ಪಡೆಯಲಾಗದ್ದು ನಮ್ಮ ಆರೋಗ್ಯ ಎಂಬ ಸತ್ಯ ಗೊತ್ತಿದ್ದರೂ ಅದನ್ನು ಮರೆಯುತ್ತಿದ್ದೇವೆ. ಇವತ್ತು ಹಲವು ರೋಗಗಳು ನಮ್ಮನ್ನು ಕಾಡಲು ನಮ್ಮ ಆಹಾರ ಪದ್ಧತಿಯೇ ಕಾರಣ ಎಂಬುದನ್ನು ತಳ್ಳಿಹಾಕಲಾಗದು. ಅದರಲ್ಲೂ ಬಾಯಿರುಚಿಗಾಗಿ ದೇಹಕ್ಕೆ ಒಗ್ಗದ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ. ಇದು ಎಲ್ಲೋ ಒಂದು ಕಡೆ ನಮಗೆ ಗೊತ್ತಾಗದಂತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಆಹಾರ ಸೇವನೆ ವಿಚಾರದಲ್ಲಿ ಹಸಿವಿನ ಕಾರಣಕ್ಕೆ ಇಷ್ಟವಿಲ್ಲದನ್ನು ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುವ ಬದಲು ಮನಸ್ಸಿಗೆ ಮತ್ತು ದೇಹಕ್ಕೆ ಹೊಂದುವ ಆಹಾರವನ್ನು ಸೇವಿಸಬೇಕಾಗುತ್ತದೆ. ಜತೆಗೆ ನಮ್ಮ ಆಹಾರದ ಕ್ರಮಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ಅವು ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಆಹಾರ ಸೇವನೆಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು.

ಬೆಳಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಒಂದು ಸಮಯವನ್ನು ನಿಗದಿಪಡಿಸಿಕೊಳ್ಳುವುದು ಒಳ್ಳೆಯದು. ಮತ್ತು ಆ ಸಮಯದಲ್ಲಿ ಆಹಾರ ಸೇವನೆ ಮಾಡುವುದನ್ನು ಅಭ್ಯಾಸ ಮಾಡಬೇಕು. ಬೆಳಗ್ಗಿನ ಆಹಾರ ಸೇವನೆಯತ್ತ ನಿರ್ಲಕ್ಷ್ಯ ವಹಿಸಬಾರದು. ವೈದ್ಯರು ಹೇಳುವ ಪ್ರಕಾರ ಬೆಳಗ್ಗಿನ ಉಪಹಾರ ದೇಹದ ಆರೋಗ್ಯಕ್ಕೆ ಅತ್ಯಗತ್ಯ. ಅಲ್ಲದೆ ದಿನದ ಅತೀ ಮುಖ್ಯವಾದ ಆಹಾರವಾಗಿದೆಯಂತೆ.
ರಾತ್ರಿ ಊಟ ಮಾಡಿದ ತಕ್ಷಣ ಮಲಗಬೇಡಿ
ಹಸಿದುಕೊಂಡು ಇರುವುದು, ಒಮ್ಮೆಲೆ ಹೊಟ್ಟೆ ತುಂಬಾ ತಿಂದು ಬಿಡುವುದು ಆಹಾರ ಸೇವನೆಯ ಒಳ್ಳೆಯ ಲಕ್ಷಣವಲ್ಲ. ನಾವು ದುಡಿಯುವುದು ಹೊಟ್ಟೆಗಾಗಿ ಆಗಿರುವುದರಿಂದ ಆ ಹೊಟ್ಟೆಗೆ ಆಹಾರವಾಗಿ ಏನನ್ನು ನೀಡಬೇಕೋ ಅದನ್ನು ಆಯಾಯ ಸಮಯದಲ್ಲಿ ನೀಡಿದರೆ ದೇಹದ ಕ್ರಿಯೆ ಸುಗಮವಾಗಿ ಸಾಗಲು ಸಾಧ್ಯವಾಗಲಿದೆ. ಇದೆಲ್ಲದರ ನಡುವೆ ರಾತ್ರಿ ಹೊತ್ತಿನ ಊಟ ಹೇಗಿರಬೇಕು ಎಂಬುದನ್ನು ಅರಿತುಕೊಳ್ಳುವುದು ಜಾಣತನ. ರಾತ್ರಿ ಊಟ ಮಾಡಿದ ತಕ್ಷಣ ಮಲಗದೆ, ಮಲಗುವ ಕನಿಷ್ಟ 2 ಗಂಟೆ ಮೊದಲು ಆಹಾರ ಸೇವಿಸಬೇಕು.
ರುಚಿಯಾಗಿದೆ ಎಂಬ ಕಾರಣಕ್ಕೆ ಹೊಟ್ಟೆ ತುಂಬುವಷ್ಟು ಸೇವಿಸುವ ಬದಲಿಗೆ ಮಿತ ಸೇವನೆ ಮಾಡಬೇಕು. ಪ್ರತಿದಿನ ಎಂಟರಿಂದ ರಿಂದ ಹನ್ನೆರಡು ಲೋಟಗಳಷ್ಟು ನೀರು ಕುಡಿಯಬೇಕು. ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವುದು ಆರೋಗ್ಯದ ದೃಷ್ಠಿಯಿಂದ ಉತ್ತಮ. ಕೊಬ್ಬಿನ ಅಂಶವಿರುವ ಡಾಲ್ಡಾ, ವನಸ್ಪತಿ, ಸಕ್ಕರೆ ಮತ್ತು ಉಪ್ಪು ಸೇವನೆ ಮಿತವಾಗಿರಲಿ. ಇದೆಲ್ಲದರ ನಡುವೆ ಊಟದ ಜತೆಗೆ ಕಾರ್ಬೋನೇಟೆಡ್ ಪಾನೀಯಗಳು, ಕರಿದ ತಿಂಡಿಗಳು, ಧೂಮಪಾನ, ಮಧ್ಯಪಾನ ದೂರ ಮಾಡಿದರೆ ಇನ್ನಷ್ಟು ಒಳ್ಳೆಯದು.












Click it and Unblock the Notifications