Baby: ಮಗು ಪಡೆಯುವ ಬಗ್ಗೆ ನವದಂಪತಿಗೆ ವೈದ್ಯರ ಸಲಹೆ ಏನು?
ವಿವಾಹವಾಗಿರುವ ನವದಂಪತಿಗಳು ಮಗುವಿನ ವಿಚಾರದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು? ವೈದ್ಯರು ಈ ಬಗ್ಗೆ ನೀಡುವ ಸಲಹೆಗಳೇನು? ಎಂಬುದನ್ನು ನೋಡುತ್ತಾ ಹೋದರೆ ಬದಲಾದ ಲೈಫ್ ಸ್ಟೈಲ್ ನಲ್ಲಿ ಮದುವೆಯಾದರೂ ಮಗುವನ್ನು ನಿಧಾನಕ್ಕೆ ಪಡೆದರಾಯಿತು ಎಂಬ ಆಲೋಚನೆಯಲ್ಲಿರುವವರೇ ಜಾಸ್ತಿ ಇಂತಹವರಿಗೆ ಒಂದಷ್ಟು ಕಿವಿಮಾತುಗಳನ್ನು ವೈದ್ಯರು ಹೇಳಿದ್ದಾರೆ. ಹಾಗಾದರೆ ಅದೇನು ಎಂಬುದರ ಮಾಹಿತಿ ಇಲ್ಲಿದೆ.
ಹಿಂದಿನ ಕಾಲದಂತೆ ಹೆಣ್ಣುಮಕ್ಕಳು ಹದಿನೆಂಟಕ್ಕೆಲ್ಲ ಮದುವೆಯಾಗುವುದು ಕಡಿಮೆಯಾಗಿದೆ. ಓದಬೇಕು, ಕೆಲಸ ಪಡೆಯಬೇಕು, ಆಮೇಲೆ ಮದುವೆ ಮಾಡಿಕೊಂಡರಾಯಿತು ಎಂದು ಆಲೋಚಿಸುವರೇ ಜಾಸ್ತಿ ಹೀಗಾಗಿ ಮದುವೆಯಾಗುವ ವೇಳೆಗೆ ಒಂದಷ್ಟು ವಯಸ್ಸಾಗುತ್ತಿದೆ. ಹೀಗೆ ವಯಸ್ಸಾಗಿ ವಿವಾಹವಾಗುವವರು ವಿವಾಹವಾದ ನಂತರವೂ ಮಗು ಪಡೆಯಲು ತಡಮಾಡುವುದು ಒಳ್ಳೆಯದಲ್ಲ ಎಂಬುದು ವೈದ್ಯರ ಸಲಹೆಯಾಗಿದೆ.

ಇವತ್ತು ಸಂತಾನದ ಸಮಸ್ಯೆ ಕೇವಲ ಹೆಣ್ಣಿನಲ್ಲಿ ಮಾತ್ರವಲ್ಲ ಗಂಡಿನಲ್ಲಿಯೂ ಕಾಣಿಸಲಾರಂಭಿಸಿದೆ. ಅಧ್ಯಯನದ ಪ್ರಕಾರ ವಯಸ್ಸಾದ ಗಂಡಸರಿಗೆ ಹುಟ್ಟುವ ಮಗುವಿಗೆ ಮುಂದೆ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಿಂಡ್ರೋಮ್ಗಳು ಕಾಣಿಸಿಕೊಳ್ಳಬಹುದಂತೆ. ಈ ವಿಷಯವನ್ನು ಆಳವಾಗಿ ನೋಡುವುದಾದರೆ, ತಂದೆಯಾಗುವ ಪ್ರಕ್ರಿಯೆಯಲ್ಲಿ ವಯಸ್ಸಾದಂತೆ ಹುಟ್ಟುವ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.
ಪುರುಷರಲ್ಲೂ ಸಂತಾನದ ಸಮಸ್ಯೆಯಿದೆ
ಅಧ್ಯಯನದಲ್ಲಿ ತಿಳಿದು ಬಂದಿರುವಂತೆ 30-34ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45ವಯಸ್ಸಿನಲ್ಲಿ ತಂದೆಯಾದರೆ ಅಂಥವರಲ್ಲಿ 1000ಕ್ಕೆ 4ಅಥವಾ 5ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37 ಮಕ್ಕಳಿಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ! ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವ ಅನೇಕ ತೊಂದರೆಗಳಿಗೆ ತಂದೆಯಾಗುವಾಗಿನ ವಯಸ್ಸು 40 ದಾಟಿರುವುದೇ ಮುಖ್ಯ ಕಾರಣ ಎನ್ನಲಾಗಿದೆ.

ಮಹಿಳೆಯರಲ್ಲಿ 25ವರ್ಷ ವಯಸ್ಸಿನ ನಂತರ ಉತ್ಪತ್ತಿಯಾಗುವ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತ ಬರುತ್ತದೆ. ಗರ್ಭದಲ್ಲಿನ ಭ್ರೂಣದ ಮೊದಲ ಹಂತವು ಋತುಚಕ್ರದಲ್ಲಿ ನಷ್ಟವಾಗುವ ಪ್ರಮಾಣ ಹೆಚ್ಚುತ್ತದೆ. ಇದೂ ಒಂದು ರೀತಿಯಲ್ಲಿ ಗರ್ಭಪಾತವೇ ಆಗಿರುತ್ತದೆ. ಋತುಮತಿಯಾದ ಸಂದರ್ಭದಲ್ಲಿ ರಕ್ತಸ್ರಾವದ ಜೊತೆಗೆ ಈ ಬಗೆಯ ಗರ್ಭಪಾತ ಸಂಭವಿಸಿರುತ್ತದೆ.
ಸಾಮಾನ್ಯವಾಗಿ ಋತುಚಕ್ರದ 17-18ನೇ ದಿನ ಈ ಪ್ರಕ್ರಿಯೆ ಸಂಭವಿಸಿರುತ್ತದೆ. ಮಹಿಳೆಯರ ಅರಿವಿಗೇ ಬಾರದಂತೆ ಇದು ನಡೆಯುತ್ತದೆ. ಉತ್ಪತ್ತಿಯಾದ ಭ್ರೂಣ ಗರ್ಭಪಾತವಾಗುವ ಅಪಾಯವು ಕಿರಿ ವಯಸ್ಸಿನ ಮಹಿಳೆಯರಲ್ಲಿ ಶೇ. 24ರಷ್ಟು ಮತ್ತು 35 ವರ್ಷ ದಾಟಿದ ಮಹಿಳೆಯರಲ್ಲಿ ಶೇ. 38ರಷ್ಟು ಇರುತ್ತದೆ.

ಮಗು ಪಡೆಯಲು ತಡಮಾಡಬೇಡಿ
ಅಂಡಾಣುಗಳ ಅಂಶವಷ್ಟೇ ಅಲ್ಲದೇ, ಗರ್ಭದ ಅಂಶಗಳೂ ಕೂಡ ವಯಸ್ಸಾದ ಮಹಿಳೆಯರಲ್ಲಿನ ಬಂಜೆತನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂಡಾಣುಗಳನ್ನು ಕಿರಿ ವಯಸ್ಸಿನ ಮಹಿಳೆಯರಿಂದ ಪಡೆದು ವಿಭಿನ್ನ ವಯೋಮಾನದ ಮಹಿಳೆಯರ ಗರ್ಭಾಶಯಕ್ಕೆ ದಾನ ಮಾಡಿದಾಗ ಫಲಿತಾಂಶ ವಿಭಿನ್ನವಾಗಿಯೇ ಇರುತ್ತದೆ. ಉದಾಹರಣೆಗೆ 40 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಶೇಕಡಾ 10ರಷ್ಟು ಗರ್ಭ ಕಟ್ಟುವವಿಕೆ ಯಶಸ್ವಿಯಾದರೆ, 35ಕ್ಕಿಂತ ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಇದರ ಯಶಸ್ಸಿನ ಪ್ರಮಾಣ ಶೇಕಡಾ 23ರಷ್ಟು. ರೂಢಿಗತವಾಗಿ ಹೇಳುವುದಾದರೆ, ಮಹಿಳೆ ಮೊದಲ ಬಾರಿ ಗರ್ಭ ಧರಿಸುವಾಗ 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು.
ವಯಸ್ಸಾದಂತೆ ಗರ್ಭಧರಿಸಲು ಅಥವಾ ತಂದೆಯಾಗಲು ಬೇಕಾದ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. 35ವರ್ಷಕ್ಕಿಂತ ತಡವಾಗಿ ಮದುವೆಯಾಗುವ ಮಹಿಳೆಯರು ಕುಟುಂಬ ಯೋಜನೆಯ ಯಾವುದೇ ಕ್ರಮವನ್ನು ಅನುಸರಿಸದೇ ಇರುವುದು ಒಳ್ಳೆಯದು. ಇಂತಹ ಮಹಿಳೆಯರು ಮದುವೆಯಾದ 6 ತಿಂಗಳಲ್ಲಿ ಗರ್ಭವತಿಯರಾಗದೇ ಇದ್ದರೆ ಕೂಡಲೇ ತಜ್ಞರನ್ನು ಸಂಪರ್ಕಿಸಬೇಕು. ಇಂತಹ ಸನ್ನಿವೇಶದಲ್ಲಿ ಚಿಕಿತ್ಸೆ ಬೇಕಾಗಬಹುದು. ಈ ಸನ್ನಿವೇಶಗಳಲ್ಲಿ ಅಂಡಾಣು ವೃದ್ಧಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಬಿದ್ದರೆ ಕೃತಕ ಗರ್ಭಧಾರಣೆಯನ್ನೂ ಮಾಡುವ ಸಂದರ್ಭ ಬರಬಹುದು ಆದ್ದರಿಂದ ಎಚ್ಚರವಾಗಿರುವುದು ಒಳಿತು.












Click it and Unblock the Notifications