ದೇಶದ ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಜ್: ಇಂದಿಗೂ ಮಲೆನಾಡಿಗರಿಗೆ ಇದುವೇ ಸಂಪರ್ಕ ಸಾಧನ
ಇವತ್ತಿಗೂ ಮಲೆನಾಡಿನಲ್ಲಿ ಹರಿಯುವ ಬಹಳಷ್ಟು ನದಿಗಳಿಗೆ ಸೇತುವೆಗಳಿಲ್ಲ. ಬೇಸಿಗೆಯಲ್ಲಿ ಪಾಲ, ಪಾಂಡಿ, ತೆಪ್ಪ, ದೋಣಿ ಮುಂತಾದ ಸಾಧನಗಳಿಂದ ಒಂದು ದಡದಿಂದ ಮತ್ತೊಂದು ದಡಕ್ಕೆ ತೆರಳುವ ಜನ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಭಯಭೀತರಾಗುತ್ತಾರೆ. ಕಾರಣ ಮಳೆಯ ರಭಸ ಹೆಚ್ಚಿ ನದಿಗಳು ಉಕ್ಕಿ ಹರಿಯತೊಡಗಿದಾಗ ಸಂಪರ್ಕವನ್ನೇ ಕಡಿದುಕೊಳ್ಳಬೇಕಾದ ಸಂಕಷ್ಟ ಎದುರಾಗುತ್ತದೆ.
ಮಳೆಗಾಲದಲ್ಲಿ ಬಹತೇಕ ಗ್ರಾಮಗಳು ಇವತ್ತಿಗೂ ಸಂಪರ್ಕ ಕಡಿದುಕೊಂಡು ದ್ವೀಪವಾಗುತ್ತವೆ. ಆ ಸಂದರ್ಭಗಳಲ್ಲಿ ಅಲ್ಲಿ ವಾಸಿಸುವ ಜನರ ಬದುಕು ನರಕವಾಗುತ್ತದೆ. ಈ ವೇಳೆ ಮನೆಯಿಂದ ಹೊರಹೋಗಲಾಗದೆ ಬಂಧಿಯಾಗಿ ಜೀವನ ಸಾಗಿಸಬೇಕಾಗುತ್ತದೆ. ಇನ್ನೊಂದೆಡೆ ಪ್ರವಾಹಕ್ಕೆ ಸಿಲುಕಿ ಮನೆಗಳೇ ಮುಳುಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನದಿಯನ್ನು ದಾಟಲು ವ್ಯವಸ್ಥೆಯೇ ಇಲ್ಲದೆ ಹೋದರೆ ಬದುಕು ನರಕವಾಗುವುದರಲ್ಲಿ ಎರಡು ಮಾತಿಲ್ಲ.

ಹಾಗೆನೋಡಿದರೆ ದೊಡ್ಡ ನದಿಗಳಿಗೆ ಕೇವಲ ಒಂದೆರಡು ಹಳ್ಳಿಯವರಿಗಾಗಿ ಕಾಂಕ್ರಿಟ್ ಸೇತುವೆಗಳನ್ನು ನಿರ್ಮಿಸುವುದು ಸಾಧ್ಯವಾಗದ ಮಾತು. ಇಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇಂದು ತೂಗು ಸೇತುವೆಗಳು ಸಹಕಾರಿಯಾಗುತ್ತಿದ್ದು, ಮಲೆನಾಡಿನ ಜನರ ಸಂಪರ್ಕವಾಹಕಗಳಾಗಿ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ.
ನಿಸರ್ಗಧಾಮದಲ್ಲಿ ಮೊದಲ ತೂಗುಸೇತುವೆ
ಮಲೆನಾಡು ಪ್ರದೇಶಗಳಾದ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಕೇರಳದ ಹಲವು ಕಡೆಗಳಲ್ಲಿ ತೂಗು ಸೇತುವೆಗಳು ಹೆಚ್ಚಾಗಿ ಕಂಡು ಬರುತ್ತವೆ. ಕಾವೇರಿ ನಿಸರ್ಗಧಾಮದ ತೂಗು ಸೇತುವೆಯು ಕೊಡಗಿನಲ್ಲಿರುವ ಇತರೆ ತೂಗು ಸೇತುವೆಗಳಿಗಿಂತ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಗಮನ ಸೆಳೆಯುತ್ತದೆ.

ದ್ವೀಪದಂತಿರುವ ಕಾವೇರಿ ನಿಸರ್ಗಧಾಮವನ್ನು ವೀಕ್ಷಿಸಿ ಸೌಂದರ್ಯವನ್ನು ಸವಿಯಲೆಂದು ಬರುವ ಪ್ರವಾಸಿಗರಿಗೆಂದೇ ನಿರ್ಮಿಸಲಾಗಿರುವ ಈ ತೂಗು ಸೇತುವೆಯ ಮೇಲೆ ಭಯ ಖುಷಿಗಳಿಂದ ತೂಗಾಡುತ್ತಾ ಸಾಗುವುದೇ ಒಂದು ಮಜವಾಗುತ್ತದೆ. ಮೊದಲಿಗೆ 1988ರಲ್ಲಿ 50 ಮೀಟರ್ ಉದ್ದದ ಸೇತುವೆಯನ್ನು ಇಲ್ಲಿ ನಿರ್ಮಿಸಲಾಗಿತ್ತಾದರೂ 1995ರ ವೇಳೆಗೆ ಪುನಃ ಇನ್ನೊಂದು 70ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ.
ಸುಳ್ಯದ ಗಿರೀಶ್ ಭಾರದ್ವಾಜ್ ಸಾಧನೆ
ತೂಗು ಸೇತುವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಿಗುವ ಸಲಕರಣೆಗಳನ್ನು ಉಪಯೋಗಿಸಿಕೊಂಡು ನಿರ್ಮಿಸಲಾಗುತ್ತಿದ್ದು, ಈ ಸೇತುವೆಗಳನ್ನು ದೊಡ್ಡ ದೊಡ್ಡ ನದಿಗಳಿಗೆ ನಿರ್ಮಿಸುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ? ನದಿಗಳ ದಂಡೆಯ ಪಕ್ಕದಲ್ಲಿ ದೊಡ್ಡ ಮರವಿದ್ದಲ್ಲಿ. ಇಲ್ಲದಿದ್ದಲ್ಲಿ ಕಾಂಕ್ರೀಟ್ ಕಂಬಗಳನ್ನು ನಿರ್ಮಿಸಿ ಸ್ಟೀಲ್ ತಂತಿಯನ್ನು ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಎಳೆದು ಕಟ್ಟಿ ಕಬ್ಬಿಣದ ಸಲಾಕೆಗಳನ್ನು ಕೆಲವು ಅಗತ್ಯದ ಸಾಮಗ್ರಿಯೊಂದಿಗೆ ಜೋಡಿಸಿ ನಿರ್ಮಿಸಲಾಗುತ್ತಿತ್ತು.
ಆಧುನಿಕ ಯುಗದಲ್ಲಿ ಹಲವು ತಾಂತ್ರಿಕತೆ ಹಾಗೂ ಕೈಚಳಕದಿಂದ ಕಾಂಕ್ರಿಟ್ನಿಂದ ನಿರ್ಮಿಸಲಾಗುತ್ತಿರುವ ಸೇತುವೆಗಳಿಗೆ ಹೋಲಿಸಿದ್ದೇ ಆದರೆ ತೂಗು ಸೇತುವೆಗಳು ವಿಶಿಷ್ಟವಾಗಿ ಕಂಗೊಳಿಸುತ್ತವೆ. ಇಂತಹ ತೂಗು ಸೇತುವೆಗಳನ್ನು ನಿರ್ಮಿಸಿ ಮಲೆನಾಡಿನ ಹಳ್ಳಿ ಜನರು ಮಳೆಗಾಲದಲ್ಲೀ ನಿರ್ಭಯವಾಗಿ ಓಡಾಡುವಂತೆ ಮಾಡಿದ ಕೀರ್ತಿ ದಕ್ಷಿಣ ಕನ್ನಡದ ಸುಳ್ಯದ ಗಿರೀಶ್ ಭಾರದ್ವಾಜ್ ಅವರಿಗೆ ಸಲ್ಲುತ್ತದೆ.

ಕುಗ್ರಾಮಗಳ ಸಂಪರ್ಕ ಸೇತು
ಇಂದು ಮಲೆನಾಡಿನಲ್ಲಿ ಹಲವಾರು ತೂಗು ಸೇತುವೆಗಳನ್ನು ನಿರ್ಮಿಸಿದ ಗಿರೀಶ್ ಭಾರದ್ವಾಜ್ ಅವರು ಕ್ರಾಂತಿಯನ್ನೇ ಮಾಡಿದ್ದಾರೆ. ಹಲವು ಕಡೆಗಳಲ್ಲಿ ತೂಗು ಸೇತುವೆ ನಿರ್ಮಿಸಿರುವ ಗಿರೀಶ್ ಭಾರದ್ವಾಜ್ ಅವರು ಪ್ರಪ್ರಥಮವಾಗಿ ನಿರ್ಮಿಸಿದ ತೂಗು ಸೇತುವೆಯು ಕಾವೇರಿ ನಿಸರ್ಗಧಾಮದ್ದಾಗಿದೆ. ಇಲ್ಲಿಗೆ ಭೇಟಿ ನೀಡಿದ ಕೆಲವರು ಇದನ್ನು ವೀಕ್ಷಿಸಿ ತಮ್ಮ ಊರಿನಲ್ಲೂ ಇಂತಹ ಸೇತುವೆಯನ್ನು ನಿರ್ಮಿಸಿಕೊಡುವಂತೆ ಕೋರಿಕೊಂಡ ಮೇರೆಗೆ ವಿವಿಧ ಕಡೆಗಳಲ್ಲಿ ತೂಗು ಸೇತುವೆಯನ್ನು ಗಿರೀಶ್ ಭಾರದ್ವಾಜ್ ಅವರು ನಿರ್ಮಿಸತೊಡಗಿದರಂತೆ.
ಒಂದು ಕಾಲದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಂಪರ್ಕದಿಂದ ವಂಚಿತರಾಗಿ ನಿತ್ಯದ ಮೂಲಭೂತ ಸೌಕರ್ಯಕ್ಕಾಗಿ ತಡಕಾಡಬೇಕಾದ ಪರಿಸ್ಥಿತಿಯಲ್ಲಿದ್ದ ಕೆಲವು ಹಳ್ಳಿಗಳು ಅಲ್ಲಿಯ ಜನರು ಇಂದು ತೂಗು ಸೇತುವೆಗಳ ಮೂಲಕ ಸಂಪರ್ಕ ಪಡೆದು ತೃಪ್ತಿ ಪಡುವುದನ್ನು ನಾವು ಕಾಣಬಹುದು. ಮಳೆ ಒಂದೇ ಸಮನೆ ಸುರಿದು ನೆರೆ ಬಂದು ಅದು ಇಳಿಯಲು ಅದೆಷ್ಟೋ ದಿನಗಳು ಬೇಕಾಗುತ್ತಿದ್ದವು. ಆ ದಿನಗಳಲ್ಲಿ ನಾವು ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ, ಇಂದು ತೂಗುವ ಸೇತುವೆ ನಿರ್ಮಾಣವಾಗಿದೆ. ಈಗ ನಮಗೆ ಮೊದಲ ಭಯವಿಲ್ಲ, ಮಕ್ಕಳು ಸಹ ಯಾವುದೇ ಭಯವಿಲ್ಲದೆ ದೂರದ ಶಾಲೆಗಳಿಗೆ ಹೋಗಬಹುದಾಗಿದೆ.
ತೂಗು ಸೇತುವೆಗಳು ಸಹಕಾರಿ
ಈ ತೂಗು ಸೇತುವೆಯನ್ನು ನಿರ್ಮಿಸಿ ನಮ್ಮ ಆತಂಕದಿಂದ ಪಾರು ಮಾಡಿದ ಗಿರೀಶ್ ಭಾರದ್ವಾಜ್ ಅವರನ್ನು ನಾವು ನೆನೆಯಬೇಕು. ಇಲ್ಲವೇ ಇದ್ದಲ್ಲಿ ನಮ್ಮ ಊರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಕಾಂಕ್ರಿಟ್ ಸೇತುವೆಯನ್ನು ನಿರ್ಮಿಸಿ ನಾವು ಸಂಪರ್ಕ ಪಡೆಯಲು ಸಾಧ್ಯವಿತ್ತೇ? ಎಂದು ತೂಗು ಸೇತುವೆಯಿಂದ ಪ್ರಯೋಜನ ಪಡೆದ ನಿವಾಸಿಗಳು ನುಡಿಯುತ್ತಾರೆ.
ಗ್ರಾಮೀಣ ಪ್ರದೇಶದ ಹಲವೆಡೆಗಳಲ್ಲಿ ಮಳೆಗಾಲದಲ್ಲಿ ಮಾತ್ರ ಸೇತುವೆಯ ಅವಶ್ಯಕತೆಯಿದ್ದು, ಉಳಿದ ದಿನಗಳಲ್ಲಿ ನದಿಯ ಮೂಲಕವೇ ಸಾಗುವುದು ಇಲ್ಲಿಯ ಜನರಿಗೆ ರೂಢಿಯಾಗಿರುತ್ತದೆ. ಇಂತಹ ಕಡೆಗಳಲ್ಲಿ ಕಡಿಮೆ ಖರ್ಚಿನಿಂದ ಹೆಚ್ಚು ಜನರಿಗೆ ಉಪಯೋಗವಾಗುವಲ್ಲಿ ತೂಗು ಸೇತುವೆಗಳು ಸಹಕಾರಿಯಾಗುತ್ತವೆ ಎಂದರೆ ತಪ್ಪಾಗಲಾರದು.












Click it and Unblock the Notifications