Government employee; ಕರ್ತವ್ಯ ಪರಿತ್ಯಾಗಿ ನೋಟಿಸ್ ಕುರಿತು
ಸರ್ಕಾರಿ ನೌಕರರು ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕರ್ತವ್ಯ ಲೋಪದ ಆಧಾರದ ಮೇಲೆ ಸರ್ಕಾರಿ ನೌಕರರು ಅಮಾನತು ಎಂಬ ಸುದ್ದಿಯನ್ನು ನಾವು ಆಗಾಗ ನೋಡುತ್ತೇವೆ. ಹಾಗಾದರೆ ಕರ್ತವ್ಯ ಪರಿತ್ಯಾಗಿ ನೋಟಿಸ್ ಎಂದರೇನು?, ಹೇಗೆ ಕೊಡುತ್ತಾರೆ?. ಅದಕ್ಕಿರುವ ನಿಯಮಗಳೇನು? ಎಂಬ ಮಾಹಿತಿ ಇಲ್ಲಿದೆ.
'ಕರ್ತವ್ಯ ಪರಿತ್ಯಾಗಿ ನೋಟಿಸ್' ಕುರಿತು ಮಂಜುನಾಥ ಅರ್ಜುನ ಲಿಂಗಾರೆಡ್ಡಿ. ಪೊಲೀಸ್ ಇನ್ಸ್‌ಪೆಕ್ಟರ್. ಡಿಸಿಆರ್‌ಬಿ ಕೋಲಾರ ಚಿನ್ನದ ಗಣಿ ಪ್ರದೇಶ (ಕೆಜಿಎಫ್) ಕೆಲವು ಅಂಶಗಳನ್ನು ಉಲ್ಲೇಖಿಸಿ ಲೇಖನವನ್ನು ಬರೆದಿದ್ದಾರೆ. ವಿವರಗಳು ಹೀಗಿವೆ. ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕರ್ತವ್ಯ ಪರಿತ್ಯಾಗಿ ನೋಟಿಸ್‌ನ ವಿವರಗಳು.

ಕರ್ತವ್ಯ ಪರಿತ್ಯಾಗಿ ನೋಟಿಸ್ ಯಾರ ವಿರುದ್ಧ ಹೊರಡಿಸಲಾಗುತ್ತದೆ?. ಕರ್ತವ್ಯ ಪರಿತ್ಯಾಗಿ ನೋಟಿಸ್ ಅನ್ನು ರಜೆಯನ್ನು ಪಡೆದುಕೊಳ್ಳದೇ ಸತತವಾಗಿ 21 ದಿವಸಗಳ ಕಾಲ ಕರ್ತವ್ಯಕ್ಕೆ ಗೈರುಹಾಜರಾದಲ್ಲಿ ಆತನ ವಿರುದ್ಧ ಸಕ್ಷಮ ಪ್ರಾಧಿಕಾರವು ಕರ್ತವ್ಯ ಪರಿತ್ಯಾಗಿ ನೋಟಿಸ್ ಅನ್ನು ಹೊರಡಿಸುತ್ತದೆ. ಕರ್ತವ್ಯ ಪರಿತ್ಯಾಗಿ ನೋಟಿಸ್ ಕುರಿತು ಪೊಲೀಸ್ ಮ್ಯಾನ್ಯುವೆಲ್‌ನ ಆದೇಶ ಸಂಖ್ಯೆ 525 ರಲ್ಲಿ ವಿವರಿಸಲಾಗಿದೆ.
ಕರ್ತವ್ಯ ಪರಿತ್ಯಾಗಿ ನೋಟಿಸ ಅನ್ನು ಪೊಲೀಸ್ ಇಲಾಖೆಯಲ್ಲಿ ಹೊರಡಿಸಬಹುದಾದ ಸಕ್ಷಮ ಪ್ರಾಧಿಕಾರಿ ಎಸ್.ಪಿ/ ಡೆಪ್ಯೂಟಿ ಕಮೀಷನರ್/ ಕಮಾಂಡೆಂಟ್ ದರ್ಜೆಯ ಅಧಿಕಾರಿ ಆಗಿರುತ್ತಾರೆ. ಎ.ಎಸ್.ಐ ಮತ್ತು ಅವರಗಿಂತ ಅಧೀನ ದರ್ಜೆಯ ಅಧಿಕಾರಿಗಳಿಗೆ ಅವರು ಸತತವಾಗಿ 21 ದಿವಸಗಳ ಕಾಲ ಕರ್ತವ್ಯಕ್ಕೆ ಗೈರುಹಾಜರಾದಲ್ಲಿ ಅವರ ನೇಮಕಾತಿ ಪ್ರಾಧಿಕಾರವು ಅವರ ವಿರುದ್ಧ ಕರ್ತವ್ಯ ಪರಿತ್ಯಾಗಿ ನೋಟಿಸ್ ಅನ್ನು ಹೊರಡಿಸಬಹುದು.
ರಜೆಯನ್ನು ಪಡೆದುಕೊಳ್ಳದೆ ಸತತವಾಗಿ 21 ದಿವಸಗಳ ಕಾಲ ಕರ್ತವ್ಯಕ್ಕೆ ಗೈರುಹಾಜರಾದ ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ಪರಾರಿಯಾದವರೆಂದು ಘೋಷನೆ ಮಾಡಬೇಕು. ನೋಟಿಸ್ ಅನ್ನು ಹೊರಡಿಸುವ ಪ್ರಾಧಿಕಾರವು 'ಒಂದು ವೇಳೆ ನಿಮಗೆ ಕರ್ತವ್ಯಕ್ಕೆ ಹಾಜರಾಗುವ ಅಪೇಕ್ಷೆಯಿದ್ದಲ್ಲಿ.ನೀವು ಕೂಡಲೇ ವಿಚಾರಣೆಗಾಗಿ ಎಸ್.ಪಿ/ ಡೆಪ್ಯೂಟಿ ಕಮೀಷನರ್/ ಕಮಾಂಡೆಟ್ ಇವರೆದುರು ಹಾಜರಾಗತಕ್ಕದ್ದು' ಎಂದು ಸ್ಪಷ್ಟವಾಗಿ ನಮೂದಿಸಬೇಕು.
ಸಕ್ಷಮ ಪ್ರಾಧಿಕಾರವು ಗೈರು ಹಾಜರಾದ ಸರ್ಕಾರಿ ನೌಕರನ ವಿರುದ್ಧ ಹೊರಡಿಸಿದ ಕರ್ತವ್ಯ ಪರಿತ್ಯಾಗಿ ನೋಟಿಸ್ ಅನ್ನು ಒಬ್ಬ ಜವಾಬ್ದಾರಿಯುತ ಸಿಬ್ಬಂದಿಯನ್ನು ನೇಮಿಸಿ ಜಾರಿ ಮಾಡಬೇಕು ಅಥವಾ ರಿಜಿಸ್ಟರ್ ಅಂಚೆ ಮೂಲಕ ಜಾರಿಯಾದ ನಂತರ ಸ್ವೀಕೃತಿ ವಾಪಸ್ ಬರುವಂತೆ ಜಾರಿ ಮಾಡಬಹುದು.
ಸಕ್ಷಮ ಪ್ರಾಧಿಕಾರ ನೋಟಿಸ್ ಅನ್ನು ಖುದ್ದು ಜಾರಿ ಮಾಡುವ ಕುರಿತು ನೇರವಾಗಿ ಹೇಳದಿದ್ದರೂ, ಪರೋಕ್ಷವಾಗಿ ಪೊಲೀಸ್ ಮ್ಯಾನ್ಯುವೆಲ್‌ನಲ್ಲಿ 'ಕರ್ತವ್ಯದಿಂದ ಪರಾರಿಯಾದವರು' ಎನ್ನುವ ನೋಟಿಸ್ ಜಾರಿಯಾಗದೇ ವಾಪಸಾದಾಗ ಆತನನ್ನು ಸೇವೆಯಿಂದ ಕರ್ತವ್ಯದಿಂದ ವಜಾ ಮಾಡುವ ದೋಷಾರೋಪಣೆಯನ್ನು ಹೊರಡಿಸಬೇಕು ಎಂದು ಹೇಳಿಲಾಗಿದೆ. ಅಂದರೆ ಇಲ್ಲಿ ನೋಟಿಸ್ ಅನ್ನು ಖುದ್ದಾಗಿ ಜಾರಿ ಮಾಡಿ ಇಲ್ಲವಾದರೆ ಹಿಂದುರುಗಿಸಿ ಎನ್ನುವ ಅರ್ಥ ಬರುವ ರೀತಿಯಲ್ಲಿ ಹೇಳಲಾಗಿದೆ. ನೋಟಿಸ್ ಅನ್ನು ಮನೆ ಮೇಲೆ ಜಾರಿ ಮಾಡುವುದು ಅಥವಾ ರಕ್ತ ಸಂಬಂಧಿಕರ ಮೇಲೆ ಜಾರಿ ಮಾಡಲು ಬರುವುದಿಲ್ಲ.
ಕರ್ತವ್ಯ ಪರಿತ್ಯಾಗಿ ಎಂದು ಘೋಷನೆ ಮಾಡಿದ ಒಂದು ತಿಂಗಳೊಳಗೆ ಗೈರು ಹಾಜರಾದ ಪೊಲೀಸ್ ಅಧಿಕಾರಿಯು ಕರ್ತವ್ಯಕ್ಕೆ ಎಸ್.ಪಿ/ ಡೆಪ್ಯೂಟಿ ಕಮೀಷನರ್/ ಕಮಾಂಡೆಟ್ ಮುಂದೆ ವರದಿ ಮಾಡಿಕೊಳ್ಳತಕ್ಕದು. ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾದ ಯಾವ ಸಂದರ್ಭಗಳಲ್ಲಿ ಕೆ.ಎಸ್.ಪಿ(ಡಿಪಿ) ನಿಯಮಗಳು 1965ರ ನಿಯಮ 6 ರ ಅಡಿಯಲ್ಲಿ ಇಲಾಖಾ ವಿಚಾರಣೆ ಮಾಡಬೇಕಾಗುತ್ತದೆ. ವಜಾ ಮಾಡುವ ದೋಷಾರೋಪಣೆಯನ್ನು ಹೊರಡಿಸಬೇಕಾಗುತ್ತದೆ ಅಂದರೆ ಕೆ.ಎಸ್.ಪಿ(ಡಿಪಿ) ನಿಯಮಗಳು 1965ರ ನಿಯಮ 6 ರ ಅಡಿಯಲ್ಲಿ ಇಲಾಖಾ ವಿಚಾರಣೆ ಮಾಡಬೇಕಾಗುತ್ತದೆ.
ಕರ್ತವ್ಯಕ್ಕೆ ಗೈರು ಹಾಜರಾದ ಎರಡು ತಿಂಗಳ ಒಳಗೆ ಆತನು ಕರ್ತವ್ಯಕ್ಕೆ ಮರಳದೆ ಇದ್ದರೆ, ಕರ್ತವ್ಯ ಪರಿತ್ಯಾಗಿ ಎಂದು ಘೋಷಣೆ ಮಾಡಿದ ಒಂದು ತಿಂಗಳ ಒಳಗೆ ಕರ್ತವ್ಯಕ್ಕೆ ಮರಳದೆ ಇದ್ದಲ್ಲಿ ಕರ್ತವ್ಯ ಪರಿತ್ಯಾಗಿ ನೋಟಿಸ್ ಜಾರಿಯಾಗದೆ ಸಕ್ಷಮ ಪ್ರಾಧಿಕಾರಕ್ಕೆ ವಾಪಸಾದಲ್ಲಿ ಇಲಾಖಾ ವಿಚಾರಣೆ ಮಾಡಬೇಕು.
ಕರ್ತವ್ಯ ಪರಿತ್ಯಾಗಿ ನೋಟಿಸ್ ಜಾರಿಯಾಗದೇ ವಾಪಸಾದಾಗ ಗೈರು ಹಾಜರಾದ ಪೊಲೀಸ್ ಅಧಿಕಾರಿಯ ವಿರುದ್ದ ಏಕಪಕ್ಷೀಯ ವಿಚಾರಣೆ ಮಾಡಿ, ಸೇವೆಯಿಂದ ವಜಾ ಮಾಡಲಾಗುತ್ತದೆ. ನೋಟಿಸ್ ಜಾರಿ ಮಾಡಿದ ಮೇಲೆ ಗೈರು ಹಾಜರಾದ ಪೊಲೀಸ್ ಅಧಿಕಾರಿಯು ಎಸ್.ಪಿ ಅಥವಾ ಸಂಬಂಧಿಸಿದ ಅಧಿಕಾರಿಯ ಮುಂದೆ ಹಾಜರಾದಲ್ಲಿ ನಿಯಾಮಾನುಸಾರ ಇಲಾಖಾ ವಿಚಾರಣೆಯ ನಂತರ ಆ ಆಪಾದಿತನ ನೌಕರನ ಪ್ರಕರಣದಲ್ಲಿ ಗಣನೆಗೆ ಬಂದ ಅಂಶಗಳ ಆಧಾರದ ಮೇಲೆ ಸೂಕ್ತ ಆದೇಶ ಮಾಡುತ್ತಾರೆ.












Click it and Unblock the Notifications