ಡಿಕೆ ಶಿವಕುಮಾರ್ ಆರಾಧ್ಯ ದೈವ ಗಂಗಾಧರ ಅಜ್ಜಯ್ಯ, ಎಲ್ಲಿದೆ ಈ ಮಠ? ಇಲ್ಲಿದೆ ಮಾಹಿತಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ, ಡಿಕೆ ಶಿವಕುಮಾರ್ ಸಂಕಷ್ಟ ಕಾಲದಲ್ಲಿ ಬಹಳ ನಂಬಿರುವ ದೇವರು, ಗಂಗಾಧರ ಅಜ್ಜಯ್ಯ, ಎಲ್ಲಾ ಕಷ್ಟಗಳಿಂದ ನನ್ನನ್ನು ಪಾರು ಮಾಡಿದ್ದು ಇದೇ ದೇವರು ಎಂದು ಡಿಕೆಶಿ ಕೂಡ ಹಲವು ಬಾರಿ ಹೇಳಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಇಷ್ಟೆಲ್ಲಾ ನಂಬುವ ಈ ದೇವರು ಯಾರು, ಈ ದೇವಸ್ಥಾನ ಎಲ್ಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆ ತಿಪಟೂರು ತಾಲೂಕು ಕೇಂದ್ರದಿಂದ 15 ಕಿಮೀ ದೂರದಲ್ಲಿರುವ ನೊಣವಿನಕೆರೆ ಗ್ರಾಮದಲ್ಲಿರುವ ಕಾಡಸಿದ್ಧೇಶ್ವರ ಮಠದಲ್ಲಿ ಪೂಜಿಸಲ್ಪಡುವ ದೈವವೇ ಗಂಗಾಧರ ಅಜ್ಜಯ್ಯ.

ಕಾಡಸಿದ್ಧೇಶ್ವರ ಮಠಕ್ಕೆ 800ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಇದೆ. ಮಠದಲ್ಲಿ ಗಂಗಾಧರ ಅಜ್ಜಯ್ಯ ಗದ್ದುಗೆ, ದೇವಸ್ಥಾನ, ಗೋಶಾಲೆ ಇದೆ. ಕರಿವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಶ್ರೀಗಳು ಮಠದ ಪೀಠಾಧಿಪತಿಯಾಗಿದ್ದಾರೆ. ತುಮಕೂರು ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಪ್ರಮುಖ ರಾಜಕಾರಣಿಗಳು ಕೂಡ ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಎಸ್ ಎಂ ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕವಾಗಿದ್ದ ಸಂದರ್ಭದಲ್ಲಿ ಈ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದರು. ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ವಿ ಸೋಮಣ್ಣ ಕೂಡ ಈ ಮಠದ ಭಕ್ತರಾಗಿದ್ದು ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ.

ಡಿಕೆ ಶಿವಕುಮಾರ್ ಅಪಾರವಾಗಿ ನಂಬುವ ದೇವರು
ಡಿಕೆ ಶಿವಕುಮಾರ್ ಹಲವು ವರ್ಷಗಳಿಂದ ಈ ಮಠದ ಭಕ್ತರಾಗಿದ್ದಾರೆ. ಮನೆಯ ಯಾವುದೇ ಶುಭ ಕಾರ್ಯಕ್ಕೂ ಅಥವಾ ರಾಜಕೀಯ ತೀರ್ಮಾನ ಮಾಡುವ ಮುನ್ನ ಮಠಕ್ಕೆ ಭೇಟಿ ನೀಡಿ ಶ್ರೀಗಳ ಸಲಹೆ ಪಡೆಯುವುದನ್ನು ಮಾಡುತ್ತಾರೆ. ಮೂರು ವರ್ಷಗಳ ಹಿಂದೆ ಐಟಿ, ಇಡಿ ದಾಳಿಯ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿದ್ದ ಅವರು, ಬಿಡುಗಡೆಯಾದ ಬಳಿಕ ಮೊದಲು ಆಗಮಿಸಿದ್ದು ಗಂಗಾಧರ ಅಜ್ಜಯ್ಯನ ಸನ್ನಿಧಿಗೆ.
ನಿಮ್ಮ ಕಷ್ಟಗಳೆಲ್ಲ ಕರಗುತ್ತವೆ, ನಿಮಗೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗವೂ ಇದೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದರು. ನಂತರ ಡಿಕೆ ಶಿವಕುಮಾರ್ ತಮ್ಮ ಮಗಳ ಮದುವೆ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮ ಇದ್ದಾಗ ಸ್ವಾಮೀಜಿಯನ್ನು ಭೇಟಿ ಮಾಡಿ, ಸಲಹೆ, ಆಶೀರ್ವಾದ ಪಡೆದುಕೊಳ್ಳುತ್ತಿದ್ದರು.
ಕಳೆದ 18-19 ವರ್ಷಗಳಿಂದ ನಾನು ಮಠದ ಭಕ್ತನಾಗಿದ್ದೇನೆ, ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಗಂಗಾಧರ ಅಜ್ಜಯ್ಯನವರ ಪೀಠ ಹಾಗೂ ಡಾ. ಶಿವಯೋಗೀಶ್ವರ ಶ್ರೀಗಳ ಮೇಲೆ ನನಗೆ ಅಪಾರ ನಂಬಿಕೆ, ಅವರ ಆಶೀರ್ವಾದಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ, ನನ್ನ ಸಾಧನೆಗೂ ದೈವವೇ ಕಾರಣ ಎಂದು ಅವರು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ.












Click it and Unblock the Notifications