ಉಚಿತ ಸ್ಕೀಂಗಳು ಬೇಕೋ, ದುಡಿಯುವ ಕೈಗಳಿಗೆ ಕೆಲಸ ಬೇಕೋ: ಒಂದು ಆರೋಗ್ಯಕರ ಚರ್ಚೆ
ಚುನಾವಣಾ ವರ್ಷದಲ್ಲಿ ರಾಜಕೀಯ ಪಕ್ಷಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಿವೆ. ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಲ ಬೇಕಾದ ಸಮಯವೆಂದರೆ ಅದು ಚುನಾವಣೆಯ ವೇಳೆ. ಹಾಗಾಗಿ, ಉಚಿತ ಸ್ಕೀಂಗಳು ಬೇಕೋ, ದುಡಿಯುವ ಕೈಗಳಿಗೆ ಕೆಲಸ ಬೇಕೋ ಎನ್ನುವುದು ಚರ್ಚೆಯಾಗ ಬೇಕಾದ ವಿಚಾರ..
ಚುನಾವಣಾ ವರ್ಷವಾಗಿರುವುದರಿಂದ ರಾಜಕೀಯ ಪಕ್ಷಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಿವೆ. ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಈಗಾಗಲೇ ಮೂರು ಸ್ಕೀಂ ಅನ್ನು ಘೋಷಿಸಿದೆ. ಇನ್ನೆರಡು ಯೋಜನೆ ಪೈಪ್ ಲೈನ್ ನಲ್ಲಿದೆ. ಅಶಕ್ತರಿಗೆ, ಅಂಗವಿಕಲರಿಗೆ ಇಂತಹ ಯೋಜನೆಗಳಿಂದ ಉಪಯೋಗವಾಗುತ್ತದೆ ಎನ್ನುವುದು ನಿರ್ವಿವಾದ, ಆದರೆ ಅರ್ಹರಿಗೆ ಮಾತ್ರ ತಲುಪವಂತಹ ಕ್ರಮಗಳನ್ನು ಮೂರೂ ಪಕ್ಷಗಳು ತೆಗೆದುಕೊಳ್ಳುತ್ತವೆಯೇ ಎನ್ನುವುದು ಇಲ್ಲಿ ಪ್ರಶ್ನೆ.
ಕಾಂಗ್ರೆಸ್ ಇದುವರೆಗೆ ಘೋಷಿಸಿರುವ ಹೊಸ ಗ್ಯಾರಂಟಿ ಸ್ಕೀಂಗಳೆಂದರೆ, ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ, ಪ್ರತೀ ಮನೆಗೆ ಇನ್ನೂರು ಯುನಿಟ್ ಉಚಿತ ವಿದ್ಯುತ್, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹತ್ತು ಕೆಜಿ ಅಕ್ಕಿ ಉಚಿತ. ಈಗ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳನ್ನು ಹೊರತು ಪಡಿಸಿ, ಈ ಮೂರು ಗ್ಯಾರಂಟಿ ಸ್ಕೀಂಗಳಿಗೆ ತಗಲುವ ಹೆಚ್ಚುವರಿ ಅಂದಾಜು ವಾರ್ಷಿಕ ವೆಚ್ಚ ಸುಮಾರು 52ಸಾವಿರ ಕೋಟಿ ರೂಪಾಯಿ.

ಕಾಂಗ್ರೆಸ್ ಘೋಷಿಸಿದ ಈ ಹೊಸ ಸ್ಕೀಂಗಳಿಗೆ ಸಾರ್ವಜನಿಕ ವಲಯದಲ್ಲಿ ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಏನು ಯೋಜನೆಗಳನ್ನಾದರೂ ಘೋಷಿಸಿಕೊಳ್ಳಿ, ಅದನ್ನು ನಿಮ್ಮ ಪಕ್ಷದ ಫಂಡ್ ನಿಂದ ಜನರಿಗೆ ಕೊಟ್ಟುಕೊಳ್ಳಿ, ಸಾರ್ವಜನಿಕರ ತೆರಿಗೆ ದುಡ್ಡಿನಿಂದ ಅಲ್ಲ, ಈಗಿರುವ ಯೋಜನೆಗಳನ್ನೇ ಸರಿಯಾಗಿ ಜಾರಿಗೆ ತಂದು, ತಲುಪ ಬೇಕಾದವರಿಗೆ ತಲುಪಿಸಿ ಎನ್ನುವ ಕಿಡಿಮಾತುಗಳೂ ಕೇಳಿ ಬರುತ್ತಿವೆ.
ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಇನ್ನೆರಡು 'ಗ್ಯಾರಂಟಿ': ಈ ಬಾರಿ ರೈತರು, ಯುವಕರೇ ಟಾರ್ಗೆಟ್- ಇಲ್ಲಿದೆ ಇನ್‌ಸೈಡ್ ರಿಪೋರ್ಟ್
ಇದರೆ ಜೊತೆಗೆ ಇನ್ನೊಂದು ವಿಚಾರ ಚರ್ಚೆಯಲ್ಲಿ ಇರುವುದು, ಇಂತಹ ಯೋಜನೆಗಳು ಅರ್ಹರಿಗೆ ಸಿಕ್ಕರೆ ಪರವಾಗಿಲ್ಲ, ಇಲ್ಲದಿದ್ದರೆ ಜನರನ್ನು ಇನ್ನಷ್ಟು ಸೋಮಾರಿಯನ್ನಾಗಿಸುವುದಿಲ್ಲವೇ, ಇದರ ಬದಲು ಜನರು ಸ್ವಾವಲಂಬನೆಯಿಂದ ಬದಕುಲು ದುಡಿಯುವ ಕೈಗಳಿಗೆ ಕೆಲಸ ಕೊಡಿ. ನಿಮ್ಮ ಯಾವ ಪುಕ್ಸಟೆ ಯೋಜನೆಗಳೂ ಬೇಕಾಗಿಲ್ಲ ಎನ್ನುವ ಮಾತೂ ಚಾಲ್ತಿಯಲ್ಲಿದೆ.
ರಾಜ್ಯದ ಜನರಿಗೆ ಈಗ ಬೇಕಾಗಿರುವುದು ಉಚಿತ ಯೋಜನೆಗಳಾ, ನಿರುದ್ಯೋಗಿಗಳಿಗೆ ಉದ್ಯೋಗದ ಆಸರೆಯಾ, ಹೊಸ ಉದ್ಯೋಗದ ಸೃಷ್ಟಿಯಾ, ಭ್ರಷ್ಟಾಚಾರ ಮುಕ್ತ ಆಡಳಿತವೋ ಎನ್ನುವುದು ಚರ್ಚೆಯಾಗಿರಬೇಕಾಗಿರುವಂತಹ ವಿಚಾರ. ರಾಜ್ಯದ ಮೂರು ಪ್ರಮುಖ ಪಕ್ಷಗಳು ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಯಾವುದೇ ಚಕಾರವನ್ನು ಎತ್ತುತ್ತಿಲ್ಲ. ಎಲ್ಲರಿಗೂ ಜನಪ್ರಿಯ ಘೋಷಣೆಯ ಮೂಲಕ ಮತ್ತೆ ಅಧಿಕಾರಕ್ಕೇರುವ ತವಕವಷ್ಟೇ..

ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಉಚಿತ ಸ್ಕೀಂ ಯೋಜನೆಗಳ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಾರಿಕಿಗೆ ಜೋತು ಬಿದ್ದಿವೆಯೋ ಹೊರತು, ಜನರು ಸ್ವಾಭಿಮಾನದಿಂದ ಬದಕಲು ಏನು ಕ್ರಮ ತೆಗೆದುಕೊಳ್ಲಬೇಕೋ ಅದರ ಬಗ್ಗೆ ಚಿಂತನೆಯನ್ನು ನಡೆಸುತ್ತಿಲ್ಲ.
ಹೊಸ ಉದ್ಯೋಗ ಸೃಷ್ಟಿಯಾದರೆ ಅದನ್ನು ಅವಲಂಬಿಸಿ ಇನ್ನಷ್ಟು ಹೊಸಹೊಸ ಕೆಲಸಗಳಿಗೆ ಕಾರಣವಾಗುತ್ತದೆ, ಜನರ ಆರ್ಥಿಕ ಮಟ್ಟ ಸುಧಾರಿಸುತ್ತದೆ, ನೆಮ್ಮದಿಯ ಬಾಳನ್ನು ಜೀವಿಸಬಹುದಲ್ಲವೇ ಎನ್ನುವುದು ಚರ್ಚೆಯಾಗಿರ ಬೇಕಾದ ವಿಚಾರ, ಪಕ್ಷದ ಪ್ರಣಾಳಿಕೆಯಲ್ಲಿ ಇರಬೇಕಾದ ಅಂಶ ಎನ್ನುವುದು ಹಲವು ಜನರ ಒಕ್ಕೂರಿಲಿನ ಅಭಿಪ್ರಾಯ ಕೂಡಾ..
ಸರಕಾರದ ಸ್ಕೀಂಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದ ಉದಾಹರಣೆಗಳು ನಮ್ಮ ಕಣ್ಮುಂದಿದೆ, ಯೋಜನೆಗಳು ಅರ್ಹರಿಗೆ ತಲುಪದ ಆಡಳಿತ ಶೈಲಿಯನ್ನೂ ನೋಡಿದ್ದಾಗಿದೆ. ಯೋಜನೆಗಳು ಜನರಿಗೆ ತಲುಪುವಂತಾಗಲು ಅಧಿಕಾರಿಗಳ ಕೈಬಿಸಿ ಮಾಡಬೇಕಾದ ಸುದ್ದಿಯೂ ಹೊಸದೇನಲ್ಲ. ಇಂತಹ ಹೊಸ ಸ್ಕೀಂಗಳು ಇನ್ನಷ್ಟು ಕರಪ್ಸನ್ ಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹಾಗಾಗಿ, ಕಡುಬಡತನ ರೇಖೆಯಿಂದ ಕೆಳಗಿರುವವರು, ಅಬಲರು, ಅಶಕ್ತರು, ಅಂಗವಿಕಲರು ಮುಂತಾದ ವರ್ಗದವರಿಗೆ ಈಗಾಗಲೇ ಇರುವ ಯೋಜನೆಗಳನ್ನು ಸರಿಯಾಗಿ ತಲುಪಿಸುವಂತೆ ಮಾಡುವುದನ್ನು ಪಕ್ಷಗಳು ತಮ್ಮ ಮೊದಲ ಆದ್ಯತೆ ಎಂದು ಪರಿಗಣಿಸಿ ಅದನ್ನು ಪ್ರಣಾಳಿಕೆಯಲ್ಲಿ ಹಾಕಿ ಜಾರಿಗೆ ತರುವುದು ಉತ್ತಮವೋ, ಕೇವಲ ಗದ್ದುಗೆಗೆ ಏರುವ ಉದ್ದೇಶವನ್ನಿಟ್ಟುಕೊಂಡು ಹೊಸ ಯೋಜನೆಗಳನ್ನು ತಂದು ಜನರು ಸ್ವಾವಲಂಬಿ ಜೀವನ ನಡೆಸಲು ಅಡ್ಡಗಾಲು ಹಾಕುವುದೋ ಸರಿಯೇ ಎನ್ನುವುದು ಚರ್ಚೆಯ ವಿಷಯವಾಗಿದೆ.
ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಲ ಬೇಕಾದ ಸಮಯವೆಂದರೆ ಅದು ಚುನಾವಣೆಯ ವೇಳೆ.. ಹಾಗಾಗಿ, ಹೊಸಹೊಸ ಉಚಿತ ಸ್ಕೀಂಗಳು ಬೇಕೋ, ದುಡಿಯುವ ಕೈಗಳಿಗೆ ಕೆಲಸ ಬೇಕೋ ಎನ್ನುವುದು ಚರ್ಚೆ ನಡೆಯಬೇಕಾದ ವಿಚಾರ..












Click it and Unblock the Notifications