ಹುಕ್ಕೇರಿ ಶಾಸಕ, ಸಚಿವ ಉಮೇಶ್ ಕತ್ತಿ ಪರಿಚಯ
ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಹೃದಯಘಾತದಿಂದ ಸೆಪ್ಟೆಂಬರ್ 6ರ ಬುಧವಾರ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ ಸಚಿವರಾಗಿದ್ದರು.
61 ವರ್ಷದ ಉಮೇಶ್ ಕತ್ತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಶಾಸಕರು. 9 ಸಲ ಚುನಾವಣೆ ಎದುರಿಸಿದ್ದ ಅವರು 8 ಬಾರಿ ಗೆದ್ದಿದ್ದರು. 4 ಬಾರಿ ಸಚಿವರಾಗಿದ್ದರು. 1985ರಲ್ಲಿ ತಂದೆ ವಿಶ್ವನಾಥ ಕತ್ತಿ ನಿಧನದ ಬಳಿಕ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, ಆರು ಪಕ್ಷಗಳನ್ನು ಬದಲಾವಣೆ ಮಾಡಿದರೂ ಗೆದ್ದು ಬರುತ್ತಿದ್ದ ಪ್ರಭಾವಿ ನಾಯಕ.
ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿದ್ದರು. ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದರು, ಗೆಲುವು ಸಾಧಿಸಿದರು.

1989ರಲ್ಲಿ ಜನತಾದಳಕ್ಕೆ ಉಮೇಶ್ ಕತ್ತಿ ಸೇರ್ಪಡೆಗೊಂಡರು, ಗೆದ್ದರು. 1994ರಲ್ಲಿಯೂ ಗೆದ್ದು ಸತತ ಮೂರನೇ ಗೆಲುವು ಸಾಧಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ನಿಂದ ಸ್ಪರ್ಧಿಸಿ 4ನೇ ಬಾರಿಯೂ ಗೆಲುವು ಸಾಧಿಸಿದ್ದರು.
ಒಂದೇ ಚುನಾವಣೆಯಲ್ಲಿ ಸೋಲು; 2004ರಲ್ಲಿ ಕಾಂಗ್ರೆಸ್ ಸೇರಿದ ಉಮೇಶ್ ಕತ್ತಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಸೋತರು. ರಾಜಕೀಯ ಜೀವನದಲ್ಲಿ ಇದೊಂದೇ ಚುನಾವಣೆಯಲ್ಲಿ ಉಮೇಶ್ ಕತ್ತಿ ಕೇವಲ 821 ಮತಗಳ ಅಂತರದಿಂದ ಸೋತಿದ್ದರು.
ಉಮೇಶ್ ಕತ್ತಿ 2008ರಲ್ಲಿ ಜೆಡಿಎಸ್ ಸೇರಿದರು, ಮತ್ತೆ ಗೆಲುವು ಕಂಡರು. ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 6ನೇ ಗೆಲುವು ಸಾಧಿಸಿದರು.
2013ರ ಚುನಾವಣೆಯಲ್ಲಿಯೂ ಉಮೇಶ್ ಕತ್ತಿ ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿ ಉಮೇಶ್ ಕತ್ತಿ 83,588 ಮತಗಳನ್ನು ಪಡೆದು 8ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಉಮೇಶ್ ಕತ್ತಿ 1996ರಲ್ಲಿ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾಗಿದ್ದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾಗಿದ್ದರು. 2010ರಲ್ಲಿ ಕೃಷಿ ಸಚಿವರಾಗಿದ್ದರು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದಾಗಿದೆ. 2019ರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟಕ್ಕೆ ಸೇರಿದರು, ಆಗ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಹೊಣೆ ನೀಡಲಾಗಿತ್ತು.
2021ರಲ್ಲಿ ಮುಖ್ಯಮಂತ್ರಿ ಬದಲಾವಣೆಗೊಂಡರು. ಬಸವರಾಜ ಬೊಮ್ಮಾಯಿ ಸಂಪುಟಕ್ಕೂ ಉಮೇಶ್ ಕತ್ತಿ ಸೇರಿದರು. ಅರಣ್ಯ ಖಾತೆ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿದ್ದರು.
ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಸಹ ರಾಜಕೀಯದಲ್ಲಿದ್ದು, ಮಾಜಿ ಸಂಸದರು. ದಿ. ಧರಂ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಮಾತ್ರ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ದಾಖಲೆಯನ್ನು ಕತ್ತಿ ಸರಿಗಟ್ಟಿದ್ದರು.
ವಿವಾದಗಳು; ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು. ನಾನು ಪ್ರತ್ಯೇಕ ರಾಜ್ಯದ ಮೊದಲ ಮುಖ್ಯಮಂತ್ರಿಯಾಗುತ್ತೇನೆ ಎಂದು ಉಮೇಶ್ ಕತ್ತಿ ಸದಾ ಹೇಳುತ್ತಿದ್ದರು. ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗುತ್ತಿತ್ತು.












Click it and Unblock the Notifications