ನೋಯ್ಡಾದ ದೈತ್ಯ ಕಟ್ಟಡಗಳು ಧರೆಗೆ ಉರುಳುತ್ತಿರುವುದು ಯಾಕೆ?

ದೆಹಲಿ ಬಳಿಯ ನೋಯ್ಡಾದ ಅವಳಿ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿರುವುದು ಕಳೆದ ಒಂದು ವಾರದಿಂದ ದೊಡ್ಡ ಸುದ್ದಿಯಾಗಿದೆ. ಆದರೆ, ಸುದ್ದಿ ಒಂದು ವಾರದ ಹಿಂದೆ ಹೆಚ್ಚು ಕೇಳಿಬರುತ್ತಿದೆಯಾದರೂ ಈ ವಿಚಾರ ನಿನ್ನೆ ಮೊನ್ನೆಯದ್ದಲ್ಲ, ದಶಕದ ಹಿಂದಿನದು.

ನೋಯ್ಡಾ ಟ್ವಿನ್ ಟವರ್ಸ್ ಎಂದೇ ಸುದ್ದಿಯಾಗಿರುವ ಎರಡು ಕಟ್ಟಡಗಳು ಸಾಮಾನ್ಯವಲ್ಲ. ಎತ್ತರದಲ್ಲಿ ಅವು ಕುತುಬ್ ಮಿನಾರ್ ಅನ್ನೂ ಮೀರಿಸುತ್ತವೆ. ಇಷ್ಟೇ ಆಗಿದ್ದರೆ ಈ ಅವಳಿ ಕಟ್ಟಡಗಳು ನೋಯ್ಡಾದ ಹೆಮ್ಮೆ ಎನಿಸುತ್ತಿದ್ದವು. ಅದರ ಬದಲು ಈ ದೈತ್ಯ ಕಟ್ಟಡಗಳು ರಾಕ್ಷಸೀ ಸ್ವರೂಪವಾಗಿ ಪರಿಣಮಿಸಿವೆ. ರಾವಣನ ಸಂಹಾರದಂತೆ ಇದೀಗ ಈ ಕಟ್ಟಡಗಳನ್ನು ನೆಲಕ್ಕುರುಳಿಸಲಾಗುತ್ತಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಆಗಸ್ಟ್ 28ರಂದು ಇವುಗಳನ್ನು ಉರುಳಿಸಲಾಗುತ್ತಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ. ಭಾರತದಲ್ಲಿ ಇಷ್ಟು ದೊಡ್ಡ ಕಟ್ಟಡಗಳನ್ನು ಉರುಳಿಸುತ್ತಿರುವುದು ಇದೇ ಮೊದಲು. ಅದೂ ಒಂದು ಸೋಜಿಗದ ಸಂಗತಿ. ಅದಕ್ಕಾಗಿ ಪರಿಣಿತ ಸಂಸ್ಥೆಯ ಕೈಗೆ ಡೆಮಾಲಿಶನ್ ಜವಾಬ್ದಾರಿ ಕೊಡಲಾಗಿದೆ.

40 ಅಂತಸ್ತಿನ ಈ ಕಟ್ಟಡಗಳನ್ನು ಯಾಕೆ ನೆಲಸಮ ಮಾಡಲಾಗುತ್ತಿದೆ? ತಪ್ಪು ಯಾರ ಕಡೆಯಿಂದ ಆಗಿದೆ? ಕಟ್ಟಡ ಧ್ವಂಸವಾದರೆ ಅಕ್ಕಪಕ್ಕದ ಕಟ್ಟಡಗಳ ಗತಿ ಏನು? ಈ ಪ್ರಕರಣ ನಮ್ಮ ಅನೇಕ ಬಿಲ್ಡರ್‌ಗಳಿಗೆ ಮತ್ತು ಅಧಿಕಾರಿಗಳಿಗೆ ಪಾಠವಾಗಬಹುದು.

ರಕ್ಕಸಸದೃಶ ಕಟ್ಟಡಗಳು

ರಕ್ಕಸಸದೃಶ ಕಟ್ಟಡಗಳು

ದೆಹಲಿ ಎನ್‌ಸಿಆರ್ ಪ್ರದೇಶದ ವ್ಯಾಪ್ತಿಯಲ್ಲಿರುವ ಮತ್ತು ಉತ್ತರಪ್ರದೇಶ ರಾಜ್ಯಕ್ಕೆ ಸೇರುವ ನೋಯ್ಡಾ ನಗರದ ಸೆಕ್ಟರ್ 93ಎನಲ್ಲಿರುವ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ರಸ್ತೆ ಬದಿಯಲ್ಲಿ ಈ ಅವಳಿ ಕಟ್ಟಡಗಳಿವೆ. ಸೂಪರ್‌ಟೆಕ್ ಎಂಬ ಬಿಲ್ಡರ್‌ನ ಎಮರಾಲ್ಡ್ ಕೋರ್ಟ್ ಪ್ರಾಜೆಕ್ಟ್ ಬಾಗವಾಗಿ ಈ ಎರಡು ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಒಂದೊಂದು ಕಟ್ಟಡವೂ 30 ಅಂತಸ್ತಿನದ್ದಾಗಿದೆ. ಎರಡು ಕಟ್ಟಡಗಳು ಒಟ್ಟು 7.5 ಲಕ್ಷ ಚದರಡಿ ಪ್ರದೇಶದಲ್ಲಿ ನಿರ್ಮಿತವಾಗಿವೆ. 900 ಫ್ಲಾಟ್‌ಗಳು ಅವುಗಳಲ್ಲಿವೆ. ನೋಡಲು ಬಹಳ ಭವ್ಯವಾಗಿವೆ, ಕಣ್ಣು ಕುಕ್ಕುವಂತಿವೆ. ಎಕ್ಸ್‌ಪ್ರೆಸ್‌ವೇನಲ್ಲಿ ಹಾದು ಹೋಗುವಾಗ ಯಾರಾದರೂ ಸರಿ ವಾವ್ ಎಂದು ಉದ್ಗರಿಸಿಯಾರು...! ಆದರೆ ಕಳೆದ ಹತ್ತು ವರ್ಷಗಳಿಂದಲೂ ಈ ಅವಳಿ ಕಟ್ಟಡಗಳು ಇಲ್ಲಿನ ನಿವಾಸಿಗಳು ಹಾಗೂ ಸುತ್ತಮುತ್ತಲಿನವರ ನಿದ್ದೆಗೆಡಿಸಿವೆ.

ಯಾಕೆ ಉರುಳಿಸಲಾಗುತ್ತಿದೆ?

ಯಾಕೆ ಉರುಳಿಸಲಾಗುತ್ತಿದೆ?

ಈ ಕಟ್ಟಡಗಳ ನಿರ್ಮಾಣದಲ್ಲಿ ಹಲವು ನಿಯಮಗಳ ಉಲ್ಲಂಘನೆಯಾಗಿದೆ. ಸಣ್ಣಪುಟ್ಟ ನಿಯಮಗಳನ್ನು ಮೀರಿ ಕಟ್ಟಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ ಅವು ಗಂಭೀರ ಸ್ವರೂಪದ್ದೆನ್ನಲಾಗಿದೆ. 2010ರ ಯುಪಿ ಅಪಾರ್ಟ್ಮೆಂಟ್ ಕಾಯ್ದೆಯ ಉಲ್ಲಂಘನೆಯಾಗಿದೆ. ವಸತಿ ಸಮುಚ್ಚಯಗಳು ಹೊಂದಿರಬೇಕಾದ ಕನಿಷ್ಠ ಅಂತರದ ನಿಯಮವನ್ನು ಇಲ್ಲಿ ಪಾಲಿಸಲಾಗಿಲ್ಲ, ನಿಯಮ ಮೀರಿ ಕಟ್ಟಡಗಳ ಎತ್ತರ ಮಾಡಲಾಗಿದೆ ಎಂಬಿತ್ಯಾದಿ ಅಕ್ರಮಗಳು ಕಂಡು ಬಂದಿವೆ.

2004ರಲ್ಲಿ ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಹೌಸಿಂಗ್ ಸೊಸೈಟಿ ಈ ಕಟ್ಟಡ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿತು. 2005ರಲ್ಲಿ ನೋಯ್ಡಾ ಪ್ರಾಧಿಕಾರವು ಗರಿಷ್ಠ 9 ಅಂತಸ್ತುಗಳ 14 ಟವರ್‌ಗಳ ಬಿಲ್ಡಿಂಗ್ ಪ್ಲಾನ್‌ಗೆ ಅನುಮೋದನೆ ಕೊಟ್ಟಿತು.

2012ರಲ್ಲಿ ನೋಯ್ಡಾ ಪ್ರಾಧಿಕಾರ ಬಿಲ್ಡಿಂಗ್ ಪ್ಲಾನ್ ಪರಿಷ್ಕರಿಸಿತು. 40 ಮಹಡಿಗಳ ಎರಡು ಕಟ್ಟಡಗಳಿಗೆ ಅವಕಾಶ ನೀಡಿತು. 32 ಅಂತಸ್ತಿನ ಏಪೆಕ್ಸ್ ಮತ್ತು 29 ಅಂತಸ್ತಿನ ಸಿಯಾನೆ ಕಟ್ಟಡಗಳು ನಿರ್ಮಾಣಗೊಂಡವು.

ಆದರೆ, ಹಸಿರು ಪ್ರದೇಶದಲ್ಲಿ ವಸತಿ ನಿರ್ಮಿಸುವುದಾಗಿ ಜನರಿಗೆ ಸುಪರ್‌ಟೆಕ್ ಭರವಸೆ ನೀಡಿ ಹಣ ಪಡೆದಿತ್ತು. ಆದರೆ, ಹಸಿರು ಪ್ರದೇಶ ಇರಬೇಕಾದ ಸ್ಥಳದಲ್ಲಿ ಕಟ್ಟಡಗಳು ತಲೆ ಎತ್ತಿದವು. ಮೂರನೇ ಎರಡರಷ್ಟು ಫ್ಲಾಟ್‌ಗಳು ಮಾರಾಟವಾಗಿದ್ದವು.

ಸೊಸೈಟಿಯ ನಿವಾಸಿ ಕ್ಷೇಮ ಸಂಸ್ಥೆ (ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್) ಅಲಹಾಬಾದ್ ಹೈಕೋರ್ಟ್‌ಗೆ ಹೋಗಿ, ಈ ಕಟ್ಟಡ ಅಕ್ರಮ ಎಂದು ದೂರು ಕೊಟ್ಟಿತು. ಈ ಅವಳಿ ಕಟ್ಟಡಗಳನ್ನು ನಾಲ್ಕು ತಿಂಗಳೊಳಗೆ ಉರುಳಿಸುವಂತೆ ಹೈಕೋರ್ಟ್ 2014ರಲ್ಲಿ ಆದೇಶ ಹೊರಡಿಸಿತು. ಫ್ಲಾಟ್‌ಗಳನ್ನು ಕೊಂಡವರಿಗೆ ಶೇ. 14ರಷ್ಟು ಬಡ್ಡಿ ಸೇರಿಸಿ ಹಣ ಮರಳಿಸುವಂತೆ ಆದೇಶಿಸಿತು.

ಆದರೆ, ಅಷ್ಟು ದೊಡ್ಡ ಕಟ್ಟಡಗಳನ್ನು ಉರುಳಿಸಿದರೆ ಅಪಾಯವಾಗಬಹುದು ಎಂಬ ಜಂಜಾಟದಲ್ಲಿ ಕಟ್ಟಡ ಧ್ವಂಸ ಕಾರ್ಯ ವಿಳಂಬವಾಗುತ್ತಾ ಬಂದಿತು. ಹೈಕೋರ್ಟ್ ತೀರ್ಪಿನ ಪರವಾಗಿ ಮತ್ತು ವಿರುದ್ಧವಾಗಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾದವು.

2021 ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿತು. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಕಟ್ಟಡ ನಿರ್ಮಾಣ ನಿಯಮಗಳ ಉಲ್ಲಂಘನೆಯಾಗಿರುವುದನ್ನು ಸುಪ್ರೀಂಕೋರ್ಟ್ ಕೂಡ ಅಂಗೀಕರಿಸಿತು.

ಆಗಸ್ಟ್ 28ರಂದು ಕಟ್ಟಡ ನೆಲಸಮ ಆಗಬೇಕು ಎಂದು ಕೋರ್ಟ್ ಆದೇಶಿಸಿದೆ. ಹವಾಮಾನ, ತಾಂತ್ರಿಕ ಸಮಸ್ಯೆಗಳು ಎದುರಾದರೆ ಏಳು ದಿನಗಳ ಹೆಚ್ಚಿನ ಕಾಲಾವಕಾಶ ಕೊಟ್ಟಿದೆ. ಅಂದರೆ ಸೆಪ್ಟೆಂಬರ್ 4ರ ಒಳಗೆ ಕಟ್ಟಡಗಳ ಧ್ವಂಸ ಆಗಬೇಕು ಎಂಬುದು ಸರ್ವೋಚ್ಚ ನ್ಯಾಯಾಲಯದ ಆದೇಶ.

ಸೌತ್ ಆಫ್ರಿಕಾ ಕಂಪನಿಯಿಂದ ಧ್ವಂಸ

ಸೌತ್ ಆಫ್ರಿಕಾ ಕಂಪನಿಯಿಂದ ಧ್ವಂಸ

ಮುಂಬೈನ ಎಡಿಫೈಸ್ ಎಂಜಿನಿಯರಿಂಗ್ ಮತ್ತು ಆ ಕಂಪನಿಯ ಪಾರ್ಟ್ನರ್ ಎನಿಸಿರುವ ಸೌತ್ ಆಫ್ರಿಕಾದ ಜೆಟ್ ಡೆಮಾಲಿಶನ್ ಕಂಪನಿ ಈಗ ನೋಯ್ಡಾ ಅವಳಿ ಕಟ್ಟಡಗಳ ಧ್ವಂಸ ಕಾರ್ಯದ ಗುತ್ತಿಗೆ ಪಡೆದಿವೆ. ಭಾರತದಲ್ಲಿ ಇಷ್ಟು ದೊಡ್ಡ ಕಟ್ಟಡಗಳನ್ನು ಈ ಹಿಂದೆ ಉರುಳಿಸಿದ್ದಿಲ್ಲ. ಯಾವ ಭಾರತೀಯ ಕಂಪನಿಗೂ ಈ ಅನುಭವ ಇಲ್ಲ. ಜೆಟ್ ಡೆಮಾಲಿಶನ್ಸ್ ಸಂಸ್ಥೆ ಬೇರೆ ಬೇರೆ ಕಡೆ ಇಂಥ ದೈತ್ಯ ಕಟ್ಟಡಗಳನ್ನು ಉರುಳಿಸಿದ ಅನುಭವ ಹೊಂದಿದೆ. ಹೀಗಾಗಿ, ಅದಕ್ಕೆ ಇದರ ಗುತ್ತಿಗೆ ಕೊಡಲಾಗಿದೆ.

ಧ್ವಂಸ ಕಾರ್ಯ ಹೇಗೆ?

ಧ್ವಂಸ ಕಾರ್ಯ ಹೇಗೆ?

ಅವಳಿ ಕಟ್ಟಡಗಳ ಸುತ್ತಮುತ್ತಲೂ ಇತರ ಕಟ್ಟಡಗಳು ಇರುವುದರಿಂದ ಧ್ವಂಸ ಕಾರ್ಯ ಬಹಳ ಕಷ್ಟ. ಅದಕ್ಕಾಗಿ ಇಂಪ್ಲೋಶನ್ ತಂತ್ರಜ್ಞಾನ ಬಳಸಿ ಧ್ವಂಸ ಮಾಡಲಾಗುತ್ತದೆ. ಇಂಪ್ಲೋಶನ್ ಎಂಬುದು ಎಕ್ಸ್‌ಪ್ಲೋಶನ್‌ಗೆ (ಸ್ಫೋಟ) ತದ್ವಿರುದ್ಧವಾದುದು. ಎಕ್ಸ್‌ಪ್ಲೋಶನ್‌ನಲ್ಲಿ ವಸ್ತುಗಳು ಹೊರಗೆ ಚೆಲ್ಲಾಪಿಲ್ಲಿಯಾಗುತ್ತವೆ. ಇಂಪ್ಲೋಶನ್‌ನಲ್ಲಿ ಒಳಮುಖವಾಗಿ ಸ್ಫೋಟವಾಗುತ್ತದೆ.

ಈಗಾಗಲೇ ಕಟ್ಟಡಗಳ ವಿವಿಧ ಭಾಗಗಳಲ್ಲಿ 3,700 ಕಿಲೋ ಸ್ಫೋಟಕಗಳನ್ನು ನಿರ್ದಿಷ್ಟ ಜಾಗಗಳಲ್ಲಿ ಇಡಲಾಗಿದೆ. ಭಾರತೀಯ ಸೇನೆ ಈ ಸ್ಫೋಟಕಗಳನ್ನು ಒದಗಿಸಿದೆ. ಕಟ್ಟಡಗಳು ಸುಲಭವಾಗಿ ಕುಸಿಯಲು ಸಾಧ್ಯವಾಗುವಂತೆ ಅಲ್ಲಲ್ಲಿ ಕೆಲ ಭಾಗಗಳನ್ನು ಒಡೆಯಲಾಗಿದೆ. ಈ ಕಂಪನಿಯ ತಂತ್ರಜ್ಞರ ಪ್ರಕಾರ ಬಹಳ ಸುರಕ್ಷಿತ ವಿಧಾನದಲ್ಲಿ ಕಟ್ಟಡ ಧ್ವಂಸ ಮಾಡಲಾಗುತ್ತದಂತೆ.

ಮುಂಜಾಗ್ರತೆಯ ಕ್ರಮ

ಮುಂಜಾಗ್ರತೆಯ ಕ್ರಮ

ಈ ಎರಡು ಟವರ್‌ಗಳ ಸುತ್ತಮುತ್ತಲ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲಾಗುತ್ತದ. ಧೂಳು ಒಳಗೆ ಹೋಗದಂತೆ ಎಲ್ಲಾ ಕಟ್ಟಡಗಳನ್ನು ಮುಚ್ಚಲಾಗುತ್ತದೆ. ಆಗಸ್ಟ್ 28ರೊಗೆ 5 ಸಾವಿರ ಜನರು ತಮ್ಮ ಕಟ್ಟಡಗಳನ್ನು ಖಾಲಿ ಮಾಡಲಿದ್ದಾರೆ. ಧ್ವಂಸದ ದಿನ ಮಧ್ಯಾಹ್ನ 2:15ರಿಂದ 2:45ರವರೆಗೆ ಎಕ್ಸ್‌ಪ್ರೆಸ್ ವೇಯಲ್ಲಿ ರಸ್ತೆ ಸಂಚಾರ ಬಂದ್ ಆಗಿರಲಿದೆ.

ಎಲ್ಲಾ ಸ್ಫೋಟಕಗಳು ಸಿಡಿಯಲು 10 ಸೆಕೆಂಡ್ ಆಗಬಹುದು. 15 ಸೆಕೆಂಡ್‌ನಲ್ಲಿ ಎಲ್ಲವೂ ಮುಗಿದುಹೋಗುತ್ತದೆ. ಸ್ಫೋಟಗೊಂಡ ಬಳಿಕ ಏಳುವ ಧೂಳು ಭೂಮಿಗೆ ಇಳಿಯಲು 10 ನಿಮಿಷ ಬೇಕಾಗಬಹುದು. ಸ್ಥಳದಲ್ಲಿ 10 ಮಂದಿ ಮಾತ್ರ ಇರುತ್ತಾರೆ. ಅವರೆಲ್ಲರೂ ಕಟ್ಟಡ ಧ್ವಂಸ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಮಾತ್ರ.

ಈ ಧೂಳು ದೂರದವರೆಗೂ ಹೋಗುವ ಸಾಧ್ಯತೆ ಇರುತ್ತದೆ. ಒಂದು ದಿನದವರೆಗೂ ಈ ಪ್ರದೇಶದ ಸುತ್ತಲೂ ವಾಯುಮಾಲಿನ್ಯ ಹೆಚ್ಚಾಗಿರುವ ನಿರೀಕ್ಷೆ ಇದೆ. ಧೂಳಿನಿಂದ ಯಾರಿಗಾದರೂ ಅನಾರೋಗ್ಯ ಸಂಭವಿಸುವ ಸಾಧ್ಯತೆ ಇರುವುದರಿಂದ ನೋಯ್ಡಾ ಸೆಕ್ಟರ್ 137ರಲ್ಲಿ ಒಂದು ಆಸ್ಪತ್ರೆಯಲ್ಲಿ 50 ಬೆಡ್‌ಗಳನ್ನು ಮೀಸಲಿರಿಸಲಾಗಿದೆ.

ಕಟ್ಟಡ ಧ್ವಂಸದ ಬಳಿಕ ಉಳಿಯುವ ಕಸದ ರಾಶಿಯಲ್ಲಿ ಕಬ್ಬಿಣ ಇತ್ಯಾದಿ ಉಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ಉಳಿದವನ್ನು ಎಲ್ಲಿ ಡಂಪ್ ಮಾಡಬೇಕೆಂದು ನಿರ್ದಿಷ್ಟವಾಗಿ ಯೋಜಿಸಲಾಗಿದೆ. ದೂರದ ಐದಾರು ಹೆಕ್ಟೇರ್ ಪ್ರದೇಶದಲ್ಲಿ ಡಂಪಿಂಗ್ ಮಾಡುವ ಸಾಧ್ಯತೆ ಇದೆ.

ಫ್ಲಾಟ್ ಮಾಲೀಕರಿಗೆ ಹಣ ವಾಪಸ್
ಈ ಎರಡು ಕಟ್ಟಡಗಳಲ್ಲಿ ಫ್ಲಾಟ್‌ಗಳನ್ನು ಬುಕ್ ಮಾಡಿರುವ ಜನರಿಗೆ ಅವರ ಹಣವನ್ನು ವಾಪಸ್ ಮಾಡುವಂತೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಹಾಗೆಯೇ, ಬುಕಿಂಗ್ ದಿನದಿಂದ ಹಿಡಿದು ಇಲ್ಲಿವರೆಗೆ ಆ ಹಣಕ್ಕೆ ಶೇ. 12ರಷ್ಟು ಬಡ್ಡಿ ಸೇರಿಸಿಯೂ ಕೊಡಬೇಕೆಂದು ತಿಳಿಸಿದೆ.

ನಿಯಮ ಮೀರಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುವ ಜನರಿಗೆ ಈ ಘಟನೆ ಒಂದು ಪಾಠವಾಗಬಹುದು. ಅಧಿಕಾರಿಗಳೂ ಕೂಡ ಇಂಥ ಕಟ್ಟಡಗಳ ನಿರ್ಮಾಣದಲ್ಲಿ ಎಚ್ಚರದಿಂದಿರುವ ಅಗತ್ಯ ಇದೆ. ಅನೇಕ ಕಡೆ ಅಧಿಕಾರಿಗಳೇ ಲಂಚ ತೆಗೆದುಕೊಂಡು ಬಿಲ್ಡಿಂಗ್ ಪ್ಲಾನ್‌ಗೆ ಅನುಮೋದನೆ ಕೊಟ್ಟಿರುವ ಉದಾಹರಣೆ ಲೆಕ್ಕವಿಲ್ಲದಷ್ಟು ಇವೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+