EPFO update: ನಿಮ್ಮ ಪಿಎಫ್ ಅಕೌಂಟ್ ಅಪ್‌ಡೇಟ್, ಕ್ಲೈಮ್ ಮಾಡುವುದು ಈಗ ಸುಲಭ!
ನವದೆಹಲಿ, ಜೂನ್. 02 : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಒಂದಲ್ಲ ಒಂದು ಹೊಸ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಲೆ ಇದೆ. ಈಗ ನೋ ಯುವರ್ ಕಸ್ಟಮರ್ (ಕೆವೈಸಿ) ವಿವರಗಳಲ್ಲಿನ ಬದಲಾವಣೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಫ್ಟ್‌ವೇರ್ ಅನ್ನು ಕಾರ್ಯಗತಗೊಳಿಸಲಾಗಿದೆ. ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಶನಿವಾರ ಹೇಳಿಕೆ ಹೊರಡಿಸಿದೆ.
ಪಿಎಫ್ ಅಕೌಂಟ್‌ನಲ್ಲಿ ಹೆಸರು, ಲಿಂಗ, ಜನ್ಮ ದಿನಾಂಕ, ಪೋಷಕರ ಹೆಸರು, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ ಮತ್ತು ಆಧಾರ್‌ನಂತಹ ಬದಲಾವಣೆಗಳನ್ನು ಮಾಡಬಹುದಾಗಿದೆ. ಈ ಪರಿಷ್ಕರಿಸಿದ ವಿವರಗಳ ಬಗ್ಗೆ ಆನ್‌ಲೈನ್ ಪೋರ್ಟಲ್‌ನಲ್ಲಿ ಕ್ಷೇತ್ರ ಕಚೇರಿಗಳಿಂದ ಸುಮಾರು 40,000 ಕ್ಲೈಮ್‌ಗಳನ್ನು ಅನುಮೋದಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳುಗಳಲ್ಲಿ, ಇಪಿಎಫ್‌ಒ ಒಟ್ಟಾರೆಯಾಗಿ ವಸತಿ, ಮಕ್ಕಳ ಮೆಟ್ರಿಕ್ಯುಲೇಟ್ ಶಿಕ್ಷಣ, ಮದುವೆ, ಅನಾರೋಗ್ಯ, ಪಿಂಚಣಿ, ವಿಮೆಯ ಮುಂಗಡಗಳ ರೂಪದಲ್ಲಿ ಸುಮಾರು 87 ಲಕ್ಷ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
"ಪ್ರಸ್ತುತ, ಸುಮಾರು 7.5 ಕೋಟಿ ಸದಸ್ಯರು ಪ್ರತಿ ತಿಂಗಳು ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಯೋಜನೆಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಸದಸ್ಯರು ಈ ಪ್ರಯೋಜನಗಳನ್ನು ಆನ್‌ಲೈನ್‌ನಲ್ಲಿ ಕ್ಲೈಮ್ ಮಾಡುತ್ತಾರೆ. ಇದು ದೃಢವಾದ ಕಂಪ್ಯೂಟರ್ ಸಾಫ್ಟ್‌ವೇರ್ ಅಪ್ಲಿಕೇಶನ್ ಮೂಲಕ ಸಾಧ್ಯವಾಗಿದೆ. ಈ ಸಾಫ್ಟ್‌ವೇರ್ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ನಲ್ಲಿರುವ ಸದಸ್ಯರ ಡೇಟಾವನ್ನು ಮೌಲ್ಯೀಕರಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
KYC ಬದಲಾವಣೆ ಮಾಡಲು EPFO ನ ಆನ್‌ಲೈನ್ ಪೋರ್ಟಲ್‌ಗಾಗಿ, ಎಲ್ಲಾ ರಿಕ್ವೆಸ್ಟ್‌ಗಳನ್ನು ಉದ್ಯೋಗದಾತರ ಮೂಲಕ ದೇಶಾದ್ಯಂತ ಪಿಎಫ್ ಕಚೇರಿಗಳಿಗೆ ರವಾನಿಸಲಾಗುತ್ತದೆ. ಸದಸ್ಯರು ಈ ಹೊಸ ಸೌಲಭ್ಯವನ್ನು ಬಳಸಿಕೊಂಡು ತಮ್ಮ ವಿನಂತಿಗಳನ್ನು ಸಲ್ಲಿಸಲು ಪ್ರಾರಂಭಿಸಿದ್ದಾರೆ. ಅದರಲ್ಲಿ ಸುಮಾರು 40,000 ಮಂದಿ ಈಗಾಗಲೇ EPFO ನ ಕ್ಷೇತ್ರ ಕಚೇರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅವರು ಪರಿಶೀಲನೆಯ ನಂತರ ಅದನ್ನು ಅನುಮೋದನೆಗೆ ಶಿಫಾರಸು ಮಾಡುತ್ತಾರೆ. ಅವರು ಇಲ್ಲಿಯವರೆಗೆ ಸುಮಾರು 2.75 ಲಕ್ಷ ವಿನಂತಿಗಳನ್ನು ಸ್ವೀಕರಿಸಿದ್ದಾರೆ" ಎಂದು ತಿಳಿಸಿದೆ.












Click it and Unblock the Notifications