ಬಾಬಾಸಾಹೇಬರ ಸಂಕ್ಷಿಪ್ತ ಇತಿಹಾಸ: ಡಾ.ಬಿ.ಆರ್. ಅಂಬೇಡ್ಕರ್ ಎಂದೆಂದಿಗೂ ಅಮರ!
ಮೇಲು-ಕೀಳು ಎಂಬ ಜಾತಿ ಕಂದಕಗಳ ನಡುವೆ ಸಿಲುಕಿ ತುಳಿತಕ್ಕೊಳಗಾದವರಿಗೆ ಆಶಾಕಿರಣವಾಗಿ ಈ ಭೂಮಿ ಮೇಲೆ ಅಮರರಾಗಿ ಉಳಿದವರು ಡಾ. ಬಿ.ಆರ್. ಅಂಬೇಡ್ಕರ್. ಅವರು ತನ್ನದೇ ವಿಚಾರಧಾರೆಗಳಿಂದ 'ಆಧುನಿಕ ಮನು' ಎಂದು ಕರೆಸಿಕೊಂಡವರು. ಸಮಾಜಕ್ಕೆ ಅಂಟಿದ ಮೇಲು-ಕೀಳಿನ ತಾರತಮ್ಯವನ್ನು ಕತ್ತಿ, ಗುರಾಣಿ ಹಿಡಿದು ಯುದ್ಧ ಮಾಡುವುದರಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದವರು.
ಈ ಭೂಮಿ ಇದ್ದಷ್ಟು ದಿನ ಅಂಬೇಡ್ಕರ್ ಅಮರರಾಗಿರುತ್ತಾರೆ. ಅಂಬೇಡ್ಕರ್ ದೇಶದ ಆಸ್ತಿ. ಅವರನ್ನು ಇತ್ತೀಚೆಗಿನ ವರ್ಷಗಳಲ್ಲಿ ರಾಜಕೀಯಕ್ಕಾಗಿ ತಮಗೆ ಬೇಕಾದಂತೆ ಬಳಸಿಕೊಳ್ಳುವ ಕಾರ್ಯಗಳು ನಡೆಯುತ್ತಿವೆ. ಅದು ಒಳ್ಳೆಯ ರೀತಿಯಲ್ಲಿ ಆದರೆ ಅಡ್ಡಿಯಿಲ್ಲ. ಆದರೆ ಅವರ ಹೆಸರಿನಲ್ಲಿ ಸ್ವಾರ್ಥ ಸಾಧನೆ ಮಾಡಲು ಹೋಗಿದ್ದೇ ಆದರೆ ಅಂತಹವರು ಖಂಡಿತಾ ಉದ್ಧಾರವಾಗಲಾರರು.

ತುಳಿಯುವವರ ಎದುರು ಪರ್ವತದಂತೆ ಬೆಳೆದರು
ನಮ್ಮ ದೇಶ ಆಧುನಿಕವಾಗಿ ಬಹಳಷ್ಟು ಮುಂದುವರೆದಿದೆ. ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಸಮಾಜ ಈಗ ಇಲ್ಲ. ನಮ್ಮ ನಡುವಿನ ತಾರತಮ್ಯಗಳು ಬಹುತೇಕ ನಾಶವಾಗಿವೆ, ನಾಶವಾಗುತ್ತಿವೆ. ಮೇಲ್ವರ್ಗದ ಗುಲಾಮಗಿರಿಯಲ್ಲಿ ಬದುಕುತ್ತಿದ್ದ ಬಹುತೇಕರು ತಮ್ಮದೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂಬೇಡ್ಕರ್ ಶಿಕ್ಷಣದ ಮೂಲಕ ಬೆಳೆಯಬಹುದು ಮತ್ತು ಯಾರು ನಮ್ಮನ್ನು ತುಳಿಯುತ್ತಾ ಬಂದಿದ್ದರೋ ಅವರ ಮುಂದೆ ಮುಂದೊಂದು ದಿನ ಪರ್ವತದಂತೆ ಎದ್ದು ನಿಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬಹಳಷ್ಟು ದೊಡ್ಡ ಸಾಧನೆಗಳಾಗಿವೆ.
ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಈ ದೇಶಕ್ಕೆ ಅಂಬೇಡ್ಕರ್ ಕೊಡುಗೆ ಏನು ಎಂಬುದು ಗೊತ್ತಾಗಿ ಬಿಡುತ್ತದೆ. ಅವರು ರಚಿಸಿದ ಸಂವಿಧಾನದಡಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಬಹುಶಃ ದಲಿತ ಕುಟುಂಬದಲ್ಲಿ ಹುಟ್ಟಿದ ಹುಡುಗ ಎಲ್ಲರಂತೆ ಮೌನವಾಗಿದ್ದಿದ್ದರೆ, ಕಲಿಕೆಯನ್ನು ಸವಾಲಾಗಿ ತೆಗೆದುಕೊಳ್ಳದೆ ಹೋಗಿದ್ದಿದ್ದರೆ ಡಾ. ಬಿ.ಆರ್. ಅಂಬೇಡ್ಕರ್ ಆಗುತ್ತಿರಲಿಲ್ಲ.

ಅವರ ನಡಿಗೆ ಆತ್ಮವಿಶ್ವಾಸದ್ದಾಗಿತ್ತು!
ಅಂಬೇಡ್ಕರ್ ಅವರ ಬದುಕನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸಾಧನೆ ಮಾಡಿ ತೋರಿಸಿದವರು ಬಹಳಷ್ಟು ಮಂದಿಯಿದ್ದಾರೆ. ಮುಂದೆಯೂ ಇರುತ್ತಾರೆ. ಆದರೆ ಎಲ್ಲರಿಗೂ ಸ್ಫೂರ್ತಿಯಾಗಿ ಬದುಕಿ ಬಾಳಿದ ಅಂಬೇಡ್ಕರ್ ಬದುಕು ಮಾತ್ರ ಸುಗಮವಾಗಿರಲಿಲ್ಲ. ಪ್ರತಿ ಹೆಜ್ಜೆ ಹೆಜ್ಜೆಗೂ ಮುಳ್ಳುಗಳು ಚುಚ್ಚುತ್ತಲೇ ಇದ್ದವು. ಅಂತಹ ಮುಳ್ಳುಗಳನ್ನು ಅವರು ಆತ್ಮವಿಶ್ವಾಸ, ಹಠ, ಛಲ, ಹೋರಾಟಗಳೆಂಬ ಪಾದರಕ್ಷೆ ಮೂಲಕ ಮೆಟ್ಟಿ ನಿಲ್ಲುತ್ತಾ ಮುಂದೆ ಸಾಗಿದರು.
ಅವರಿಗೆ ಬಾಲ್ಯದಲ್ಲಿಯೇ ಹಲವು ಕಹಿ ಘಟನೆಗಳಾಗಿವೆ. ಏಳೆಂಟು ವರ್ಷವಿರುವಾಗ ಒಮ್ಮೆ ತನ್ನ ತಂದೆಯನ್ನು ನೋಡಲು ಎತ್ತಿನ ಗಾಡಿಯಲ್ಲಿ ಕುಳಿತು ಹೋಗುತ್ತಿದ್ದಾಗ ಅವರು ದಲಿತ ಜನಾಂಗಕ್ಕೆ ಸೇರಿದವನೆಂದು ತಿಳಿದು ಗಾಡಿ ಓಡಿಸುತ್ತಿದ್ದವನು ಗಾಡಿಯನ್ನು ನಿಲ್ಲಿಸಿ ನೊಗವನ್ನು ಎತ್ತಿ ಅನಾಮತ್ತಾಗಿ ಅವರನ್ನು ಕೆಳಕ್ಕೆ ಬೀಳಿಸಿ ಬಾಯಿಗೆ ಬಂದಂತೆ ಬಯ್ಯುತ್ತಾನೆ.

ಅವಮಾನಗಳಾದರೂ ಧೃತಿಗೆಡದ ಅಂಬೇಡ್ಕರ್
ಇನ್ನೊಮ್ಮೆ ಬಾಯಾರಿಕೆಯಿಂದ ಕೆರೆಯೊಂದರಲ್ಲಿ ನೀರು ಕುಡಿದುದಕ್ಕೆ ಊರಿನವರು ಚೆನ್ನಾಗಿ ಥಳಿಸುತ್ತಾರೆ. ಮಗದೊಮ್ಮೆ ಮಳೆ ಬಂತೆಂದು ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯೊಡತಿ ಜಗಲಿಯಿಂದ ಕೆಳಕ್ಕೆ ದಬ್ಬಿದ್ದಳು. ಇಂತಹ ನೂರಾರು ನೋವುಗಳನ್ನು ಅವರು ಚಿಕ್ಕ ವಯಸ್ಸಿನಿಂದಲೇ ಅನುಭವಿಸಿದ್ದರು. ಆದರೆ ಅವರು ಧೃತಿಗೆಡಲಿಲ್ಲ. ಈ ಎಲ್ಲ ತಾರತಮ್ಯವನ್ನು ಮೆಟ್ಟಿ ನಿಲ್ಲುವ ಶಕ್ತಿಯಿರುವುದು ಶಿಕ್ಷಣದಿಂದ ಮಾತ್ರ ಎಂಬುದು ಅವರಿಗೆ ಅವರ ತಂದೆ ಸುಭೇದಾರ್ ರಾಮ್‌ಜೀ ಸಕ್ಬಾಲ್ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿದ್ದರು.
ಅಂಬೇಡ್ಕರ್ ಹುಟ್ಟು, ಬಾಲ್ಯ, ಶಿಕ್ಷಣ, ಸಾಧನೆಯನ್ನು ನೋಡಿದ್ದೇ ಆದರೆ ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದಲ್ಲಿ 1891ರ ಏಪ್ರಿಲ್ 14ರಂದು ಮಹಾರ್ ಎಂಬ ದಲಿತ ಜನಾಂಗದಲ್ಲಿ ಸುಭೇದಾರ್ ರಾಮ್ ಜೀ ಸಕ್ಬಾಲ್ ಮತ್ತು ಶ್ರೀಮತಿ ಭೀಮಾಬಾಯಿ ದಂಪತಿಯ ಪುತ್ರರಾಗಿ ಜನಿಸಿದರು. ಇವರು ಕಬೀರ್ ಪಂಥಕ್ಕೆ ಸೇರಿದವರಾಗಿದ್ದರು.

ಅವಮಾನವಾದರೂ ಕಲಿಕೆ ಬಿಡಲಿಲ್ಲ
ಅಂಬೇಡ್ಕರರು ಸತಾರಾದ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಅಸ್ಪೃಶ್ಯತೆಯ ಕಹಿಯನ್ನು ಅನುಭವಿಸಿದರು. ಸಹಪಾಠಿಗಳು, ಶಿಕ್ಷಕರು ಅಪಮಾನ ಮಾಡಿದರೂ ಜಗ್ಗದೆ ಶಿಕ್ಷಣ ಕಲಿತರು. 1907ರಲ್ಲಿ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರ್‌ರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆನಂತರ ಅವರು ಮುಂಬೈನ ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಮುಗಿಸಿ 1921 ರಲ್ಲಿ ಬಿ.ಎ ಪದವೀಧರರಾದರು. ನಂತರ ಬರೋಡ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು.
ಬರೋಡ ಮಹಾರಾಜರು ಅಂಬೇಡ್ಕರ್ ಅವರಲ್ಲಿರುವ ಪ್ರತಿಭೆಯನ್ನು ಗಮನಿಸಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮಲ್ಲೇ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಇವರನ್ನು ಅಮೆರಿಕಕ್ಕೆ ಕಳುಹಿಸಿದರು. ಅಲ್ಲಿ ಎಂಎ ಪದವಿಯೊಡನೆ ಪಿಎಚ್‌ಡಿಯನ್ನು ಗಳಿಸಿ 1917ರ ಆಗಸ್ಟ್ 21ರಂದು ಮತ್ತೆ ಭಾರತಕ್ಕೆ ಮರಳಿದರು.

‘ಆಧುನಿಕ ಮನು’ವಾದ ಅಂಬೇಡ್ಕರ್
ಮತ್ತೆ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೋಗಿ 1922ರಲ್ಲಿ ಬ್ಯಾರಿಸ್ಟರ್ ಪದವಿಯೊಡನೆ ಭಾರತಕ್ಕೆ ಮರಳಿದರು. ಇದೆಲ್ಲದಕ್ಕೂ ಮೊದಲು ಅವರಿಗೆ ಸಂಸ್ಕೃತ ಕಲಿಯುವ ಬಯಕೆಯಾಗಿತ್ತು. ಆದರೆ ಇದಕ್ಕೆ ಕೀಳುಜಾತಿಯವರು ಇದನ್ನು ಓದಬಾರದೆಂದು ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ ಅವರು ಹಠ ತೊಟ್ಟವರಂತೆ ಸಂಸ್ಕೃತ ಕಲಿತು ಅದರಲ್ಲಿ ಸಂಪೂರ್ಣ ಪಾಂಡಿತ್ಯ ಗಳಿಸಿ ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ‘ಆಧುನಿಕ ಮನು' ಎಂಬ ಕೀರ್ತಿಗೆ ಪಾತ್ರರಾಗಿದ್ದು ಇತಿಹಾಸ.
ವಿದೇಶದಲ್ಲಿ ಕಲಿತು ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ, ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರ್ ‘ಮೂಕನಾಯಕ' ಎಂಬ ಪತ್ರಿಕೆಯನ್ನು ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನಜಾಗೃತಿಗೆ ನಿಂತರು. "ಬಹಿಷ್ಕೃತ ಹಿತಕಾರಿಣಿ' ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆಯ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹೋರಾಟ ಮಾಡಿದರು.

ಅಂಬೇಡ್ಕರ್ ಎಂದೆಂದಿಗೂ ಅಮರ
ಸ್ವಾತಂತ್ರ್ಯ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿ ದೇಶಕ್ಕೆ ಸಶಕ್ತ 'ಸಂವಿಧಾನ' ನೀಡಿದ ಶಿಲ್ಪಿಯಾಗಿದ್ದು, ಇದು ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವಾಗಿದೆ. ಸದಾ ಹೋರಾಟ, ವಿಚಾರಧಾರೆಗಳ ಮೂಲಕ ದೇಶಕ್ಕೆ ಶಕ್ತಿಯಾಗಿದ್ದ ಅಂಬೇಡ್ಕರ್ 1956ರ ಡಿಸೆಂಬರ್ 6ರಂದು ಪರಿನಿರ್ವಾಣವಾದರು. ಅಂಬೇಡ್ಕರ್ ಭೌತಿಕವಾಗಿ ಇಲ್ಲದಿರಬಹುದು ಆದರೆ ಅವರು ಎಂದೆಂದಿಗೂ ಅಮರ...
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ











Click it and Unblock the Notifications