ಸೋಲಿನ ಭಯ ಬೇಡ, ತಪ್ಪಿಸಿಕೊಳ್ಳುವ ಬುದ್ದಿ ಇರಲಿ, ಆಗದಿದ್ದಾಗ ಒಪ್ಪಿಕೊಳ್ಳುವ ಮನಸಿರಲಿ
ಏಳು ವರ್ಷದ ನನ್ನ ಅಣ್ಣನ ಮಗ ಅದ್ವಿಕ್, ಇತ್ತೀಚೆಗೆ ಕ್ರಿಕೆಟ್ ತರಬೇತಿ ಸೇರಿಕೊಂಡ. ಅವನ ತರಬೇತಿಯ ಮೊದಲ ದಿನ, ನಾವೆಲ್ಲ ಮನೆಯವರು ದಂಡಾಗಿ ಹೋಗಿದ್ದೆವು, ಅವನ ಆಟ ನೋಡಲು. ನಮ್ಮ ಕಣ್ಣ ಮುಂದೆ ಅಂಬೇಗಾಲು ಇಡುತ್ತಾ ಬೆಳೆದವನನ್ನು, ಕ್ರಿಕೆಟ್ ಆಟದಲ್ಲಿ ಅಂಬೇಗಾಲು ಇಡುವುದನ್ನು ನೋಡಲು ನಮಗೆ ಎಲ್ಲಿಲ್ಲದ ಉತ್ಸಾಹ.
ಮೈದಾನದ ಒಂದು ಮೂಲೆಯಲ್ಲಿ ನಾಲ್ಕು ನೆಟ್ಸ್ ಹಾಕಿಸಿ, ಬಂದಿದ್ದ ಎಲ್ಲಾ ಮಕ್ಕಳಿಗು ತರಬೇತಿ ಕೊಡುತ್ತಿದ್ದರು. ಆ ನಾಲ್ಕು ನೆಟ್ ಎರಡು ತರಹವಾಗಿ ವಿಂಗಡಿಸಿದ್ದರು. ಒಂದು ಕಡೆ ಆಗಲೇ ತುಂಬಾ ವರ್ಷದಿಂದ ಆಟ ಕಲಿತು, ಒಂದು ಮಟ್ಟಕ್ಕೆ ಆಟದ ಅರಿವು ಇರುವ ಒಂದು ಗುಂಪು. ಮತ್ತೊಂದು ಕಡೆ ನನ್ನ ಅಣ್ಣನ ಮಗನ ರೀತಿ ಆಗ ತಾನೇ ಆಟವನ್ನು ಕಲಿಯಲು ಶುರು ಮಾಡಿದ್ದವರು.

'ಕನಸು ಕಾಣಲು ಕಾಸು ಕೊಡಬೇಕೇ' ಅನ್ನೋ ಹಾಗೆ...ನಾವು ಆಗಲೇ ಅವನ ರಣಜಿ ಮತ್ತು ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ಬಗ್ಗೆ ಮಾತನಾಡುತ್ತಿದ್ದೆವು!! ನಮ್ಮಂತೆ ಅಲ್ಲಿ ಅನೇಕ ಹುಡುಗರ ತಂದೆ/ತಾಯಿಯರು ತಮ್ಮ ಮಕ್ಕಳ ಆಟ ನೋಡಲು ಬಂದಿದ್ದರು. ಹಾಗೆ ಒಬ್ಬರ ಹತ್ತಿರ ನಾವು ಮಾತನಾಡಲು ಶುರು ಮಾಡಿದೆವು. ಆಗಲೇ ನಮಗೆ ತಿಳಿದಿದ್ದು ಅವರು ಆ ತರಬೇತಿ ಕ್ಲಬ್‌ನ ಖಜಾಂಚಿ ಎಂದು.
ಅವರ ಮಗ ಕೂಡ ಅದೇ ಕ್ಲಬ್ ನಲ್ಲಿ ಕ್ರಿಕೆಟ್ ಕಲಿತಿದ್ದ. ಹಾಗೆ ಅವರ ಜೊತೆ ಮಾತನಾಡುತ್ತಿದ್ದಾಗ "ಸರ್...ಈಗಿನ ಮಕ್ಕಳು ಸೋಲನ್ನು ಒಪ್ಪಿಕೊಳ್ಳೋದೇ ಮರೆತು ಬಿಟ್ಟಿದ್ದಾರೆ ಸರ್.. ಅದಕ್ಕೆ ಆಟಕ್ಕೆ ಸೇರಿಸಿಬೇಕು...ಆಟ ಮಾತ್ರ ನಮಗೆ ಸೋಲು ಗೆಲುವು ಎರಡನ್ನು ಒಂದೇ ರೀತಿಯಲ್ಲಿ ನೋಡಲು ಕಲಿಸುತ್ತದೆ" ಎಂದ ಅವರ ಮಾತು ಅದೆಷ್ಟು ಸತ್ಯ ಅನಿಸಿತು. ಗೆಲುವು ಬೇಕು.. ಗೆಲ್ಲವುದೇ ಗುರಿ ಆಗಬೇಕು.
ಆದರೆ ಎಲ್ಲವೂ ನಾವು ಅಂದುಕೊಂಡಂತೆ ನೆಡೆಯುವುದಿಲ್ಲ. ಒಂದು ವೇಳೆ ಅಂದುಕೊಂಡದ್ದು ಆಗದೆ ಸೋಲನ್ನು ಕಂಡರೆ ಅದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅನ್ನೋದು ಕೂಡ ಅಷ್ಟೇ ಮುಖ್ಯ. ಆ ಪಾಠವನ್ನು ಇಂದಿನ ಮಕ್ಕಳಿಗೆ ನಾವು ಹೇಳಿಕೊಡಲು ಮರೆತು ಬಿಡುತ್ತೇವೆ. ಹಾಗಾದರೆ ಮಕ್ಕಳು ಸ್ಪರ್ಧಾತ್ಮಕವಾಗಿ ಇರುವುದೇ ತಪ್ಪಾ ಅಂದರೆ ಖಂಡಿತ ಇಲ್ಲ. ಸ್ಪರ್ಧೆ ಮಾಡದೆ ಸೋಲನ್ನು ಒಪ್ಪಿಕೊಳ್ಳಿ ಎಂದು ಅಲ್ಲ.

ಜೀವನದಲ್ಲಿ ಏನನ್ನಾದರೂ ಸಾಧಿಸಿಸುವ, ಗಳಿಸುವ ಹಂಬಲ
ಜೀವನದಲ್ಲಿ ಏನನ್ನಾದರೂ ಸಾಧಿಸಿಸುವ, ಗಳಿಸುವ ಹಂಬಲದಲ್ಲಿ ಇರಬೇಕು. ಈ ವ್ಯವಸ್ಥೆಗೆ ಅದು ಅನಿವಾರ್ಯ ಕೂಡ. ಆದರೆ ಅದು ಆಗದಿದ್ದಾಗ, ಅದು ಮನಸ್ಸು ಅಥವಾ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಕ್ರಿಕೆಟ್ ಆಟದ ಉದಾಹರಣೆಯೇ ತೆಗೆದುಕೊಳ್ಳೋಣ.. ಸಚಿನ್ ಒಬ್ಬ ಅತ್ಯುತ್ತಮ ಆಟಗಾರ. ಆದರೆ ಕೆಲವೊಂದು ಬಾರಿ ಅವರು ಕೂಡ ಸೊನ್ನೆ ಸುತ್ತಿದ್ದಾರೆ, ಫಾರ್ಮ್ ಕಳೆದುಕೊಂಡು ಒದ್ದಾಡಿದ್ದಾರೆ. ಆದರೆ ಎಂದಿಗೂ ಸೋಲಿನಿಂದ ಕುಗ್ಗಲಿಲ್ಲ.
ಮೈದಾನದಲ್ಲಿ ಶತಕಗಳನ್ನು ಸಿಡಿಸಿದ್ದಾರೆ
ಇನ್ನೂ ಹೆಚ್ಚಿನ ಅಭ್ಯಾಸ ಮಾಡಿ, ಮೈದಾನದಲ್ಲಿ ಶತಕಗಳನ್ನು ಸಿಡಿಸಿದ್ದಾರೆ. ಒಂದು ವಿಶ್ವ ಕಪ್ ಗೆಲ್ಲಲು 24 ವರ್ಷ ಕಾಯಬೇಕು, ಕಾದು ಅದಕ್ಕಾಗಿ ಹೋರಾಡಬೇಕು ಅಂದರೆ ಅವರಿಗೆ ಇದ್ದ ತಾಳ್ಮೆ, ಮನೋಶಕ್ತಿ ಎಂತದ್ದು ಯೋಚಿಸಿ. ಒಂದೊಂದು ಮಕ್ಕಳಿಗೆ ಒಂದೊಂದು ಶಕ್ತಿ, ಪ್ರತಿಭೆ ಇರುತ್ತದೆ. ತಂದೆ ತಾಯಂದಿರು ಅವರನ್ನು ಇನ್ನೊಬ್ಬರ ಜೊತೆ ಹೋಲಿಸುವುದು, ಮಕ್ಕಳೇ ತಮ್ಮನ್ನು ತಾವು ಮತ್ತೊಬ್ಬರ ಜೊತೆ ಹೋಲಿಸಿಕೊಳ್ಳುವುದು ಸಹಜ.
ತಂದೆ ತಾಯಂದಿರು ತಿಳಿಯುವ ಹಾಗೆ ಮನವರಿಕೆ ಮಾಡಿಕೊಡಬೇಕು
ಆ ಹೋಲಿಕೆ ಮಕ್ಕಳಲ್ಲಿ ಮತ್ತಷ್ಟು ಶ್ರಮ ಹಾಕಬೇಕು ಅನ್ನೋದನ್ನು ಕಲಿಸಬೇಕೇ ವಿನಃ ಅದು ಅವರಲ್ಲಿ ಈರ್ಷೆ ಪಡುವಂತೆ ಮಾಡಬಾರದು. ಅವರಲ್ಲಿ ಕೀಳರಿಮೆ ಬರುವಂತೆ ಮಾಡಬಾರದು.ಇದನ್ನು ತಂದೆ ತಾಯಂದಿರು ಅವರಿಗೆ ತಿಳಿಯುವ ಹಾಗೆ ಮನವರಿಕೆ ಮಾಡಿಕೊಡಬೇಕು. ಪರೀಕ್ಷೆ/ ಸ್ಪರ್ಧೆಗಳೇ ಜೀವನ ಅಲ್ಲ ಅನ್ನೋ ಮನವರಿಕೆ ಮಾಡಿಕೊಡಬೇಕು. ಅವರ ಸಾಧನೆಯ ಹಾದಿಲ್ಲಿ ಅದೆಲ್ಲವು ಪ್ರಮುಖವೇ, ಆದರೆ ಅದು ಅವರ ಬದುಕನ್ನು ನಾಶ ಮಾಡುವ ಕೊಡಲಿ ಆಗಬಾರದು.
ಪರೀಕ್ಷೆಯ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗುವುದು
ಅದೆಷ್ಟೋ ಮಕ್ಕಳು ಪರೀಕ್ಷೆಯ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗುವುದು, ಪರೀಕ್ಷೆಯ ಫಲಿತಾಂಶ ಬಂದಾಗ ಆತ್ಮಹತ್ಯೆ ಮಾಡಿಕೊಳ್ಳುವುದು, ಇದೆಲ್ಲವು ಅವರು ಪರೀಕ್ಷೆಯ/ಮನೆಯವರ ಒತ್ತಡಕ್ಕೆ ಮಣಿದಾಗ. ಯಾವಾಗಲು ನಂಬರ ಒನ್ ಆಗಿರಬೇಕು ಅನ್ನೋ ಒತ್ತಡವೇ ಅದೆಷ್ಟೋ ಮಕ್ಕಳ ಜೀವನವನ್ನು ನಾಶಮಾಡಿದೆ. ಸೋತವನು ಸತ್ತ ಅನ್ನೋ ಹಳೇ ಕಾಲದ ಮಾತನ್ನು ಬಿಟ್ಟು, ಸೋತವರನ್ನು ಕೂರಿಸಿ ಮಾತನಾಡಿಸಿ, ಅವರ ಮನಸ್ಥಿತಿಯನ್ನು ಅರಿಯುವ ಪ್ರಯತ್ನ ತಂದೆ ತಾಯಿಯರು ಮಾಡಬೇಕು.
ನನಗೆ ಒಂದು ಪುಟ್ಟ ಕತೆ ನೆನಪಿಗೆ ಬರುತ್ತದೆ
ಇಲ್ಲಿ ನನಗೆ ಒಂದು ಪುಟ್ಟ ಕತೆ ನೆನಪಿಗೆ ಬರುತ್ತದೆ. ಒಂದು ಪುಟ್ಟ ಸಂಸಾರ, ಗಂಡ ಹೆಂಡತಿ ಮತ್ತು ಅವರ ಮಗು . ಅವರೆಲ್ಲರು ಸಮುದ್ರ ತೀರಕ್ಕೆ ಹೋಗಿದ್ದರಂತೆ..ಗಂಡ ಹೆಂಡತಿ ಇಬ್ಬರು ಬೀಚ್ ನಲ್ಲಿ ಕಾಲು ಚಾಚಿ ಕೂತಿದ್ದರೆ, ಮಗು ಅಲೆಗಳ ಜೊತೆ ಆಡಲು ಶುರು ಮಾಡಿತು. ಒದ್ದೆಯಾಗಿದ್ದ ಮಣ್ಣಲ್ಲಿ ತನ್ನ ಹೆಸರು ಬರೆಯುವುದು, ಅಲೆಗಳು ಬಂದು ಅದನ್ನು ಅಳಿಸಿ ಹಾಕುವುದು, ಮಗು ಮತ್ತೊಮ್ಮೆ ಬರೆಯುವುದು ಹೀಗೆ ಎರಡು ಮೂರು ಸರ್ತಿ ನಡೆಯಿತು.
ವಾಪಸ್ಸು ಬಂದ ಹೆಂಡತಿಯ ಮುಖವನ್ನು ಗಂಡ ನೋಡಿದ
ಮಗು ಅಳಲು ಶುರು ಮಾಡಿತು..ದೂರದಿಂದ ಇದನ್ನು ನೋಡಿದ ಅವನ ಅಪ್ಪ ಅವನ ಕಡೆ ಬರುವವನಿದ್ದ. ಆದರೆ ಅವನನ್ನು ತಡೆದು, ಅವನ ಹೆಂಡತಿ ಮಗುವಿನ ಹತ್ತಿರ ಬಂದಳು. ಮಗುವಿಗೆ ಏನೋ ಹೇಳಿ ವಾಪಸ್ಸು ಹೊರಟಳು. ಮಗು ಅಳುವುದನ್ನು ನಿಲ್ಲಿಸಿತು. ವಾಪಸ್ಸು ಬಂದ ಹೆಂಡತಿಯ ಮುಖವನ್ನು ಗಂಡ ನೋಡಿದ. ಅವನ ಪ್ರಶ್ನೆಯನ್ನು ಅರಿತವಳಾಗಿ "ನೋಡು ನೀನು ಮತ್ತು ಸಮುದ್ರ ಸ್ಪರ್ಧೆಗೆ ಇಳಿದಿದ್ದೀರ, ಸ್ಪರ್ಧೆ ಮಾಡು.. ಅಳಬಾರದು " ಅಂತ ಹೇಳಿ ಬಂದೆ ಎಂದು ತಿಳಿಸಿದಳು.
ತಾಯಿ ಪುನಃ ಆ ಮಗುವಿನ ಬಳಿ ಹೋದಳು
ಹೀಗೆ ಇನ್ನೂ ಸ್ವಲ್ಪ ಸಮಯ ಕಳೆಯಿತು. ಆ ತಾಯಿ ಪುನಃ ಆ ಮಗುವಿನ ಬಳಿ ಹೋದಳು. ಒಂದೆರಡು ಮಾತು, ಆಮೇಲೆ ಅವರಿಬ್ಬರು ವಾಪಸ್ಸು ಬಂದರು. ಏನು ಅರ್ಥವಾಗದ ಅವಳ ಗಂಡ ಪುನಃ ಅವಳ ಮುಖವನ್ನು ನೋಡಿದ." ಮೊದಲು ಅವನಲ್ಲಿ ಸ್ಪರ್ಧಾತ್ಮಕ ಗುಣ ಬೆಳೆಯಲಿ ಅನ್ನೋ ಕಾರಣಕ್ಕೆ ಹೋಗಿ ಮಾತನಾಡಿದ್ದು..ಈಗ ಕೆಲವೊಂದು ಸ್ಪರ್ಧೆಗಳನ್ನ ಗೆಲ್ಲಲಾಗದು, ಸೋಲು ಕೂಡ ಒಂದು ಭಾಗ ಅಂತ ತಿಳಿ ಹೇಳಿ ಕರೆದುಕೊಂಡು ಬಂದದ್ದು " ಅಂದಳು!
ಯುಗಾದಿಯ ದಿನ ಹೇಗೆ ಬೆಲ್ಲದ ಜೊತೆ ಬೇವನ್ನು ಸವಿಯುತ್ತೇವೆ
ನಾವು ಯುಗಾದಿಯ ದಿನ ಹೇಗೆ ಬೆಲ್ಲದ ಜೊತೆ ಬೇವನ್ನು ಸವಿಯುತ್ತೇವೆ ಅದೇ ರೀತಿಯಲ್ಲಿ ಜೀವನ ಅಂದ ಮೇಲೆ ಸೋಲು-ಗೆಲವು, ನೋವು-ನಲಿವು ಇರುತ್ತದೆ. ಮಕ್ಕಳನ್ನು ತುಂಬಾ ನಾಜೂಕಾಗಿ ಬೆಳೆಸಿದರೆ ಅವರು ಗಾಜಿನ ವಸ್ತುವಾಗುತ್ತಾರೆ. ನೋಡಲು ಚೆಂದ, ಆದರೆ ಅದು ಬಿದ್ದರೆ ಒಡೆದು ಹೋಗುತ್ತದೆ. ಸೋಲು ಅನ್ನೋ ನಕಾರಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ತುಂಬ ಬೇಕೇ ಅಂದರೆ, ಅದು ಕೂಡ ತಪ್ಪು.
ಸೋಲಿನ ಭಯವಿರಬಾರದು, ತಪ್ಪಿಸಿಕೊಳ್ಳುವ ಬುದ್ದಿ ಇರಬೇಕು
ಸೋಲಿನ ಭಯವಿರಬಾರದು, ಆದರೆ ಅದನ್ನು ತಪ್ಪಿಸಿಕೊಳ್ಳುವ ಬುದ್ದಿ ಇರಬೇಕು. ಅದು ಆಗದಿದ್ದಾಗ ಒಪ್ಪಿಕೊಳ್ಳುವ ಮನಸಿರಬೇಕು, ಅದನ್ನು ಮಕ್ಕಳಲ್ಲಿ ಪೋಷಕರು ತರಬೇಕು. ಜೊತೆಗೆ ಅವರ ಸುತ್ತಾ ಇರುವವರು ಅವರಲ್ಲಿ ವಿಶ್ವಾಸ ತುಂಬಬೇಕು, ಅವರಿಗೆ ಮಾರ್ಗದರ್ಶನವನ್ನು ಮಾಡುತ್ತಾ ಅವರನ್ನು ಬೆಳೆಸಬೇಕು.ಆಗ ನಾವು ನಿಜವಾದ ಸದೃಢ ಯುವ ಪೀಳಿಗೆಯನ್ನು ಬೆಳೆಸಲು ಸಾಧ್ಯ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications