Maha Kumbh Mela 2025: ದೂರದ ಭಕ್ತರಿಗಾಗಿ ಡಿಜಿಟಲ್ ಪವಿತ್ರ ಸ್ನಾನದ ಸೇವೆ, ಇದಕ್ಕೂ ಫೀಸ್ ಇದೆ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕಾಗಿ ಜಗತ್ತಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಈವರೆಗೆ ಕೋಟ್ಯಂತರ ಜನ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಇನ್ನು ಕೆಲವರಿಗೆ ಇದು ಸಾಧ್ಯವಾಗಿಲ್ಲ. ಈ ದೂರವನ್ನೇ ಬಂಡವಾಳ ಮಾಡಿಕೊಂಡಿರುವ ಕಿಲಾಡಿಯೊಬ್ಬ ಭಕ್ತರಿಗಾಗಿ ಡಿಜಿಟಲ್ ಸ್ನಾನದ ಸೇವೆ ತೆರೆದು ಗಮನ ಸೆಳೆದಿದ್ದಾನೆ.
ಹೌದು, ವ್ಯಕ್ತಿಯೊಬ್ಬ ಮಹಾಕುಂಭ ಮೇಳಕ್ಕೆ ಬರಲು ಸಾಧ್ಯವಾಗದ ಭಕ್ತರಿಗಾಗಿ ಈ ಸೇವೆ ಆರಂಭಿಸಿದ್ದಾನೆ. ಭಕ್ತರು ಪ್ರಯಾಗ್‌ರಾಜ್‌ಗೆ ಹೋಗದೆಯೇ ಮಹಾಕುಂಭ ಮೇಳದಲ್ಲಿ ಮಿಂದೇಳುವ ಈತನ ಐಡಿಯಾಗೆ ಜನ ಮರುಳಾಗಿರುವುದೂ ಸತ್ಯ. ಭಕ್ತರು ಈ ವ್ಯಕ್ತಿಗೆ ಒಂದು ಫೋಟೋ ಕಳಿಸಿದರೆ ಸಾಕು, ಭಕ್ತರ ಪರವಾಗಿ ಆತನೇ ಈ ಫೋಟೋ ಅನ್ನು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮುಳುಗಿಸುವ ಕೆಲಸ ಮಾಡುತ್ತಿದ್ದಾನೆ.

ಹಲವರ ಪಾಲಿಗೆ ಈ ವ್ಯಕ್ತಿ ಈಗ ದೇವರಾಗಿಬಿಟ್ಟಿದ್ದಾನೆ. ಹಾಗಂತ ಈತ ಈ ಕೆಲಸವನ್ನು ಉಚಿತವಾಗಿ ಅಥವಾ ಸಮಾಜ ಸೇವೆ ಎಂದೇನು ಮಾಡುತ್ತಿಲ್ಲ. ಒಬ್ಬರು ಭಕ್ತರ ಫೋಟೋ ಅನ್ನು ತ್ರಿವೇಣಿ ಸಂಗಮದಲ್ಲಿ ಮಿಂದೇಳಿಸಲು ಸಾವಿರಾರು ರೂಪಾಯಿ ಸರ್ವೀಸ್ ಚಾರ್ಜ್ ಕೂಡ ಇದೆ. ಒಬ್ಬರಿಗೆ 1,100 ರೂಪಾಯಿ ಕೊಟ್ಟರಷ್ಟೇ ಭಕ್ತರ ಫೋಟೋನ ನೀರಿನಲ್ಲಿ ಮುಳುಗಿಸಿ, ಡಿಜಿಟಲ್ ಪವಿತ್ರ ಸ್ನಾನ ಮಾಡಿಸುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಈತನ ಬಿಸಿನೆಸ್ ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ.
ದೂರದ ಪ್ರದೇಶಗಳಲ್ಲಿರುವ ಭಕ್ತರು ಈತನ ಸೇವೆಗೆ ಮೆಚ್ಚಿ ತಮ್ಮ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳಿಸುತ್ತಿದ್ದಾರೆ. ಇದಕ್ಕೆ ಹಣ ಪಡೆದ ನಂತರ ಫೋಟೋಗಳನ್ನು ನೀರಿನಲ್ಲಿ ಮೂರು ಬಾರಿ ಮುಳುಗಿಸಿ, ಮಹಾಕುಂಭ ಮೇಳದ ಪುಣ್ಯ ಕಟ್ಟಿಕೊಳ್ಳಲು, ಪಾಪ ಕರ್ಮಗಳಿಂದ ಡಿಜಿಟಲ್ ಮುಕ್ತಿ ಕೊಡಿಸುತ್ತಿದ್ದಾನೆ.
ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯನ್ನ ಉದ್ಯಮಿ ಎನ್ನಲಾಗಿದೆ. ಭಕ್ತರಿಗೆ 1,100 ಶುಲ್ಕ ವಿಧಿಸಿ ಈ ಡಿಜಿಟಲ್ ಸ್ನಾನದ ಸೇವೆಯನ್ನು ವಾಟ್ಸಾಪ್ ಮೂಲಕವೇ ನೀಡುತ್ತಾ ಕೈತುಂಬಾ ಹಣ ಸಂಪಾದಿಸುತ್ತಿದ್ದಾನೆ. ಭಕ್ತರು ಶೇರ್ ಮಾಡುವ ಫೋಟೋಗಳನ್ನು ಈತ ಪ್ರಿಂಟ್ ತೆಗೆದುಕೊಂಡು ಅದನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸುತ್ತಿದ್ದಾನೆ. ಈ ಡಿಜಿಟಲ್ ಸ್ನಾನ ಸೇವೆಯು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಶಾಕ್ ಕೂಡ ಕೊಟ್ಟಿದೆ. ಅನೇಕರು ಈ ವ್ಯಕ್ತಿಯನ್ನು ಟೀಕಿಸುತ್ತಿದ್ದು, ಜನರ ಮುಗ್ಧತೆ ಹಾಗೂ ಭಕ್ತಿಯನ್ನೇ ಈತ ಲಾಭ ಮಾಡಿಕೊಂಡಿದ್ದಾನೆ ಎಂದು ದೂರುತ್ತಿದ್ದಾರೆ.

ವಿಡಿಯೋದಲ್ಲಿ ಆ ವ್ಯಕ್ತಿ ಹೆಸರು ದೀಪಕ್ ಗೋಯಲ್ ಎಂದು ಪರಿಚಯಿಸಿಕೊಂಡಿದ್ದಾನೆ. ನನ್ನ ಸ್ಟಾರ್ಟಪ್ ಮೂಲಕ ಮಹಾಕುಂಭ ಮೇಳದಲ್ಲಿ ಈ ಡಿಜಿಟಲ್ ಸ್ನಾನ ಸೇವೆ ನೀಡುತ್ತಿದ್ದೇನೆ. ನಿಮ್ಮ ಫೋಟೋಗಳನ್ನು ನನಗೆ ವಾಟ್ಸಾಪ್‌ನಲ್ಲಿ ಕಳಿಸಿದರೆ ಸಾಕು, ನಾನು ಅದನ್ನು ಪ್ರಿಂಟ್ ತೆಗೆದುಕೊಂಡು ತ್ರಿವೇಣಿ ಸಂಗಮದಲ್ಲಿ ಮುಳುಗಿಸುತ್ತೇನೆ. ಇದಕ್ಕೆ ಶುಲ್ಕವೂ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದಾನೆ. ಕೆಲವರು ಈತನನ್ನ ಕಿಲಾಡಿ ಎನ್ನುತ್ತಿದ್ದರೆ, ನಿಜವಾದ ಉದ್ಯಮಿ ಜನರೊಂದಿಗೆ ಹೀಗೂ ಬಿಸಿನೆಸ್ ಮಾಡ್ತಾನೆ ಎಂದು ಬೆನ್ನುತಟ್ಟಿದ್ದಾರೆ.












Click it and Unblock the Notifications