iPhone: ಭಕ್ತನ ದುಬಾರಿ ಐಫೋನ್ ಹುಂಡಿಗೆ ಬಿತ್ತು, ಸಿಬ್ಬಂದಿ ಅಂದ್ರು ಎಲ್ಲ ದೇವರ ಸ್ವತ್ತು
ದೇವಸ್ಥಾನಗಳಲ್ಲಿರುವ ಹುಂಡಿಗಳಿಗೆ ಭಕ್ತರು ಹಲವು ಹರಕೆ, ಕೋರಿಕೆಗಳನ್ನಿಟ್ಟುಕೊಂಡು ಹಣ ಹಾಕಿ ಬರುತ್ತಾರೆ. ಪ್ರಸಿದ್ಧ ದೇವಸ್ಥಾನಗಳಲ್ಲಿ ಕೋರಿಕೆ ಪತ್ರಗಳನ್ನು ಹುಂಡಿಗೆ ಹಾಕಿರುವ ವಿಚಾರವನ್ನು ನಾವು ಕೇಳಿರುತ್ತೀವಿ. ಆದರೆ, ದೇವಸ್ಥಾನದ ಹುಂಡಿಯಲ್ಲಿ ಐಫೋನ್ ಹಾಕುವ ಜನರೂ ಇದ್ದಾರಾ? ಎಂದು ಎಲ್ಲರೂ ಶಾಕ್ ಆಗುವಂತಹ ಪ್ರಸಂಗವೊಂದು ಇದೀಗ ಸುದ್ದಿಯಾಗಿದೆ.
ದೇವಸ್ಥಾನದ ಹುಂಡಿಗೆ ದುಬಾರಿ ಐಫೋನ್ ಸಿಕ್ಕಿದ್ದು, ಇದು ಭಕ್ತನೊಬ್ಬನ ಕೈಯಿಂದ ಮಿಸ್ ಆಗಿ ಬಿದ್ದಿದೆ ಎಂಬುದು ಗೊತ್ತಾಗಿದೆ. ಸಾಮಾನ್ಯವಾಗಿ ಹುಂಡಿಗೆ ಹೋಗಿದ್ದು ವಾಪಸ್ ಬರಲ್ಲ ಎನ್ನುವ ಗಾದೆ ಮಾತಿನಂತೆಯೇ ಇಲ್ಲಿನ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇಂತಹ ವಿಚಿತ್ರ ಘಟನೆ ನಡೆದಿರುವುದು ತಮಿಳುನಾಡಿನ ಚೆನ್ನೈ ಸಮೀಪದ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ಎಂದು ವರದಿಯಾಗಿದೆ.

ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರ ಐಫೋನ್ ಕೈಜಾರಿ ಹುಂಡಿಗೆ ಬಿದ್ದಿದೆ. ಒಂದು ತಿಂಗಳ ಹಿಂದೆ ಭಕ್ತ ತನ್ನ ಕುಟುಂಬ ಸಮೇತವಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪೂಜೆ ಮುಗಿಸಿ ಹುಂಡಿಗೆ ಹಣ ಹಾಕಲು ತೆರಳಿದ್ದರು. ತನ್ನ ಶರ್ಟ್ ಜೇಬಿನಿಂದ ನೋಟುಗಳನ್ನು ಹೊರತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಅವರ ಐಫೋನ್ ಕೂಡ ಹುಂಡಿಗೆ ಬಿದ್ದಿತ್ತು. ಹುಂಡಿ ಎತ್ತರದಲ್ಲಿ ಇಟ್ಟಿದ್ದರಿಂದ ಫೋನ್ ವಾಪಸ್ ಪಡೆಯಲು ಸಾಧ್ಯವಾಗಲಿಲ್ಲ.
ಇದರಿಂದ ಗಾಬರಿಗೊಂಡ ಭಕ್ತ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ, ಈ ರೀತಿ ಹುಂಡಿಯಲ್ಲಿ ತನ್ನ ಫೋನ್ ಬಿದ್ದಿರುವ ವಿಚಾರ ತಿಳಿಸಿದ್ದರು. ಆದರೆ, ದೇವಸ್ಥಾನದ ಅಧಿಕಾರಿಗಳು ಹುಂಡಿಯಲ್ಲಿ ಹಾಕಿದ ನಂತದ ಅದನ್ನು ದೇವರ ಸ್ವತ್ತು ಎಂದು ಪರಿಗಣಿಸುತ್ತೇವೆ. ಯಾವುದೇ ಕಾರಣಕ್ಕೂ ಅದನ್ನು ಹಿಂತಿರುಗಿಸಲಾಗುವುದಿಲ್ಲ ಎಂದು ಅವರು ಹೇಳಿದ್ದರು.

ಅಲ್ಲದೆ ಆ ದೇವಸ್ಥಾನದ ಸಂಪ್ರದಾಯದ ಪ್ರಕಾರ ಎರಡು ತಿಂಗಳಿಗೊಮ್ಮೆ ಮಾತ್ರ ಆ ಹುಂಡಿಯನ್ನು ತೆರೆಯಲಾಗುತ್ತದೆ ಎಂದು ಅವರು ಭಕ್ತನಿಗೆ ಹೇಳಿದ್ದರು. ಬಳಿಕ ಅವರು ಹಿಂದೂ ಧಾರ್ಮಿಕ ಮತ್ತು ದತ್ತಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ದೂರು ಕೂಡ ನೀಡಿದ್ದರು. ಕೊನೆಗೆ ಆ ದಿನ ಅವರು ಮೊಬೈಲ್ ಇಲ್ಲದೆ ಬರಿಗೈಯಲ್ಲೇ ವಾಪಸ್ ಆಗಿದ್ದರು. ಅಲ್ಲದೆ ಈ ಹುಂಡಿಯನ್ನು ಯಾವಾಗ ತೆಗೆಯುತ್ತೀರಿ, ಅದರ ಮಾಹಿತಿ ಕೊಡುವಂತೆ ಅಧಿಕಾರಿಗಳನ್ನು ಕೇಳಿದ್ದರು.
ನಿನ್ನೆ ಹುಂಡಿಯನ್ನು ತೆರೆಯಲು ದೇವಸ್ಥಾನದ ಸಿಬ್ಬಂದಿ ನಿರ್ಧರಿಸಿದ್ದರು. ಅದರಂತೆ ಮೊಬೈಲ್ ಕಳೆದುಕೊಂಡಿದ್ದ ಭಕ್ತ ಕೂಡ ತನ್ನ ಮೊಬೈಲ್ ಪಡೆಯುವ ಧಾವಂತದಲ್ಲಿ ದೇವಸ್ಥಾನದತ್ತ ಓಡೋಡಿಬಂದಿದ್ದರು. ಆದರೆ, ಹುಂಡಿ ತೆರೆದಾಗ ಭಕ್ತನ ಮೊಬೈಲ್ ಪತ್ತೆಯಾದರೂ ಅದನ್ನು ವಾಪಸ್ ಕೊಡಲು ಸಿಬ್ಬಂದಿ ಒಪ್ಪಲಿಲ್ಲ. ಒಂದು ಬಾರಿ ಹುಂಡಿಗೆ ಬಿದ್ದ ಮೇಲೆ ಅದು ದೇವರ ಸ್ವತ್ತು ಹಾಗಾಗಿ ಮೊಬೈಲ್ ವಾಪಸ್ ಕೊಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಮೊಬೈಲ್ ದೇವಸ್ಥಾನದ ವಶದಲ್ಲೇ ಇರುತ್ತದೆ. ಆದರೆ, ಸಿಮ್ ಕಾರ್ಡ್ ತೆಗೆದುಕೊಂಡು ಫೋನ್‌ನಿಂದ ಯಾವುದೇ ಪ್ರಮುಖ ಡೇಟಾವನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಭಕ್ತನಿಗೆ ನೀಡಿದ್ದಾರೆ. ಇನ್ನು ಆ ಫೋನ್ ವಾಪಸ್ ಕೊಡಬೇಕೋ ಬೇಡವೋ ಎಂಬುದನ್ನು ದೇವಸ್ಥಾನದ ಅಧಿಕಾರಿಗಳೇ ನಿರ್ಧರಿಸಲಿ ಎಂದು ಹಿರಿಯಾಧಿಕಾರಿಗಳು ಸುಮ್ಮನಾಗಿದ್ದಾರೆ.
ಹುಂಡಿಯಲ್ಲಿ ಬೀಳುವ ಯಾವುದೇ ವಸ್ತುವನ್ನು ದೇವಾಲಯ ಮತ್ತು ದೇವರಿಗೆ ಸಂಬಂಧಿಸಿದ್ದು ಎಂದು ಪರಿಗಣಿಸುತ್ತೇವೆ. ಫೋನ್ ಅನ್ನು ದೇವಾಲಯದ ಸುಪರ್ದಿಯಲ್ಲೇ ಇರಿಸಲಾಗುವುದು. ಹುಂಡಿಗೆ ಕಬ್ಬಿಣದ ಬೇಲಿ ಹಾಕಿ ರಕ್ಷಣೆ ಮಾಡಿರುವ ಕಾರಣ ಅವರು ಅದನ್ನು ಮೊದಲಿಗೆ ಕಾಣಿಕೆಯಾಗಿಯೇ ಹಾಕಿ, ನಂತರ ಮನಸ್ಸು ಬದಲಾಯಿಸಿರಬಹುದು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಒಂದು ಲಕ್ಷ ಬೆಲೆಬಾಳುವ ಐಫೋನ್ ದೇವರ ಸ್ವತ್ತಾಗಿದೆ.












Click it and Unblock the Notifications