ಮೈಸೂರಿನಲ್ಲಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಶೀಘ್ರದಲ್ಲೇ ಸಿಎಂ ಭೇಟಿ ಮಾಡಲು ನಿರ್ಧಾರ
ಮೈಸೂರು, ನವೆಂಬರ್, 05: ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಶೀಘ್ರದಲ್ಲೇ ಸರ್ವಪಕ್ಷಗಳ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಬಳಿ ತೆರಳಲಿದೆ ಎಂದು ಪಾಲಿಕೆ ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.
ನಗರ ಪಾಲಿಕೆಯಲ್ಲಿ ಶುಕ್ರವಾರ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ತಜ್ಞರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮೈಸೂರು ಪಾರಂಪರಿಕತೆ ತವರೂರು ಆಗಿದೆ. ಇಲ್ಲಿನ ಪಾರಂಪರಿಕ ಕಟ್ಟಡಗಳು ಉಳಿಯಬೇಕಾದರೆ ಸಾವಿರಾರು ಕೋಟಿ ಅನುದಾನ ಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಸರ್ಕಾರವನ್ನು ಗಮನ ಸೆಳೆಯುವ ಉದ್ದೇಶದಿಂದ ಸರ್ವಪಕ್ಷಗಳ ನಿಯೋಗದೊಂದಿಗೆ ಸಿಎಂ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲಾಗುತ್ತದೆ. ಅಲ್ಲದೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.
ನಗರಪಾಲಿಕೆ ವ್ಯಾಪ್ತಿಯಲ್ಲಿ ದೊಡ್ಡ ಗಡಿಯಾರ, ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಪುರಭವನ, ವಾಣಿವಿಲಾಸ ಮಾರುಕಟ್ಟೆ, ನಜರ್‌ಬಾದ್ ಬಳಿ ಸ್ವಾಗತ ಕಮಾನು, ಪಾಲಿಕೆ ಮುಖ್ಯ ಕಚೇರಿ ಸೇರಿದಂತೆ 8 ಕಟ್ಟಡಗಳು ಬರುತ್ತವೆ.
ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ವಿವಾದ ಕೋರ್ಟ್‌ನಲ್ಲಿದೆ. ಪಾಲಿಕೆ ಮುಖ್ಯ ಕಟ್ಟಡ, ದೊಡ್ಡ ಗಡಿಯಾರ ಹಾಗೂ ಪುರಭವನಗಳ ಸಂರಕ್ಷಣೆ ತುರ್ತಾಗಿ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡುವುದರ ಜೊತೆ ಪಾಲಿಕೆಯಲ್ಲಿನ ಅನುದಾನದಿಂದಲೇ ಕೆಲವನ್ನು ದುರಸ್ತಿಗೊಳಿಸಲಾಗುವುದು ಎಂದರು.

ಎಲ್ಲಾ ವಿಭಾಗಗಳ ಅಧಿಕಾರಿಗಳಿಗೆ ಜಾಗೃತಿ
ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ನಿರ್ವಹಣೆ ಸಂಬಂಧ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವಿಭಾಗಗಳ ಎಂಜಿನಿಯರ್ ಮತ್ತು ಅಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗುವುದು. ಈ ಸಲುವಾಗಿ ಪಾರಂಪರಿಕ ತಜ್ಞರಿಂದ ಎರಡು ದಿನ ತರಬೇತಿ ಕೊಡಿಸಲಾಗುವುದು ಎಂದರು. ನಂತರ ಜಿಲ್ಲಾ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಸದಸ್ಯ ಪ್ರೊ. ಎನ್. ಎಸ್. ರಂಗರಾಜು ಮಾತನಾಡಿ, ನಗರದಲ್ಲಿ ಒಟ್ಟು 126 ಪಾರಂಪರಿಕ ಕಟ್ಟಡಗಳಿದ್ದು, ಮೈಸೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ 25 ಕಟ್ಟಡಗಳಿವೆ. 10 ಕಟ್ಟಡಗಳಿಗೆ 100 ವರ್ಷಗಳಾಗಿದೆ. ಈ ಎಲ್ಲಾ ಕಟ್ಟಡಗಳ ಸಂರಕ್ಷಣೆ ತಕ್ಷಣ ಆಗಬೇಕಿದೆ. ಈ ಹಿಂದೆ ಪಾಲಿಕೆಯಲ್ಲಿದ್ದ ಹೆರಿಟೇಜ್ ಸೆಲ್ ಅನ್ನು ಮತ್ತೆ ಆರಂಭಿಸಬೇಕು. ಇದರಿಂದ ಹಳೆಯ ಕಟ್ಟಡಗಳ ಸಂರಕ್ಷಣೆಗೆ ಸಹಕಾರಿ ಆಗಲಿದೆ. ಜೊತೆಗೆ ಸುರ್ಕಿ ಗಾರೆ ಅರೆದು ಕಟ್ಟಡಗಳನ್ನು ದುರಸ್ತಿಗೊಳಿಸುವ ಮತ್ತು ಬಿರುಕುಬಿಟ್ಟ ಜಾಗಕ್ಕೆ ತೇಪೆ ಹಾಕಲು ತಂಡವನ್ನು ಪಾಲಿಕೆ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪ ಮೇಯರ್ ಡಾ. ರೂಪಾ, ಉಪ ಆಯುಕ್ತೆ ರೂಪಾ, ಪಾರಂಪರಿಕ ಮತ್ತು ಪುರಾತತ್ವ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ, ನಮ್ಮ ಮೈಸೂರು ಪೌಂಡೇಷನ್ ಮುಖ್ಯಸ್ಥ ದಶರಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರವಾಸಿಗರಿಗೆ ಎದುರಾದ ಭೀತಿ
ಒಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ, ಮತ್ತೊಂದೆಡೆ ಸೂಕ್ತ ನಿರ್ವಹಣೆ ಇಲ್ಲದೆ ನಗರದ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಸದ್ಯ ಮೈಸೂರಿನಲ್ಲಿ 25 ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತದಲ್ಲಿದ್ದು, ಪ್ರವಾಸಿಗರಿಗೆ ಭೀತಿ ಎದುರಾಗಿದೆ.
ಇದು ಪಾರಂಪರಿಕ ತಜ್ಞರು ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ನೀಡಿರುವ ವರದಿ ಆಗಿದೆ. ಇತ್ತೀಚಿಗೆ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಯೋಗಾಲಯ ಕೊಠಡಿ ಕುಸಿದು ಬಿದ್ದಿತ್ತು. 15 ನಿಮಿಷ ತಡವಾಗಿದ್ದರೆ ಪ್ರಯೋಗಾಲಯಕ್ಕೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ವಿದ್ಯಾರ್ಥಿಗಳು ಬರುವ ಮುಂಚೆಯೇ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿರಲಿಲ್ಲ. ಇನ್ನು 20 ದಿನದ ಹಿಂದೆ ಅರಮನೆ ತಡೆಗೋಡೆ ಕೂಡ ಕುಸಿದು ಬಿದ್ದಿತ್ತು. ಹೀಗಾಗಿ ಸದ್ಯ ಪಾರಂಪರಿಕ ತಜ್ಞರು ಕೊಟ್ಟಿರುವ ವರದಿಯಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಸದ್ಯ ನಗರದಲ್ಲಿ 234 ಪಾರಂಪರಿಕ ಕಟ್ಟಡಗಳು ಇವೆ. ಇದರಲ್ಲಿ 131 ಕಟ್ಟಡಗಳನ್ನು ಸರ್ಕಾರವೇ ಪಾರಂಪರಿಕ ಕಟ್ಟಡವೆಂದು ಘೋಷಣೆ ಮಾಡಿದೆ. ಇದರಲ್ಲಿ 25 ಕಟ್ಟಡಗಳು ತೀರಾ ದುಸ್ಥಿತಿಗೆ ತಲುಪಿವೆ. ಇವುಗಳು ಯಾವಾಗ ಬೇಕಾದರೂ ಕುಸಿಯಬಹುದು ಎಂದು ತಜ್ಞರು ವರದಿ ನೀಡಿದ್ದಾರೆ. ಆದರೂ ಜಿಲ್ಲಾಡಳಿವಾಗಲಿ ಅಥವಾ ಪಾರಂಪರಿಕ ಇಲಾಖೆಯಾಗಲಿ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಲ್ಲಿನ ಸ್ಥಳೀಯರು ಆಕ್ರೋಶವನ್ನು ವ್ಯಕ್ಯಪಡಿಸಿದ್ದಾರೆ.

ಸರ್ವೆ ಮಾಡಿದ ಪಾರಂಪರಿಕ ಬಿಲ್ಡಿಂಗ್ಸ್
‘‘ಮೈಸೂರಿನಲ್ಲಿ ಅಂದಾಜು 600ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಇವೆ. ಇದರಲ್ಲಿ 234 ಕಟ್ಟಡಗಳನ್ನು ನಾವು ಸರ್ವೆ ಮೂಲಕ ಗುರುತಿಸಿದ್ದೇವೆ. ಇದರಲ್ಲಿ 131 ಕಟ್ಟಡಗಳಿಗೆ ಸರ್ಕಾರ ಪಾರಂಪರಿಕ ಕಟ್ಟಡವೆಂದು ಘೋಷಣೆ ಮಾಡಿದೆ. ಸದ್ಯ ಪಾರಂಪರಿಕ ಕಟ್ಟಡಗಳ ಉಳಿವಿಗೆ ಅನುದಾನದ ಅವಶ್ಯಕತೆ ಇದೆ. ಸರ್ಕಾರ ಕಟ್ಟಡಗಳ ಉಳಿವಿಗೆ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಬೇಕು. ಅಲ್ಲದೆ ತಜ್ಞರಿಂದ ನವೀಕರಣ ಮಾಡಿಸಬೇಕು,''ಎಂದು ಪಾರಂಪರಿಕ ತಜ್ಞ ಪ್ರೊ.ರಂಗರಾಜು ತಿಳಿಸಿದ್ದಾರೆ.

ಪಾರಂಪರಿಕ ಕಟ್ಟಡಗಳು ದುರಸ್ಥಿಗೆ
ಕಾಡಾ ಕಟ್ಟಡ, ದೇವರಾಜ ಮಾರುಕಟ್ಟೆ, ಹಳೆ ಕಾವಾ ಕಟ್ಟಡ, ಜಯಲಕ್ಷ್ಮಿ ವಿಲಾಸ ಅರಮನೆ, ನಗರಪಾಲಿಕೆ ಕಟ್ಟಡ, ಅಂಬಾವಿಲಾಸ ಅರಮನೆ, ದೊಡ್ಡ ಗಡಿಯಾರ, ಕೆ.ಆರ್.ಆಸ್ಪತ್ರೆ (ದೊಡ್ಡ ಆಸ್ಪತ್ರೆ), ಜಿಲ್ಲಾಧಿಕಾರಿಗಳ ಕಚೇರಿ, ಸಂಸ್ಕೃತ ಪಾಠಶಾಲೆ, ಸರ್ಕಾರಿ ಅತಿಥಿ ಗೃಹ, ಮಹಾರಾಜ ಕಾಲೇಜು, ಕುಲಪತಿಗಳ ನಿವಾಸ, ಮೈಸೂರು ಮೆಡಿಕಲ್ ಕಾಲೇಜುಗಳ ಕಟ್ಟಡಗಳು ದುರಸ್ತಿ ಹಂತಕ್ಕೆ ತಲುಪಿವೆ.

2012ರಲ್ಲಿ ಲ್ಯಾನ್ಸ್‌ಡೌನ್ ಕಟ್ಟಡ ಕುಸಿತ
ಮೈಸೂರಿನಲ್ಲಿ ಕಳೆದ 1 ದಶಕದಲ್ಲಿ ಹತ್ತಾರು ಪಾರಂಪರಿಕ ಕಟ್ಟಡಗಳು ಕುಸಿದು ಬಿದ್ದಿದೆ. 2012ರಲ್ಲಿ ನಗರದ ಹೃದಯಭಾಗದಲ್ಲಿದ್ದ ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಕುಸಿದು, ಪ್ರಾಣ ಹಾನಿ ಸಂಭವಿಸಿತ್ತು. 2016ರಲ್ಲಿ ದೇವರಾಜ ಮಾರುಕಟ್ಟೆ ಕಟ್ಟಡದ ಒಂದು ಭಾಗ ಕುಸಿತ ಕಂಡಿತ್ತು. 2019ರಲ್ಲಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಕಟ್ಟಡದ ಸ್ವಾಗತ ಕಮಾನು ಕುಸಿದಿದ್ದು, ಇಂದಿಗೂ ಇದರ ದುರಸ್ತಿ ಕಾರ್ಯ ಇನ್ನು ಆಗಿಲ್ಲ. 2021ರಲ್ಲಿ ಮಾನಸಗಂಗೋತ್ರಿಯ ಜಯಲಕ್ಷ್ಮಿ ವಿಲಾಸ ಅರಮನೆ ಚಾವಣಿ ಕುಸಿತದಿತ್ತು. 2022 ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ ಕಟ್ಟಡದ ಚಾವಣಿ ಕುಸಿದು ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. 2022ರಲ್ಲಿ ಅರಮನೆ ತಡೆಗೋಡೆ ಹಾಗೂ ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಯೋಗಾಲಯ ಕಟ್ಟಡ ಕುಸಿದಿದ್ದು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿದ್ದರು.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications