ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Cyrus Mistry : ಸೈರಸ್ ಮಿಸ್ತ್ರಿ ಸಾವಿಗೆ ಪ್ರಧಾನಿ ಸೇರಿ ಹಲವರ ಆಘಾತ; ಯಾರು ಇವರು?

|
Google Oneindia Kannada News

ಟಾಟಾ ಸನ್ಸ್ ಮತ್ತು ಟಾಟಾ ಗ್ರೂಪ್‌ನ ಮಾಜಿ ಛೇರ್ಮನ್ ಸೈರಸ್ ಪಾಲನ್‌ಜಿ ಮಿಸ್ತ್ರಿ ಸೆಪ್ಟೆಂಬರ್ 4, ಭಾನುವಾರ ಮಹಾರಾಷ್ಟ್ರದ ಪಾಲಗಡ್‌ನಲ್ಲಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅಹ್ಮದಾಬಾದ್‌ನಿಂದ ಮುಂಬೈಗೆ ತಮ್ಮ ಮರ್ಸಿಡೆಸ್ ಕಾರಿನಲ್ಲಿ ಹೋಗುತ್ತಿದ್ದಾಗ ಮಧ್ಯಾಹ್ನ 3:15ಕ್ಕೆ ಈ ಅಪಘಾತ ಸಂಭವಿಸಿದೆ.

ಮುಂಬೈನಿಂದ 135 ಕಿಮೀ ದೂರದ ಪಾಲ್‌ಗಡ್‌ನ ಚರೋತಿ ಪ್ರದೇಶದ ಮೇಲ್ಸೇತುವೆ ಮೇಲೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಈ ಅಪಘಾತವಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕಾರಿನಲ್ಲಿ ಡ್ರೈವರ್ ಸೇರಿ ಮೂವರು ಇದ್ದರೆನ್ನಲಾಗಿದ್ದು, ಉಳಿದಿಬ್ಬರಿಗೆ ಗಾಯಗಳಾಗಿವೆ. ಪೊಲೀಸರ ಪ್ರಕಾರ ಅತಿಯಾದ ವೇಗವಾಗಿ ಕಾರು ಚಲಾಯಿಸುತ್ತಿದ್ದುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಟಾಟಾ ಗ್ರೂಪ್‌ನ ಹೆಚ್ಚೂಕಡಿಮೆ ಒಂದೂವರೆ ಶತಮಾನದ ಇತಿಹಾಸದಲ್ಲಿ ಟಾಟಾ ಕುಟುಂಬದ ಹೊರಗಿನವರು ಅಧ್ಯಕ್ಷರಾಗಿದ್ದು ಇಬ್ಬರೇ. ಅವರಲ್ಲಿ ಸೈರಸ್ ಮಿಸ್ತ್ರಿ ಮತ್ತು ನವ್ರೋಜಿ ಸಕಲತ್‌ವಾಲ ಮಾತ್ರವೇ. ಅಪ್ರತಿಮ ವ್ಯಾವಹಾರಿಕ ಚತುರ ಎಂದು ಖ್ಯಾತರಾಗಿದ್ದ ಸೈರಸ್ ಪಾಲನ್‌ಜಿ ಮಿಸ್ತ್ರಿ ಇತ್ತೀಚಿನ ವರ್ಷಗಳಲ್ಲಿ ಟಾಟಾ ಸನ್ಸ್ ಕಂಪನಿಯ ಛೇರ್ಮನ್ ಸ್ಥಾನದಿಂದ ಉಚ್ಛಾಟಿತಗೊಂಡು ಕೋರ್ಟ್ ಮೆಟ್ಟಿಲುವರೆಗೂ ಹೋಗಿ ವಿವಾದದ ಕೇಂದ್ರಭಾಗವಾಗಿದ್ದರು. ಅದು ಬಿಟ್ಟರೆ ಸೈರಸ್ ಮಿಸ್ತ್ರಿ ಮೊದಲಿಂದಲೂ ತೆರೆಮರೆಯಲ್ಲಿ ವ್ಯವಹಾರ ನಿಭಾಯಿಸುವ ನೈಪುಣ್ಯತೆ ಹೊಂದ ವ್ಯಕ್ತಿಯಾಗಿ ಗುರುತಾಗಿದ್ದರು.

ಮೋದಿ ಸೇರಿದಂತೆ ಹಲವರ ಸಂತಾಪ
ಸೈರಸ್ ಮಿಸ್ತ್ರಿ ಸಾವಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಪಿಯುಶ್ ಗೋಯಲ್, ಹಾಗು ಇನ್ನೂ ಹಲವು ರಾಜಕಾರಣಿಗಳು, ಉದ್ಯಮಿಗಳು ಸೈರಸ್ ಮಿಸ್ತ್ರಿ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ.

"ಶ್ರೀ ಸೈರಸ್ ಮಿಸ್ತ್ರಿ ಅವರ ಅಕಾಲಿಕ ಮರಣ ಆಘಾತ ತಂದಿದೆ. ಭಾರತದ ಆರ್ಥಿಕ ಶಕ್ತಿ ಬಗ್ಗೆ ನಂಬಿಕೆ ಇದ್ದ ಉದ್ಯಮಿ ಅವರಾಗಿದ್ದರು. ಅವರ ನಿಧನದಿಂದ ಭಾರತದ ವಾಣಿಜ್ಯ ಮತ್ತು ಉದ್ಯಮ ವಲಯಕ್ಕೆ ಬಹುದೊಡ್ಡ ನಷ್ಟವಾಗಿದೆ. ಅವರ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ನನ್ನ ಸಂತಾಪ ಇದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಹೇಳಿದ್ದಾರೆ.

ಸೈರಸ್ ಮಿಸ್ತ್ರಿ ಭಾರತದ ಅತ್ಯುತ್ತಮ ವ್ಯಾವಹಾರಿಕ ಚತುರರಲ್ಲಿ ಒಬ್ಬರಾಗಿದ್ದು, ಭಾರತದ ಪ್ರಗತಿಗೆ ಅವರ ಕೊಡುಗೆಯೂ ಬಹಳ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಶೋಕ ಸಂದೇಶದಲ್ಲಿ ಸ್ಮರಿಸಿದ್ದಾರೆ.

ಕೇಂದ್ರ ಸಚಿವ ಪಿಯೂಶ್ ಗೋಯಲ್ ಕೂಡ ಸೈರಸ್ ಮಿಸ್ತ್ರಿ ಸಾವಿಗೆ ದುಃಖ ವ್ಯಕ್ತಪಡಿಸಿ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. "ಭಾರತದ ಉದ್ಯಮ ತನ್ನೊಂದು ಮಿನುಗು ನಕ್ಷತ್ರವನ್ನು ಕಳೆದುಕೊಂಡಿದೆ. ಭಾರತದ ಆರ್ಥಿಕ ಪ್ರಗತಿಯಲ್ಲಿ ಅವರ ಯೋಗದಾನ ಚಿರಸ್ಮರಣೀಯ" ಎಂದು ಅವರು ಹೇಳಿದ್ದಾರೆ.

"ಸೈರಸ್ ಮಿಸ್ತ್ರಿ ಒಬ್ಬ ಸ್ನೇಹಿತ, ಒಬ್ಬ ಜೆಂಟಲ್‌ಮ್ಯಾನ್, ಒಬ್ಬ ತೂಕದ ವ್ಯಕ್ತಿತ್ವದವರು. ಶಾಪೂರ್‌ಜಿ ಪಾಲನ್‌ಜೀ ಸಂಸ್ಥೆಯನ್ನು ಕಟ್ಟಲು ಮತ್ತು ಟಾಟಾ ಗ್ರೂಪ್ ಅನ್ನು ಸಮರ್ಥವಾಗಿ ಮುನ್ನಡೆಸಲು ಅವರ ಪಾತ್ರ ಬಹಳ ಇದೆ" ಎಂದು ಉದ್ಯಮಿ ಹರ್ಷ್ ಗೋಯೆಂಕಾ ತಿಳಿಸಿದ್ದಾರೆ.

ಸೈರಸ್ ಮಿಸ್ತ್ರಿ ಯಾರು?
54 ವರ್ಷದ ಸೈರಸ್ ಮಿಸ್ತ್ರಿ 1968 ಜುಲೈ 4ರಂದು ಮುಂಬೈನಲ್ಲಿ ಜನಸಿದವರು. ಇವರದ್ದು ಪಾರ್ಸಿ ಕುಟುಂಬ. ದೊಡ್ಡ ಬಿಸಿನೆಸ್ ಕುಟುಂಬಕ್ಕೆ ಸೇರಿದವರು. ಇವರ ತಾತ ಶಾಪೂರ್‌ಜೀ ಮಿಸ್ತ್ರಿ ಸ್ವಾತಂತ್ರ್ಯಪೂರ್ವದಲ್ಲೇ ತಕ್ಕಷ್ಟು ಮಟ್ಟಕ್ಕೆ ಉದ್ಯಮಿಯಾಗಿ ಬೆಳೆದಿದ್ದರು. ಸೈರಸ್ ಮಿಸ್ತ್ರಿ ತಂದೆ ಪಾಲನ್‌ಜೀ ಮಿಸ್ತ್ರಿ. ಇವರ ಕುಟುಂಬದ್ದು ಕಟ್ಟಡ ನಿರ್ಮಾಣದ ವ್ಯವಹಾರ.

ಪಾರ್ಸಿ ಧರ್ಮೀಯರು ಇರಾನ್ ಪ್ರದೇಶದ ಮೂಲದವರು. ಸೈರಸ್ ಮಿಸ್ತ್ರಿ ಕುಟುಂಬ ಭಾರತದಲ್ಲಿ ಅನೇಕ ವರ್ಷಗಳಿಂದ ನೆಲಸಿದ್ದಾರೆ. ಬ್ರಿಟನ್ ಮತ್ತು ಭಾರತದ ಪೌರತ್ವ ಹೊಂದಿರುವವರು ಹೆಚ್ಚು.

Cyrus Mistry, The Only Second Man From Outside Tata Family To Head Tata Group

ಟಾಟಾ ನಂಟು:
ಮಿಸ್ತ್ರಿ ಕುಟುಂಬ ಮತ್ತು ಟಾಟಾ ನಡುವಿನ ನಂಟಿಗೆ ಒಂದೂವರೆ ಶತಮಾನದ ನಂಟಿದೆ. 1930ರ ದಶಕದಲ್ಲಿ ಸೈರಸ್ ಮಿಸ್ತ್ರಿ ತಾತ ಪಾಲನ್‌ಜಿ ಮಿಸ್ತ್ರಿ ಟಾಟಾ ಸನ್ಸ್ ಕಂಪನಿಯಲ್ಲಿ ಪಾಲು ಪಡೆದರು. ಅದೀಗ ಶೇ. 18.5ರಷ್ಟು ಬೆಳೆದಿದೆ.

ಟಾಟಾ ಸನ್ಸ್ ಎಂಬುದು ಟಾಟಾ ಗ್ರೂಪ್ ಅನ್ನು ನಿರ್ವಹಿಸುವ ಒಂದು ಸಂಸ್ಥೆ. ಟಾಟಾ ಗ್ರೂಪ್ ಭಾರತದ ಅತಿ ದೊಡ್ಡ ಉದ್ಯಮ ಸಮೂಹ ಎನಿಸಿದೆ.

ಮಿಸ್ತ್ರಿ ಕುಟುಂಬದವರು ಟಾಟಾ ಗ್ರೂಪ್‌ನ ಅನೇಕ ಸಂಸ್ಥೆಗಳ ನಿರ್ದೇಶಕರ ಮಂಡಳಿಯ ಸದಸ್ಯತ್ವ ಪಡೆದಿದ್ದಾರೆ. ಲಂಡನ್‌ನಲ್ಲಿ ಓದಿದ ಸೈರಸ್ ಮಿಸ್ತ್ರಿ 1991ರಲ್ಲಿ ಭಾರತಕ್ಕೆ ಬಂದು ತಮ್ಮ ಕುಟುಂಬದ ಸಂಸ್ಥೆ ಶಾಪೂರ್‌ಜೀ ಪಾಲನ್‌ಜೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಆಗಲೇ ಅವರು ಟಾಟಾ ಎಲ್‌ಕ್ಸಿ ಕಂಪನಿಯ ನಿರ್ದೇಶರಾಗಿದ್ದರು. ಟಾಟಾ ಪವರ್ ಕಂಪನಿಯ ನಿರ್ದೇಶಕರಾಗಿಯೂ ಕೆಲಸ ಮಾಡಿದರು.

2005ರಲ್ಲಿ ಸೈರಸ್ ಮಿಸ್ತ್ರಿ ತಮ್ಮ ತಂದೆ ನಿವೃತ್ತರಾದರು. ಅದಾಗಿ ಒಂದು ವರ್ಷದ ಬಳಿಕ ಮಿಸ್ತ್ರಿ ಅವರು ಟಾಟಾ ಸನ್ಸ್‌ನ ಬೋರ್ಡ್ ಸೇರಿದರು. ರತನ್ ಟಾಟಾ ನಿವೃತ್ತಿ ಘೋಷಿಸಿದ ಬಳಿಕ 2013ರಲ್ಲಿ ಸೈರಸ್ ಮಿಸ್ತ್ರಿ ಟಾಟಾ ಸನ್ಸ್ ಕಂಪನಿಯ ಛೇರ್ಮನ್ ಆದರು. ಹಾಗೆಯೇ, ಟಾಟಾ ಸಮೂಹದ ಬಹುತೇಕ ಎಲ್ಲಾ ಕಂಪನಿಗಳಿಗೂ ಅವರು ಛೇರ್ಮನ್ ಆಗಿ ಜವಾಬ್ದಾರಿ ಪಡೆದರು. ಟಾಟಾ ಮನೆತನಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಗ್ರೂಪ್ ಮುಖ್ಯಸ್ಥರಾದ ಎರಡನೇ ವ್ಯಕ್ತಿ ಮಿಸ್ತ್ರಿ ಆಗಿದ್ದರು.

ಸಂಘರ್ಷ
ಟಾಟಾ ಕುಟುಂಬ ಮತ್ತು ಮಿಸ್ತ್ರಿ ಕುಟುಂಬದ ನಡುವೆ ಅದ್ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡಿತೋ ಗೊತ್ತಿಲ್ಲ, 2016 ಅಕ್ಟೋಬರ್ 24ರಂದು ಟಾಟಾ ಸನ್ಸ್ ಮಂಡಳಿಯಿಂದ ಸೈರಸ್ ಮಿಸ್ತ್ರಿಯನ್ನು ಉಚ್ಛಾಟಿಸಲಾಯಿತು.

ಇದರ ವಿರುದ್ಧ ಸೈರಸ್ ಮಿಸ್ತ್ರಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮೊರೆ ಹೋದರು. ಎರಡು ತಿಂಗಳ ಬಳಿಕ ನ್ಯಾಯಮಂಡಳಿಯು ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿತು. ಈ ತೀರ್ಪು ಪ್ರಶ್ನಿಸಿ ಸೈರಸ್ ಮಿಸ್ತ್ರಿ ನ್ಯಾಷನಲ್ ಕಂಪನಿ ಲಾ ಅಪೆಲೇಟ್ ಟ್ರಿಬುನಲ್ (ಎನ್‌ಸಿಎಲ್‌ಎಟಿ) ಮೊರೆಹೋದರು. ಇಲ್ಲಿ ಸೈರಸ್ ಮಿಸ್ತ್ರಿ ಪರವಾಗಿ ತೀರ್ಪು ಸಿಕ್ಕಿತು. ಟಾಟಾ ಸನ್ಸ್ ಕಂಪನಿಗೆ ಸೈರಸ್ ಮಿಸ್ತ್ರಿ ಮತ್ತೆ ಛೇರ್ಮನ್ ಮಾಡುವಂತೆ ನ್ಯಾಯಮಂಡಳಿ ಆದೇಶಿಸಿತು.

ಅದೇ ವೇಳೆ, ಟಾಟಾ ಸನ್ಸ್ ಕಂಪನಿಯು ಎನ್‌ಸಿಎಲ್‌ಎಟಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆಗಲೇ ಸೈರಸ್ ಮಿಸ್ತ್ರಿ ತಾನು ಟಾಟಾ ಗ್ರೂಪ್ ಛೇರ್ಮನ್‌ಗಿರಿಗೆ ಬರುವುದಿಲ್ಲ ಎಂದು ನಿರ್ಧರಿಸಿದರು. ಆದರೆ, ಕಂಪನಿಯ ಮಂಡಳಿಯಲ್ಲಿ ತನಗೆ ಸ್ಥಾನ ಇರಲಿ ಎಂದು ಬಯಸಿದರು. ಅತ್ತ, ಸುಪ್ರೀಂ ಕೋರ್ಟ್ ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿತು. ಇದಾದ ಬಳಿಕ ಸೈರಸ್ ಮಿಸ್ತ್ರಿ ಅವರು ತಮ್ಮ ಕುಟುಂಬದ ಸಂಸ್ಥೆಗಳನ್ನು ನಿರ್ವಹಿಸುವದರತ್ತ ಗಮನ ಹರಿಸಿದ್ದರು.

(ಒನ್ಇಂಡಿಯಾ ಸುದ್ದಿ)

English summary
PM Narendra Modi and several others have expressed shock over the untimely demise of Cyrus Mistry in an accident. Cyrus was the only second man outside Tata family to head Tata group and Tata Sons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X