ಸಂವಿಧಾನ ದಿನ 2021: ಮಹತ್ವ, ಇತಿಹಾಸ ಮತ್ತು ನೀವು ತಿಳಿದುಕೊಳ್ಳಬೇಕಾದದ್ದು
ನವದೆಹಲಿ ನವೆಂಬರ್ 25: 26 ನವೆಂಬರ್ ಅನ್ನು ಭಾರತದಲ್ಲಿ ಸಂವಿಧಾನ ದಿನ ಅಥವಾ ಸಂವಿಧಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರೀಯ ಕಾನೂನು ದಿನ ಎಂದೂ ಕರೆಯಲಾಗುತ್ತದೆ. ನಾವು ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವವನ್ನು ಏಕೆ ಆಚರಿಸುತ್ತೇವೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದ್ದರೂ, ನಮ್ಮಲ್ಲಿ ಅನೇಕರು ಸಂವಿಧಾನದ ದಿನದ ಮಹತ್ವವನ್ನು ತಿಳಿದಿಲ್ಲ. ಈ ದಿನವು ಭಾರತದಲ್ಲಿ ಸಂವಿಧಾನದ ಅಂಗೀಕಾರವನ್ನು ಸ್ಮರಿಸುತ್ತದೆ. ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.
1949 ರಲ್ಲಿ ಈ ದಿನದಂದು ಭಾರತೀಯ ಸಂವಿಧಾನವನ್ನು ಸಂವಿಧಾನ ಸಭೆಯು ಅಂಗೀಕರಿಸಿತು. ಇದು ಜನವರಿ 26, 1950 ರಂದು ಜಾರಿಗೆ ಬಂದಿದೆ. ಅಂದಹಾಗೆ, ನವೆಂಬರ್ 26 ರಂದು ನಾವು ಸಂವಿಧಾನ ದಿನವನ್ನು ಆಚರಿಸುತ್ತೇವೆ ಮತ್ತು ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.
ಭಾರತದ ಸಂವಿಧಾನವನ್ನು ಬರೆಯಲು ಭಾರತದ ಸಂವಿಧಾನ ಸಭೆಯನ್ನು ಆಯ್ಕೆ ಮಾಡಲಾಯಿತು. 1947 ರಲ್ಲಿ ಭಾರತವು ಬ್ರಿಟಿಷ್ ಸರ್ಕಾರದಿಂದ ಸ್ವಾತಂತ್ರ್ಯವನ್ನು ಪಡೆದ ನಂತರ, ಸಂವಿಧಾನ ಸಭೆಯ ಸದಸ್ಯರು ರಾಷ್ಟ್ರದ ಮೊದಲ ಸಂಸತ್ತಾಗಿ ಸೇವೆ ಸಲ್ಲಿಸಿದರು. ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಬಿ.ಆರ್. ಅಂಬೇಡ್ಕರ್ (14 ಏಪ್ರಿಲ್ 1891) ಅವರ 125 ನೇ ಜನ್ಮದಿನದ ವರ್ಷವಾಗಿದ್ದು, ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸುವುದರೊಂದಿಗೆ ಕೇಂದ್ರವು 2015 ರಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿತು. ನವೆಂಬರ್ 19, 2015 ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನವೆಂಬರ್ 26 ಅನ್ನು 'ಸಂವಿಧಾನ ದಿನ' ಎಂದು ಆಚರಿಸಲು ಭಾರತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿತು.

ʻಆಜಾದಿ ಕಾ ಅಮೃತ ಮಹೋತ್ಸವʼವು ಪ್ರಗತಿಪರ ಭಾರತ ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ಭವ್ಯ ಇತಿಹಾಸವನ್ನು ಆಚರಿಸಲು ಹಾಗೂ ಸ್ಮರಿಸಲು ಭಾರತ ಸರಕಾರ ಕೈಗೊಂಡ ಪ್ರಮುಖ ಉಪಕ್ರಮವಾಗಿದೆ. ಈ ಮಹೋತ್ಸವದ ಅಂಗವಾಗಿ ಭಾರತವು ನವೆಂಬರ್ 26ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ʻಸಂವಿಧಾನ ದಿನʼವನ್ನು ಅತ್ಯಂತ ಹುರುಪು ಮತ್ತು ಉತ್ಸಾಹದಿಂದ ಆಚರಿಸಲಿದೆ. ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಇಂದು (23 ನವೆಂಬರ್ 2021) ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಕುರಿತು ಮಾಹಿತಿ ಹಂಚಿಕೊಂಡರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿ ಮುರಳೀಧರನ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರು ʻಆಜಾದಿ ಕಾ ಅಮೃತ ಮಹೋತ್ಸವʼದ ಅಡಿಯಲ್ಲಿ ʻಸಂವಿಧಾನ ದಿನʼ (26 ನವೆಂಬರ್, 2021) ಆಚರಣೆಗೆ ಸಿದ್ಧತೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು.

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2021ರ ನವೆಂಬರ್ 26 ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ʻಸಂವಿಧಾನ ದಿನʼ ಆಚರಣೆಯ ಅಧ್ಯಕ್ಷತೆ ವಹಿಸಲಿದ್ದು, ಅಂದು ಬೆಳಗ್ಗೆ11:00 ಗಂಟೆಯಿಂದ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಸಭಾಪತಿಗಳು, ಸಚಿವರು, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯವನ್ನು ಸಂಸತ್ ಟಿವಿ, ಡಿಡಿ ಹಾಗೂ ಇತರ ಟಿವಿ ವಾಹಿನಿಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ನಂತರ ಸಂವಿಧಾನದ ಪೀಠಿಕೆಯ ವಾಚನ ಕಾರ್ಯಕ್ರಮವಿದ್ದು ರಾಜಕೀಯ ಗಣ್ಯರಿಗೆ ಆಹ್ವಾನಿಸಲಾಗಿದೆ. ಭಾರತ ಸರಕಾರದ ಸಚಿವಾಲಯಗಳು/ಇಲಾಖೆಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು, ಶಾಲೆಗಳು/ಕಾಲೇಜುಗಳು/ವಿಶ್ವವಿದ್ಯಾಲಯಗಳು/ಸಂಸ್ಥೆಗಳು/ ಮಂಡಳಿಗಳು, ಬಾರ್ ಕೌನ್ಸಿಲ್‌ಗಳು ಸೇರಿದಂತೆ ಸಾರ್ವಜನಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ, 26.11.2021ರಂದು ಸಂವಿಧಾನದ ಪೀಠಿಕೆಯ ವಾಚನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ರೇಡಿಯೋ/ಟಿವಿ/ಸಾಮಾಜಿಕ ಮಾಧ್ಯಮ ಮುಂತಾದ ವಿವಿಧ ವಿಧಾನಗಳ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಲು ದೊಡ್ಡ ಪ್ರಮಾಣದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗಿದೆ.

"ಸಾಂವಿಧಾನಿಕ ಪ್ರಜಾಪ್ರಭುತ್ವದ ಬಗ್ಗೆ ಆನ್‌ಲೈನ್ ರಸಪ್ರಶ್ನೆ" (mpa.nic.in/constitution-day) ಪೋರ್ಟಲ್‌ಗೆ ಗೌರವಾನ್ವಿತ ರಾಷ್ಟ್ರಪತಿಗಳು 2021ರ ನವೆಂಬರ್ 26ರಂದು ಸೆಂಟ್ರಲ್ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ. ಇದು ಭಾರತೀಯ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಸರಳ ಮತ್ತು ಮೂಲಭೂತ ಪ್ರಶ್ನೆಗಳನ್ನು ಹೊಂದಿರುತ್ತದೆ. ತಮ್ಮ ಹೆಸರು, ದೂರವಾಣಿ ಸಂಖ್ಯೆ ಮತ್ತು ವಯಸ್ಸಿನ ವಿವರಗಳೊಂದಿಗೆ ನೋಂದಣಿಯಾಗಿ ಯಾರು ಬೇಕಾದರೂ ಈ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು ಹಾಗೂ ಇದರಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಮಾಣಪತ್ರವನ್ನು ಪಡೆಯಬಹುದು. ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿ ಅನೇಕ ನೋಂದಣಿಗಳಿಗೂ ಅವಕಾಶವಿದೆ. ಇದರಲ್ಲಿ ಸುಮಾರು 1000 ಪ್ರಶ್ನೆಗಳ ಪ್ರಶ್ನೆಗಳ ಭಂಡಾರವಿದ್ದು, ಮತ್ತು ಪ್ರತಿ ಬಾರಿ 5 ಪ್ರಶ್ನೆಗಳು ಯಾದೃಚ್ಛಿಕವಾಗಿ ಪ್ರತ್ಯಕ್ಷವಾಗುತ್ತವೆ. ರಸಪ್ರಶ್ನೆಯಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಯು ಇವುಗಳಿಗೆ ಉತ್ತರಿಸಲು ಪ್ರಯತ್ನಿಸಬೇಕು. ಸ್ಪರ್ಧಿಯು ಅವನ/ ಅವಳ ಉತ್ತರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಬಹುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು. ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುತ್ತವೆ. ಇದರಿಂದ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚು ಹೆಚ್ಚು ಜನರು ವಿಶ್ವದಾದ್ಯಂತ ಭಾಗವಹಿಸಬಹುದು.












Click it and Unblock the Notifications