ಮೇಕೆದಾಟುಗೆ ಸಾವಿರ ಕೋಟಿ: ಪಾದಯಾತ್ರೆ ಎಫೆಕ್ಟ್ ಅಥವಾ ಕಾಂಗ್ರೆಸ್ಸಿಗೆ ಬೊಮ್ಮಾಯಿ ಠಕ್ಕರ್?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಚೊಚ್ಚಲ ಆಯವ್ಯಯವನ್ನು ಮಂಡಿಸಿದ್ದಾರೆ. ಸುಮಾರು 135 ನಿಮಿಷಗಳ ಸುದೀರ್ಘ ಬಜೆಟ್ ಮಂಡನೆಯಲ್ಲಿ ಹಲವು ಹೊಸ ಘೋಷಣೆ, ಕಾಮಗಾರಿ, ಅಭಿವೃದ್ದಿ ಯೋಜನೆಯನ್ನು ಸಿಎಂ ಪ್ರಕಟಿಸಿದ್ದಾರೆ.
ಬಜೆಟ್ ಪ್ರಮುಖಾಂಶಗಳಲ್ಲಿ ಒಂದು ಮೇಕೆದಾಟು ಯೋಜನೆಗೆ ಆಯವ್ಯಯದಲ್ಲಿ ಬರೋಬ್ಬರಿ 1 ಸಾವಿರ ಕೋಟಿ ರೂ. ಅನ್ನು ಮೀಸಲಿಟ್ಟಿರುವುದು. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ ಸೇರಿ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಒಟ್ಟು 14,700 ಕೋಟಿ ರೂ. ಘೋಷಣೆ ಮಾಡಲಾಗಿದೆ.
ಮೇಕೆದಾಟು ಯೋಜನೆಯ ಜಾರಿಗಾಗಿ ಕೆಪಿಸಿಸಿ ಎರಡು ಹಂತದಲ್ಲಿ ಪಾದಯಾತ್ರೆಯನ್ನು ನಡೆಸಿತ್ತು. ಮೊದಲಿಗಿಂತ ಎರಡನೇ ಚರಣದ ಪಾದಯಾತ್ರೆಗೆ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಕುಡಿಯುವ ನೀರಿಗಾಗಿ ಯಾವ ಹೋರಾಟ, ತ್ಯಾಗಕ್ಕೂ ಸಿದ್ದ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.
ಕರ್ನಾಟಕ ಕಾಂಗ್ರೆಸ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತಮ ಮೈಲೇಜ್ ಅನ್ನು ತಂದುಕೊಟ್ಟ ಈ ಪಾದಯಾತ್ರೆಯ ಎಫೆಕ್ಟ್ ನಿಂದಾಗಿ ಬಜೆಟ್ ನಲ್ಲಿ ಈ ಯೋಜನೆಗಾಗಿ ಹಣ ಮೀಸಲಿಡಲಾಯಿತಾ ಎನ್ನುವ ಪ್ರಶ್ನೆ ಈಗ ಎದುರಾಗಿದೆ.

ಬಜೆಟ್ ಮಂಡನೆಯ ಮುನ್ನಾದಿನದವರೆಗೂ ಬದಲಾವಣೆ, ಪರಿಷ್ಕರಣೆ
ಸಾಮಾನ್ಯವಾಗಿ ಬಜೆಟ್ ಮಂಡನೆಯ ಮುನ್ನಾದಿನದವರೆಗೂ ಬದಲಾವಣೆ, ಪರಿಷ್ಕರಣೆ, ಸೇರ್ಪಡೆಗಳು ಇರುತ್ತವೆ. ಮೊದಲು ಇಂಗ್ಲಿಷ್ ಪ್ರತಿ ಸಿದ್ದವಾಗುತ್ತದೆ, ನಂತರ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗುತ್ತದೆ. ಬಜೆಟ್ ಮಂಡನೆಯ ದಿನವೇ ಅದರ ಪ್ರತಿ ವಿಧಾನಸೌಧಕ್ಕೆ ಬರುತ್ತದೆ. ಇದು ಸರಕಾರ ಯಾವುದೇ ಇರಲಿ, ಇದೇ ಪದ್ದತಿಯನ್ನು ಪಾಲಿಸಿಕೊಂಡು ಬರಲಾಗುತ್ತದೆ. ಕೆಪಿಸಿಸಿಯ ಮೇಕೆದಾಟು ಪಾದಯಾತ್ರೆ ಅದ್ದೂರಿಯಾಗಿ ಗುರುವಾರ (ಮಾ 3) ಸಂಪನ್ನಗೊಂಡಿತ್ತು. ಹಾಗಾಗಿ, ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆಗೆ ಹಣ ಮೀಸಲಿಡುವ ನಿರ್ಧಾರಕ್ಕೆ ಬಂದಿರಬಹುದು. ಇದೊಂದು ಆಯಾಮ.

ಬೊಮ್ಮಾಯಿ ಹಣ ಮೀಸಲಿಡುವ ಮೂಲಕ ಕಾಂಗ್ರೆಸ್ಸಿಗೆ ಠಕ್ಕರ್
ಇನ್ನೊಂದು ಆಯಾಮದ ಪ್ರಕಾರ, ಪಾದಯಾತ್ರೆಯನ್ನು ಬಲವಂತದಿಂದ ನಿಲ್ಲಿಸಲು ಹೋದರೆ ಸರಕಾರಕ್ಕೆ ಕೆಟ್ಟ ಹೆಸರನ್ನು ಬರುತ್ತದೆ ಎನ್ನುವುದನ್ನು ಅರಿತ ಸಿಎಂ ಬೊಮ್ಮಾಯಿ ಉದ್ದೇಶಪೂರ್ವಕವಾಗಿಯೇ ಮೇಕೆದಾಟು ಯೋಜನೆಗೆ ಹಣ ಮೀಸಲಿಡುವ ನಿರ್ಧಾರಕ್ಕೆ ಮುಂಚೆನೇ ಬಂದಿದ್ದರು ಎಂದೂ ಹೇಳಲಾಗುತ್ತಿದೆ. ಆ ಮೂಲಕ ಪಾದಯಾತ್ರೆಯ ಪರಿಶ್ರಮ ನಿಮ್ಮದು, ಅದರ ಫಲ ನಮಗೆ ಎಂದು ಬೊಮ್ಮಾಯಿ ಹಣ ಮೀಸಲಿಡುವ ಮೂಲಕ ಕಾಂಗ್ರೆಸ್ಸಿಗೆ ಠಕ್ಕರ್ ಕೊಟ್ಟಿದ್ದಾರೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
|
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, "ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿರುವುದು ಸ್ವಾಗತಾರ್ಹ. ನೀರಿನ ವಿಷಯದಲ್ಲಿ ಕರ್ನಾಟಕವನ್ನು ಸ್ವಾವಲಂಬಿಯಾಗಿಸುವ ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸಲಾದ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕನ್ನಡಿಗರಿಗೂ ಇದರ ಪ್ರತಿಫಲ ಸಲ್ಲುತ್ತದೆ. ಇದು ನಮ್ಮೆಲ್ಲರ ಗೆಲುವು. ಸಾಮೂಹಿಕ ಹೋರಾಟದಿಂದ ಹಕ್ಕುಗಳನ್ನು ಪಡೆಯಬಹುದು ಎಂಬುದಕ್ಕೆ ಇದೊಂದು ನಿದರ್ಶನ" ಎಂದು ಟ್ವೀಟ್ ಮಾಡಿದ್ದಾರೆ.

ಬೊಮ್ಮಾಯಿ ಹಣ ಮೀಸಲಿಡುವ ಮೂಲಕ ಕಾಂಗ್ರೆಸ್ಸಿಗೆ ಠಕ್ಕರ್?
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ರಾಜಕೀಯ ಲಾಭ ನಿರೀಕ್ಷಿಸುವುದು ಸಹಜ. ಕೆಪಿಸಿಸಿ ಪಾದಯಾತ್ರೆ ನಡೆಸಿ ಮೇಕೆದಾಟು ಯೋಜನೆಗೆ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ಮಾಡಿದ್ದೇವೆ ಎಂದು ಹೇಳಬಹುದು. ಕಾಂಗ್ರೆಸ್ ಎಷ್ಟೇ ಹೋರಾಟ ನಡೆಸಿದರೂ, ಯೋಜನೆಗೆ ಡಿಪಿಆರ್ (ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಅನುಮತಿ ಪಡೆದದ್ದು, ಹಣ ಮೀಸಲಿಟ್ಟಿದ್ದು ಎಂದು ಬಿಜೆಪಿ ಹೇಳಬಹುದು. ಯಾರು ಏನೇ ಹೇಳಲಿ, ಕಾಂಗ್ರೆಸ್ಸಿನವರು ಪಾದಯಾತ್ರೆಯಲ್ಲಿ ಹೇಳುತ್ತಿದ್ದಂತೆ, ಐವತ್ತು ವರ್ಷ ಕುಡಿಯುವ ನೀರಿನ ಸಮಸ್ಯೆ ಬರದಿದ್ದರೆ ಸಾಕು ಎನ್ನುವುದಷ್ಟೇ ಜನತೆಯ ಆಶಯ.












Click it and Unblock the Notifications