Christmas: ಕೊಡಗಿನಲ್ಲಿದೆ ಶತಮಾನಗಳ ಇತಿಹಾಸ ಹೊಂದಿರುವ ವಿಶೇಷ ಚರ್ಚ್: ಇಲ್ಲಿನ ಆಚರಣೆಗಳೇನು?
ಮಡಿಕೇರಿ, ಡಿಸೆಂಬರ್ 24: ಕೊಡಗಿನಲ್ಲಿ ಶತಮಾನಗಳ ಇತಿಹಾಸ ಹೊಂದಿ ಭಾವೈಕ್ಯತೆ ಸಾರುತ್ತಾ ನಿಂತಿರುವ ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ಹಲವು ವಿಶೇಷತೆಗಳೊಂದಿಗೆ ಗಮನಸೆಳೆಯುತ್ತದೆ. ಚರ್ಚ್ ನಿರ್ಮಾಣದ ವಿನ್ಯಾಸದಿಂದ ಆರಂಭವಾಗಿ ಹಬ್ಬದ ಆಚರಣೆವರೆಗೂ ಹಿಂದೂ ಸಂಪ್ರದಾಯಕ್ಕೆ ಹತ್ತಿರವಾಗಿರುವುದು ಇಲ್ಲಿ ಎದ್ದು ಕಾಣಿಸುತ್ತದೆ. ಹಾಗಾದರೆ ಸಂತ ಅನ್ನಮ್ಮ ಚರ್ಚ್ ಏಕೆ ವಿಭಿನ್ನ ಮತ್ತು ವಿಶಿಷ್ಟ ಎಂಬುದನ್ನು ನೋಡುತ್ತಾ ಹೋದರೆ ಹತ್ತಾರು ವಿಚಾರಗಳು ನಮ್ಮ ಮುಂದೆ ಬರುತ್ತವೆ.
ವೀರಾಜಪೇಟೆ ಪಟ್ಟಣದಲ್ಲಿ ಗಗನಚುಂಬಿಯಾಗಿ ಎಲ್ಲರನ್ನು ಆಕರ್ಷಿಸುವ ಸಂತ ಅನ್ನಮ್ಮ ಚರ್ಚ್ ನಿರ್ಮಾಣದ ಹಿಂದೆ ಒಂದು ರೋಚಕ ಕತೆ ಅಡಗಿದೆ. ಅದಕ್ಕಿಂತ ಹೆಚ್ಚಾಗಿ ಈ ಚರ್ಚ್ ನಿರ್ಮಾಣಕ್ಕೆ ಸಹಾಯ ಮಾಡಿದ್ದೇ ಕೊಡಗಿನ ಅಂದಿನ ಮಹಾರಾಜ ದೊಡ್ಡವೀರರಾಜೇಂದ್ರ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲವೇನೋ? ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಚರ್ಚ್ ಯಾವಾಗ ಮತ್ತು ಹೇಗೆ ನಿರ್ಮಾಣವಾಯಿತು ಎಂಬುದಕ್ಕೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ.

1790-92ರ ಮೂರನೇ ಆಂಗ್ಲೋ-ಮೈಸೂರು ಯುದ್ದ ಕಾಲದಲ್ಲಿ ಟಿಪ್ಪು ಸುಲ್ತಾನ್ ಸಾವಿರಾರು ಕ್ರೈಸ್ತರನ್ನು ಶ್ರೀರಂಗಪಟ್ಟಣದಲ್ಲಿ ಬಂಧಿಸಿಟ್ಟಿರುತ್ತಾನೆ. ಆತನ ಬಂಧನದಿಂದ ತಪ್ಪಿಸಿಕೊಂಡು ಸುಮಾರು ಏಳುನೂರಕ್ಕೂ ಹೆಚ್ಚು ಕ್ರೈಸ್ತರು ದಿಕ್ಕುಪಾಲಾಗಿ ಕೊಡಗಿನತ್ತ ಬರುತ್ತಾರೆ. ಹೀಗೆ ಬಂದ ಕ್ರೈಸ್ತರಿಗೆ ಆಗಿನ ದೊಡ್ಡವೀರರಾಜೇಂದ್ರ ಆಶ್ರಯ ನೀಡಿ, ತಾವು ಹೊಸದಾಗಿ ನಿರ್ಮಿಸಿದ್ದ ವೀರರಾಜೇಂದ್ರಪೇಟೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡುತ್ತಾರೆ.
ದೊಡ್ಡ ವೀರರಾಜೇಂದ್ರನಿಂದ ದೀಪಗಳ ಕೊಡುಗೆ
ಇದರ ಜೊತೆಗೆ ಅವರ ಮತ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್ ಡಿ'ಕೋಸ್ಟ ಎಂಬ ಧರ್ಮಗುರುವನ್ನು ಕರೆಸಿ 1792ರ ನವೆಂಬರ್ 10ರಂದು ಸಂತ ಅನ್ನಮ್ಮ ಚರ್ಚ್ ನ್ನು ಕಟ್ಟಿಸಲು ವ್ಯವಸ್ಥೆ ಮಾಡಿಸುತ್ತಾರೆ. ಸದ್ಯ ಈ ಚರ್ಚ್ 232 ವರ್ಷಗಳನ್ನು ಸವೆಸಿದೆ. ಇನ್ನು ಈ ಚರ್ಚ್ ಗೆ ಅವತ್ತಿನ ಕಾಲದಲ್ಲಿ ದೊರೆ ದೊಡ್ಡವೀರರಾಜೇಂದ್ರ 'ವಿ' ಸಂಕೇತದಿಂದ ಕೂಡಿದ ಎರಡು ದೀಪಕಂಬ (ಕುತ್ತುಂಬೊಳಿಚ್ಚ) ಗಳನ್ನು ನೀಡಿರುವುದು ಗಮನಾರ್ಹವಾಗಿದೆ.

ಚರ್ಚ್ ಪ್ರಾಚೀನ- ಅವಾರ್ಚೀನ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಭವ್ಯ ಗಾಥಿಕ್ ಶೈಲಿಯಲ್ಲಿ ಶೃಂಗ ತ್ರಿಕೋನ ಬಾಗು ಬಾಹುಗಳ ಮುಖಗೋಪುರವನ್ನು ಹೊಂದಿದೆ. ದೀರ್ಘ ವೃತ್ತಾಕಾರದ ಪ್ರವೇಶ ದ್ವಾರಗಳಿದ್ದು, ಗೋಪುರವು ಸುಮಾರು 150 ಅಡಿಗಳಷ್ಟು ಎತ್ತರವಿದೆ. ಇದರ ಮೇಲೆ ಪಂಚಲೋಹದ ಆರು ಅಡಿ ಎತ್ತರದ ಶಿಲುಬೆಯನ್ನಿಡಲಾಗಿದೆ.
ಅನ್ನಮ್ಮ ಚರ್ಚ್‌ನ ಒಳನೋಟ ಹೇಗಿದೆ?
ಒಳ ಸಭಾಂಗಣದ ವಿನ್ಯಾಸ, ಬಲಿಪೀಠ, ಗೂಡು, ಮೂಲ ಅಂಕಣ, ಸಭಾ ಸ್ತಂಭಗಳು, ಗುರು ಸಮಾಧಿ ನೆಲೆ ಪರಿವರ ಶಿಲ್ಪ, ಪ್ರದಕ್ಷಿಣೆ ಸಭಾಕಾರವಿದ್ದು ಇಲ್ಲಿನ ಗುಡಿಯು ಹಿಂದೂ ದೇವಾಲಯದ ಗರ್ಭಾಂಕಣ, ನವರಂಗ ಮುಖಮಂಟಪ, ಗದ್ದುಗೆ ನೆಲೆಗೋಪುರಗಳನ್ನು ಹೋಲುವಂತಿದೆ. ಚರ್ಚ್‌ನ ಸಮಿಪದಲ್ಲಿ ಲೂರ್ದ್ ಮಾತೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಫ್ರಾನ್ಸ್ ನ "ಲೂರ್ದ್" ಮಾದರಿಯ ಸುಂದರ ಕೃತ್ರಿಮ ಗವಿಯಿದೆ. ಇಷ್ಟೇ ಅಲ್ಲದೆ ಸಾಲ್ವದೋರ್‌ಪಿಂಟೋ ಹಾಗೂ ದೋನಾಥ್ ಲೋಬೋರವರ ಜ್ಞಾಪಕಾರ್ಥವಾಗಿ ಪ್ಯಾರೀಸ್‌ನಿಂದ ತರಿಸಲ್ಪಟ್ಟ ಇಂಪಾದ ನಿನಾದವನ್ನು ಹೊರಹೊಮ್ಮಿಸುವ ಬೃಹದಾಕಾರದ ಎರಡು ಗಂಟೆಗಳು ಇಲ್ಲಿವೆ.
ಈ ಗಂಟೆಗಳನ್ನು ಚರ್ಚ್ ನ ಗೋಪುರದಲ್ಲಿ ಸುಮಾರು ನೂರು ಅಡಿಗಳಷ್ಟು ಎತ್ತರದಲ್ಲಿ ಅಳವಡಿಸಲಾಗಿದೆ. ಪ್ರತಿವರ್ಷ ಕ್ರಿಸ್‌ಮಸ್ ಹಬ್ಬವನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಉಳಿದಂತೆ ಫೆಬ್ರವರಿ ತಿಂಗಳಲ್ಲಿ ಸಂತ ಅನ್ನಮ್ಮ ಕ್ಯಾಂಡಲ್ ಫೀಸ್ಟ್ ಹಬ್ಬವನ್ನು ನಡೆಸುತ್ತಾರೆ. ಈ ಸಂದರ್ಭ ಎಲ್ಲಾ ಜನಾಂಗದವರು ಇಲ್ಲಿ ನೆರೆಯುವುದು ವಿಶೇಷ.
ಇಲ್ಲಿ ಆಚರಣೆಗಳು ಹೇಗೆ ನಡೆಯುತ್ತವೆ?
ಕೊಡಗಿನ ಹಬ್ಬಗಳಾದ ಕೈಲ್ ಪೊಳ್ದ್ ಆಚರಣೆಯ ಒಂಬತ್ತು ದಿನಗಳ ಕಾಲ ಏಸುವಿನ ಪ್ರಾರ್ಥನಾ ವಿಧಿಗಳ ಮೂಲಕ ನಡೆದರೆ, ಹುತ್ತರಿ ಹಬ್ಬದ ಸಂದರ್ಭ ಆರ್ಜಿ ಗ್ರಾಮದಲ್ಲಿರುವ ಗದ್ದೆಯಿಂದ ಕದಿರು ತಂದು ಬಲಿಪೀಠದ ಮೇಲಿಟ್ಟು ಕ್ರಿಸ್ತ ಜಪ ಮಾಡಿ ಜನರಿಗೆ ಹಂಚಲಾಗುತ್ತದೆ. ಜೊತೆಗೆ ಅಕ್ಕಿ ಕಾಳಿನ ಪಾಯಸ ಮಾಡುವ ಪದ್ಧತಿಯೂ ಇದೆ. ಚರ್ಚ್ ನಲ್ಲಿ ಆಂಗ್ಲ ಶೈಲಿಯ ಶೂಸ್ ಹಾಕಿ ಪೂಜೆಗೆ ನಿಲ್ಲುವ ಬದಲು ಬರಿಗಾಲಿನಲ್ಲಿ ನಿಂತು ಪೂಜಿಸುವ ವ್ಯವಸ್ಥೆಯಿದೆ.
ಹಬ್ಬದ ದಿನಗಳಲ್ಲಿ ಕಳಸದಲ್ಲಿ ಮಾವು, ವೀಳ್ಯದೆಲೆ ಸಹಿತ ತೆಂಗಿನ ಫಲವಿಟ್ಟು ಮೇಲೆ ಶಿಲುಬೆಯಿರಿಸುವ ಪದ್ಧತಿ ರೂಢಿಯಲ್ಲಿದೆ. ಹೋಸ್ಟ್ ಬ್ರೆಡ್ ಮೊದಲು ಚಾಲ್ತಿಯಲ್ಲಿತ್ತು ಆದರೆ ಈಗ ಕಾಣಿಕೆಯ ಸಮಯದಲ್ಲಿ ಅವರವರ ದುಡಿಮೆಯ ಫಲವಾಗಿ ಭತ್ತ ತರಕಾರಿಗಳನ್ನು ಅರ್ಪಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗೆ ಹಲವು ವಿಶೇಷತೆಗಳು ಇಲ್ಲಿರುವ ಕಾರಣದಿಂದಲೇ ಬೇರೆಲ್ಲ ಚರ್ಚ್ ಗಳಿಗೆ ಹೋಲಿಸಿದರೆ ಸಂತ ಅನ್ನಮ್ಮ ಚರ್ಚ್ ವಿಶಿಷ್ಟ ಮತ್ತು ವಿಭಿನ್ನವಾಗಿ ಕಂಗೊಳಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications