IPL 2025: ಆರ್‌ಸಿಬಿ ಗೆಲುವಿಗಾಗಿ ಮಹಾ ಕುಂಭಮೇಳದಲ್ಲಿ ವಿಶೇಷ ಪ್ರಾರ್ಥನೆ
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಧಾರ್ಮಿಕ ಉತ್ಸವಾಗಿರುವ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈಗಾಗಲೇ ಒಂದು ತಿಂಗಳಲ್ಲಿಯೇ 50 ಕೋಟಿ ಭಕ್ತರು ಭಾಗಿಯಾಗಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿತ್ತು ಆದರೆ ಆಯೋಜಕರ ನಿರೀಕ್ಷೆಗೂ ಮೀರಿದ ಜನದಟ್ಟಣೆಯಾಗುತ್ತಿದ್ದು, ಮುಗಿಯುವ ವೇಳೆ ಅರವತ್ತು ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿದೆ.
144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್ ರಾಜ್‌ನ ಮಹಾ ಕುಂಭಮೇಳಕ್ಕೆ ಕರ್ನಾಟದದಿಂದಲೂ ಅಸಂಖ್ಯಾತ ಜನರು ತೆರಳುತ್ತಿದ್ದು, ಇನ್ನೂ ಲಕ್ಷಾಂತರ ಭಕ್ತರು ಮಹಾ ಕುಂಭಮೇಳಕ್ಕೆ ತೆರಳಲು ಸಜ್ಜಾಗುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಇನ್ನೂ ಎಂಟು ದಿನಗಳ ಕಾಲ ಮಹಾ ಕುಂಭಮೇಳ ನಡೆಯಲಿದೆ.

ಕರ್ನಾಟದದಿಂದಲೂ ಸಾವಿರಾರು ಭಕ್ತರು ಪ್ರಯಾಗ್ ರಾಜ್‌ನ ಮಹಾ ಕುಂಭಮೇಳಕ್ಕೆ ತೆರುಳುತ್ತಿದ್ದು, ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯದ ದೇವೇಂದ್ರ ಎನ್ನುವವರು ಪ್ರಯಾಗ್ ರಾಜ್‌ನ ಮಹಾ ಕುಂಭಮೇಳಕ್ಕೆ ತೆರಳಿ ಸುದ್ದಿಯಾಗಿದ್ದಾರೆ. ಮಹಾ ಕುಂಭಮೇಳಕ್ಕೆ ಹೋದ ದೇವೇಂದ್ರ ವೈಯಕ್ತಿಕ ಯಶಸ್ಸು ಮಾತ್ರವಲ್ಲ, ಜನರಿಗಾಗಿ ಏಳು ಬೇಡಿಕೆಗಳನ್ನು ದೇವರ ಮುಂದಿಟ್ಟು ಪುಣ್ಯಸ್ನಾನ ಮಾಡಿದ್ದಾರೆ. ಅದರಲ್ಲಿ ಎರಡು ಬೇಡಿಕೆಗಳು ಎಲ್ಲರ ಗಮನ ಸೆಳೆದಿದೆ.
ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಸಂಪೂರ್ಣ ನಿಂತು ಹೋಗಬೇಕು, ಈ ಬಾರಿ ಆರ್ಸಿಬಿ ಅಭಿಮಾನಿಗಳ ಆಸೆ ಈಡೇರಬೇಕು ಎನ್ನುವ ದೇವೇಂದ್ರ ಅವರ ಬೇಡಿಕೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಉಳಿದಂತೆ 25 ವರ್ಷ ಮೇಲ್ಪಟ್ಟ ಎಲ್ಲರಿಗೂ ಕಂಕಣ ಭಾಗ್ಯ ಸಿಗಲಿ, ಮಲೆನಾಡಿನ ಒತ್ತುವರಿ ಸಮಸ್ಯೆ ಬಗೆಹರಿಯಲಿ,

ರಾಜನ ಅಳ್ವಿಕೆ ಹೋಗಲಿ, ಪ್ರಜೆಗಳು ರಾಜರಾಗಲಿ, ಕಾಲ ಕಾಲಕ್ಕೆ ತಕ್ಕಂತೆ ಮಳೆಯಾಗಿ ರೈತರ ಬೆಳೆ ಉತ್ತಮವಾಗಲಿ, ಮಲೆನಾಡಿನ ಭಾಗದಲ್ಲಿ ಪ್ರಾಣಿಗಳಿಂದ ಆಗುತ್ತಿರುವ ಪ್ರಾಣಿ ಹಾನಿ ನಿಲ್ಲಲಿ ಎಂದು ತಮ್ಮ ಏಳು ಬೇಡಿಕೆಗಳನ್ನು ದೇವೇಂದ್ರ ಬ್ಯಾನರ್‌ನಲ್ಲಿ ಮುದ್ರಿಸಿಕೊಂಡು ಬಂದಿದ್ದರು. ಇನ್ನು ವಿಶೇಷವೆಂದರೆ ತಮ್ಮ ಬೇಡಿಕೆ ಈಡೇರಿಕೆಗೆ ಪ್ರಾರ್ಥಿಸಿ ದೇವೇಂದ್ರ ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 101 ಬಾರಿ ಮುಳುಗೆದಿದ್ದಾರೆ.












Click it and Unblock the Notifications