ಕೇಂದ್ರ ಬಜೆಟ್: ಇತಿಹಾಸ, ಕೆಲವು ಕುತೂಹಲಕಾರಿ ವಿಚಾರ ಇಲ್ಲಿದೆ
ನವದೆಹಲಿ, ಫೆಬ್ರವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು (ಇಂದು) ಮಂಡನೆ ಮಾಡಲಿದ್ದಾರೆ. ಇದು ಅವರ ನಾಲ್ಕನೇ ಬಜೆಟ್ ಮಂಡನೆ ಆಗಿದೆ. ನಿರ್ಮಲಾ ಸೀತಾರಾಮನ್‌ರ ನಾಲ್ಕನೇ ಬಜೆಟ್‌ನಲ್ಲಿ ಉದ್ಯೋಗಗಳು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲಿನ ರಿಯಾಯಿತಿಗಳು, ತೆರಿಗೆ ವಿನಾಯಿತಿಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರವನ್ನು ನಿಭಾಯಿಸುವ ಕ್ರಮಗಳ ಭರವಸೆಯನ್ನು ಹೊಂದಿದ್ದಾರೆ.
ಬಜೆಟ್ ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11, 2022 ರಂದು ಮುಕ್ತಾಯಗೊಳ್ಳುತ್ತದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ, ಅಧಿವೇಶನದ ಭಾಗ ಎರಡು ಮಾರ್ಚ್ 14, 2022 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8, 2022 ರಂದು ಮುಕ್ತಾಯಗೊಳ್ಳುತ್ತದೆ.
ಇನ್ನು ನಿನ್ನೆಯಷ್ಟೇ ಬಜೆಟ್ ಅಧಿವೇಶನ ಆರಂಭವಾಗಿದೆ. ಜ.31ರಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು 2022-23 ಹಣಕಾಸು ವರ್ಷದಲ್ಲಿ (ಏಪ್ರಿಲ್ 2022ರಿಂದ ಮಾರ್ಚ್ 2023 ರವರೆಗೆ) ಆರ್ಥಿಕತೆಗೆ 8ರಿಂದ 8.5 ರಷ್ಟು ಬೆಳವಣಿಗೆ ದರವನ್ನು ಅಂದಾಜು ಮಾಡಿದೆ. ಈ ನಡುವೆ ಕೇಂದ್ರ ಬಜೆಟ್‌ನ ಇತಿಹಾಸ ಹಾಗೂ ಕೆಲವು ವಿವರಗಳನ್ನು ನಾವು ತಿಳಿಯೋಣ ಮುಂದೆ ಓದಿ...

ಭಾರತದ ಮೊದಲ ಬಜೆಟ್: ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ ಜೇಮ್ಸ್ ವಿಲ್ಸನ್ ಭಾರತದ ಮೊದಲ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಏಪ್ರಿಲ್ 7, 1860 ರಂದು ಭಾರತದಲ್ಲಿ ಬಜೆಟ್ ಅನ್ನು ಮೊದಲು ಪರಿಚಯಿಸಲಾಯಿತು. 1805 ರಲ್ಲಿ ಸ್ಕಾಟ್ಲೆಂಡ್‌ನ ಸಣ್ಣ ಗಡಿ ಪಟ್ಟಣವಾದ ಹಾವಿಕ್‌ನಲ್ಲಿ ಜನಿಸಿದ ವಿಲ್ಸನ್, ನವೆಂಬರ್ 28, 1859 ರಂದು ಮೊದಲು ಭಾರತಕ್ಕೆ ಬಂದರು. ಬಳಿಕ ಅವಿಭಜಿತ ಭಾರತದಲ್ಲಿ ವೈಸ್‌ರಾಯ್ ಲಾರ್ಡ್ ಕ್ಯಾನಿಂಗ್ಸ್ ಕೌನ್ಸಿಲ್‌ನಲ್ಲಿ ಹಣಕಾಸು ಸದಸ್ಯರಾಗಿ ನೇಮಕಗೊಂಡರು. ಇದಾದ ಬಳಿಕ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರ್ಕಾರವು ಭಾರಿ ಸಂಕಷ್ಟದಲ್ಲಿ ಸಿಲುಕಿತ್ತು. ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ 1860 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಜೆಟ್ ಅನ್ನು ಮಂಡನೆ ಮಾಡಿದವರು ಜೇಮ್ಸ್ ವಿಲ್ಸನ್. ಇನ್ನು ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ನವೆಂಬರ್ 26, 1947 ರಂದು ಆಗಿನ ಹಣಕಾಸು ಸಚಿವ ಆರ್ ಕೆ ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು.
ಸುದೀರ್ಘ ಬಜೆಟ್ ಭಾಷಣ: ಫೆಬ್ರವರಿ 1, 2020 ರಂದು ಕೇಂದ್ರ ಬಜೆಟ್ 2020-21 ಅನ್ನು ಮಂಡಿಸುವಾಗ 2 ಗಂಟೆ 42 ನಿಮಿಷಗಳ ಕಾಲ ಮಾತನಾಡಿದ ಸೀತಾರಾಮನ್ ಅವರು ಸುದೀರ್ಘ ಭಾಷಣ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಇನ್ನೂ ಎರಡು ಪುಟಗಳು ಉಳಿದಿರುವ ಸಂದರ್ಭದಲ್ಲಿ ಅವರು ತಮ್ಮ ಭಾಷಣವನ್ನು ನಿಲ್ಲಿಸಿದರು. ಬಜೆಟ್ ಭಾಷಣ ಮಾಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅಸ್ವಸ್ಥರಾಗಿದ್ದರು. ನಂತರ ಉಳಿದ ಭಾಷಣವನ್ನು ಸ್ಪೀಕರ್ ಮಾಡಿದರು. ಈ ಭಾಷಣವು ಜುಲೈ 2019 ರಲ್ಲಿ ಮಾಡಿದ 2 ಗಂಟೆ 17 ನಿಮಿಷಗಳ ಸುದೀರ್ಘ ಭಾಷಣಕ್ಕಿಂತ ದೀರ್ಘವಾಗಿತ್ತು.
ಹೆಚ್ಚಿನ ಪದಗಳ ಬಜೆಟ್ ಭಾಷಣ: ಪದಗಳ ಸಂಖ್ಯೆಗೆ ಸಂಬಂಧಿಸಿದಂತೆ, ನಾವು ಹೋಲಿಕೆ ಮಾಡುವುದಾದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನರಸಿಂಹ ರಾವ್ ಸರ್ಕಾರದಲ್ಲಿ ಆಗಿನ ಹಣಕಾಸು ಸಚಿವರು 1991 ರಲ್ಲಿ ಮಾಡಿದ ಬಜೆಟ್ ಭಾಷಣವು 18,650 ಪದಗಳನ್ನು ಒಳಗೊಂಡಿರುವ ಸುದೀರ್ಘ ಬಜೆಟ್ ಭಾಷಣವಾಗಿದೆ. 2018 ರಲ್ಲಿ, ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ 18,604 ಪದಗಳ ಭಾಷಣವು ಪದಗಳ ಎಣಿಕೆಗೆ ಸಂಬಂಧಿಸಿದಂತೆ ಎರಡನೇ ಅತಿ ದೊಡ್ಡ ಬಜೆಟ್ ಆಗಿದೆ. ಆ ಸಂದರ್ಭದಲ್ಲಿ ಜೇಟ್ಲಿ 1 ಗಂಟೆ 49 ನಿಮಿಷಗಳ ಕಾಲ ಮಾತನಾಡಿದರು.
ಚಿಕ್ಕ ಬಜೆಟ್ ಭಾಷಣ: ಮಾಜಿ ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ 1977 ರಲ್ಲಿ ಕೇವಲ 800 ಪದಗಳಲ್ಲಿ ಬಜೆಟ್ ಬಾಷಣ ಮಾಡಿದರು. ಇಲ್ಲಿಯವರೆಗಿನ ಅತ್ಯಂತ ಚಿಕ್ಕ ಬಜೆಟ್ ಭಾಷಣವೆಂದು ಈ ಭಾಷಣವನ್ನು ಪರಿಗಣಿಸಲಾಗಿದೆ.
ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದವರು ಯಾರು?: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ. 1962-69ರ ಅವಧಿಯಲ್ಲಿ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ನಂತರ ಪಿ ಚಿದಂಬರಂ 9, ಪ್ರಣಬ್ ಮುಖರ್ಜಿ 8, ಯಶವಂತ್ ಸಿನ್ಹಾ 8 ಮತ್ತು ಮನಮೋಹನ್ ಸಿಂಗ್ 6 ಬಾರಿ ಬಜೆಟ್ ಮಂಡಿಸಿದ್ದರು.
ಸಮಯದ ಬಗ್ಗೆ ಸ್ವಲ್ಪ ತಿಳಿಯಿರಿ: 1999 ರವರೆಗೆ, ಬ್ರಿಟಿಷರ ಕಾಲದ ಪದ್ಧತಿಯಂತೆ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗುತ್ತಿತ್ತು. ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು 1999 ರಲ್ಲಿ ಬಜೆಟ್ ಮಂಡನೆ ಸಮಯವನ್ನು 11 ಗಂಟೆಗೆ ಬದಲಾಯಿಸಿದರು. ಅರುಣ್ ಜೇಟ್ಲಿ 2017 ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲು ಪ್ರಾರಂಭಿಸಿದರು. ಈಗ ಫೆಬ್ರವರಿ ಒಂದರಂದು ಬಜೆಟ್ ಅಧಿವೇಶನ ನಡೆಯುತ್ತದೆ.

ಭಾಷೆಯ ಬಗ್ಗೆ ತಿಳಿಯಿರಿ: 1955 ರವರೆಗೆ, ಕೇಂದ್ರ ಬಜೆಟ್ ಅನ್ನು ಇಂಗ್ಲಿಷ್‌ನಲ್ಲಿ ಮಂಡನೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ನಂತರ ಬಜೆಟ್ ಪತ್ರಿಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿಸಲು ನಿರ್ಧರಿಸಿತು.
ಪೇಪರ್‌ಲೆಸ್ ಅಥವಾ ಕಾಗದರಹಿತ ಬಜೆಟ್: ಕೊರೊನಾ ವೈರಸ್ ಸಾಂಕ್ರಾಮಿಕವು 2021-22 ರ ಬಜೆಟ್ ಅನ್ನು ಕಾಗದರಹಿತವಾಗಿ ಪರಿವರ್ತಿಸಲು ಕಾರಣವಾಯಿತು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಯ ಕಾಗದರಹಿತ ಬಜೆಟ್ ಇದಾಗಿದೆ. ಈ ವರ್ಷವೂ ಬಜೆಟ್ ಡಿಜಿಟಲ್ ಆಗಿದೆ. ಕೆಲವೇ ಮುದ್ರಣಗಳು ಮಾತ್ರ ಲಭ್ಯವಿದೆ.
ಬಜೆಟ್ ಮಂಡಿಸಿದ ಮೊದಲ ಮಹಿಳೆ: 1970-71 ರ ಆರ್ಥಿಕ ವರ್ಷಕ್ಕೆ ಬಜೆಟ್ ಮಂಡಿಸಿದ ಇಂದಿರಾ ಗಾಂಧಿ ಭಾರತದಲ್ಲಿ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಆಗಿದ್ದಾರೆ. ಆ ಬಳಿಕ 2019 ರಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು ದೇಶದಲ್ಲಿ ಬಜೆಟ್ ಮಂಡನೆ ಮಾಡಿದ ಎರಡನೇ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಆ ವರ್ಷ ಸೀತಾರಾಮನ್ ಸಾಂಪ್ರದಾಯಿಕ ಬಜೆಟ್ ಬ್ರೀಫ್‌ಕೇಸ್ ಅನ್ನು ದೂರವಿಟ್ಟು, ಬಜೆಟ್ ಭಾಷಣದ ದಾಖಲೆಯನ್ನು ರಾಷ್ಟ್ರೀಯ ಲಾಂಛನದೊಂದಿಗೆ ಸಾಂಪ್ರದಾಯಿಕ 'ಬಹಿ-ಖಾತಾ'ವನ್ನು ಹಿಡಿದರು.
ರೈಲ್ವೆ ಬಜೆಟ್ ಬಗ್ಗೆಯೂ ಇಲ್ಲಿದೆ ಮಾಹಿತಿ: 2017 ರವರೆಗೆ, ರೈಲ್ವೆ ಬಜೆಟ್ ಮತ್ತು ಕೇಂದ್ರ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. 92 ವರ್ಷಗಳ ಕಾಲ ಪ್ರತ್ಯೇಕವಾಗಿ ಮಂಡಿಸಲಾಗಿತ್ತು. ರೈಲ್ವೆ ಬಜೆಟ್ ಅನ್ನು 2017 ರಲ್ಲಿ ಕೇಂದ್ರ ಬಜೆಟ್‌ನಲ್ಲಿ ಅನ್ನು ವಿಲೀನಗೊಳಿಸಲಾಗಿದೆ.
ಮುದ್ರಣ ಎಲ್ಲಿ: 1950ರಲ್ಲಿ ಬಜೆಟ್ ಸೋರಿಕೆಯಾಗುವವರೆಗೂ ರಾಷ್ಟ್ರಪತಿ ಭವನದಲ್ಲಿ ಬಜೆಟ್ ಪ್ರತಿಯನ್ನು ಮುದ್ರಿಸಲಾಗುತ್ತಿತ್ತು. ನಂತರ ನವದೆಹಲಿಯ ಮಿಂಟೋ ರಸ್ತೆಯಲ್ಲಿರುವ ಮುದ್ರಣಾಲಯದಲ್ಲಿ ಮುದ್ರಣ ಮಾಡಲಾಗುತ್ತಿತ್ತು. 1980 ರಲ್ಲಿ, ಹಣಕಾಸು ಸಚಿವಾಲಯದ ಕೇಂದ್ರವಾದ ನಾರ್ತ್ ಬ್ಲಾಕ್‌ನಲ್ಲಿ ಸರ್ಕಾರಿ ಮುದ್ರಣಾಲಯವನ್ನು ಸ್ಥಾಪಿಸಲಾಯಿತು.
ಕಪ್ಪು ಬಜೆಟ್: ಇಂದಿರಾ ಗಾಂಧಿ ಸರ್ಕಾರದಲ್ಲಿ ಯಶವಂತರಾವ್ ಬಿ ಚವಾಣ್ ಅವರು ಮಂಡಿಸಿದ 1973-74 ರ ಬಜೆಟ್ ಅನ್ನು ಕಪ್ಪು ಬಜೆಟ್ ಎಂದು ಕರೆಯಲಾಯಿತು. ಆ ವರ್ಷದಲ್ಲಿ ವಿತ್ತೀಯ ಕೊರತೆಯು 550 ಕೋಟಿ ರೂಪಾಯಿ ಆಗಿದ್ದ ಕಾರಣ ಈ ಬಜೆಟ್ ಅನ್ನು ಕಪ್ಪು ಬಜೆಟ್ ಎಂದು ಕರೆಯಲಾಗುತ್ತದೆ. ಭಾರತ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಸಮಯ ಅದಾಗಿತ್ತು.
ಕ್ಯಾರೆಟ್ ಮತ್ತು ಕಡ್ಡಿ ಬಜೆಟ್!: ಫೆಬ್ರವರಿ 28, 1986 ರಂದು ಕಾಂಗ್ರೆಸ್ ಸರ್ಕಾರದಲ್ಲಿ ವಿಪಿ ಸಿಂಗ್ ಮಂಡಿಸಿದ ಕೇಂದ್ರ ಬಜೆಟ್ ಭಾರತದಲ್ಲಿ ಲೈಸೆನ್ಸ್ ರಾಜ್ ಅಥವಾ ಪರ್ಮಿಟ್ ರಾಜ್ ಅನ್ನು ಕಿತ್ತುಹಾಕುವ ಮೊದಲ ಹೆಜ್ಜೆಯಾಗಿದೆ. ಲೈಸೆನ್ಸ್ ರಾಜ್ ಅಥವಾ ಪರ್ಮಿಟ್ ರಾಜ್ ಎಂದರೆ ನಿಯಮ ಎಂದರ್ಥ. ಇದು ಬಜೆಟ್ ಹಾಗೂ ಶಿಕ್ಷೆ ಎರಡನ್ನೂ ಒಳಗೊಂಡ ಬಜೆಟ್ ಆದ ಕಾರಣ ಇದನ್ನು 'ಕ್ಯಾರೆಟ್ ಮತ್ತು ಸ್ಟಿಕ್' ಬಜೆಟ್ ಎಂದು ಕರೆಯಲಾಯಿತು. ತೆರಿಗೆ ವಂಚಕರ ವಿರುದ್ಧ ತೀವ್ರವಾದ ಕ್ರಮವನ್ನು ಕೈಗೊಳ್ಳಲಾಯಿತು.
ಯುಗ ಬಜೆಟ್: ಲೈಸೆನ್ಸ್ ರಾಜ್ ಅಂತ್ಯಗೊಳಿಸಿ ಆರ್ಥಿಕ ಉದಾರೀಕರಣದ ಯುಗವನ್ನು ಪ್ರಾರಂಭಿಸಿದ ಪಿವಿ ನರಸಿಂಹರಾವ್ ಸರ್ಕಾರದ ಅಡಿಯಲ್ಲಿ ಮನಮೋಹನ್ ಸಿಂಗ್ ಅವರ ಹೆಗ್ಗುರುತು 1991 ರ ಬಜೆಟ್ ಅನ್ನು 'ಯುಗ ಬಜೆಟ್' ಎಂದು ಕರೆಯಲಾಗುತ್ತದೆ. ಭಾರತವು ಆರ್ಥಿಕ ಕುಸಿತದ ಅಂಚಿನಲ್ಲಿರುವ ಸಮಯದಲ್ಲಿ ಇದನ್ನು ಪ್ರಸ್ತುತಪಡಿಸಲಾಯಿತು. ಈ ಬಜೆಟ್‌ನಲ್ಲಿ ಸುಂಕವನ್ನು 220 ಪ್ರತಿಶತದಿಂದ 150 ಪ್ರತಿಶತಕ್ಕೆ ಕಡಿತಗೊಳಿಸಲಾಯಿತು. ರಫ್ತುಗಳನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು.
ಕನಸಿನ ಬಜೆಟ್: ಪಿ ಚಿದಂಬರಂ 1997-98 ರ ಬಜೆಟ್‌ನಲ್ಲಿ ಸಂಗ್ರಹಣೆಯನ್ನು ಹೆಚ್ಚಿಸಲು ತೆರಿಗೆ ದರಗಳನ್ನು ಕಡಿಮೆ ಮಾಡಲು ಕೆಲವು ನಿಯಮಗಳನ್ನು ತಂದರು. ವ್ಯಕ್ತಿಗಳಿಗೆ ಗರಿಷ್ಠ ಕನಿಷ್ಠ ಆದಾಯ ತೆರಿಗೆ ದರವನ್ನು 40 ಪ್ರತಿಶತದಿಂದ 30 ಪ್ರತಿಶತಕ್ಕೆ ಮತ್ತು ದೇಶೀಯ ಕಂಪನಿಗಳಿಗೆ 35 ಪ್ರತಿಶತಕ್ಕೆ ಕಡಿತಗೊಳಿಸಿದರು. ಜೊತೆಗೆ ಕಪ್ಪು ಹಣವನ್ನು ಹಿಂಪಡೆಯುವ ನಿಟ್ಟಿನಲ್ಲಿ ಆದಾಯ ತೆರಿಗೆ ನಿಯಮ ಬಿಗಿಗೊಳಿಸಿದ್ದು ಮಾತ್ರವಲ್ಲದೆ ಹಲವಾರು ಪ್ರಮುಖ ತೆರಿಗೆ ಸುಧಾರಣೆಗಳನ್ನು ಮಾಡಿದರು. ಇದನ್ನು 'ಡ್ರೀಮ್ ಬಜೆಟ್' ಎಂದು ಉಲ್ಲೇಖಿಸಲಾಗುತ್ತದೆ. ಇದು ಕಸ್ಟಮ್ಸ್ ಸುಂಕವನ್ನು ಶೇಕಡಾ 40 ಕ್ಕೆ ಕಡಿತಗೊಳಿಸಿದ ಬಜೆಟ್ ಆಗಿದೆ. ಅಬಕಾರಿ ಸುಂಕವನ್ನು ಕೂಡಾ ಸರಳಗೊಳಿಸಿದೆ.
ಮಿಲೇನಿಯಂ ಬಜೆಟ್: 2000 ರಲ್ಲಿ ಯಶವಂತ್ ಸಿನ್ಹಾ ಅವರ ಮಿಲೇನಿಯಮ್ ಬಜೆಟ್ ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದ ಬೆಳವಣಿಗೆಗೆ ಮಾರ್ಗಸೂಚಿಯನ್ನು ಹಾಕಿದ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿಕಂಪ್ಯೂಟರ್ ಮತ್ತು ಕಂಪ್ಯೂಟರ್ ಪರಿಕರಗಳಂತಹ 21 ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದೆ.
ರೋಲ್‌ಬ್ಯಾಕ್ ಬಜೆಟ್: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಅವರ 2002-03 ರ ಬಜೆಟ್ ಅನ್ನು ರೋಲ್‌ಬ್ಯಾಕ್ ಬಜೆಟ್ ಎಂದು ಕರೆಯಲಾಗುತ್ತದೆ. ಹಲವಾರು ಪ್ರಸ್ತಾಪಗಳನ್ನು ಹಿಂತೆಗೆದುಕೊಳ್ಳಲಾದ ಕಾರಣ ಈ ಬಜೆಟ್ ಅನ್ನು ರೋಲ್‌ಬ್ಯಾಕ್ ಬಜೆಟ್ ಎಂದು ಕರೆಯಲಾಗುತ್ತದೆ.
ಶತಮಾನದಲ್ಲಿ ಒಮ್ಮೆ ಕಂಡ ಬಜೆಟ್: (Once-in-a-Century Budget). ಮೂಲಸೌಕರ್ಯ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ಮೂಲಕ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಬಜೆಟ್ ಮುಂದಾಗಿದೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್ ತಮ್ಮ ಫೆಬ್ರವರಿ 1, 2021 ರಂದು ಮಂಡನೆ ಮಾಡಿದ ಬಜೆಟ್ ಅನ್ನು Once-in-a-Century Budget ಎಂದು ಕರೆದಿದ್ದಾರೆ. (ಇನ್‌ಇಂಡಿಯಾ ಸುದ್ದಿ)
Recommended Video
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications