
ಭಾರತ ಮೂಲದ ರಿಷಿ ಸುನಕ್ ಮುಂದಿನ ಬ್ರಿಟನ್ ಪ್ರಧಾನಿ? ನಡೀತಿದೆ ಭರ್ಜರಿ ಬೆಟ್ಟಿಂಗ್
ಲಂಡನ್, ಜುಲೈ 7: ಸಾಲು ಸಾಲು ಹಗರಣ ಮತ್ತು ಸರಣಿಯಾಗಿ ನಡೆಯುತ್ತಿರುವ ರಾಜೀನಾಮೆಗಳು ಬ್ರಿಟನ್ ಪ್ರಧಾನಿಯ ತಲೆದಂಡಕ್ಕೆ ಎಡೆ ಮಾಡಿಕೊಡುತ್ತಿವೆ. ಬಿಬಿಸಿ ವರದಿ ಪ್ರಕಾರ ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ಇಂದು ಗುರುವಾರವೇ ರಾಜೀನಾಮೆ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.
ಸರಕಾರದಲ್ಲಿ ಹೊಸದಾಗಿ ಆಯ್ಕೆಯಾದ ಸಚಿವರು ರಾಜೀನಾಮೆ ನೀಡಿದ್ದಾರೆ. ಕಳೆದ ಕೆಲ ಗಂಟೆಗಳಲ್ಲೇ ಎಂಟು ಸಚಿವರು ಸಾಲು ಸಾಲಾಗಿ ರಾಜೀನಾಮೆ ನೀಡಿದ್ದಾರೆ. ಐವತ್ತಕ್ಕೂ ಹೆಚ್ಚು ಮಂದಿ ಬಂಡಾಯ ಎದ್ದಿರುವುದು ಬೋರಿಸ್ ಜಾನ್ಸನ್ ಮೇಲೆ ಇನ್ನಿಲ್ಲದ ಒತ್ತಡ ತಂದಿದೆ.
40 ಮಂದಿ ರಾಜೀನಾಮೆ: ಪತನದಂಚಿಗೆ ಬಂತು ನಿಂತ ಬ್ರಿಟನ್ ಸರ್ಕಾರ
ಅವರ ಪಕ್ಷದವರು, ಹಾಗು ನೂತನ ಸಚಿವರೂ ಕೂಡ ಬೋರಿಸ್ ಜಾನ್ಸನ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇವೆಲ್ಲಾ ಪರಿಸ್ಥಿತಿಯಿಂದ ಸರಕಾರದಲ್ಲಿ ಹಾಗೂ ಕನ್ಸರ್ವೇಟಿವ್ ಪಕ್ಷದಲ್ಲಿ ಬೋರಿಸ್ ಜಾನ್ಸನ್ ಬಹುತೇಕ ಏಕಾಂಗಿಯಾಗಿದ್ದಾರೆ. ಅವರಿಗೆ ರಾಜೀನಾಮೆ ಬಿಟ್ಟರೆ ಬೇರೆ ದಾರಿ ಇಲ್ಲದಂತಾಗಿದೆ.
"ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ಬೋರಿಸ್ ಜಾನ್ಸನ್ ಇಂದು ರಾಜೀನಾಮೆ ನೀಡುತ್ತಾರೆ," ಎಂದು ಬಿಬಿಸಿ ಭವಿಷ್ಯ ನುಡಿದಿದೆ.
58 ವರ್ಷದ ಬೋರಿಸ್ ಜಾನ್ಸನ್ 2019ರಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದರು. ಅವರ ನೇತೃತ್ವದಲ್ಲಿ ಕನ್ಸರ್ವೇಟಿವ್ ಪಕ್ಷ ತನ್ನ ಭದ್ರಕೋಟೆಯಲ್ಲದ ಪ್ರದೇಶಗಳಲ್ಲೂ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಐತಿಹಾಸಿಕ ಗೆಲುವು ಸಾಧಿಸಿತ್ತು. ಹೀಗಿದ್ದೂ ಅವರು 2-3 ವರ್ಷದಲ್ಲಿ ರಾಜೀನಾಮೆ ನೀಡುವಂಥ ಪರಿಸ್ಥಿತಿಗೆ ಬಂದಿದ್ದು ವಿಪರ್ಯಾಸವೇ ಸರಿ.
ಬ್ರಿಟನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್

ನಿನ್ನೆ ಮಂತ್ರಿಯಾದವರೂ ಒತ್ತಡ
ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಬೇಕೆಂದು ಕನ್ಸರ್ವೇಟಿವ್ ಪಕ್ಷದೊಳಗೆ ಬಲವಾದ ಕೂಗೆಬ್ಬಿದೆ. ನಿನ್ನೆ ಬುಧವಾರವಷ್ಟೇ ಬ್ರಿಟನ್‌ನ ಹೊಸ ಹಣಕಾಸು ಮಂತ್ರಿಯಾಗಿ ಆಯ್ಕೆಯಾದ ನದೀಂ ಜಹಾವಿ ತಮ್ಮ ಪ್ರಧಾನಿಯ ತಲೆದಂಡಕ್ಕೆ ಒತ್ತಾಯಿಸಿದ್ದಾರೆ.
"ಇದು ಸರಿಬರುತ್ತಿಲ್ಲ. ಪರಿಸ್ಥಿತಿ ಇನ್ನಷ್ಟು ಬಿಕ್ಕಟ್ಟು ಸ್ಥಿತಿಗೆ ಹೋಗುತ್ತದೆ. ನಿಮ್ಮ ಹಿತದೃಷ್ಟಿಯಿಂದ, ಕನ್ಸರ್ವೇಟಿವ್ ಪಕ್ಷದ ಹಿತದೃಷ್ಟಿಯಿಂದ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಹಿತದೃಷ್ಟಿಯಿಂದ ನೀವು ಹೊರಹೋಗುವುದು ಸರಿಯಾದ ಕ್ರಮ" ಎಂದು ನದೀಮ್ ಜಹಾವಿ ಟ್ವೀಟ್ ಮಾಡಿದ್ದಾರೆ.

ನಂಬುಗೆಯ ವ್ಯಕ್ತಿಯಿಂದಲೂ ಒತ್ತಾಯ
ಕೆಲ ದಿನಗಳ ಹಿಂದೆ ಸಮುದಾಯಗಳ ಖಾತೆ ಸಚಿವ ಮೈಕೇಲ್ ಗೋವ್ ಕೂಡ ಪ್ರಧಾನಿ ಬೋರಿಸ್‌ಗೆ ಇದೇ ಸಲಹೆ ನೀಡಿದ್ದರು. ಆಗ ಆಕ್ರೋಶಗೊಂಡಿದ್ದ ಪ್ರಧಾನಿ ತಮ್ಮ ಸಚಿವರನ್ನು ಸಂಪುಟದಿಂದ ವಜಾಗೊಳಿಸಿದ್ದರು. ಬೇರೆಯವರು ರಾಜೀನಾಮೆಗೆ ಒತ್ತಾಯಿಸಿದ್ದರೆ ಬೋರಿಸ್ ತಾಳಿಕೊಳ್ಳುತ್ತಿದ್ದರು. ಆದರೆ, ಬೋರಿಸ್ ಜಾನ್ಸನ್‌ಗೆ ಮೈಕೇಲ್ ಗೋವ್ ಹಲವು ವರ್ಷ ಕಾಲ ನಂಬುಗೆಯ ಬಂಟನಂತಿದ್ದವರು. ಅವರು ರಾಜೀನಾಮೆ ಕೊಡಿ ಎಂದು ಹೇಳಿದ್ದು ಜಾನ್ಸನ್‌ಗೆ ಇರಿಸು ಮುರುಸು ತಂದಿತ್ತು. ಹೀಗಾಗಿ, ಅವರನ್ನು ಸಂಪುಟದಿಂದ ವಜಾಗೊಳಿಸಿದ್ದರು.
ಭಾರತ ಮೂಲದ ರಿಷಿ ಸುನಕ್ ಸೇರಿದಂತೆ ಇನ್ನೂ ಹಲವು ಮಂತ್ರಿಗಳು ಬೋರಿಸ್ ಸರಕಾರದಿಂದ ಹೊರಬಂದಿದ್ದಾರೆ. ಸಾಲುಸಾಲಾಗಿ ರಾಜೀನಾಮೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗು ಪಕ್ಷದೊಳಗೆ ತಮಗಿದ್ದ ಬೆಂಬಲ ನಶಿಸುತ್ತಿರುವ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಅಧಿಕಾರದಲ್ಲಿ ಮುಂದುವರಿಯಲು ಅಸಾಧ್ಯವಾಗಿದೆ.

ರಿಷಿ ಸುನಕ್ ಆಗ್ತಾರಾ ಪಿಎಂ?
ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವುದು ಅನಿವಾರ್ಯವೆನಿಸುತ್ತಲೇ ಬ್ರಿಟನ್‌ಗೆ ಮುಂದಿನ ಪ್ರಧಾನಿ ಯಾರಾಗ್ತಾರೆ ಎಂಬ ಚರ್ಚೆ ಶುರುವಾಗಿದೆ. ಬೆಟ್ಟಿಂಗ್ ಕ್ಷೇತ್ರದಲ್ಲಿ ಭಾರಿ ವ್ಯವಹಾರ ನಡೆಯುತ್ತಿದೆ. ಸ್ಕೈ ಬೆಟ್‌ನಲ್ಲಿ ವ್ಯಾಪಾರ ಸಚಿವ ಪೆನ್ನಿ ಮಾರ್ಡಾಂಟ್ ಮೇಲೆ ಹೆಚ್ಚು ಬೆಟ್ ಹಾಕಲಾಗಿದೆ. ಪೆನ್ನಿ ಮಾರ್ಡಾಂಟ್ ಪರ 4:1 ಬೆಟ್ಟಿಂಗ್ ಇಡಲಾಗಿದೆ.
ಹಾಗೆಯೇ, ಕಂದಾಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಭಾರತ ಮೂಲದ ರಿಷಿ ಸುನಕ್ ಅವರು ಎರಡನೇ ಫೇವರಿಟ್ ಎನಿಸಿದ್ದಾರೆ. ಪೆನ್ನಿ ಮಾರ್ಡಾಂಟ್ ಬಿಟ್ಟರೆ ರಿಷಿ ಸುನಕ್ ಮೇಲೆ ಅತಿ ಹೆಚ್ಚು ಬೆಟ್ ಹಾಕಲಾಗಿದೆ.
ರಕ್ಷಣಾ ಸಚಿವ ಬೆನ್ ವಾಲೇಸ್, ವಿದೇಶಾಂಗ ಸಚಿವ ಲಿಜ್ ಟ್ರುಸ್, ಮಾಜಿ ಆರೋಗ್ಯ ಸಚಿವ ಸಾಜಿದ್ ಜಾವಿದ್ ಅವರ ಮೇಲೂ ಬಹಳ ಮಂದಿ ಬೆಟ್ಟಿಂಗ್ ಆಡುತ್ತಿದ್ದಾರೆ.

ಬೋರಿಸ್ ಪತನದಂಚಿಗೆ ಬಂದಿದ್ದು ಯಾಕೆ?
ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬಹಳ ಬೇಗ ಬಂಡಾಯ ಎದುರಿಸುವ ಸ್ಥಿತಿಗೆ ಬಂದಿದ್ದು ಅಚ್ಚರಿಯೇ. ಕೋವಿಡ್ ವೇಳೆ ನಿಯಮ ಮೀರಿ ಪಾರ್ಟಿಗಳನ್ನು ಮಾಡಿದ್ದು ಬೋರಿಸ್ ಜಾನ್ಸನ್ ಅವರನ್ನು ವಿವಾದದ ಕೇಂದ್ರಬಿಂದುವಾಗಿಸಿದೆ. ಅವರು ಅನೇಕ ಬಾರಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ. ಇದರ ವಿಚಾರಣೆ ಎದುರಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಕೆಲ ಉಪಚುನಾವಣೆಗಳಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಸೋಲನುಭವಿಸಿದ್ದು ಬೋರಿಸ್ ಜಾನ್ಸನ್ ನಾಯಕತ್ವದ ಮೇಲಿನ ನಂಬಿಕೆ ಕಡಿಮೆಯಾಗುವಂತೆ ಮಾಡಿತ್ತು.
ಇದೆಲ್ಲಕ್ಕಿಂತ ಹೆಚ್ಚು ಬೋರಿಸ್‌ರನ್ನು ನಡುಗಿಸಿದ್ದು ಅವರ ಮಂತ್ರಿಯೊಬ್ಬರ ಮೇಲೆ ಬಂದ ಆರೋಪ. ಅವರ ಕನ್ಸರ್ವೇಟಿವ್ ಪಕ್ಷದ ಮುಖಂಡ ಕ್ರಿಸ್ ಪಿಂಚರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹಾಗೂ ಹಲ್ಲೆ ಆರೋಪಗಳು ಕೇಳಿಬಂದವು.
ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ವಿರುದ್ಧ ಅವರ ಸ್ವಂತ ಪಕ್ಷದಲ್ಲೇ ಬಂಡಾಯ ಎದ್ದಿತ್ತು. ಅವಿಶ್ವಾಸ ನಿರ್ಣಯದಲ್ಲಿ ಅವರು 211-148 ಮತಗಳಿಂದ ಗೆದ್ದರಾದರೂ ಪಕ್ಷದೊಳಗಿನ ಬಂಡಾಯವು ಅವರ ಅಧಿಕಾರವನ್ನು ಅಲುಗಾಡಿಸಿತ್ತು.
(ಒನ್ಇಂಡಿಯಾ ಸುದ್ದಿ)