ಬೆಂಗಳೂರು ಸಹವಾಸ ಸಾಕಪ್ಪ ಅಂತಿದ್ದಾರೆ ಜನ, ಇದಕ್ಕೆ ಕಾರಣ ಒಂದೆರಡಲ್ಲ
ಸಿಲಿಕಾನ್ ಸಿಟಿ ಬೆಂಗಳೂರು ಈಗ ಕೇವಲ ಕರ್ನಾಟಕದ ರಾಜಧಾನಿಯಾಗಿ ಉಳಿದಿಲ್ಲ. ಜಾಗತಿಕ ನಗರವೆಂದೇ ಬೆಂಗಳೂರು ನಕ್ಷೆಯಲ್ಲಿ ಸ್ಥಾನ ಪಡೆದುಕೊಂಡಿದೆ. ಐಟಿ ಕ್ರಾಂತಿಗೆ ಮುನ್ನುಡಿ ಬರೆದಿದ್ದರಿಂದ ದೇಶದ ಹಲವು ರಾಜ್ಯದವರಿಗೆ ಜೀವನ ಕಟ್ಟಿಕೊಳ್ಳಲು ದಾರಿ ತೋರಿದೆ. ಹಾಗಾಗಿ ಬೆಂಗಳೂರಿನಲ್ಲೇ ಸೆಟಲ್ ಆಗುವ ಕನಸು ಕಟ್ಟಿಕೊಂಡು ಇತರ ರಾಜ್ಯಗಳ ಜನರು ಎಂಟ್ರಿ ಕೊಡುತ್ತಿದ್ದಾರೆ. ನಗರ ಬೆಳೆದಂತೆ ಇದೀಗ ಜನರ ಮನಸ್ಥಿತಿ ಕೂಡ ಬದಲಾಗಿದೆ. ನಮ್ಮೂರು ಬೆಂಗಳೂರು ಎಂದು ನೆಮ್ಮದಿಯಾಗಿದ್ದ ಜನರು ಈಗ ಬೆಂಗಳೂರಿನ ಸಹವಾಸವೇ ಸಾಕಪ್ಪ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ.
ಬೆಂಗಳೂರು ಮೊದಲು ಕೂಲ್ ಸಿಟಿ. ವರ್ಷವಿಡೀ ಇಲ್ಲಿನ ವಾತಾವರಣಕ್ಕೆ ಮನಸೋಲದೆ ಇರುತ್ತಿರಲಿಲ್ಲ. ಆಗ ಬೆಂಗಳೂರು ಈಗಿನಂತೆ ವಲಸಿಗರ ಸ್ವರ್ಗವೂ ಆಗಿರಲಿಲ್ಲ. ಕಳೆದ ಎರಡು ದಶಕಗಳಿಗೆ ಹೋಲಿಸಿದರೆ, ಇಲ್ಲಿ ಟ್ರಾಫಿಕ್ ಅಷ್ಟಾಗಿ ಇರುತ್ತಿರಲಿಲ್ಲ. ಒಂದೊಳ್ಳೆ ಕೆಲಸ ಮಾಡಿಕೊಂಡು ನೆಮ್ಮದಿಯಾಗಿ ಬೆಂಗಳೂರಿನಲ್ಲಿ ವಾಸ ಮಾಡುವ ವಾತಾವರಣವಿತ್ತು. ಆದರೆ ಈಗ ಪರಿಸ್ಥಿತಿ ತದ್ವಿರುದ್ಧ. ಎಲ್ಲಿ ನೋಡಿದರೂ ಟ್ರಾಫಿಕ್..ಟ್ರಾಫಿಕ್!

ಸರ್ಕಾರಗಳು ಟ್ರಾಫಿಕ್ ನಿಯಂತ್ರಣಕ್ಕೆ ಹತ್ತಾರು ಯೋಜನೆಗಳು, ದೊಡ್ಡ ದೊಡ್ಡ ರಸ್ತೆಗಳನ್ನು ಕಟ್ಟುತ್ತಲೇ ಇದೆ. ಆದರೆ ಪೈಪೋಟಿ ನೀಡುವಂತೆ ಟ್ರಾಫಿಕ್ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಬೆಂಗಳೂರಿನ ಜನರು ಬೇಸತ್ತಿದ್ದಾರೆ. ಇಲ್ಲಿವರೆಗೆ ಟ್ರಾಫಿಕ್ ಕಡಿಮೆಯಾಗುತ್ತೆ ಅಂತಿದ್ದವರು, ಇದಕ್ಕೆ ಕೊನೆಯ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣ ಬೆಂಗಳೂರಿಗೆ ವಲಸೆ ಬರುತ್ತಿರುವವರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು. ಜನ ಬಂದಂತೆ ವಾಹನಗಳ ಓಡಾಟವೂ ಮಿತಿ ಮೀರಿದೆ.
ಹಾಗಾಗಿ ಬೆಂಗಳೂರಿನ ರಸ್ತೆಗಳಲ್ಲೇ ದಿನ ಕಳೆಯುವುದಕ್ಕಿಂತ ಎಲ್ಲಾದರೂ ನೆಮ್ಮದಿಯಾಗಿ ಜೀವನ ಸಾಗಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಮೊದಲೆಲ್ಲ ಹಳ್ಳಿ ಬಿಟ್ಟು ಸಿಟಿ ಸೇರುತ್ತಿದ್ದ ಮಂದಿ, ಇದೀಗ ಸಿಟಿ ಲೈಫಿಗೆ ಗುಡ್‌ಬೈ ಹೇಳಿ ನೆಮ್ಮದಿಯಾಗಿ ಹಳ್ಳಿಗಳಿಗೆ ಕುಟುಂಬದೊಂದಿಗೆ ತೆರಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಎಷ್ಟು ದುಡಿದರೂ ಹಣ ಕೈಯಲ್ಲಿ ಉಳಿಯಲ್ಲ. ಇಲ್ಲಿ ಎಲ್ಲದಕ್ಕೂ ಕಾಸಿದ್ದವನೇ ಬಾಸು ಎಂಬುದನ್ನು ಅರಿತಿರುವ ಮಂದಿ, ಕಡಿಮೆ ದುಡಿದರೂ ನೆಮ್ಮದಿ ಇರಬೇಕು ಎಂದು ಮನಸ್ಸು ಬದಲಿಸಿಕೊಂಡಿದ್ದಾರೆ. ಹಾಗಾಗಿ ಬೆಂಗಳೂರಿನ ಕೇಂದ್ರಭಾಗಗಳಲ್ಲಿ ಹಾಗೂ ಪ್ರಮುಖ ಟ್ರಾಫಿಕ್ ಹೆಚ್ಚಿರುವ ಪ್ರದೇಶದ ಜನರು ಕೂಡ ಬೆಂಗಳೂರಿಗೆ ಸಮೀಪವಿರುವ ಹಳ್ಳಿಗಳಿಗೆ ಹೋಗಿ ನೆಲೆಯೂರುತ್ತಿದ್ದಾರೆ.
ಬೆಂಗಳೂರಿನಲ್ಲಿ ಬಾಡಿಗೆ ದರವೂ ಗಗನಕ್ಕೇರುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳು ಈಗಷ್ಟೇ ಅಭಿವೃದ್ಧಿಯತ್ತ ಮುಖ ಮಾಡುತ್ತಿವೆ. ಅಲ್ಲಿ ಟ್ರಾಫಿಕ್ ಜಂಜಾಟವೂ ಇಲ್ಲ. ಬಾಡಿಗೆಯೂ ಕಡಿಮೆ ಎಂಬುದನ್ನು ತಿಳಿದು ಕುಟುಂಬದೊಂದಿಗೆ ಹಳ್ಳಿ ಜೀವನಕ್ಕೆ ಕಾಲಿಟ್ಟು ನೆಮ್ಮದಿಯ ದಿನಗಳನ್ನು ಕಾಣುತ್ತಿದ್ದಾರೆ. ಆನೇಕಲ್, ಬಿದರಹಳ್ಳಿ, ಮಾಲೂರು, ನೆಲಮಂಗಲ, ದೊಡ್ಡಬಳ್ಳಾಪುರ, ಬಿಡದಿ, ಮಾಗಡಿ ರಸ್ತೆ, ಕನಕಪುರ ರಸ್ತೆ, ಹೆಸರಘಟ್ಟ, ದೇವನಹಳ್ಳಿ, ಹೊಸಕೋಟೆ ಸೇರಿದಂತೆ ಬೆಂಗಳೂರಿನ ಸುತ್ತಲೂ ಇರುವ ತಾಲ್ಲೂಕು ಪ್ರದೇಶಗಳ ಹಳ್ಳಿಗಳಲ್ಲಿ ಈಗ ಸಿಟಿ ಮಂದಿ ಹೆಚ್ಚಾಗಿ ಬಾಡಿಗೆ ಇದ್ದಾರೆ.
ಇನ್ನೂ ಕೆಲವರು ಬೆಂಗಳೂರಿನಲ್ಲಿರುವ ಆಸ್ತಿ ಮಾರಿಕೊಂಡು ಮುಂದೆ ಡೆವಲಪ್ ಆಗಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಜಮೀನು ಖರೀದಿಸುತ್ತಿದ್ದಾರೆ. ಅಲ್ಲೇ ಒಂದೆರಡು ಸೈಟ್‌ಗಳನ್ನು ಖರೀದಿಸಿ ಮನೆಯೂ ಕಟ್ಟಿಕೊಳ್ಳುತ್ತಿದ್ದಾರೆ. ಒಂದೆರಡು ವರ್ಷಗಳಲ್ಲಿ ಈ ಸೈಟಿನ ಬೆಲೆ ಕೂಡ ಡಬಲ್ ಆಗುತ್ತಿದ್ದು, ಬಳಿಕ ಅವರೇ ಅಲ್ಲಿ ಬಾಡಿಗೆ ಮನೆಗಳನ್ನು ನಿರ್ಮಿಸಿ ಆದಾಯಕ್ಕೆ ಮಾರ್ಗವೂ ಕಂಡುಕೊಳ್ಳುತ್ತಿದ್ದಾರೆ. ಮೊದಲು ರಜೆ ಇದ್ದಾಗ ಬೆಂಗಳೂರು ಬಿಟ್ಟು ಹೊರಗೆ ಕಾಲಿಡುತ್ತಿದ್ದವರು, ಈಗ ವಾರಾಂತ್ಯಕ್ಕೆ ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಸುತ್ತಾಡಿ ಹೋಗುತ್ತಿದ್ದಾರೆ.












Click it and Unblock the Notifications