BC Patil Profile: ಸಿನಿಮಾರಂಗದ ಕೌರವ ಬಿ.ಸಿ. ಪಾಟೀಲ ಕಿರುಪರಿಚಯ
ಬಿ. ಸಿ. ಪಾಟೀಲ ಅವರ ವಯಸ್ಸು, ಜೀವನ ಚರಿತ್ರೆ, ಕುಟುಂಬ, ರಾಜಕೀಯ ವೃತ್ತಿ, ಶಿಕ್ಷಣ, ಆಸ್ತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇತ್ತೀಚಿನ ಸುದ್ದಿಗಳ ವಿವರ ಇಲ್ಲಿದೆ.
ಬಿ.ಸಿ.ಪಾಟೀಲ ಎಂದೇ ಖ್ಯಾತರಾಗಿರುವ ಬಸನಗೌಡ ಚೆನ್ನಬಸವನಗೌಡ ಪಾಟೀಲರು ಕನ್ನಡ ಚಲನಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ ಮತ್ತು ನಿರ್ದೇಶಕ. ರಾಜಕೀಯವಾಗಿಯೂ ಸಕ್ರಿಯರಾಗಿರುವ ಪಾಟೀಲರು ಹಾಸನ ಜಿಲ್ಲೆಯ ಹಿರೇಕೇರೂರು ಮತಕ್ಷೇತ್ರದ ಶಾಸಕರು ಆಗಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿರುವ ಬಿ. ಸಿ. ಪಾಟೀಲ್ ಅವರು ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. ಸದ್ಯ ತಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದಾರೆ. ಪೊಲೀಸ್ ಇನ್ಸಪೆಕ್ಟರ್ ಆಗಿ, ಬಳಿಕ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಬಿ.ಸಿ ಪಾಟೀಲ ಅವರು ಎರಡು ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಬಿಸಿ ಪಾಟೀಲ ಅವರ ಕುರಿತು ಕಿರು ಪರಿಚಯ ಇಲ್ಲಿದೆ.

ವೈಯಕ್ತಿಕ ಜೀವನ
ಬಿ. ಸಿ. ಪಾಟೀಲ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಲಿವಾಳಯಲ್ಲಿ 1956 ನವೆಂಬರ್ 14ರಂದು ಜನಿಸಿದರು. ತಂದೆ ಚನ್ನಬಸವಗೌ ತಾಯಿ ಶಿವಮ್ಮ. ಪತ್ನಿ ವನಜಾಕ್ಷಿ, ಪುತ್ರಯರಾದ ಸೌಮ್ಯ, ಸೃಷ್ಟಿ, ಅಳಿಯ ಅವರೊಂದಿಗೆ ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ. ಲಿಂಗಾಯತ ವೀರಶೈವರಾದ ಬಿಸಿ ಪಾಟೀಲ್ ಸಿನಿಮಾರಂಗದಲ್ಲಿ ಮಾತ್ರವಲ್ಲದೆ, ರಾಜಕೀಯದಲ್ಲೂ ಸಾಕಷ್ಟು ಬೆಂಬಲಿಗರನ್ನು ಅಭಿಮಾನಿಗಳನ್ನು ಹೊಂದಿದ್ದಾರೆ.
ಬಿಸಿ ಪಾಟೀಲ ಪ್ರೌಢ ಶಿಕ್ಷಣದವರೆಗೆ ಸ್ವಗ್ರಾಮದಲ್ಲಿಯೇ ಶಿಕ್ಷಣ ಪೂರೈಸಿ, ದಾವಣಗೆರೆಯಲ್ಲಿ ಪಿಯುಸಿ ಮುಗಿಸಿ, ಪದವಿಯನ್ನು ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಮುಗಿಸಿದರು. 1979ರಲ್ಲಿ ರಾಜ್ಯ ಪೊಲೀಸ್ ಸೇವೆಗೆ ಸೇರಿದ ಅವರು ಪಿಎಸ್‌ಐ ಆಗಿ ಕುರುಗೋಡು, ಕಂಪ್ಲಿ, ಬಳ್ಳಾರಿ, ದಾವಣಗೆರೆ ಇನ್ನಿತರ ನಗರಗಳಲ್ಲಿ ಕಾರ್ಯನಿರ್ವಹಿಸಿದರು. ಬಳಿಕ ಪೊಲೀಸ್ ಇನ್ಸಪೆಕ್ಟರ್ ಆಗಿ ಪದೋನ್ನತಿ ಹೊಂದಿದ ಅವರು, ಬೆಂಗಳೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದರು. 1979ರಿಂದ 2003ರವರೆಗೂ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.

ಸಿನಿಮಾರಂಗದಲ್ಲಿ ಬಿ.ಸಿ ಪಾಟೀಲ
ಬಳಿಕ ಸಿನಿಮಾದಲ್ಲಿ ಆಸಕ್ತಿ ಹೊಂದಿದ್ದ ಅವರು ಸಿನಿಮಾ ಕ್ಷೇತ್ರದಲ್ಲಿ ಮಿಂಚಿದರು. ಹತ್ತಾರು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗೆ ಅಭಿನಯದ ಮೂಲಕ ಜನರಿಗೆ ಚಿರಪರಿಚಿತರಾದ ಬಿಸಿ ಪಾಟೀಲ್ 40
ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 16 ಸಿನಿಮಾಗಳನ್ನು ನಿರ್ಮಾಣ, ನಿರ್ದೇಶನ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಪದವಿ ಪಡೆದ ಇವರು ಪೋಲಿಸ್ ಇಲಾಖೆಗೆ ಭರ್ತಿಯಾಗಿ ಸಬ್-ಇನಸ್ಪೆಕ್ಟರ್ ಆದರು. ನಂತರ ನಟನೆಯೆಡೆಗೆ ಆಸಕ್ತಿ ವಹಿಸಿದ ಪಾಟೀಲ್ 1993 ರಲ್ಲಿ ವಿಷ್ಣುವರ್ಧನ್ ಅಭಿನಯದ`ನಿಷ್ಕರ್ಷ' ಚಿತ್ರದ ಮೂಲಕ ಖಳನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.ಮುಂದೆ ನಾಯಕಟನಾಗಿ `ಪ್ರೇಮಾಚಾರಿ',`ಕೌರವ',`ಜೋಗುಳ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜಕೀಯ ಜೀವನ
ಹಿರೇಕೆರೂರು ಕ್ಷೇತ್ರದಿಂದ ಬಿಸಿ ಪಾಟೀಲ ತಮ್ಮ ರಾಜಕೀಯ ಜೀವನದವನ್ನು ಆರಂಭಿಸಿದರು. 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾದರು. 2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಆಯ್ಕೆಯಾದರು. ದುರಾದೃಷ್ಟ ಎಂಬಂತೆ 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಿಸಿ ಪಾಟೀಲ ಪರಾಭವಗೊಂಡರು. 2018ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಿಲ್ಲೆಯಿಂದ ಗೆದ್ದ ಪಕ್ಷದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರಾಜ್ಯದಲ್ಲಿ ಜೆಡಿಎಸ್, ಕಾಮಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದ್ದರಿಂದ ಬಿಸಿ ಪಾಟೀಲ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿದರು. ಆದರೆ, ಒಂದು ವರ್ಷ ಕಳೆದರೂ ಮಂತ್ರಿಯಾಗುವ ಯಾವ ಸಾಧ್ಯತೆಯೂ ಕೈಗೂಡದ್ದರಿಂದ ಬಿಜೆಪಿ ನಾಯಕರ ಸಂಪರ್ಕಕ್ಕೆ ಬಂದರು. ಆಗ ಅವರ ಸಚಿವರಾಗುವ ಕನಸು ನನಸಾಯಿತು. ಆದರೆ ಈ ಕನಸು ನನಸಾಗುವುದು ಅಷ್ಟು ಸುಲಭವಾಗಿರಲಿಲ್ಲ.
2019ರ ಜುಲೈನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಸಿ ಪಾಟೀಲ ಪಕ್ಷಾಂತರ ನಿಷೇಧ ಕಾಯ್ದೆ ಮೇರೆಗೆ ಅನರ್ಹಗೊಂಡರು. ಅಲ್ಲಿಂದ ಅನರ್ಹ ಶಾಸಕ ಎಂಬ ಹಣೆಪಟ್ಟಿ ಬಿಸಿ ಪಾಟೇಲರ ಮೇಲೇರಿತು. ಆದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಬಿಜೆಪಿ ಸೇರಿದ್ದ ಅವರು ಉಪಚುನಾವಣೆಯಲ್ಲಿ 29 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ನಿರೀಕ್ಷೆಯಂತೆ ಮಂತ್ರಿ ಸ್ಥಾನ ದೊರೆಯಿತು.

ರಾಜಕೀಯ ಕಾಲಾನುಕ್ರಮ
2021 -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆ. ಕೃಷಿ ಖಾತೆಯ ಹೊಣೆ
2019- ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆಲುವು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರ್ಪಡೆ. ಕೃಷಿ ಖಾತೆ ಹೊಣೆ
2018-ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಮೂರನೇ ಬಾರಿಗೆ ಗೆಲುವು. ಸಚಿವ ಸ್ಥಾನ ಸಿಗದ ಹಿನ್ನಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ
2013-ಕೆಜೆಪಿ ಅಭ್ಯರ್ಥಿಯಾಗಿದ್ದ ಯು. ಬಿ. ಬಣಕಾರ್ ವಿರುದ್ಧ 50,017 ಮತಗಳನ್ನು ಸೋಲು
2008-ಹಿರೇಕೆರೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ. ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ
2004-ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ
2003-ಪೊಲೀಸ್ ಉದ್ಯೋಗಕ್ಕೆ ರಾಜೀನಾಮೆ. ರೈತ ಹೋರಾಟದಲ್ಲಿ ಭಾಗಿ, ಜೈಲು ವಾಸ












Click it and Unblock the Notifications