ರಷ್ಯಾ ಅಧ್ಯಕ್ಷ ಪುಟಿನ್ ಜಗತ್ತಿನ ಅಧಿಪತಿ: ಅಂಧ ಮಹಿಳೆ ಬಾಬಾ ವಂಗಾ ಭವಿಷ್ಯ
ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲೊಂದಾದ ರಷ್ಯಾ ತಮ್ಮ ಹಿಂದಿನ ಯುಎಸ್ಎಸ್ಆರ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಮೇಲೆ ಸಮರ ಸಾರಿದ ನಂತರ ಹಿಂದೆ ನುಡಿಯಲಾಗಿದೆ ಎನ್ನಲಾಗುತ್ತಿರುವ ಹಲವು ಭವಿಷ್ಯಗಳ ಸತ್ಯಾಸತ್ಯತೆಯ ಚರ್ಚೆ ಅನಾವರಣಗೊಳ್ಳಲಾರಂಭಿಸಿದೆ.
ರಷ್ಯಾ-ಉಕ್ರೇನ್ ಸಮರ ಐದನೆ ದಿನಕ್ಕೆ ಕಾಲಿಟ್ಟಿದೆ, ದಿನದಿಂದ ದಿನಕ್ಕೆ ರಷ್ಯಾ ತನ್ನ ಹಿಡಿತವನ್ನು ಹೆಚ್ಚಿಸಿಕೊಂಡಿದೆ. ರಾಜಧಾನಿ ಕೀವ್ ನಗರದ ಮೇಲೆ ಪ್ರಭುತ್ವ ಸ್ಥಾಪಿಸಿದ ನಂತರ, ಉಕ್ರೇನಿನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಅನ್ನು ರಷ್ಯಾ ಪಡೆಗಳು ಪ್ರವೇಶಿಸಿದೆ ಎಂದು ವರದಿಯಾಗಿದೆ.
ಬಾಬಾ ವಂಗಾ ಎನ್ನುವ ಬಲ್ಗೇರಿಯಾದ ಅಂಧ ಮಹಿಳೆ ಹಿಂದೆ ನುಡಿದಿದ್ದಾಳೆ ಎನ್ನಲಾಗುತ್ತಿರುವ ಭವಿಷ್ಯವೊಂದು ಸದ್ಯದ ವಿಶ್ವದ ಅಶಾಂತಿಯ ಸಮಯದಲ್ಲಿ ಭರ್ಜರಿ ಸುದ್ದಿ ಮಾಡುತ್ತಿದೆ. ಹಲವು ದಶಕಗಳ ಹಿಂದಿನ ಭವಿಷ್ಯದಲ್ಲಿ ರಷ್ಯಾ-ಉಕ್ರೇನ್ ಸಮರದ ಬಗ್ಗೆಯೂ ಬಾಬಾ ವಂಗಾ ಪರೋಕ್ಷವಾಗಿ ಪ್ರಸ್ತಾವಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕಾದ ಮೇಲೆ ಭಯೋತ್ಪಾದಕರ ದಾಳಿ, ರಾಜಕುಮಾರಿ ಡಯಾನ ಸಾವು, ವಿಶ್ವದ ದೊಡ್ಡಣ್ಣನ ಪ್ರಥಮ ಪ್ರಜೆಯಾಗಿ ಕಪ್ಪು ವರ್ಣೀಯರೊಬ್ಬರ ಆಯ್ಕೆ (ಬರಾಕ್ ಒಬಾಮ) ಸೇರಿದಂತೆ ಬಾಬಾ ವಂಗಾ ಹೇಳಿದ ಭವಿಷ್ಯ ನಿಜವಾಗಿತ್ತು ಎಂದು ವ್ಯಾಖ್ಯಾನಿಸಲಾಗಿತ್ತು. ಈಗ, ವಿಶ್ವವನ್ನು ರಷ್ಯಾ ಆಳಲಿದೆ ಎನ್ನುವ ಭವಿಷ್ಯ ಈಕೆ ಹೇಳಿದ್ದಳು ಎಂದು ವರದಿಯಾಗುತ್ತಿದೆ.

ಹನ್ನೆರಡನೇ ವರ್ಷಕ್ಕೆ ಅಂಧತ್ವಕ್ಕೆ ಒಳಗಾದ, ಬಲ್ಗೇರಿಯಾದ ಮಹಿಳೆ ಬಾಬಾ ವಂಗಾ
ತನ್ನ ಹನ್ನೆರಡನೇ ವರ್ಷಕ್ಕೆ ಅಂಧತ್ವಕ್ಕೆ ಒಳಗಾದ, ಬಲ್ಗೇರಿಯಾದ ಮಹಿಳೆ ಬಾಬಾ ವಂಗಾ, ಎಂದೇ ಹೆಸರಾಗಿರುವ ಈಕೆಯ ನಿಜ ಹೆಸರು ವಾಂಜಜೆಲಿಯಾ ಗುಶ್ವೇರೋವಾ ಎಂದು. ಬಾಲ್ಕನ್ಸ್ ನಾಸ್ಟ್ರಾಡಾಮಸ್ ಎಂದೂ ಹೆಸರು ಪಡೆದಿರುವ ವಂಗಾ, 2022ರಲ್ಲಿ Oumuamua ಎಂದು ಕರೆಯಲ್ಪಡುವ ಅನ್ಯಗ್ರಹದ ಜೀವಿಗಳು ಭೂಮಿಗೆ ಬರಲಿದೆ. ಕಾಲಕ್ರಮೇಣ ಇದು ಜನರ ಮೇಲೆ ದಾಳಿ ನಡೆಸಲಿವೆ ಎನ್ನುವ ಭವಿಷ್ಯವು ಹೋದ ವರ್ಷಾಂತ್ಯದಲ್ಲಿ ಭಾರೀ ಸದನ್ನು ಮಾಡಿತ್ತು.

ಉಕ್ರೇನ್ ಮತ್ತು ರಷ್ಯಾ ಯುದ್ಧದ ಈ ಸಮಯದಲ್ಲಿ ವಂಗಾ ಹೇಳಿರುವ ಮಾತು
ಜಗತ್ತಿನಲ್ಲಿ ಸದ್ಯ ನಡೆಯುತ್ತಿರುವ ಬಿಗು ವಿದ್ಯಮಾನಗಳನ್ನು ಅವಲೋಕಿಸಿದರೆ ಬಾಂಬಾ ವಂಗಾ ಹೇಳುವ ಮತ್ತೊಂದು ಭವಿಷ್ಯವೂ ನಿಜವಾಗುತ್ತದೆಯೇ ಎನ್ನುವಂತಾಗಿದೆ. ಜಗತ್ತಿನ ಆಗುಹೋಗುಗಳ ಕುರಿತು ಭವಿಷ್ಯ ನುಡಿದಿದ್ದ ಬಾಬಾ ವಂಗಾ ರಷ್ಯಾದ ಕುರಿತು ನುಡಿದಿದ್ದಾಳೆ ಎನ್ನುವ ಭವಿಷ್ಯವು ಸದ್ಯ ಸದ್ದನ್ನು ಮಾಡುತ್ತಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ಈ ಸಮಯದಲ್ಲಿ ವಂಗಾ ಹೇಳಿರುವ ಈ ಮಾತುಗಳಿಗೆ ಹೆಚ್ಚು ಮುನ್ನಲೆಗೆ ಬರಲಾರಂಭಿಸಿದೆ.

ಒಬ್ಬರು ಮಾತ್ರ ಗಟ್ಟಿಯಾಗಿ ಉಳಿಯುತ್ತಾರೆ, ವ್ಲಾಡಿಮಿರ್ ಘನತೆ, ರಷ್ಯಾದ ವೈಭವ
ಅತೀಂದ್ರಿಯ ಶಕ್ತಿಯನ್ನು ಹೊಂದಿರುವ ಬಾಬಾ ವಂಗಾ ರಷ್ಯಾ ವಿಶ್ವದ ಅಧಿಪತಿಯಾಗಲಿದೆ ಎಂದು ಬರಹಗಾರ ವ್ಯಾಲೆಂಟಿನ್ ಸಿಡೊರೊವ್ ಬಳಿ ವಂಗಾ ಹೇಳಿದ್ದರಂತೆ. ಜೊತೆಗೆ, ಯುರೋಪ್ ಒಂದು ಪಾಳು ಭೂಮಿ ಆಗುತ್ತದೆ ಎಂದೂ ಭವಿಷ್ಯ ನುಡಿದಿದ್ದರಂತೆ. ಎಲ್ಲವೂ ಮಂಜುಗಡ್ಡೆಯಂತೆ ಕರಗುತ್ತದೆ, ಒಬ್ಬರು ಮಾತ್ರ ಗಟ್ಟಿಯಾಗಿ ಉಳಿಯುತ್ತಾರೆ, ವ್ಲಾಡಿಮಿರ್ ಘನತೆ, ರಷ್ಯಾದ ವೈಭವ ಎಂದು ದಶಕಗಳ ಹಿಂದೆಯೇ ಬಾಬಾ ವಂಗಾ ಹೇಳಿದ್ದರು ಎಂದು ವರದಿಯಾಗುತ್ತಿದೆ.

ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಭೂಕಂಪದಿಂದ ಸುನಾಮಿ
ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಭೂಕಂಪದಿಂದ ಸುನಾಮಿ ಅಪ್ಪಳಿಸಲಿದೆ. ಶಾಂತವಿರುವ ಸಮುದ್ರ ಜನರ ಪಾಲಿಗೆ ನರಕ ಸೃಷ್ಟಿಸಲಿದೆ. ಭಾರತವೂ ಸೇರಿದಂತೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಇಂಡೋನೇಷ್ಯಾ ತೀರ ಪ್ರದೇಶಗಳ ಮೇಲೆ ಸುನಾಮಿ ಅಪ್ಪಳಿಸಲಿದೆ ಎನ್ನುವ ಭವಿಷ್ಯವನ್ನೂ ಬಲ್ಗೇರಿಯಾದ ದೇವತಾ ಮಹಿಳೆಯೆಂದೇ ಕರೆಯಲ್ಪಡುವ ಬಾಬಾ ವಂಗಾ ನುಡಿದಿದ್ದಾರೆ ಎಂದು ಸುದ್ದಿಯಾಗಿತ್ತು.












Click it and Unblock the Notifications