ಡಾ.ಪರಮೇಶ್ವರ್ ಕೊರಟಗೆರೆಗೆ ವಿದಾಯ: ಈ ಕ್ಷೇತ್ರ ಫೈನಲ್?
ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಚುನಾವಣೆ ಗೆದ್ದಿದ್ದರೋ ಅಥವಾ ಸೋತಿದ್ದರೋ, ಆ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸದಿರುವ ನಿರ್ಧಾರಕ್ಕೆ ಕೆಲವೊಂದು ರಾಜ್ಯದ ಹಿರಿಯ ಶಾಸಕರು ಬಂದಿದ್ದಾರಾ?
ಈ ರೀತಿಯ ಪ್ರಶ್ನೆ ಉದ್ಭವವಾಗಲು ಕಾರಣವಾಗಿರುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು. ಕಳೆದ ಬಾರಿ ಬಾದಾಮಿಯಿಂದ ಗೆದ್ದಿದ್ದ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಅಲ್ಲಿಂದಲೇ ಸ್ಪರ್ಧಿಸದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅದೇ ರೀತಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಕೆ.ಎಚ್.ಮುನಿಯಪ್ಪ ಕೂಡಾ, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ ಮತ್ತದಕ್ಕೆ ಪೂರಕವಾದ ವಿದ್ಯಮಾನಗಳು ಕೋಲಾರ ರಾಜಕೀಯದಲ್ಲಿ ನಡೆಯುತ್ತಿದೆ.
ಈ ರೀತಿಯ ಸುದ್ದಿಗಳಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ, ಅದು ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ ಡಾ.ಜಿ.ಪರಮೇಶ್ವರ್ ಅವರದ್ದು. ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಗೆದ್ದಿದ್ದ ಪರಮೇಶ್ವರ್ ಮುಂದಿನ ಚುನಾವಣೆಯ ವೇಳೆಗೆ ವಲಸೆ ಹೋಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಜೆಡಿಎಸ್ಸಿನ ಸುಧಾಕರ ಲಾಲ್ ಅವರನ್ನು ಸೋಲಿಸಿ ಆಯ್ಕೆ
ಕಳೆದ ಚುನಾವಣೆಯಲ್ಲಿ ಡಾ.ಪರಮೇಶ್ವರ್ ಅವರು ಜೆಡಿಎಸ್ಸಿನ ಸುಧಾಕರ ಲಾಲ್ ಅವರನ್ನು 7,619 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ಇದೇ ಪರಮೇಶ್ವರ್ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ದ ಹದಿನೆಂಟು ಸಾವಿರ ಮತಗಳ ಅಂತರದಿಂದ ಪರಮೇಶ್ವರ್ ಸೋತಿದ್ದರು. ಅಂದಿನ ಸೋಲಿಗೆ ಸಿದ್ದರಾಮಯ್ಯನವರೇ ಕಾರಣ ಎಂದು ಬಿಜೆಪಿ ಹೋದ ಬಂದಲ್ಲೆಲ್ಲಾ ಡಂಗುರ ಸಾರಿತ್ತು. ಮುಂದಿನ ವರ್ಷದ ಚುನಾವಣೆಯಲ್ಲಿ ಇಲ್ಲಿಂದ ಗೆಲುವು ಸುಲಭವಲ್ಲ ಎನ್ನುವುದನ್ನು ಅರಿತಿರುವ ಪರಮೇಶ್ವರ್ ಈಗ ಕೋಲಾರ ಜಿಲ್ಲೆಗೆ ವಲಸೆ ಹೋಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕೋಲಾರ ರಾಜಕೀಯದಲ್ಲಿ ಬಣ ರಾಜಕೀಯ ಜೋರಾಗಿದೆ
ಕೋಲಾರ ರಾಜಕೀಯದಲ್ಲಿ ಬಣ ರಾಜಕೀಯ ಜೋರಾಗಿದೆ. ಕೆ.ಎಚ್.ಮುನಿಯಪ್ಪನವರು ಸಿದ್ದರಾಮಯ್ಯನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಫರ್ಮಾನಿನ ಮೇರೆಗೆ ಡಾ.ಪರಮೇಶ್ವರ್ ಅವರು ಮುನಿಯಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಆ ವೇಳೆ ಜಿಲ್ಲೆಯ ಪ್ರಭಾವೀ ಮುಖಂಡರು ಕೂಡಾ ಹಾಜರಿದ್ದರು ಎನ್ನುವ ಸುದ್ದಿಯಿದೆ.

ಕೋಲಾರ ಜಿಲ್ಲಾ ವ್ಯಾಪ್ತಿಯ ಸೇಫ್ ಕ್ಷೇತ್ರ
ಕೋಲಾರ ಜಿಲ್ಲಾ ವ್ಯಾಪ್ತಿಯ ಸೇಫ್ ಕ್ಷೇತ್ರದಲ್ಲಿ ಪರಮೇಶ್ವರ್ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಹಾಗಾಗಿ, ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಪರಮೇಶ್ವರ್ ವ್ಯಕ್ತ ಪಡಿಸಿದ್ದಾರೆ. ಇದು ಮೀಸಲು (ಎಸ್ ಟಿ) ಕ್ಷೇತ್ರವಾಗಿದ್ದು, ಇವರ ಸ್ಪರ್ಧೆಗೆ ಕೊತ್ತೂರು ಮಂಜುನಾಥ್ ಕೂಡಾ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕೊತ್ತೂರು ಮಂಜುನಾಥ್ ಯಾರನ್ನು ಬೆಂಬಲಿಸುತ್ತಾರೋ ಗೆಲ್ಲುವ ಉದಾಹರಣೆಗಳೇ ಹೆಚ್ಚು
ಮುಳಬಾಗಿಲು ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಅವರು ಯಾರನ್ನು ಬೆಂಬಲಿಸುತ್ತಾರೋ ಅವರು ಗೆಲ್ಲುವ ಉದಾಹರಣೆಗಳೇ ಹೆಚ್ಚು. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪ್ರರ್ಧಿಸಿ ಎಚ್.ನಾಗೇಶ್ ಗೆದ್ದಿದ್ದರು. ಅವರ ಗೆಲುವಿನಲ್ಲಿ ಕೊತ್ತೂರು ಮಂಜುನಾಥ್ ಪಾತ್ರ ಮುಖ್ಯವಾಗಿತ್ತು. ಈಗ, ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ಡಾ.ಪರಮೇಶ್ವರ್ ಸ್ಪರ್ಧಿಸಿದರೆ ಅವರ ಪರವಾಗಿ ಕೆಲಸ ಮಾಡಬೇಕು ಎನ್ನುವ ಸೂಚನೆ ಬಂದಿದೆಯಂತೆ. ಅದಕ್ಕೆ ಕೆ.ಎಚ್.ಮುನಿಯಪ್ಪ ಮತ್ತು ಕೊತ್ತೂರು ಕೂಡಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಒಂದೆರಡು ತಿಂಗಳ ಹಿಂದೆ ಪರಮೇಶ್ವರ್ ಬಿಜೆಪಿಗೆ ಸೇರುತ್ತಾರೆ ಎನ್ನುವ ಗುಮಾನಿ ಸಹ ಇತ್ತು ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ.












Click it and Unblock the Notifications