ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಿಮಾ ಇನ್ನಿಲ್ಲ,ಆದರೆ ಕ್ಯಾನ್ಸರ್ ಗೆ ಸವಾಲೆಸೆದ 'ಜೀವನಪ್ರೀತಿ' ಜೀವಂತ

|
Google Oneindia Kannada News

ತಿರುವನಂತಪುರಂ, ಮೇ 03: "ನಾನು ಗುಣಮುಖಳಾಗೇ ಆಗುತ್ತೇನೆ..." ಎಂದು ನಾಲ್ಕನೇ ಸ್ಟೇಜಿನಲ್ಲಿರುವ ಕ್ಯಾನ್ಸರ್ ಅನ್ನು ದೇಹದಲ್ಲಿ ಹೊತ್ತ ಮಹಿಳೆಯೊಬ್ಬರು ಹೇಳಿದರೆ ತೀರಾ ಉತ್ಪ್ರೇಕ್ಷೆ ಅನ್ನಿಸಬಹುದು. ಆದರೆ ಆ ಮಾತಿನಲ್ಲಿ ಆಕೆಗೆ ಬದುಕಿನ ಮೇಲಿರುವ ಪ್ರೀತಿ, ತನ್ನ ಮನೋಬಲದ ಮೇಲಿರುವ ನಂಬಿಕೆಯನ್ನು ಹುಡುಕಿದರೆ ಆಕೆಯ ಮಾತು ಸತ್ಯವಾಗಲಿ ಎಂದು ಮನಸ್ಸು ಹಾರೈಸುತ್ತದೆ.

ಕೇರಳದ ತಿರುವನಂತಪುರದ 25 ವರ್ಷ ವಯಸ್ಸಿನ ಅರುಣಿಮಾ ರಾಜನ್ ಗೆ ಬದುಕನ್ನು ಪರಿಪೂರ್ಣವಾಗಿ ಜೀವಿಸುವ ಹುಚ್ಚು ಆಸೆ. ಆದರೆ ದೇಹಕ್ಕೆ ಸುತ್ತಿಕೊಂಡ ಕ್ಯಾನ್ಸರ್ ಎಂಬ ಮಹಾಮಾರಿ ಬಿಡಬೇಕಲ್ಲ! ಮೊನ್ನೆ ಮಂಗಳವಾರ(ಏ.30) ಅವರು ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಈ ಬದುಕಿಗೆ ಮುಕ್ತಾಯ ಹಾಡುವ ಕೊನೆಯ ಕ್ಷಣದ ವರೆಗೂ ಅವರು ಉಸಿರಾಡಿದ್ದು, ಜೀವನ ಪ್ರೀತಿಯನ್ನೇ.

ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ

ಉತ್ತಮ ಚಿತ್ರಕಲಾವಿದೆಯೂ ಆಗಿದ್ದ ಅರುಣಿಮಾ ಅವರಿಗೆ ತಾವು ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದಿದ್ದು, ಅದು ನಾಲ್ಕನೇ ಹಂತ ತಲುಪಿದ್ದಾಗಲೇ. ಆದರೂ ಬದುಕಲೇಬೇಕೆಂಬ ಹಠಕ್ಕೆ ಬಿದ್ದ ಅರುಣಿಮಾ ವಿಧಿಯೋಂದಿಗೇ ಮಲ್ಲಯುದ್ಧಕ್ಕೆ ನಿಂತರು. ಕೊನೆಗೆ ನಿಧನರಾಗಿದ್ದು ಸತ್ಯ, ಆದರೆ ಒಬ್ಬ ಕ್ಯಾನ್ಸರ್ ರೋಗಿಯೂ ಎಷ್ಟೆಲ್ಲ ಆಶಾವಾದಿಯಾಗಿ ಬದುಕನ್ನು ನೋಡುವುದಕ್ಕೆ ಸಾಧ್ಯ ಎಂಬುದಕ್ಕೆ ನಿದರ್ಶನವಾದರು. ಆ ಮೂಲಕ ಸಾವಿರಾರು ಜನರ ಮನಸ್ಸನ್ನು ಗೆದ್ದರು.(ಚಿತ್ರಕೃಪೆ: ಇನ್ ಸ್ಟಾಗ್ರಾಂ)

'25' ಸಾಯುವ ವಯಸ್ಸೇ?

'25' ಸಾಯುವ ವಯಸ್ಸೇ?

ಅರುಣಿಮಾ ಅವರಿಗೆ ಕ್ಯಾನ್ಸರ್ ಇರುವುದು ತಿಳಿದಾಗ ಅವರಿಗೆ 25 ವರ್ಷ. ರೋಗ ಉಲ್ಬಣಿಸಿದ್ದರಿಂದ ಕೆಲವೇ ತಿಂಗಳ ಅವಧಿಯಲ್ಲಿ ಅವರು ನಿಧನರಾದರು. ಆದರೆ ರೋಗ ಪತ್ತೆಯಾಗಿ ನಿಧನರಾಗುವವರೆಗಿನ ತೀರಾ ಸಂಕ್ಷಿಪ್ತ ಅವಧಿಯಲ್ಲೇ ಸಾವಿರಾರು ಜನರಿಗೆ ಸ್ಫೂರ್ತಿ ಚಿಲುಮೆಯಾದರು. ಕೊಚ್ಚಿಯಲ್ಲಿರುವ ಅಮೃತಾ ಆಸ್ಪತ್ರೆಯಲ್ಲಿ ಅರುಣಿಮಾ ಮೃತರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಸಾವಿರಾರು ಅಭಿಮಾನಿಗಳು ಕಣ್ಣೀರು ಸುರಿಸಿದರು. ಕೆಲವೇ ತಿಂಗಳ ಅವಧಿಯಲ್ಲಿ ಅರುಣಿಮಾ ಗಳಿಸಿದ ಪ್ರೀತಿಯ ಅಭಿವ್ಯಕ್ತಿಗೆ ಪದಗಳಿಲ್ಲ!

ಮೊದಲು ಆಘಾತವಾಗಿತ್ತು

ಮೊದಲು ಆಘಾತವಾಗಿತ್ತು

"ನಿಮಗೆ ಕ್ಯಾನ್ಸರ್ ಇದೆ" ಎಂದು ವೈದ್ಯರು ಹೇಳಿದಾಗ ಆತಂಕವಾಗಿದ್ದು ಸತ್ಯ. ಎಲ್ಲೋ ದೂರದ, ಯಾರಿಗೋ ಕ್ಯಾನ್ಸರ್ ಬಂದಿದೆ ಎಂದರೇನೇ 'ಅಯ್ಯೋ ಪಾಪ' ಎನ್ನುವವರಿಗೆ, ತಮಗೇ ಕ್ಯಾನ್ಸರ್ ಎಂದರೆ ಹೇಗಾಗಬೇಡ?ನನಗೂ ಹಾಗೇ ಅನ್ನಿಸಿತ್ತು. ಬದುಕಿನ ಮೇಲಿನ ನಂಬಿಕೆಯೇ ಕಡಿಮೆಯಾಗಿತ್ತು. ಆದರೆ ಹಾಗೆ ಕುಗ್ಗಿದ್ದು ಕೇಲವೇ ಹೊತ್ತು ಮಾತ್ರ! ನನಗೆ ಹೆಚ್ಚು ಸಮಯವಿಲ್ಲ. ಅಷ್ಟು ಸಮಯ ಬೇಸರದಲ್ಲಿ, ಕುಗ್ಗಿದ್ದರೆ ಏನು ಪ್ರಯೋಜನ? ಇರುವಷ್ಟು ದಿನ ಜೀವನವನ್ನು ಜೀವಿಸಿಬಿಡಬೇಕು ಎಂಬ ನಿರ್ಧಾರಕ್ಕೆ ಬಂದೆ" ಎನ್ನುತ್ತಿದ್ದರು ಅರುಣಿಮಾ.

ಜೀವನೋಲ್ಲಾಸದ ಖನಿ ನರ್ಮದಾ ವೈನಿ ಇನ್ನಿಲ್ಲ, ಆ ಮಕ್ಕಳಿಗೆ ಇನ್ನ್ಯಾರು 'ದಿಕ್ಕು?'ಜೀವನೋಲ್ಲಾಸದ ಖನಿ ನರ್ಮದಾ ವೈನಿ ಇನ್ನಿಲ್ಲ, ಆ ಮಕ್ಕಳಿಗೆ ಇನ್ನ್ಯಾರು 'ದಿಕ್ಕು?'

ಚಿತ್ರದಲ್ಲೇ ನೋವು ಮರೆತ ಅರುಣಿಮಾ

ಚಿತ್ರದಲ್ಲೇ ನೋವು ಮರೆತ ಅರುಣಿಮಾ

ಚಿತ್ರ ಕಲಾವಿದೆಯಾಗಿದ್ದ ಅರುಣಿಮಾ ಪ್ರತಿ ಕಿಮೋಥೆರಪಿಯ ನಂತರೂ ಚಿತ್ರ ಬರೆಯುತ್ತಿದ್ದರು. ತನ್ನೆಲ್ಲ ಭಾವಗಳನ್ನು, ನೋವುಗಳನ್ನೂ ಬಣ್ಣಕ್ಕಿಳಿಸಿ ನಿರಾಳರಾಗುತ್ತಿದ್ದರು. ಕ್ಯಾನ್ಸರ್ ಪತ್ತೆಯಾದ ಮೇಲೆ ತಮ್ಮದೇ ಚಿತ್ರದ ಪ್ರದರ್ಶನವನ್ನೂ ಅರುಣಿಮಾ ಮಾಡಿದ್ದರು.

ಕ್ಯಾನ್ಸರ್ ಪೀಡಿತರಲ್ಲಿ ಧೈರ್ಯ ತುಂಬುವ ಕೆಲಸ

ಕ್ಯಾನ್ಸರ್ ಪೀಡಿತರಲ್ಲಿ ಧೈರ್ಯ ತುಂಬುವ ಕೆಲಸ

ಸ್ವತಃ ಕ್ಯಾನ್ಸರ್ ಪೀಡಿತೆಯಾಗಿದ್ದರೂ, ಕ್ಯಾನ್ಸರ್ ಪೀಡಿತರಾದ ಇತರರಲ್ಲಿ ಧೈರ್ಯ ತುಂಬುವ ಕೆಲಸವನ್ನೂ ಅರುಣಿಮಾ ಆಸ್ಥೆಯಿಂದ ಮಾಡುತ್ತಿದ್ದರು. 'ಕೇರಳ ಕ್ಯಾನ್' ಎಂಬ ಕಾರ್ಯಕ್ರಮದ ಮೂಲಕ ಎಷ್ಟೋ ಜನರಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದರು. ಕ್ಯಾನ್ಸರ್ ಪೀಡಿತರು ಎಷ್ಟು ಧನಾತ್ಮಕವಾಗಿರಬೇಕು ಎಂಬುದಷ್ಟೇ ಅಲ್ಲದೆ, ಅವರ ಕುಟುಂಬಸ್ಥರು ರೋಗಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆಯೂ ಅವರು ಅರಿವು ಮೂಡಿಸುವ ಕೆಲಸ ಮಾಡಿದ್ದರು. 'ಕ್ಯಾನ್ಸರ್ ಪೀಡಿತರಿಗೆ ಬೇಕಾಗಿರುವುದು ಕರುಣೆಯಲ್ಲ, ಪ್ರೀತಿ, ಕಾಳಜಿ, ಸ್ಫೂರ್ತಿ, ಧೈರ್ಯ' ಎಂದು ಅವರ ಕುಟುಂಬಸ್ಥರಿಗೆ ಅರ್ಥ ಮಾಡಿಸುವ ಕೆಲಸ ಮಾಡಿದ್ದರು. ಕ್ಯಾನ್ಸರ್ ನೊಂದಿಗಿನ ಸೆಣಸಾಟದಲ್ಲಿ ಆಕೆ ಗೆಲ್ಲಲಿಲ್ಲ. ಆದರೆ ಆಕೆಯ ಮನೋಬಲದ ಮುಂದೆ ವಿಧಿಯೂ ನಾಚಿದ್ದರೆ ಅಚ್ಚರಿಯಿಲ್ಲ!

English summary
Arunima Rajan, a 25-year-old woman from Pathanamthitta, Kerala, who passed away on Tuesday, not only faced cancer with a smile, but set an example to others afflicted by the dreaded disease by proving that even limited time left in life can indeed be lived to the fullest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X